ಬುಧವಾರ, ನವೆಂಬರ್ 20, 2019
22 °C
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಭಿಯಾನ, ಸಿಮೆಂಟ್‌ ಕಾರ್ಖಾನೆಗೆ ರವಾನೆಯಾಗಲಿದೆ ತ್ಯಾಜ್ಯ

ಸ್ವಚ್ಛತಾ ಹೀ ಸೇವಾ: 3 ಟನ್‌ ಪ್ಲಾಸ್ಟಿಕ್‌ ಸಂಗ್ರಹ

Published:
Updated:
Prajavani

ಚಾಮರಾಜನಗರ: ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಪ್ಲಾಸ್ಟಿಕ್‌ ಮುಕ್ತ ರಾಷ್ಟ್ರ ನಿರ್ಮಾಣಕ್ಕಾಗಿ ದೇಶದಾದ್ಯಂತ ನಡೆಯುತ್ತಿರುವ ‘ಸ್ವಚ್ಛತಾ ಹೀ ಸೇವಾ’ ಅಭಿಯಾನವು ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ನಡೆಯುತ್ತಿದ್ದು, ಇದುವರೆಗೆ 3 ಟನ್‌ ಪ್ಲಾಸ್ಟಿಕ್‌ ಸಂಗ್ರಹವಾಗಿದೆ. 

ಮೂರು ಹಂತಗಳ ‘ಸ್ವಚ್ಛತಾ ಹೀ ಸೇವಾ’ ಅಭಿಯಾನಕ್ಕೆ ಕೇಂದ್ರ ಸರ್ಕಾರ ಸೆ.11ರಂದು ಚಾಲನೆ ನೀಡಿತ್ತು.

ಮೊದಲ ಹಂತದಲ್ಲಿ ಸೆ.11ರಿಂದ ಅ.1ರ ವರೆಗೆ ಸ್ವಚ್ಛತೆ, ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸ್ವಚ್ಛತಾ ಶ್ರಮದಾನ ಆಯೋಜಿಸಲು ಸೂಚಿಸಲಾಗಿತ್ತು. ಎರಡನೇ ಹಂತವಾಗಿ ಅಕ್ಟೋಬರ್‌ 2ರಂದು ಗಾಂಧಿ ಜಯಂತಿ ದಿನ ವ್ಯಾಪಕವಾಗಿ ಪ್ಲಾಸ್ಟಿಕ್‌ ಸಂಗ್ರಹಿಸುವ ಶ್ರಮದಾನ ನಡೆಸಲಾಗಿತ್ತು. ಮೂರನೇ ಹಂತವಾಗಿ ಅ.2ರಿಂದ ಅ.27ರ ವರೆಗೆ ಪ್ಲಾಸ್ಟಿಕ್‌ ಸಂಗ್ರಹ ಹಾಗೂ ಅದನ್ನು ವಿಲೇವಾರಿ ಕಾರ್ಯ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. 

ಜಿಲ್ಲಾ ನಗರಾಭಿವೃದ್ಧಿ ಕೋಶದ ಮೇಲ್ವಿಚಾರಣೆಯಲ್ಲಿ ಐದು ನಗರ ಸ್ಥಳೀಯ ಸಂಸ್ಥೆಗಳಾದ ಚಾಮರಾಜನಗರ ನಗರಸಭೆ, ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ, ಯಳಂದೂರು ಪಟ್ಟಣ ಪಂಚಾಯಿತಿ ಹಾಗೂ ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿಯಾನ ನಡೆಯುತ್ತಿದೆ.  

ಪ್ಲಾಸ್ಟಿಕ್‌ ವಿಲೇವಾರಿ ಹೇಗೆ?: ಸಂಗ್ರಹಿಸಲಾದ ಪ್ಲಾಸ್ಟಿಕ್‌ ಹೇಗೆ ವಿಲೇವಾರಿ ಮಾಡುವ ಬಗೆಯನ್ನು ಕೇಂದ್ರ ಸರ್ಕಾರ ಸೂಚಿಸಿದೆ. ನಿರ್ದಿಷ್ಟ ಪ್ರಮಾಣದಷ್ಟು (10 ಟನ್‌) ಪ್ಲಾಸ್ಟಿಕ್‌ ಸಂಗ್ರಹವಾದ ನಂತರ 200 ಕಿ.ಮೀ ವ್ಯಾಪ್ತಿಯೊಳಗಿರುವ ಸಿಮೆಂಟ್‌ ಕಾರ್ಖಾನೆಗೆ ಪ್ಲಾಸ್ಟಿಕ್ ಅನ್ನು ತಲುಪಿಸಬೇಕು. ಕಾರ್ಖಾನೆಯು ಸಿಮೆಂಟ್ ಉತ್ಪಾದಿಸಲು ಪ್ಲಾಸ್ಟಿಕ್‌ ಬಳಸಲಿದೆ. ಕೇಂದ್ರ ಸರ್ಕಾರವು ದೇಶದಾದ್ಯಂತ ಸಿಮೆಂಟ್‌ ಕಾರ್ಖಾನೆಗಳೊಂದಿಗೆ ಮಾತುಕತೆ ನಡೆಸಿದೆ. ಆಯಾ ಕಾರ್ಖಾನೆಗಳೊಂದಿಗೆ ನಗರ ಸ್ಥಳೀಯ ಸಂಸ್ಥೆಗಳು ಒಪ್ಪಂದ ಮಾಡಿಕೊಳ್ಳಲಿವೆ. 

ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳಿಗೆ ಕೊಯಮತ್ತೂರಿನ ಎಸಿಸಿ ಸಿಮೆಂಟ್‌ ಕಾರ್ಖಾನೆಯನ್ನು ನಿಗದಿಪಡಿಸಲಾಗಿದೆ. ಸಂಗ್ರಹವಾಗುವ ಪ್ಲಾಸ್ಟಿಕ್‌ ಅನ್ನು ತಮ್ಮ ವೆಚ್ಚದಿಂದಲೇ ಕಾರ್ಖಾನೆಗೆ ತಲುಪಿಸಬೇಕು. ಕಾರ್ಖಾನೆಯು ಇದಕ್ಕೆ ಯಾವುದೇ ಹಣ ಕೊಡುವುದಿಲ್ಲ.

‘ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸಿ ಜಿಲ್ಲಾ ಕೇಂದ್ರಕ್ಕೆ ತರಬೇಕು. ಕರಿವರದರಾಜನ ಬೆಟ್ಟದ ಹಿಂಭಾಗದಲ್ಲಿರುವ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಕಾರ್ಖಾನೆಗೆ ಕಳುಹಿಸಲಾಗುವುದು’ ಎಂದು ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಐದು ಸಂಸ್ಥೆಗಳ ವ್ಯಾಪ್ತಿಯಲ್ಲಿ ಅ.2ರಂದು ಶ್ರಮದಾನ ನಡೆಸಲಾಗಿತ್ತು. ಈಗ ಜನರಿಂದ ಪ್ಲಾಸ್ಟಿಕ್‌ ಸಂಗ್ರಹಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. 27ಕ್ಕೆ ಅಭಿಯಾನ ಮುಕ್ತಾಯಗೊಳ್ಳಲಿದೆ. ಆ ನಂತರವೂ ಈ ಪ್ರಕ್ರಿಯೆ ಮುಂದುವರಿಯಲಿದೆ’ ಎಂದು ಅವರು ಮಾಹಿತಿ ನೀಡಿದರು.

ಸಂಗ್ರಹ ಸಾಧ್ಯವೇ?: ಕಾರ್ಖಾನೆಗೆ ತೆಗೆದುಕೊಂಡು ಹೋಗಬೇಕಾದರೆ ಕನಿಷ್ಠ 10 ಟನ್‌ ಪ್ಲಾಸ್ಟಿಕ್‌ ಇರಬೇಕು ಎಂದು ಹೇಳಲಾಗಿದೆ. ಆದರೆ, ಇದುವರೆಗೆ ಸಂಗ್ರಹವಾಗಿರುವ ಪ್ರಮಾಣವನ್ನು ಗಮನಿಸಿದರೆ ಇನ್ನು 10 ದಿನಗಳಲ್ಲಿ ಅಷ್ಟು ಸಂಗ್ರಹ ಸಾಧ್ಯವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. 

ಪ್ಲಾಸ್ಟಿಕ್‌ ಮುಕ್ತ ಜಿಲ್ಲೆ ಗುರಿ: ‘ಪ್ಲಾಸ್ಟಿಕ್‌ ಮುಕ್ತ ವಾತಾವರಣ ನಿರ್ಮಿಸುವ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ನಿಲ್ಲಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜನ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ಲಾಸ್ಟಿಕ್‌ ಸಂಗ್ರಹಿಸಿ ನೀಡುವವರಿಗೆ ಬಹುಮಾನವನ್ನೂ ನೀಡಲಾಗುತ್ತಿದೆ’ ಎಂದು ಜಿಲ್ಲಾ ಯೋಜನಾ ನಿರ್ದೇಶಕ ಕೆ.ಸುರೇಶ್‌  ‘ಪ್ರಜಾವಾಣಿ’ಗೆ ತಿಳಿಸಿದರು. 

‘ಗಾಂಧೀಜಿಯವರ ಸ್ವಚ್ಛ ಭಾರತ ಕನಸನ್ನು ಸಾಕಾರ ಮಾಡುವ ಪ್ರಯತ್ನ ನಡೆಯುತ್ತಿದೆ. ಇದರಲ್ಲಿ ಎಲ್ಲ ಇಲಾಖೆಗಳು, ಶಾಲಾ ಕಾಲೇಜುಗಳು ಭಾಗವಹಿಸಿವೆ’ ಎಂದು ಹೇಳಿದರು.

ಕಸ ಬೇರ್ಪಡಿಸುವುದು ಕಡ್ಡಾಯ: ನಗರ ಪ್ರದೇಶದ ನಿವಾಸಿಗಳು, ಮೂಲದಲ್ಲೆ ಹಸಿ ಕಸ, ಒಣಕಸ ಎಂದು ಬೇರ್ಪಡಿಸುವುದು ಕಡ್ಡಾಯ ಎಂದು ಘೋಷಿಸಲಾಗಿದ್ದರೂ ಇನ್ನೂ ಹಲವರು ಪಾಲಿಸುತ್ತಿಲ್ಲ.  

ಪ್ಲಾಸ್ಟಿಕ್‌ ಹಾಗೂ ಇನ್ನಿತರ ಒಣ ಕಸಗಳೊಂದಿಗೆ ಹಸಿ ತ್ಯಾಜ್ಯವನ್ನು ಬೆರೆಸಿದರೆ ‘ಸ್ವಚ್ಛತಾ ಹೀ ಸೇವಾ’ದ ಉದ್ದೇಶ ಸಫಲವಾಗಲು ಸಾಧ್ಯವಿಲ್ಲ. ಹಾಗಾಗಿ, ಕಡ್ಡಾಯವಾಗಿ ಕಸವನ್ನು ಬೇರ್ಪಡಿಸಿಯೇ ಪೌರಕಾರ್ಮಿಕರಿಗೆ ನೀಡಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ. 

‘ಈಗಾಗಲೇ ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯ ಎಲ್ಲ ಮನೆಗಳಿಗೆ ಹಸಿ ಕಸ ಹಾಗೂ ಒಣ ಕಸಗಳನ್ನು ಸಂಗ್ರಹಿಸಲು ಪ್ರತ್ಯೇಕ ಡಬ್ಬಗಳನ್ನು ವಿತರಿಸಲಾಗಿದೆ. ಉಳಿದ ಕಡೆಗಳಲ್ಲಿ ಶೀಘ್ರವಾಗಿ ವಿತರಿಸುತ್ತೇವೆ’ ಎಂದು ನಗರಾಭಿವೃದ್ಧಿ ಕೋಶದ ನೋಡೆಲ್‌ ಅಧಿಕಾರಿ ಚೇತನ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)