ಸೋಮವಾರ, ಸೆಪ್ಟೆಂಬರ್ 16, 2019
27 °C
ಎರಡೂವರೆ ತಿಂಗಳು ವಿಳಂಬ, ಎರಡು ತಾಲ್ಲೂಕುಗಳಲ್ಲಿ ವಿತರಣೆ ಆರಂಭ

ಕೊನೆಗೂ ಬಂತು ಮಕ್ಕಳ ಸಮವಸ್ತ್ರ

Published:
Updated:

ಚಾಮರಾಜನಗರ: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ 2019–20ನೇ ಶೈಕ್ಷಣಿಕ ಸಾಲಿನ ಸಮವಸ್ತ್ರಗಳು ಎರಡೂವರೆ ತಿಂಗಳು ವಿಳಂಬವಾಗಿ ಬಂದಿದೆ.

ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಓದುತ್ತಿರುವ 62,365 ವಿದ್ಯಾರ್ಥಿಗಳಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಮವಸ್ತ್ರ ವಿತರಿಸಲಿದೆ. ಈಗ 59,231 ಸಮವಸ್ತ್ರಗಳು ಸರಬರಾಜಾಗಿದ್ದು, 3,134 ವಿದ್ಯಾರ್ಥಿಗಳಿಗೆ ಇನ್ನಷ್ಟೇ ಬರಬೇಕಿದೆ.  ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಚೂಡಿದಾರ್‌ ನೀಡಲಾಗುತ್ತಿದ್ದು, ಅದಿನ್ನೂ ಬಂದಿಲ್ಲ. 

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ರಾಜ್ಯದಾದ್ಯಂತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸುತ್ತದೆ. ಮಕ್ಕಳಿಗೆ ವರ್ಷದಲ್ಲಿ ಎರಡು ಜೊತೆ ಸಮವಸ್ತ್ರ ನೀಡುವ ಪದ್ಧತಿ ಇದೆ. ಒಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ವಿತರಣೆಯಾದರೆ, ಮತ್ತೊಂದನ್ನು ಸಮಗ್ರ ಶಿಕ್ಷಣ ಕರ್ನಾಟಕ (ಹಿಂದೆ ಸರ್ವ ಶಿಕ್ಷ ಅಭಿಯಾನ ಆಗಿತ್ತು) ಯೋಜನೆಯ ಅಡಿಯಲ್ಲಿ ವಿತರಿಸಲಾಗುತ್ತದೆ. ಸಾಮಾನ್ಯವಾಗಿ ಇಲಾಖೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ವಿತರಣೆ ಮಾಡುತ್ತದೆ. ಮತ್ತೊಂದು ಸಮವಸ್ತ್ರ ಬರುವುದು ಸ್ವಲ್ಪ ವಿಳಂಬವಾಗುತ್ತದೆ. 

ವಿಳಂಬ: ಈ ವರ್ಷ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನ ಪಠ್ಯಪುಸ್ತಕಗಳು ಬಂದಿದ್ದವು. ಆದರೆ, ಸಮವಸ್ತ್ರ ಬಂದಿರಲಿಲ್ಲ. ಲೋಕಸಭಾ ಚುನಾವಣಾ ನೀತಿ ಸಂಹಿತೆ ಕಾರಣದಿಂದ ಟೆಂಡರ್‌ ಕರೆಯುವುದು ತಡವಾಗಿದ್ದರಿಂದ ಸಕಾಲಕ್ಕೆ ಸಮವಸ್ತ್ರಗಳು ಮಕ್ಕಳ ಕೈ ಸೇರಿರಲಿಲ್ಲ. ಮಕ್ಕಳು ಹಳೆಯ ಸಮವಸ್ತ್ರವನ್ನೇ ಧರಿಸಿಕೊಂಡು ಶಾಲೆಗೆ ಬರಬೇಕಾಗಿತ್ತು. 

ಎರಡೂವರೆ ತಿಂಗಳು ವಿಳಂಬವಾಗಿ ಜಿಲ್ಲೆಗೆ ಸಮಸವಸ್ತ್ರಗಳು ಸರಬರಾಜಾಗಿವೆ. ಎಲ್ಲ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಿಗೆ ಸಮವಸ್ತ್ರಗಳು ಬಂದಿವೆ. ಹನೂರು ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ವಿತರಣೆಯೂ ಆರಂಭವಾಗಿದೆ.

‘ಟೆಂಡರ್‌ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದರಿಂದ ಸಮವಸ್ತ್ರ ಬರುವುದು ಸ್ವಲ್ಪ ತಡವಾಯಿತು. ವಿತರಣೆ ಆರಂಭಿಸಿದ್ದೇವೆ. ಕೆಲವೇ ದಿನಗಳಲ್ಲಿ ಎಲ್ಲ ಮಕ್ಕಳಿಗೂ ವಿತರಿಸುತ್ತೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ (ಡಿಡಿಪಿಐ) ಮಂಜುನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಇನ್ನೂ ಸಿಕ್ಕಿಲ್ಲ ಶೂ ಮತ್ತು ಸಾಕ್ಸ್‌ 

ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್‌ ಬಂದರೂ ಮಕ್ಕಳಿಗೆ ಈ ವರ್ಷದ ಶೂ ಮತ್ತು ಸಾಕ್ಸ್‌ ಇದುವರೆಗೂ ಸಿಕ್ಕಿಲ್ಲ.

ಶಾಲಾಭಿವೃದ್ಧಿ ಸಮಿತಿಯ ಮೂಲಕ ಆಯಾ ಶಾಲೆಗಳಲ್ಲಿ ಒಂದು ಜೊತೆ ಶೂ ಮತ್ತು ಸಾಕ್ಸ್‌ಗಳನ್ನು ಖರೀದಿಸಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ಪ್ರತಿ ವರ್ಷ ನೀಡಲಾಗುತ್ತದೆ. 

ಪ್ರಕ್ರಿಯೆ ಚಾಲನೆಯಲ್ಲಿ: ಶೂ ಮತ್ತು ಸಾಕ್ಸ್‌ ಖರೀದಿಗೆ ಸಿದ್ಧತೆ ಮಾಡಿಕೊಳ್ಳಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸೂಚಿಸಿದೆ. ಆದರೆ, ಅನುದಾನ ಇನ್ನೂ ಬಿಡುಗಡೆ ಮಾಡಿಲ್ಲ.

‘ಶಾಲಾ ಮಟ್ಟದಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ. ಇಲಾಖೆಯಿಂದ ಅನುದಾನ ಬಿಡುಗಡೆಯಾದ ತಕ್ಷಣ ಶೂ ಮತ್ತು ಸಾಕ್ಸ್‌ ಖರೀದಿಸಿ ವಿತರಿಸಲಾಗುವುದು. ಕೆಲವೇ ದಿನಗಳಲ್ಲಿ ಅನುದಾನ ಬಿಡುಗಡೆಯಾಗಲಿದೆ’ ಎಂದು ಮಂಜುನಾಥ್‌ ಅವರು ತಿಳಿಸಿದರು. 

Post Comments (+)