ಗೌರಿ ದಿನ: ಮೊಳಗಿತು ಪ್ರೀತಿ, ಅಭಿವ್ಯಕ್ತಿ ಸ್ವಾತಂತ್ರ್ಯದ ದನಿ

7
ಗೌರಿ ದಿನದಲ್ಲಿ ಚಿಂತಕರ ಒಮ್ಮತದ ಅಭಿಮತ

ಗೌರಿ ದಿನ: ಮೊಳಗಿತು ಪ್ರೀತಿ, ಅಭಿವ್ಯಕ್ತಿ ಸ್ವಾತಂತ್ರ್ಯದ ದನಿ

Published:
Updated:
ಸಾಂದರ್ಭಿಕ ಚಿತ್ರ

ಬೆಂಗಳೂರು: ದ್ವೇಷ ದಳ್ಳುರಿಯ ಬದಲು ಪ್ರೀತಿ ಬಿತ್ತುವ, ಕೋಮುವಾದ ಹಣಿಯುವ, ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿ ಹಿಡಿಯುವ ಧ್ವನಿ ನಗರದಲ್ಲಿ ಬುಧವಾರ ಪತ್ರಕರ್ತೆ ದಿವಂಗತ ಗೌರಿ ಲಂಕೇಶ್‌ ಅವರ ಸ್ಮರಣಾರ್ಥ ನಡೆದ ಗೌರಿ ದಿನದಲ್ಲಿ ವ್ಯಕ್ತವಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಚಿಂತಕರು ಲೇಖಕರ ಬಂಧನ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಾಗುತ್ತಿರುವ ದಾಳಿ, ಸಾಮೂಹಿಕ ಹಲ್ಲೆ ಮತ್ತು ಹತ್ಯೆ, ಅತ್ಯಾಚಾರ, ಪ್ರಧಾನಿ ನರೇಂದ್ರ ಮೋದಿ ಅವರ ಮೌನದ ಬಗ್ಗೆ ಕಟು ಮಾತುಗಳಲ್ಲಿ ಖಂಡಿಸಿದರು.

ದ್ವೇಷ, ಹಿಂಸೆಗೆ ಪ್ರಭುತ್ವದ ಬೆಂಬಲ

ರಹಮತ್‌ ತರೀಕೆರೆ ಮಾತನಾಡಿ, ‘ದ್ವೇಷ ಮತ್ತು ಹಿಂಸೆಗೆ ಪ್ರಭುತ್ವದ ಬೆಂಬಲ ಸಿಕ್ಕಿದೆ. ಇದಕ್ಕೆ ಧರ್ಮ ರಕ್ಷಣೆ ಹೆಸರಿನ ಬೆಂಬಲ ಸಿಗುತ್ತಿದೆ. ದ್ವೇಷಕ್ಕೆ ಪ್ರಭುತ್ವದ ಬೆಂಬಲ ಸಿಕ್ಕಿದರೆ ಆಗುವ ಅನಾಹುತಗಳ ಬಗ್ಗೆ ನಾಲ್ಕು ವರ್ಷಗಳಿಂದ ನೋಡುತ್ತಿದ್ದೇವೆ. ನಮಗೆ ದ್ವೇಷದ ಭಾರತವಲ್ಲ. ಪ್ರೀತಿಯ ಭಾರತ ಬೇಕು. ಇಂದು ಯಾರು ಏನನ್ನೇ ತಿನ್ನಬೇಕಾದರೂ ಭಯದಿಂದಲೇ ತಿನ್ನಬೇಕಾದ ಸ್ಥಿತಿಯಿದೆ. ಆಹಾರ ಪದ್ಧತಿಯನ್ನು ಬೇರೆ ಯಾರೋ ನಿರ್ಧರಿಸುವಂತಾಗಿದೆ. ಇದು ಆತಂಕಕಾರಿ’ ಎಂದರು.

ಪ್ರಧಾನಿಯ ಶಿಸ್ತು ಬೇಕಾಗಿಲ್ಲ

‘ಶಿಸ್ತಿನಿಂದ ಇರಿ ಎಂದರೆ ನನ್ನನ್ನು ನಿರಂಕುಶವಾದಿ ಎನ್ನುತ್ತಾರೆ’ ಎಂಬ ಪ್ರಧಾನಿ ಹೇಳಿಕೆಯನ್ನು ಖಂಡಿಸಿದ ಜಿ.ವಿ.ಶ್ರೀರಾಮರೆಡ್ಡಿ, ‘ಮೋದಿಯವರದ್ದು ಹಿಟ್ಲರ್‌ನ ಶಿಸ್ತು. ಅದು ನಮಗೆ ಬೇಕಾಗಿಲ್ಲ. ಜನ ಬೀದಿ ಬೀದಿಗಳಲ್ಲಿ ಕೊಲೆಯಾಗುತ್ತಿದ್ದಾರೆ. ಹಾಗೆಂದು ನಾವು ಮೋದಿ ವಿರೋಧಿಗಳಲ್ಲ. ಅವರು ಪ್ರತಿಪಾದಿಸುವ ತತ್ವಗಳ ವಿರೋಧಿಗಳು. ತಮ್ಮ ಕೊಲೆಗೆ ಸಂಚು ನಡೆದಿದೆ ಎಂಬ ಹಸಿ ಸುಳ್ಳನ್ನು ದೇಶದಾದ್ಯಂತ ಹಬ್ಬುತ್ತಿದ್ದಾರೆ. ಇವರನ್ನು ಕೊಲೆ ಮಾಡುವವರು 65 ವರ್ಷ ದಾಟಿದವರು. ಇವರು ಪ್ರಧಾನಿ ವಿರುದ್ಧ ಸಂಚು ನಡೆಸುತ್ತಾರೆ ಎಂದರೆ ನಂಬಬೇಕು' ಎಂದು ಲೇಖಕರ, ಚಿಂತಕರ ಬಂಧನ ಪ್ರಕರಣವನ್ನು ಲೇವಡಿ ಮಾಡಿದರು.

ಬಿ.ಟಿ.ಲಲಿತಾ ನಾಯಕ್‌ ಮಾತನಾಡಿ, ‘ಮೋದಿಯವರು ಎಲ್ಲಿಂದಲೋ ಇಳಿದು ಬಂದವರಲ್ಲ. ನಮ್ಮಿಂದಲೇ ಆಯ್ಕೆಯಾದ ಸೇವಕರು. ಪುಂಡಾಟಿಕೆ ಮಾಡಲು ನಮಗೂ ಬರುತ್ತದೆ. ಆದರೆ, ಸಂವಿಧಾನದ ಆಶಯಕ್ಕೆ ಗೌರವ ಕೊಡುವ ದೃಷ್ಟಿಯಿಂದ ಸುಮ್ಮನಿದ್ದೇವೆ. ಆದರೆ, ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದರು.

ವಿಜಯಮ್ಮ ಮಾತನಾಡಿ, ‘ನೀವು (ಪ್ರಧಾನಿ) ನಮ್ಮ ಮೌನ ಮುರಿದಿದ್ದೀರಿ. ಇನ್ನು ನೀವು ಮೌನ ಮುರಿಯುವವರೆಗೂ ನಾವು ಕೂಗಾಡುತ್ತಲೇ ಇರುತ್ತೇವೆ. ನಿಮ್ಮನ್ನು ಕುರ್ಚಿಯಿಂದ ಇಳಿಸುವವರೆಗೂ ಹೋರಾಡುತ್ತೇವೆ’ ಎಂದರು.

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಮಾತನಾಡಿ, ‘ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧ ಮಾತನಾಡುವವರು ಬಳ್ಳಾರಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರಿಂದ ನಡೆದ ₹ 35 ಸಾವಿರ ಕೋಟಿ ಗಣಿ ಹಗರಣದ ಬಗ್ಗೆ ಮಾತನಾಡುತ್ತಿಲ್ಲ. ಸೋಮಶೇಖರ ರೆಡ್ಡಿ ಅವರು ನ್ಯಾಯಾಧೀಶರಿಗೆ ಲಂಚ ಕೊಡಲು ಮುಂದಾದ ಪ್ರಕರಣದ ಬಗ್ಗೆ ಮಾತೆತ್ತುತ್ತಿಲ್ಲ ಏಕೆ? ಇಂಥವರೆಲ್ಲಾ ಸಮಾಜ, ಸಂವಿಧಾನಕ್ಕೆ ಕಂಟಕರಾಗಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ  ಆಗಾಗ ಸೌಹಾರ್ದ ಗೀತೆಗಳು, ನಾನೂ ಗೌರಿ ಘೋಷಣೆ ಮೊಳಗಿದವು. ಬಳಗದ ಕಾರ್ಯಕರ್ತರು ಗೌರಿ ದಿನ ಬ್ಯಾಡ್ಜ್‌ ಮತ್ತು ತೋಳಿಗೆ ಕೆಂಪು ಪಟ್ಟಿ ಕಟ್ಟಿಕೊಂಡು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಗೌರಿ ಸ್ಮಾರಕದ ಬಳಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಬರಹ ಇಷ್ಟವಾಯಿತೆ?

 • 29

  Happy
 • 2

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !