ಹುಬ್ಬಳ್ಳಿಯಲ್ಲೇ ಚರ್ಚೆಗೆ ಸಿದ್ಧ

7
ದೇವೇಗೌಡರ ವಿರುದ್ಧದ ಆರೋಪಗಳಿಗೆ ದತ್ತ ಪ್ರತ್ಯುತ್ತರ

ಹುಬ್ಬಳ್ಳಿಯಲ್ಲೇ ಚರ್ಚೆಗೆ ಸಿದ್ಧ

Published:
Updated:

ಬೆಂಗಳೂರು: ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ನೀರಾವರಿ ಸಚಿವ, ಮುಖ್ಯಮಂತ್ರಿ ಮತ್ತು ಪ್ರಧಾನಿ ಆಗಿದ್ದ ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ನೀಡಿದ ಕೊಡುಗೆಗಳ ಮಾಹಿತಿಗಳನ್ನು ಒಳಗೊಂಡ 50 ಪುಟಗಳ ಹೊತ್ತಗೆಯನ್ನು ಮಾಜಿ ಶಾಸಕ ವೈ.ಎಸ್.ವಿ. ದತ್ತ ಗುರುವಾರ ಬಿಡುಗಡೆ ಮಾಡಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕಕ್ಕೆ ದೇವೇಗೌಡರು ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಇತ್ತೀಚೆಗೆ ಪ್ರಶ್ನಿಸಿದ್ದರು. ಅವರ ಆರೋಪಗಳಿಗೆ ಇದು ಉತ್ತರ ಆಗಲಿದೆ. ವೈಯಕ್ತಿಕ ನೆಲೆಯಲ್ಲಿ ಇದನ್ನು ಬಿಡುಗಡೆ ಮಾಡಿದ್ದೇನೆ’ ಎಂದರು.

‘ಉತ್ತರ ಕರ್ನಾಟಕಕ್ಕೆ ದೇವೇಗೌಡರು ನೀಡಿರುವ ಕೊಡುಗೆಗಳ ಬಗ್ಗೆ ಹುಬ್ಬಳ್ಳಿಯಲ್ಲೇ ಬಹಿರಂಗ ಚರ್ಚೆಗೆ ಸಿದ್ಧ. ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸುವವರು ಚರ್ಚೆಗೆ ಬರಲಿ’ ಎಂದು ಅವರು ಸವಾಲು ಹಾಕಿದರು.

‘ಉತ್ತರ ಕರ್ನಾಟಕ ಭಾಗದ ಅಭಿವೃದ್ದಿಗೆ ಮಾಡಿರುವ ಕಾರ್ಯಗಳ ಶ್ವೇತಪತ್ರ ಹೊರಡಿಸುವಂತೆ ಶೆಟ್ಟರ್ ಆಗ್ರಹಿಸಿರುವುದು ಸ್ವಾಗತಾರ್ಹ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಎನ್‍ಡಿಎ ಸರ್ಕಾರ ಉತ್ತರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಎಷ್ಟೆಂಬ ಬಗ್ಗೆ ಕಪ್ಪುಪತ್ರ ಹೊರಡಿಸಲೂ ಸಿದ್ಧ’ ಎಂದೂ ದತ್ತ ಹೇಳಿದರು.

‘ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಮಹಾದಾಯಿ, ಕಳಸಾ ಬಂಡೂರಿ, ಕೃಷ್ಣ ಮೇಲ್ದಂಡೆ ಯೋಜನೆ ಅನುಷ್ಠಾನ ವಿಷಯಗಳಲ್ಲಿ ಆಗಿರುವ ಅನ್ಯಾಯದ ಬಗ್ಗೆ ಮುಂದಿನ ದಿನಗಳಲ್ಲಿ ಕಪ್ಪುಪತ್ರ ಹೊರತರಲಾಗುವುದು’ ಎಂದರು.

‘ಬಚಾವತ್ ಆಯೋಗ ರಾಜ್ಯಕ್ಕೆ ಹಂಚಿಕೆ ಮಾಡಿದ್ದ 734 ಟಿ.ಎಂ.ಸಿ ಅಡಿ ನೀರನ್ನು 2000 ಇಸವಿಯ ಒಳಗೆ ಬಳಕೆ ಮಾಡಿಕೊಳ್ಳಬೇಕಾದ  ತುರ್ತು ರಾಜ್ಯ ಸರ್ಕಾರದ ಮುಂದಿತ್ತು. ಮುಖ್ಯಮಂತ್ರಿಯಾಗಿದ್ದಾಗ ದೇವೇಗೌಡರು (1996) ಆ ನೀರನ್ನು ಬಳಕೆ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಂಡು ಉತ್ತರ ಕರ್ನಾಟಕ ಭಾಗದ ಜನರು ನಿಟ್ಟುಸಿರು ಬಿಡಲು ಕಾರಣರಾಗಿದ್ದರು’ ಎಂದು ವಿವರಿಸಿದರು.

‘ರಾಜ್ಯಕ್ಕೆ ಪ್ರತ್ಯೇಕ ರೈಲ್ವೆ ವಲಯಕ್ಕಾಗಿ ಹೋರಾಟ ಮಾಡಿದವರು ದೇವೇಗೌಡರು. ಅದರ ಪರಿಣಾಮ ಬೆಂಗಳೂರಿನಲ್ಲಿ ರೈಲ್ವೆ ವಲಯ ಸ್ಥಾಪನೆಯಾಯಿತು. ಪ್ರಧಾನಿಯಾಗಿದ್ದಾಗ ಅವರು ಹುಬ್ಬಳ್ಳಿಯ ರೈಲ್ವೆ ವರ್ಕ್‌ ಶಾಪ್‍ಗೂ ಕಾಯಕಲ್ಪ ನೀಡಿದ್ದರು. ಹುಬ್ಬಳ್ಳಿ-ಅಂಕೋಲ ರೈಲ್ವೆ ಮಾರ್ಗಕ್ಕೆ ಹಣ ನೀಡಿದ್ದರು’ ಎಂಬ ಮಾಹಿತಿ ಬಿಚ್ಚಿಟ್ಟರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !