ಸರ್ದಾರ್‌ಗೆ ಗೌರವ: ‘ಪಟೇಲಸದೃಶ’ ಬದ್ಧತೆ

7
ಇನ್ನೊಬ್ಬ ಹೀರೊ ಬೋಸ್‌ ಅವರಿಗೂ ಅರ್ಹ ಗೌರವ ಸಲ್ಲುವಂತೆ ಮಾಡಲು ಮೋದಿ ಮುಂದಡಿ ಇಡಬೇಕು

ಸರ್ದಾರ್‌ಗೆ ಗೌರವ: ‘ಪಟೇಲಸದೃಶ’ ಬದ್ಧತೆ

ಎ. ಸೂರ್ಯ ಪ್ರಕಾಶ್
Published:
Updated:

ಸರ್ದಾರ್‌ ವಲ್ಲಭಭಾಯ್‌ ಪಟೇಲ್ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್‌ 31ರಂದು ಉದ್ಘಾಟನೆ ಮಾಡಿದ್ದು ನೆಹರೂ ಮತ್ತು ಮಾರ್ಕ್ಸ್‌ವಾದಿ ಚಿಂತನೆಯವರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಅಷ್ಟು ದೊಡ್ಡ ಮೊತ್ತ ಖರ್ಚು ಮಾಡಿ ಪ್ರತಿಮೆ ನಿರ್ಮಿಸಿದ್ದರ ಹಿಂದಿನ ವಿವೇಕವನ್ನು ಅವರು ಪ್ರಶ್ನಿಸುತ್ತಿದ್ದಾರೆ. ಆದರೆ, ನಾವು ಒಂದು ರಾಷ್ಟ್ರವಾಗಿ ಉಳಿದಿರುವುದಕ್ಕೆ ಪಟೇಲ್ ಕಾರಣರು. ಹಾಗಾಗಿ, ಇಂತಹ ಪ್ರಶ್ನೆಗಳನ್ನೆಲ್ಲ ಪಕ್ಕಕ್ಕೆ ಸರಿಸಿಡಬೇಕು. ಅವರ ಪ್ರತಿಮೆ ನಿರ್ಮಿಸಿದ್ದಕ್ಕೆ ಬೇರೆ ಕಾರಣಗಳೂ ಇವೆ. ಆದರೆ, ಅವುಗಳಲ್ಲಿ ಹಲವನ್ನು ಒಂದು ಕುಟುಂಬಕ್ಕೆ ಮಾತ್ರ ನಿಷ್ಠೆ ತೋರಿಸುವ ಸರ್ಕಾರಿ ಇತಿಹಾಸಕಾರರು ಮರೆಮಾಚಿದ್ದರು. ಆ ಕಾರಣಗಳಲ್ಲಿ ಕೆಲವು ಇಲ್ಲಿವೆ:

ಬ್ರಿಟಿಷರು ಭಾರತದಿಂದ ಹೊರನಡೆಯುವ ಸಮಯದಲ್ಲಿ, ರಾಜರ ಆಡಳಿತ ಇದ್ದ ಪ್ರದೇಶಗಳಿಗೆ ಮೂರು ಆಯ್ಕೆಗಳನ್ನು ನೀಡಿದ್ದರು. ಅವು ತಾವು ಸ್ವತಂತ್ರ ಎಂದು ಘೊಷಿಸಿಕೊಳ್ಳಬಹುದಿತ್ತು, ಭಾರತದ ಅಥವಾ ಪಾಕಿಸ್ತಾನದ ಜೊತೆ ವಿಲೀನ ಆಗಬಹುದಿತ್ತು. 550ಕ್ಕಿಂತ ಹೆಚ್ಚಿನ ಮಹಾರಾಜರು ಮತ್ತು ರಾಜರನ್ನು ಭಾರತದ ಭಾಗ ಆಗುವಂತೆ ಒಪ್ಪಿಸುವುದು ಭಗೀರಥ ಕೆಲಸವೇ ಆಗಿತ್ತು. ಆದರೆ ಪಟೇಲರು ತಮ್ಮ ದೃಢ ನಿರ್ಧಾರ, ರಾಜತಾಂತ್ರಿಕ ಚಾತುರ್ಯ ಮತ್ತು ದೂರದೃಷ್ಟಿಯ ಮೂಲಕ ರಾಜರು ತಮ್ಮ ಪ್ರದೇಶಗಳನ್ನು ಭಾರತದ ಜೊತೆ ವಿಲೀನಗೊಳಿಸಲು ಒಪ್ಪುವಂತೆ ಮಾಡಿದರು. ಈ ಕೆಲಸವನ್ನು ಪಟೇಲರು ಕೈಗೆತ್ತಿಕೊಳ್ಳದೆ ಇದ್ದಿದ್ದರೆ, ಭಾರತದ ಭೂಪಟದಲ್ಲಿ ರಂಧ್ರಗಳು ಕಾಣಿಸುತ್ತಿದ್ದವು.

ಹೈದರಾಬಾದಿನ ನಿಜಾಮ ಮತ್ತು ಜುನಾಗಡದ ನವಾಬ ಪಾಕಿಸ್ತಾನದ ಜೊತೆ ಸೇರಲು ತೀರ್ಮಾನಿಸಿದ್ದರು. ಮಧ್ಯ ಭಾರತದ ಒಂದಿಬ್ಬರು ಮಹಾರಾಜರು ಸ್ವತಂತ್ರವಾಗಿ ಉಳಿಯಲು ಉತ್ಸುಕರಾಗಿದ್ದರು. ಕಠಿಣ ನಿರ್ಧಾರ ಕೈಗೊಂಡ ಪಟೇಲರು, ಅಗತ್ಯ ಕಂಡುಬಂದ ಸಮಯದಲ್ಲಿ ಸಶಸ್ತ್ರ ಪಡೆಗಳನ್ನು ಬಳಸಿದರು, ಈ ರಾಜ್ಯಗಳು ಭಾರತದ ಜೊತೆ ವಿಲೀನ ಆಗುವಂತೆ ಮಾಡಿದರು. ಹೈದರಾಬಾದ್ ಪ್ರಾಂತ್ಯ ಪಾಕಿಸ್ತಾನದ ಭಾಗ ಆಗುತ್ತದೆ ಎಂಬ ವಿಚಾರವಾಗಿ ಪಟೇಲರು, ‘ಭಾರತದ ಉದರದಲ್ಲಿ ಜೀರ್ಣವಾಗದ ವಸ್ತುಗಳು ಇರುವುದು ನನಗೆ ಇಷ್ಟವಿಲ್ಲ’ ಎಂದು ಹೇಳಿದ್ದರು ಎಂಬ ವರದಿಗಳಿವೆ. ಬಲಪ್ರಯೋಗದ ವಿಚಾರವಾಗಿ ಪ್ರಧಾನಿ ನೆಹರೂ ಅವರು ಅತೃಪ್ತಿ ವ್ಯಕ್ತಪಡಿಸಿದ್ದರು. ಆದರೆ, ‘ಉಕ್ಕಿನ ಮನುಷ್ಯ’ ಪಟೇಲರು ಆ ಸಮಯದಲ್ಲಿ ಇರದಿರುತ್ತಿದ್ದರೆ ನೆಹರೂ ಅವರ ಅಂಜುಬುರುಕತನ ಎದುರಿಸಲು ಯಾರಿಂದಲೂ ಆಗುತ್ತಿರಲಿಲ್ಲ.

ಪಟೇಲರ ‘ಏಕತೆಯ ಪ್ರತಿಮೆ’ ಸ್ಥಾಪಿಸಲು ಇದು ಸಾಕಾಗುವಂತಹ ಕಾರಣ ಅಲ್ಲವೇ?

ರಾಷ್ಟ್ರದ ಏಕತೆಯ ವಿಚಾರದಲ್ಲಿ ಕಠಿಣವಾಗಿ ಇದ್ದಿದ್ದು ಮಾತ್ರವೇ ಅಲ್ಲದೆ, ಪಟೇಲರಲ್ಲಿ ಇನ್ನೊಂದು ಅಸಾಮಾನ್ಯ ಗುಣ ಇತ್ತು. ಉದಾರ ಉದ್ದೇಶಕ್ಕಾಗಿ ತ್ಯಾಗ ಮಾಡುವ ಮನೋಭಾವ ಅವರದ್ದಾಗಿತ್ತು. ನೆಹರೂ ಅವರ ಸಣ್ಣತನ ಹಾಗೂ ಸ್ವಾರ್ಥಕ್ಕೆ ವಿರುದ್ಧ ಎಂಬಂತೆ ಪಟೇಲರು ನಿಸ್ವಾರ್ಥದ ಮೂರ್ತರೂಪ ಆಗಿದ್ದರು ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಗಾಂಧೀಜಿ ಸಲಹೆಯ ಕಾರಣದಿಂದಾಗಿ, ಪಟೇಲರು ಕಾಂಗ್ರೆಸ್ಸಿನ ನೇತಾರ ಆಗುವ ಅವಕಾಶವನ್ನು ಹಲವು ಸಂದರ್ಭಗಳಲ್ಲಿ ಬಿಟ್ಟುಕೊಡಬೇಕಾಯಿತು, ನೆಹರೂ ಅವರಿಗೆ ದಾರಿ ಮಾಡಿಕೊಡಬೇಕಾಯಿತು. ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಆಯ್ಕೆ ಆದವರನ್ನು ಬ್ರಿಟಿಷರು ಭಾರತದ ಮೊದಲ ಪ್ರಧಾನಿ ಆಗುವಂತೆ ಆಹ್ವಾನಿಸುತ್ತಾರೆ ಎಂಬುದು 1946ರ ವೇಳೆಗೆ ಬಹುತೇಕ ಖಚಿತವಾಗಿತ್ತು. ಈ ಹುದ್ದೆಗೆ ಹೆಸರು ಸೂಚಿಸುವಂತೆ ಪಕ್ಷವು 15 ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೆ ತಿಳಿಸಿತು. 15ರಲ್ಲಿ 12 ಸಮಿತಿಗಳು ಪಟೇಲರ ಹೆಸರು ಸೂಚಿಸಿದವು. ಇನ್ನುಳಿದ ಮೂರು ಸಮಿತಿಗಳು ಅಭಿಪ್ರಾಯ ತಿಳಿಸಲಿಲ್ಲ.

ಯಾವ ಸಮಿತಿಯೂ ನೆಹರೂ ಹೆಸರನ್ನು ಸೂಚಿಸಲಿಲ್ಲ. ನೆಹರೂ ಮುನಿಸಿಕೊಂಡರು, ತಾವು ಯಾರ ಕೈಕೆಳಗೂ ಕೆಲಸ ಮಾಡುವುದಿಲ್ಲ ಎಂದು ಗಾಂಧೀಜಿಯವರಲ್ಲಿ ಹೇಳಿದ್ದರು ಎಂಬ ಮಾತುಗಳು ಇವೆ. ಮಧ್ಯಪ್ರವೇಶ ಮಾಡಿದ ಗಾಂಧೀಜಿ, ಪಟೇಲ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಿದರು. ಸ್ವಾತಂತ್ರ್ಯ ಬಂದ ನಂತರ ಪಟೇಲರೇ ಪ್ರಧಾನಿಯಾಗಲಿ ಎಂದು ಪಕ್ಷ ಬಯಸಿದ್ದರೂ, ದೇಶದ ಏಕತೆ ಹಾಗೂ ಪಕ್ಷಕ್ಕಾಗಿ ಪಟೇಲರು ಅದನ್ನು ತ್ಯಾಗ ಮಾಡಿದರು. ನೆಹರೂ–ಗಾಂಧಿಗಳಿಗೆ ನಿಷ್ಠರಾದ ಇತಿಹಾಸಕಾರರು ಇದನ್ನು ಜನರಿಂದ ಮುಚ್ಚಿಟ್ಟಿದ್ದಾರೆ. ಪಟೇಲರ ಪ್ರತಿಮೆಗಾಗಿ ಇಷ್ಟೊಂದು ಖರ್ಚು ಏಕೆ ಎಂದು ಪ್ರಶ್ನೆ ಮಾಡುವವರಿಗೆ, ‘ಪಟೇಲರನ್ನು ನೆನಪಿಸಿಕೊಳ್ಳಲು ಸಾಕಾಗುವಂತಹ ಕಾರಣ ಇದಲ್ಲವೇ’ ಎಂದು ಕೇಳಬೇಕು.

ಪಟೇಲರು ಇಷ್ಟು ಉದಾರ ಹೃದಯಿಗಳಾಗಿದ್ದರೂ, ನೆಹರೂ ಅವರು ಪಟೇಲರ ವಿಚಾರದಲ್ಲಿ ಎಷ್ಟು ಸಣ್ಣತನ ತೋರಿಸುತ್ತಿದ್ದರು ಎಂಬುದಕ್ಕೆ ನಮ್ಮ ಬಳಿ ಈಗ ಸಾಕ್ಷ್ಯಗಳು ಇವೆ. 1950ರ ಡಿಸೆಂಬರ್ 15ರಂದು ಪಟೇಲರು ಮೃತಪಟ್ಟಾಗ, ಮುಂಬೈನಲ್ಲಿ ನಡೆಯುವ ಪಟೇಲರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಬಾರದು ಎಂದು ನೆಹರೂ ಅವರು ದೆಹಲಿಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದಕ್ಕಿಂತಲೂ ಆಘಾತಕಾರಿಯಾಗಿದ್ದು ಇನ್ನೊಂದಿದೆ. ‍ಪಟೇಲರು ಇನ್ನಿಲ್ಲವಾದ ನಂತರ ನೆಹರೂ ಹೊರಡಿಸಿದ ಮೊದಲ ಆದೇಶದಲ್ಲಿ, ಪಟೇಲರು ಬಳಸುತ್ತಿದ್ದ ಸರ್ಕಾರಿ ಕಾರನ್ನು ವಿದೇಶಾಂಗ ಸಚಿವಾಲಯಕ್ಕೆ ತಕ್ಷಣ ವಾಪಸ್ ಮಾಡಬೇಕು ಎಂದು ಹೇಳಲಾಗಿತ್ತು. ನೆಹರೂ ಅವರ ಸಣ್ಣ ಮನಸ್ಸಿಗೆ ಅತ್ಯುತ್ತಮ ಉದಾಹರಣೆ ‘ಭಾರತ ರತ್ನ’ಕ್ಕೆ ಸಂಬಂಧಿಸಿದ್ದು. 1955ರಲ್ಲಿ ನೆಹರೂ ಅವರು ತಮಗೆ ತಾವೇ ‘ಭಾರತರತ್ನ’ ಕೊಟ್ಟುಕೊಂಡರು! ಪಟೇಲರಿಗೆ ಭಾರತರತ್ನ ನೀಡಿದ್ದು 1991ರಲ್ಲಿ, ಚಂದ್ರಶೇಖರ್ ನೇತೃತ್ವದ ಸರ್ಕಾರ ಇದ್ದಾಗ.

ಪಟೇಲರ ನಿಧನಾನಂತರ, ಅವರ ಪುತ್ರಿ ಮಣಿಬೆನ್ ಅವರು ನೆಹರೂ ಅವರನ್ನು ಭೇಟಿಯಾದರು. ಆಗ ನೆಹರೂ, ಮಣಿಬೆನ್ ಅವರನ್ನು ಸಂವೇದನಾರಹಿತರಾಗಿ ನೋಡಿಕೊಂಡರು. ಮಣಿಬೆನ್ ಅವರನ್ನು ನೆಹರೂ ಅದೆಷ್ಟು ಅಗೌರವದಿಂದ ನಡೆಸಿಕೊಂಡರು ಎಂಬುದನ್ನು ಕ್ಷೀರ ಕ್ರಾಂತಿಯ ಪಿತಾಮಹ ವರ್ಗೀಸ್ ಕುರಿಯನ್ ಬರೆದಿದ್ದಾರೆ. ಮಣಿಬೆನ್ ಅವರು ಪಟೇಲರಿಗೆ ಸೇರಿದ್ದ ಒಂದು ಪುಸ್ತಕ ಮತ್ತು ಚೀಲವನ್ನು ಎತ್ತಿಕೊಂಡು ನೆಹರೂ ಬಳಿ ಹೋದರು. ಅವುಗಳನ್ನು ನೆಹರೂ ಅವರಿಗೆ ಕೊಡುವಂತೆ ಪಟೇಲರು ತಿಳಿಸಿದ್ದರು. ಚೀಲದಲ್ಲಿ ಪಕ್ಷಕ್ಕೆ ಸೇರಿದ ₹ 35 ಲಕ್ಷ ಇತ್ತು. ಪುಸ್ತಕದಲ್ಲಿ ಪಕ್ಷದ ವಹಿವಾಟುಗಳಿಗೆ ಸಂಬಂಧಿಸಿದ ವಿವರಗಳು ಇದ್ದವು. ಅವನ್ನು ಸ್ವೀಕರಿ
ಸಿದ ನೆಹರೂ, ಮಣಿಬೆನ್‌ ಅವರಿಗೆ ಧನ್ಯವಾದ ಹೇಳಿದರು.

‘ನೆಹರೂ ಇನ್ನೇನಾದರೂ ಹೇಳಬಹುದು ಎಂದು ಮಣಿ ಬೆನ್ ಕಾದರು. ಆದರೆ, ಅವರು ಏನೂ ಹೇಳಲಿಲ್ಲ. ಹಾಗಾಗಿ, ಮಣಿಬೆನ್ ಎದ್ದು ಹೊರಟರು’. ಪಟೇಲರು ತೀರಿಕೊಂಡ ನಂತರ ಮಣಿಬೆನ್ ಹೇಗಿದ್ದಾರೆ ಎಂಬುದನ್ನೂ ನೆಹರೂ ಕೇಳಲಿಲ್ಲ. ನೆಹರೂ ವರ್ತನೆ ಕುರಿಯನ್ ಪ್ರಕಾರ ‘ಸಂಕಟ ತರಿಸುವಂತೆ’ ಇತ್ತು. ನೆಹರೂ–ಗಾಂಧಿ ಕುಟುಂಬದ ಮೂವರ ಹೆಸರಿನಲ್ಲಿ ಒಟ್ಟು 450 ಸರ್ಕಾರಿ ಯೋಜನೆಗಳು, ಸಂಸ್ಥೆಗಳು ಇವೆ ಎಂಬುದನ್ನು ಈ ಲೇಖಕ ಕೆಲವು ವರ್ಷಗಳ ಹಿಂದೆ ಬರೆದಿದ್ದರು. ಸೂಕ್ಷ್ಮತೆಯೇ ಇಲ್ಲದ ಈ ವರ್ತನೆಯಲ್ಲಿ, ಭಟ್ಟಂಗಿತನದ ಈ ಪರಿಯ ಪ್ರದರ್ಶನದಲ್ಲಿ ಭಾಗಿಯಾದ ಎಲ್ಲರೂ, ನಾವು ಇಂದು ಕಾಣುತ್ತಿರುವ ಭಾರತವನ್ನು ಕೊಟ್ಟ ವ್ಯಕ್ತಿಗೆ ಸಿಕ್ಕಿರುವ ಗೌರವ ಕಂಡು ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ.

ನೆಹರೂ ಮತ್ತು ಅವರ ಸಂತತಿಯವರು ಪಟೇಲರ ವಿಚಾರದಲ್ಲಿ ತೋರಿದ ಸಣ್ಣತನವನ್ನು ಸರಿಪಡಿಸಬೇಕಾದ ಸಮಯ ಬಂದಿದೆ. ಪಟೇಲರಿಗೆ ಅರ್ಹ ಗೌರವ ಸಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತೋರಿದ ‘ಪಟೇಲಸದೃಶ’ ಬದ್ಧತೆಯ ಪರಿಣಾಮವಾಗಿ ಏಕತೆಯ ಪ್ರತಿಮೆ ಇಂದು ಸಾಕಾರಗೊಂಡಿದೆ. ಮೋದಿ ಅವರು ಟೀಕೆಗಳನ್ನು ನಿರ್ಲಕ್ಷಿಸಬೇಕು. ನಿಜವಾದ ಪಟೇಲರನ್ನು ಶಾಲಾ ಮಕ್ಕಳಿಗೆ ತಿಳಿಸಲು ಇನ್ನಷ್ಟು ಕ್ರಮ ಕೈಗೊಳ್ಳಬೇಕು. ಇನ್ನೊಬ್ಬ ರಾಷ್ಟ್ರೀಯ ಹೀರೊ ಸುಭಾಷ್‌ಚಂದ್ರ ಬೋಸ್‌ ಅವರಿಗೆ ಕೂಡ ಅರ್ಹ ಗೌರವ ಸಲ್ಲುವಂತೆ ಮಾಡಲು ಮೋದಿ ಮುಂದಡಿ ಇಡಬೇಕು. ಬೋಸ್ ಅವರೂ ‘ಪ್ರಭುತ್ವದ ಇತಿಹಾಸಕಾರ’ರ ಮೋಸಕ್ಕೆ ಬಲಿಯಾದವರು.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 3

  Sad
 • 1

  Frustrated
 • 1

  Angry

Comments:

0 comments

Write the first review for this !