ಮರುಭೂಮಿಯಲ್ಲಿ ಸೌಹಾರ್ದದ ಬೀಜ

7
ಜಗತ್ತು ಸಹಿಷ್ಣುತೆಯತ್ತ ಸಾಗುವಾಗ ಭಾರತದ ಗಂಗಾ ನದಿಯ ಹರಿವು ವಿರುದ್ಧ ದಿಕ್ಕಿಗೆ ಯಾಕೆ?

ಮರುಭೂಮಿಯಲ್ಲಿ ಸೌಹಾರ್ದದ ಬೀಜ

Published:
Updated:
Prajavani

ಇವನ್ನೆಲ್ಲ ಯಾರಾದರೂ ಊಹಿಸಿದ್ದರೇ? ಇಂದು ಜಗತ್ತಿನ ಅತ್ಯಂತ ಮಹತ್ವದ ಧಾರ್ಮಿಕ ನಾಯಕರಾಗಿರುವ ಪೋಪ್‍ ಫ್ರಾನ್ಸಿಸ್‍ ಅವರು ಬುದ್ಧ ಮತ್ತು ಮಹಾತ್ಮ ಗಾಂಧಿಯ ನೆಲಕ್ಕೆ ಭೇಟಿ ಕೊಡಬೇಕು ಎಂದು ಬಯಸಿದರೂ ಭಾರತ ಬಾಗಿಲು ಮುಚ್ಚಬಹುದು ಎಂದೂ, ಅರಬ್‍ ಜಗತ್ತಿನ ಹೃದಯ ಭಾಗದಲ್ಲಿರುವ ಅರಬ್‍ ಸಂಯುಕ್ತ ಸಂಸ್ಥಾನವು (ಯುಎಇ) ರತ್ನಗಂಬಳಿ ಹಾಸಿ ಸ್ವಾಗತಿಸಬಹುದು ಎಂದು ಯಾರಾದರೂ ಊಹಿಸಿದ್ದರೇ?

ಅರಬ್‍ ಪರ್ಯಾಯ ದ್ವೀಪಕ್ಕೆ ಭೇಟಿ ನೀಡಿದ ಮೊದಲ ಪೋಪ್‍, ಅಬುಧಾಬಿಯ ಕ್ರೀಡಾಂಗಣದಲ್ಲಿ ದೊಡ್ಡ ಪ್ರಾರ್ಥನಾ ಸಭೆ ನಡೆಸಿದರು. ಅದರಲ್ಲಿ 1.4 ಲಕ್ಷಕ್ಕೂ ಹೆಚ್ಚು ಕ್ರೈಸ್ತರು ಭಾಗವಹಿಸಿದ್ದರು. ಮುಸ್ಲಿಂ ದೇಶದ ಇತಿಹಾಸದಲ್ಲಿ ಕ್ರೈಸ್ತರ ಅತ್ಯಂತ ದೊಡ್ಡ ಧಾರ್ಮಿಕ ಕಾರ್ಯಕ್ರಮ ನಡೆಯಬಹುದು ಎಂಬ ಕಲ್ಪನೆ ಯಾರಿಗಾದರೂ ಇತ್ತೇ?

ಜಗತ್ತಿನ ಅತ್ಯಂತ ಮಹತ್ವದ ಇಸ್ಲಾಂ ಕಲಿಕಾ ಕೇಂದ್ರ ಈಜಿಪ್ಟ್‌ನ ಅಲ್‍ ಅಝರ್‌ನ ಇಮಾಮ್‌ ಮತ್ತು ಪೋಪ್‍ ಅವರು ಧರ್ಮ, ದೇಶ, ಸಂಸ್ಕೃತಿ ಮತ್ತು ಜನಾಂಗಗಳ ಎಲ್ಲೆ ಮೀರಿ ಜಾಗತಿಕ ಶಾಂತಿ ಮತ್ತು ಮಾನವ ಸಹೋದರತ್ವಕ್ಕಾಗಿ ಜಂಟಿ ಘೋಷಣೆಗೆ ಸಹಿ ಮಾಡಬಹುದು ಎಂಬುದನ್ನು ಯಾರಾದರೂ ಕಲ್ಪಿಸಿಕೊಂಡಿದ್ದರೇ? ಮತಾಂಧತೆ, ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆಯ ವಿರುದ್ಧ ಅತ್ಯಂದ ಬಲವಾದ ಮನವಿಯನ್ನು ಈ ಇಬ್ಬರು ನೀಡಬಹುದು ಎಂದು ಯಾರಾದರೂ ಭಾವಿಸಿದ್ದರೇ?

ಸಹಿಷ್ಣುತೆಯ ಜಾಗತಿಕ ರಾಜಧಾನಿಯಾಗುವ ಬದ್ಧತೆ ಮತ್ತು ಮಹತ್ವಾಕಾಂಕ್ಷೆಯನ್ನು ಭಾರತ ಅಲ್ಲ, ಯುಎಇ ತೋರಬಹುದು ಎಂದು ಯಾರಾದರೂ ಊಹಿಸಿದ್ದರೇ? ಈ ದೇಶ ಜಗತ್ತಿನ ಮೊದಲ ಸಹಿಷ್ಣುತೆ ಸಚಿವಾಲಯ
ವನ್ನೂ ಆರಂಭಿಸಿದೆ.

ಅಯೋಧ್ಯೆಯಲ್ಲಿ ಮಂದಿರ-ಮಸೀದಿ ವಿವಾದ ಮುಂದುವರಿದಿರುವಾಗಲೇ ತಮ್ಮ ದೇಶದ ರಾಜಧಾನಿಯಲ್ಲಿ, ಅದರಲ್ಲೂ ದೇಶದ ಪಿತಾಮಹ ಶೇಖ್‍ ಜಾಯೆದ್‍ ಬಿನ್‍ ಸುಲ್ತಾನ್‍ ಅಲ್‍ ನಹ್ಯಾನ್‍ ಸ್ಥಾಪಿಸಿದ ಗ್ರ್ಯಾಂಡ್‌ ಮಸೀದಿಯ ಸಮೀಪದಲ್ಲಿಯೇ ಭವ್ಯವಾದ ಹಿಂದೂ ದೇವಾಲಯ ಕಟ್ಟಲು ಮುಸ್ಲಿಂ ದೇಶವು ದೊಡ್ಡ ನಿವೇಶನ ಕೊಡಬಹುದು ಎಂದು ಯಾರಾದರೂ ಕಲ್ಪಿಸಿ
ಕೊಂಡಿದ್ದರೇ?

ಹೌದು, ಇವು ಯಾವುವೂ ಕಲ್ಪನೆ ಅಲ್ಲ, ವಾಸ್ತವ. ಇತ್ತೀಚಿನ ವರ್ಷಗಳಲ್ಲಿ ಯುಎಇಯ ಜಾಗತಿಕ ವರ್ಚಸ್ಸು ವೃದ್ಧಿಸಿರುವುದು ಅಲ್ಲಿನ ಅಸಾಧಾರಣ ಸಂಪತ್ತು ಮತ್ತು ಅಬುಧಾಬಿ ಹಾಗೂ ದುಬೈಯಲ್ಲಿ ಇರುವ ಐಷಾರಾಮಿ ಗಗನಚುಂಬಿ ಕಟ್ಟಡಗಳಿಂದಾಗಿ. ಭೂತಕಾಲದಲ್ಲಿ ಇದು ಅಷ್ಟೊಂದು ಹಿತಕರವಲ್ಲದ ಹೆಸರನ್ನೂ ಹೊಂದಿತ್ತು- ಕೆಲವೊಮ್ಮೆ ಇಸ್ಲಾಂ ಮೂಲಭೂತವಾದವನ್ನು ಬೆಂಬಲಿಸಿತ್ತು ಮತ್ತು ಭಾರತದ ನೆರೆಯಲ್ಲಿ ನಡೆಯುತ್ತಿದ್ದ ಇಸ್ಲಾಂ ರಾಜಕಾರಣಕ್ಕೆ ನೆರವು ನೀಡಿತ್ತು. ಭಾರತದಲ್ಲಿ ಭಯೋತ್ಪಾದಕ ಕೃತ್ಯ ಎಸಗುವ ದಾವೂದ್‍ ಇಬ್ರಾಹಿಂನಂಥವರು ಆ ದೇಶಕ್ಕೆ ಓಡಿ ಹೋಗುತ್ತಿದ್ದರು. ಅಫ್ಗಾನಿಸ್ತಾನದ ಮೂಲಭೂತವಾದಿ ತಾಲಿಬಾನ್‍ ಸರ್ಕಾರಕ್ಕೆ 1996ರಲ್ಲಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಂತರ ಮನ್ನಣೆ ನೀಡಿದ ಮೂರನೇ ದೇಶ ಯುಎಇ ಆಗಿತ್ತು.

ಯುಎಇಯಲ್ಲಿ ಬಹುತೇಕ ಎಲ್ಲವೂ ಬದಲಾಗಿವೆ. ಇಲ್ಲಿನ ಜನಸಂಖ್ಯೆಯಲ್ಲಿ ಸ್ಥಳೀಯರ ಪಾಲು ಶೇ 11.5ರಷ್ಟು ಮಾತ್ರ. ಜಗತ್ತಿನ ವಿವಿಧ ದೇಶಗಳು ಮತ್ತು ಧರ್ಮಗಳಿಗೆ ಸೇರಿದವರೇ ಶೇ 88.5ರಷ್ಟಿದ್ದಾರೆ (ಭಾರತೀಯರೇ ಅತ್ಯಂತ ದೊಡ್ಡ ಗುಂಪಾಗಿದ್ದು ಅವರ ಪ್ರಮಾಣ ಶೇ 27.1ರಷ್ಟು). ಹಾಗಾಗಿ ಬದಲಾವಣೆ ಅನಿವಾರ್ಯವಾಗಿತ್ತು ಎಂಬುದು ಸಿನಿಕರ ವಾದ. ಅದು ನಿಜವೇ ಆಗಿದ್ದರೂ ಸಕಾರಾತ್ಮಕ ಬದಲಾವಣೆಯ ಕೀರ್ತಿ ಯುವರಾಜ ಶೇಖ್‍ ಮೊಹಮ್ಮದ್‍ ಬಿನ್‍ ಜಾಯೆದ್‍ ಬಿನ್‍ ಸುಲ್ತಾನ್‍ ಅಲ್‍ ನಹ್ಯಾನ್‍ಗೆ ಸೇರಬೇಕು. ದೇಶದ ಅಧ್ಯಕ್ಷ ಶೇಖ್‍ ಖಲೀಫಾ ಬಿನ್‍ ಜಾಯೆದ್‍ ಅಲ್‍ ನಹ್ಯಾನ್‍ ಅವರ ಆರೋಗ್ಯ ಸರಿ ಇಲ್ಲ, ಹಾಗಾಗಿ ಯುವರಾಜನೇ ನಿಜವಾದ ಆಡಳಿತಗಾರ. 2019 ಅನ್ನು ‘ಸಹಿಷ್ಣುತೆಯ ವರ್ಷ’ ಎಂದು ಆಚರಿಸುವ ನಿರ್ಧಾರ ಕೈಗೊಂಡದ್ದು ಯುವರಾಜ.

ಪೋಪ್‍ ಮತ್ತು ಅಲ್‍ ಅಝರ್ ಮಸೀದಿಯ ಇಮಾಮ್‍ ಅಹ್ಮದ್‍ ಅಲ್‍ ತಯ್ಯಬ್‍ ಆಶೀರ್ವಾದದೊಂದಿಗೆ ‘ಸಹಿಷ್ಣುತೆ ವರ್ಷ’ ಆರಂಭವಾಗಲಿ ಎಂದು ಯುವರಾಜ ನಿರ್ಧರಿಸಿದರು. ಸರ್ಕಾರಿ ಪ್ರಾಯೋಜಕತ್ವದಲ್ಲಿ ಜಾಗತಿಕ ಅಂತರಧರ್ಮೀಯ ಸಮಾವೇಶ ‘ಮಾನವ ಸಹೋದರತ್ವ’ವು ಅಬುಧಾಬಿಯಲ್ಲಿ ಫೆ. 3-4ರಂದು ನಡೆಯಿತು. ಹಿಂದೂ ಧರ್ಮದ ಪ್ರತಿನಿಧಿಯಾಗಿ  ಗಾಂಧೀಜಿಯ ತತ್ವಗಳ ಬಗ್ಗೆ ಮಾತನಾಡುವ ಅವಕಾಶ ಈ ಲೇಖಕನಿಗೆ ಸಿಕ್ಕಿತ್ತು. ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ನಡುವಣ ಸಂವಾದವನ್ನು ಗಟ್ಟಿಗೊಳಿಸುವುದು ಸಮಾವೇಶದ ಮುಖ್ಯ ಗುರಿಯಾಗಿತ್ತು. ಆದರೆ, ಜಗತ್ತಿನ ಎಲ್ಲ ಧರ್ಮಗಳನ್ನು ಪ್ರತಿನಿಧಿಸುವ ನಾಯಕರು ಮತ್ತು ಚಿಂತಕರಿಗೆ ವೇದಿಕೆ ಒದಗಿಸಲಾಗಿತ್ತು.

ಸಮಾವೇಶದಲ್ಲಿ ಮಾತನಾಡಿದ ಸ್ವಾಮಿನಾರಾಯಣ ಪಂಥದ ಗುರು ಬ್ರಹ್ಮವಿಹಾರಿ ಸ್ವಾಮಿ ಅವರು ಎಲ್ಲರ ಮನಕ್ಕೆ ಲಗ್ಗೆ ಇಟ್ಟರು. ‘ಜಗತ್ತಿನ ಎಲ್ಲ ಧರ್ಮಗಳು, ದೇಶಗಳು ಮತ್ತು ಸಂಸ್ಕೃತಿಗಳ ಮುಂದೆ ಇರುವ ನಿರ್ಣಾಯಕ ಆಯ್ಕೆಗಳು ಇವು: ಎಲ್ಲರೂ ಒಟ್ಟಾಗಿ ಸಮೃದ್ಧಿಯತ್ತ ಸಾಗುವುದೇ ಅಥವಾ ಭಿನ್ನ ಭಿನ್ನವಾಗಿ ಒಟ್ಟಾಗಿ ನಾಶವಾಗುವುದೇ?’ ಮೊದಲನೆಯದನ್ನು ಆಯ್ಕೆ ಮಾಡಿಕೊಂಡದ್ದಕ್ಕೆ ಯುಎಇಯನ್ನು ಅವರು ಕೊಂಡಾಡಿದರು. ಅಂತರಧರ್ಮೀಯ ಸಂವಾದದ ಮುಖ್ಯ ಉದ್ದೇಶ ಇತರ ಧರ್ಮಗಳನ್ನು ಅರ್ಥ ಮಾಡಿಕೊಳ್ಳುವುದರ ಜತೆಗೆ ತನ್ನ ಧರ್ಮವನ್ನೂ ತಿಳಿದುಕೊಳ್ಳುವುದು ಎಂದರು.

ಎಲ್ಲ ವಿವೇಕಿಗಳು ತಮ್ಮ ಯೋಚನೆಯನ್ನು ಭಿನ್ನವಾಗಿ ಮುಂದಿಡುತ್ತಾರಾದರೂ ಅದರ ತಿರುಳು ಒಂದೇ ಆಗಿರುತ್ತದೆ. ‘ನಾವು ಜತೆಯಾಗಿ ಭವಿಷ್ಯ ಕಟ್ಟುತ್ತೇವೆ, ಅದಾಗದಿದ್ದರೆ ಭವಿಷ್ಯವೇ ಇರುವುದಿಲ್ಲ’ ಎಂದು ಪೋಪ್‍ ಹೇಳಿದರು. ಸಮಾವೇಶದ ಘೋಷಣೆ ನನ್ನನ್ನು ಅಚ್ಚರಿಯಲ್ಲಿ ಕೆಡವಿತು: ‘ಪೂರ್ವ ಮತ್ತು ಪಶ್ಚಿಮದ ಮುಸ್ಲಿಮರು, ಪೂರ್ವ ಮತ್ತು ಪಶ್ಚಿಮದ ಕೈಸ್ತರ ಜತೆಗೂಡಿ ದೇವರ ಹೆಸರಿನಲ್ಲಿ ಮಾಡುತ್ತಿರುವ ಘೋಷಣೆ ಏನೆಂದರೆ, ಸಂವಾದವನ್ನು ಸಂಸ್ಕೃತಿಯಾಗಿ ಹೊಂದಿರುವ ದಾರಿಯನ್ನು ಅಳವಡಿಸಿಕೊಳ್ಳುತ್ತೇವೆ; ಪರಸ್ಪರ ಸಹಕಾರವನ್ನು ನಡತೆಯಾಗಿ ರೂಪಿಸಿಕೊಳ್ಳುತ್ತೇವೆ; ಅನ್ಯೋನ್ಯ ಗ್ರಹಿಕೆಯನ್ನು ವಿಧಾನ ಮತ್ತು ಮಾನದಂಡವಾಗಿ ಇರಿಸಿಕೊಳ್ಳುತ್ತೇವೆ’. 

ಈ ಕರೆ ಮುಸ್ಲಿಂ ಮತ್ತು ಕ್ರೈಸ್ತರ ನಡುವಣ ಸಂವಾದಕ್ಕೆ ಸೀಮಿತವಾದುದಲ್ಲ ಎಂಬುದನ್ನು ಇಬ್ಬರೂ ಧಾರ್ಮಿಕ ನಾಯಕರು ಸ್ಪಷ್ಟಪಡಿಸಿದ್ದಾರೆ. ‘ಈ ಸಾಮರಸ್ಯ ಮತ್ತು ಸಹೋದರತ್ವದ ಮನವಿಯು ದೇವರನ್ನು ನಂಬುವವರು, ನಂಬದಿರುವವರು ಮತ್ತು ಎಲ್ಲ ಒಳ್ಳೆಯ ಜನರಿಗೆ ಅನ್ವಯವಾಗಲಿ ಎಂಬುದು ನಮ್ಮ ಆಕಾಂಕ್ಷೆ. ಹಿಂಸೆ ಮತ್ತು ತೀವ್ರವಾದವನ್ನು ತಿರಸ್ಕರಿಸುವ ಸತ್ಯವಂತ ಆತ್ಮಸಾಕ್ಷಿಗೆ ಘೋಷಣೆಯು ಅನ್ವಯವಾಗಲಿ ಎಂದು ಕೋರುತ್ತೇವೆ. ಧರ್ಮಗಳು ಪ್ರಚುರಪಡಿಸುವ ಸಹಿಷ್ಣುತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಹೊಂದಿರುವವರಿಗೆ ಇದು ನಮ್ಮ ಕರೆ’.

ಮುಸ್ಲಿಂ ಜಗತ್ತಿನ ಪ್ರಮುಖ ದೇಶವೊಂದರಲ್ಲಿ ನಡೆದ ಹೃದಯಸ್ಪರ್ಶಿ ಬೆಳವಣಿಗೆಗೆ ವ್ಯತಿರಿಕ್ತವಾದ, ಅಸಹಿಷ್ಣುತೆ ಮತ್ತು ಧರ್ಮಾಂಧತೆಯ ಸ್ಥಿತಿ ಸಮಕಾಲೀನ ಭಾರತದಲ್ಲಿ ಇದೆ. ತಮ್ಮನ್ನು ಅಂಚಿಗೆ ತಳ್ಳಲಾಗಿದೆ ಎಂಬ ಭಾವನೆ ಭಾರತದ ಮುಸ್ಲಿಮರಲ್ಲಿ ಇಂದಿನಂತೆ ಎಂದೂ ಇರಲಿಲ್ಲ. ಗೋರಕ್ಷಣೆಯ ಹೆಸರಿನಲ್ಲಿ ಜನರನ್ನು ಹೊಡೆದು ಕೊಲ್ಲುವ ಪ್ರವೃತ್ತಿ ಬಗ್ಗೆ ಎಷ್ಟು ಖಂಡನೆ ವ್ಯಕ್ತಪಡಿಸಬೇಕೋ ಅಷ್ಟನ್ನು ಆಡಳಿತ ಪಕ್ಷದ ಮುಖಂಡರು ವ್ಯಕ್ತಪಡಿಸಲಿಲ್ಲ.

2017ರ ಗಣರಾಜ್ಯೋತ್ಸವಕ್ಕೆ ಅಬುಧಾಬಿಯ ಯುವರಾಜನನ್ನು ಪ್ರಧಾನಿ ಮೋದಿ ಆಮಂತ್ರಿಸಿದ್ದರು. ಆದರೆ, ಸಹಿಷ್ಣುತೆಯ ವಿಚಾರದಲ್ಲಿ ಯುವರಾಜನಿಗೆ ಹೆಗಲು ಕೊಟ್ಟು ಮೋದಿ ನಿಲ್ಲಲಿಲ್ಲ. ಹಿಂದುತ್ವದ ಹೆಸರಿನಲ್ಲಿ ಹಿಂಸೆ ಎಸಗುವವರು ತಮ್ಮ ಬೆಂಬಲಿಗರಾಗಿರುವಾಗ, ಅವರಲ್ಲಿ ಕೆಲವರು ತಮ್ಮ ಸಚಿವ ಸಂಪುಟದಲ್ಲಿಯೇ ಇರುವಾಗ ಮೋದಿಗೆ ಅದು ಹೇಗೆ ಸಾಧ್ಯ? ಪೋಪ್‌ ಫ್ರಾನ್ಸಿಸ್‌ ಅವರನ್ನು ಭಾರತಕ್ಕೆ ಆಹ್ವಾನಿಸಬೇಕು ಎಂದು ಭಾರತದ ಕ್ರೈಸ್ತರು, ಕ್ರೈಸ್ತೇತರರು ಮಾಡಿದ ಎಲ್ಲ ಪ್ರಯತ್ನಗಳಿಗೂ ಅಡ್ಡಲಾಗಿ ಮೋದಿ ನೇತೃತ್ವದ ಸರ್ಕಾರ ಬಂಡೆಯಂತೆ ನಿಂತಿದೆ.

ಭಾರತದ ಗಣ್ಯ ವ್ಯಕ್ತಿಯೊಬ್ಬರು ಅಬುಧಾಬಿಯಲ್ಲಿ ಆತಂಕದಿಂದ ‘ಭಾರತದಲ್ಲಿ ಗಂಗಾ ನದಿಯು ವಿರುದ್ಧ ದಿಕ್ಕಿಗೆ ಹರಿಯುತ್ತಿದೆ’ ಎಂದರು. ವಿಷಾದನೀಯ. ನಾವು ಎಂದಾದರೂ ಇದನ್ನು ಕಲ್ಪಿಸಿಕೊಂಡಿದ್ದೆವೇ?

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !