ಪ್ಲಾಸ್ಟಿಕ್‌ ಮಾರಾಟಗಾರರ ವಿರುದ್ಧ ಕಾನೂನು ಅಸ್ತ್ರ: ನಗರಸಭೆಯ ಚಿಂತನೆ

7
ಚಾಮರಾಜನಗರದಲ್ಲಿ ನಿಯಂತ್ರಣಕ್ಕೆ ಬಾರದ ನಿಷೇಧಿತ ಪ್ಲಾಸ್ಟಿಕ್‌

ಪ್ಲಾಸ್ಟಿಕ್‌ ಮಾರಾಟಗಾರರ ವಿರುದ್ಧ ಕಾನೂನು ಅಸ್ತ್ರ: ನಗರಸಭೆಯ ಚಿಂತನೆ

Published:
Updated:
Deccan Herald

ಚಾಮರಾಜನಗರ: ಎಚ್ಚರಿಕೆ ನೀಡಿ, ದಂಡ ವಿಧಿಸಿದ ಬಳಿಕವೂ ನಿಷೇಧಿತ ಪ್ಲಾಸ್ಟಿಕ್‌ ಚೀಲ ಹಾಗೂ ಪ್ಲಾ‌ಸ್ಟಿಕ್‌ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಅಸ್ತ್ರ ಬಳಸಲು ನಗರಸಭೆ ಮುಂದಾಗಿದೆ.

ಈ ಸಂಬಂಧ ಚಾಮರಾಜನಗರದ ವರ್ತಕರ ಸಂಘಕ್ಕೆ ಪತ್ರ ಬರೆದಿರುವ ನಗರಸಭೆ ಆಯುಕ್ತ ಎನ್‌. ರಾಜಣ್ಣ ಅವರು‌, ‘ಅಧಿಕಾರಿಗಳ ತಂಡ ದಿಢೀರ್‌ ಆಗಿ ಅಂಗಡಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಬಳುಸುತ್ತಿರುವುದು ಮತ್ತು ಮಾರಾಟ ಮಾಡುತ್ತಿದ್ದುದು ಕಂಡು ಬಂದಲ್ಲಿ ದಂಡ ವಿಧಿಸಿ ನ್ಯಾಯಾಲಯದಲ್ಲಿ ಪ್ರಕರಣ ಹೂಡಲಾಗುವುದು, ಉದ್ದಿಮೆ ಪರವಾನಗಿ ರದ್ದುಪಡಿಸಿ ಮತ್ತು ಕರ್ನಾಟಕ ಮುನಿಸಿಪಲ್‌ ಕಾಯ್ದೆ 1964ರ ಅನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ನಿಯಂತ್ರಣಕ್ಕೆ ಬಾರದ ಪ್ಲಾಸ್ಟಿಕ್‌‘: ಸರ್ಕಾರ ನಿಷೇಧ ಮಾಡಿರುವ ಪ್ಲಾಸ್ಟಿಕ್‌ಗಳನ್ನು ಬಳಸುವುದು ಮತ್ತು ಮಾರಾಟ ಮಾಡಬಾರದು ಎಂದು ನಗರಸಭೆ ಹಲವು ಬಾರಿ ಮಾಧ್ಯಮಗಳ ಮೂಲಕ ಪ್ರಕಟಣೆ ನೀಡಿದರೂ ಪಟ್ಟಣದ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಮತ್ತು ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ.

ಈ ವರ್ಷದ ಜೂನ್‌ ತಿಂಗಳ ನಂತರ ನಗರಸಭೆಯು ಪ್ಲಾಸ್ಟಿಕ್‌ ಮಾರಾಟ ಮಾಡುತ್ತಿರುವು‌ದರ ವಿರುದ್ಧ ಕ್ರಮ ಕೈಗೊಳ್ಳಲು ಆರಂಭಿಸಿದ್ದು, ಅಂಗಡಿಗಳಿಗೆ ದಿಢೀರ್‌ ಆಗಿ ಭೇಟಿ ನೀಡಿ ಪ್ಲಾಸ್ಟಿಕ್‌ ವಸ್ತುಗಳನ್ನು ಜಪ್ತಿ ಮಾಡಿ, ಮಾಲೀಕರಿಗೆ ದಂಡವನ್ನೂ ವಿಧಿಸುತ್ತಿದೆ.

ನಗರಸಭೆಯ ಆರೋಗ್ಯ ವಿಭಾಗದ ಅಧಿಕಾರಿಗಳು ನೀಡಿರುವ ಅಂಕಿ ಅಂಶಗಳ ಪ್ರಕಾರ, ಇದುವರೆಗೆ ದಿಢೀರ್‌ ಆಗಿ 37 ಅಂಗಡಿಗಳಿಗೆ ದಾಳಿ ಮಾಡಿ ಪ್ಲಾಸ್ಟಿಕ್‌ ಮಾರಾಟ ಮಾಡುತ್ತಿದ್ದ ಮಾಲೀಕರಿಗೆ ₹33 ಸಾವಿರ ದಂಡ ವಿಧಿಸಲಾಗಿದೆ. ಹಾಗಿದ್ದರೂ, ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಳಕೆ ನಿಯಂತ್ರಣಕ್ಕೆ ಬಂದಿಲ್ಲ. 

ಪತ್ರದಲ್ಲೇನಿದೆ?: ‘ನಗರಸಭಾ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಬಳಕೆ/ಮಾರಾಟ ಮಾಡದಂತೆ ಹಲವು ಬಾರಿ ಹೇಳಲಾಗಿದೆ. ಅಂಗಡಿಗೆ ಭೇಟಿ  ಎರಡು ಮೂರು ಬಾರಿ ಭೇಟಿ ಮಾಡಿ ದಂಡವನ್ನೂ ವಿಧಿಸಲಾಗಿದೆ. ಹಾಗಿದ್ದರೂ ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಮಾರಾಟ ಮತ್ತು ಬಳಕೆ ಕಡಿಮೆಯಾಗಿಲ್ಲ’ ಎಂದು ಪತ್ರದಲ್ಲಿ ಹೇಳಲಾಗಿದೆ. 

‘ಪ್ಲಾಸ್ಟಿಕ್‌ ಇಲ್ಲದೇ ಬದುಕೆ ಇಲ್ಲದ ಕಾಲದಲ್ಲಿ ನಾವಿದ್ದೇವೆ. ನಾವು ಕೊಡದಿದ್ದರೂ ಜನರೇ ಕೇಳುತ್ತಾರೆ. ಇಲ್ಲ ಎಂದರೆ ಗೊಣಗುತ್ತಾರೆ. ಜನರೇ ಅಂಗಡಿಗಳಿಗೆ ಬರುವಾಗ ಚೀಲ ತಂದರೆ ಯಾವುದೇ ಸಮಸ್ಯೆ ಇರುವುದಿಲ್ಲ’ ಎಂದು ಹೇಳುತ್ತಾರೆ ವರ್ತಕರು.

‘ಸ್ಥಳೀಯ ಆಡಳಿತ ಅಂಗಡಿಗಳಲ್ಲಿ ಮಾರಾಟ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ. ಆದರೆ, ನಿಷೇಧಿತ ಪ್ಲಾಸ್ಟಿಕ್‌ ಉತ್ಪಾದಿಸುವ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡು, ಪ್ಲಾಸ್ಟಿಕ್‌ ಉತ್ಪನ್ನಗಳು ಮಾರುಕಟ್ಟೆಗೆ ಬರದಂತೆ ತಡೆದರೆ ಯಾರಿಗೂ ಸಮಸ್ಯೆ ಆಗುವುದಿಲ್ಲವಲ್ಲಾ’ ಎಂದು ಪ್ರಶ್ನಿಸುತ್ತಾರೆ ಇನ್ನೂ ಕೆಲವು ವರ್ತಕರು.

‘ಜನರ ಪಾತ್ರವೂ ಇದೆ’

ಪ್ಲಾಸ್ಟಿಕ್‌ ಬಳಕೆ ನಿಯಂತ್ರಣಕ್ಕೆ ತರುವುದರಲ್ಲಿ ಸಾರ್ವಜನಿಕರ ಪಾತ್ರವೂ ಇದೆ ಎಂದು ಹೇಳುತ್ತಾರೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಪರಿಸರ ಅಧಿಕಾರಿ ರಘುರಾಮ್‌.

‘ಜನರು ಅಂಗಡಿಗಳಿಗೆ ಬರುವಾಗ ಮನೆಯಿಂದಲೇ ಚೀಲ ತೆಗೆದುಕೊಂಡು ಬಂದರೆ, ಅಂಗಡಿವರು ಪ್ಲಾಸ್ಟಿಕ್‌ ಚೀಲವನ್ನು ನೀಡುವ ಅಗತ್ಯವೇ ಇರುವುದಿಲ್ಲ. ಈ ಬಗ್ಗೆ ಜನರಲ್ಲೂ ಜಾಗೃತಿ ಮೂಡಬೇಕು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗೀಗ ಜನರಲ್ಲಿ ಈ ಬಗ್ಗೆ ಅರಿವು ಮೂಡುತ್ತದೆ. ಕ್ರಮೇಣ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಕಡಿಮೆಯಾಗಲಿದೆ’ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.

ಯಾವುದಕ್ಕೆಲ್ಲ ನಿಷೇಧ?

ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್‌ 5ರ ಪ್ರಕಾರ, ಪ್ಲಾಸ್ಟಿಕ್‌ ಕ್ಯಾರಿಬಾಗ್‌, ಪ್ಲಾಸ್ಟಿಕ್‌ ಭಿತ್ತಿಪತ್ರ, ಪ್ಲಾಸ್ಟಿಕ್‌ ತೋರಣ, ಫ್ಲೆಕ್ಸ್‌, ಪ್ಲಾಸ್ಟಿಕ್‌ ಬಾವುಟ, ತಟ್ಟೆ, ಲೋಟ, ಚಮಚ, ಕ್ಲಿಂಗ್‌ ಫಿಲ್ಕ್ಸ್‌, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್‌ ಹಾಳೆ, ಥರ್ಮೋಕೋಲ್‌ಗೆ ನಿಷೇಧ ಹೇರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !