ನೀರಿನ ಸಂಪಿನಲ್ಲಿ ತೇಲುತ್ತಿತ್ತು ಪತಿಯ ಶವ

ಬುಧವಾರ, ಜೂನ್ 19, 2019
23 °C
ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ l ಕೊಲೆ ಶಂಕೆ l ಪತ್ನಿಯೇ ಕಾರಣವೆಂದ ಪತಿಯ ಸಹೋದರರು

ನೀರಿನ ಸಂಪಿನಲ್ಲಿ ತೇಲುತ್ತಿತ್ತು ಪತಿಯ ಶವ

Published:
Updated:
Prajavani

ಬೆಂಗಳೂರು: ಬಾಲಾಜಿ ಕೃಪಾ ಲೇಔಟ್ ಬಳಿಯ ಹೆಗಡೆ ನಗರದಲ್ಲಿ ಅಪ್ರೋಜ್ ಖಾನ್ (36) ಎಂಬುವರ ಶವ, ಅವರ ಮನೆಯ ಮುಂಭಾಗದ ನೀರಿನ ಸಂಪಿನಲ್ಲಿ ಪತ್ತೆಯಾಗಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಸ್ಥಳೀಯ ನಿವಾಸಿ ಅಫ್ರೋಜ್ ಖಾನ್, ಈ ಹಿಂದೆ ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದು ಇತ್ತೀಚೆಗೆ ಬೇರೆಡೆ ಕೆಲಸಕ್ಕೆ ಸೇರಿದ್ದರು.

‘ಸ್ಥಳೀಯ ನೂರ್ ನಗರದ ನಿವಾಸಿ ಮೆಹರಾಜ್ ಎಂಬುವರನ್ನು ಒಂಬತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದೆ. ತಮ್ಮ ಸಹೋದರರು ವಾಸವಿದ್ದ ಮನೆಯಲ್ಲೇ ಅಫ್ರೋಜ್ ಖಾನ್ ಪತ್ನಿಯೊಂದಿಗೆ ನೆಲೆಸಿದ್ದರು’ ಎಂದು ಸಂಪಿಗೆ ಹಳ್ಳಿ ಠಾಣೆಯ ಪೊಲೀಸರು ಹೇಳಿದರು.

‘ಸರಿಯಾಗಿ ಕೆಲಸಕ್ಕೆ ಹೋಗದಿದ್ದರಿಂದ ಪತಿ ಜೊತೆ ಜಗಳ ಮಾಡಿದ್ದ ಮೆಹರಾಜ್, ಮಗುವಿನ ಜೊತೆ ಕಳೆದ ತಿಂಗಳು ಮನೆ ಬಿಟ್ಟು ತವರು ಮನೆಗೆ ಹೋಗಿದ್ದರು. ವಾಪಸ್ ಬಂದಿರಲಿಲ್ಲ. ಜೂನ್ 5ರಂದು ರಂಜಾನ್ ದಿನ ಅಫ್ರೋಜ್‌ ಪತ್ನಿ ಮನೆಗೆ ಹೋಗಿ ಬಂದಿದ್ದರು. ಮರುದಿನದಿಂದಲೇ ನಾಪತ್ತೆಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಪತಿ ಅವರ ಮೊಬೈಲ್‌ಗೆ ಪತ್ನಿ ಹಲವು ಬಾರಿ ಕರೆ ಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡು ಅತ್ತೆ –ಮಾವನಿಗೆ ಕರೆ ಮಾಡಿ ವಿಚಾರಿಸಿದ್ದರು. ‘ಗೊತ್ತಿಲ್ಲ’ ಎಂಬ ಉತ್ತರ. ಶನಿವಾರ ಕರೆ ಮಾಡಿದಾಗ ಸಹೋದರ ಇಮ್ರಾನ್ ಖಾನ್ ಸ್ವೀಕರಿಸಿ, ‘ನೀರಿನ ಸಂಪಿನಲ್ಲಿ  ಅವರ ಶವ ಬಿದ್ದಿದೆ’ ಎಂದಿದ್ದರು. ಸಂಬಂಧಿಕರ ಜೊತೆ ಸ್ಥಳಕ್ಕೆ ಬಂದ ಪತ್ನಿ, ಠಾಣೆಗೂ ಈ ವಿಷಯ ತಿಳಿಸಿದ್ದರು’ ಎಂದು ವಿವರಿಸಿದರು.

ದೂರು ನೀಡಿದ ಮೆಹರಾಜ್, ‘ಪತಿಯನ್ನು ಯಾರೋ ಕೊಲೆ ಮಾಡಿ ನೀರಿನ ಸಂಪಿನಲ್ಲಿ ಹಾಕಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಅನ್ಯೋನ್ಯವಾಗಿದ್ದೆವು. ರಂಜಾನ್‌ಗೆ ಬಂದಾಗ ಸಹೋದರರು ಕಿರುಕುಳ ನೀಡುತ್ತಿದ್ದಾರೆ. ಸರಿಯಾಗಿ ಊಟ ಕೊಡದೆ ಬಹಳ ಹಿಂಸೆ ನೀಡುತ್ತಿದ್ದಾರೆ ಎಂದಿದ್ದರು. ಸಹೋದರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ’ ಎಂದು ಮೆಹರಾಜ್ ಕೋರಿದ್ದಾರೆ. ಅಫ್ರೋಜ್‌ ಸಹೋದರರು, ‘ತವರಿಗೆ ಹೋಗಿದ್ದ ಪತ್ನಿ ವಾಪಸ್‌ ಬಂದಿರಲಿಲ್ಲ. ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ಪತ್ನಿಯೇ ಕಾರಣ’ ಎಂದು ದೂರಿದ್ದಾರೆ. 

ಪೊಲೀಸರು, ‘ಆರೋಪ– ಪ್ರತ್ಯಾರೋಪಗಳಿವೆ. ಮರಣೋತ್ತರ ಪರೀಕ್ಷೆ ಮಾಡಿಸಲಾಗಿದ್ದು, ಅದರ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ’ ಎಂದು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !