ಯಶ್ ಮನೆ ಮುಂದೆ ಆತ್ಮಹತ್ಯೆ ಯತ್ನ

7
ಹುಟ್ಟುಹಬ್ಬದ ಆಚರಣೆ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡ

ಯಶ್ ಮನೆ ಮುಂದೆ ಆತ್ಮಹತ್ಯೆ ಯತ್ನ

Published:
Updated:

ಬೆಂಗಳೂರು: ಚಿತ್ರನಟ ಯಶ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರಾಕರಿಸಿದ್ದರಿಂದ ಬೇಸರಗೊಂಡು ಹೊಸಕೆರೆಹಳ್ಳಿಯಲ್ಲಿರುವ ಅವರ ಮನೆಯ ಮುಂದೆ ರವಿ (28) ಎಂಬ ಅಭಿಮಾನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ರವಿ ಅವರನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ದೇಹ ಶೇ 80ರಷ್ಟು ಸುಟ್ಟು ಹೋಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಈ ವೇಳೆ ಯಶ್ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪಾವಗಡ ತಾಲ್ಲೂಕಿನ ರವಿ, ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದು ಲಗ್ಗೆರೆಯಲ್ಲಿ ನೆಲೆಸಿದ್ದರು. ಯಶ್ ಅವರ ಅಪ್ಪಟ ಅಭಿಮಾನಿಯಾಗಿರುವ ಅವರು, ಪ್ರತಿ ವರ್ಷವೂ ಜ.8ರಂದು ಶುಭಾಶಯ ಹೇಳಲು ಮನೆ ಬಳಿ ಬರುತ್ತಿದ್ದರು.

ಹಿರಿಯ ನಟ ಅಂಬರೀಷ್ ನಿಧನದ ಕಾರಣದಿಂದ ಈ ಸಲ ಜನ್ಮದಿನ ಆಚರಣೆ ನಿರಾಕರಿಸಿದ್ದ ಯಶ್, ‘ಶುಭಾಶಯ ಕೋರಲು ಯಾರೂ ಮನೆ ಹತ್ತಿರ ಬರಬೇಡಿ’ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದರು. ಇತ್ತೀಚೆಗೆ ಮನೆ ಮೇಲೆ ಐಟಿ ದಾಳಿ ನಡೆದಿದ್ದೂ ಅವರಿಗೆ ಇರಿಸು–ಮುರಿಸು ಉಂಟಾಗುವಂತೆ ಮಾಡಿತ್ತು ಎನ್ನಲಾಗಿದೆ.

ಈ ಮನವಿ ಬಳಿಕವೂ ರವಿ ಸೇರಿದಂತೆ ನೂರಾರು ಅಭಿಮಾನಿಗಳು ಮಂಗಳವಾರ ಬೆಳಿಗ್ಗೆಯೇ ಯಶ್ ಅವರ ಮನೆ ಮುಂದೆ ಜಮಾಯಿಸಿದ್ದರು. ಆದರೆ, ತಮ್ಮ ಮಾತಿಗೆ ಬದ್ಧರಾಗಿದ್ದ ಯಶ್, ಕುಟುಂಬ ಸದಸ್ಯರ ಜತೆ ಬೆಳಿಗ್ಗೆಯೇ ಹೊರ ಹೋಗಿದ್ದರು.

ಮಧ್ಯಾಹ್ನದವರೆಗೂ ಕಾದು ಬೇಸರಗೊಂಡ ರವಿ, 2 ಗಂಟೆ ಸುಮಾರಿಗೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸರು, ಮಣ್ಣು ಹಾಗೂ ನೀರೆರಚಿ ಬೆಂಕಿ ನಂದಿಸಿದರು. ನಂತರ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !