ಶುಕ್ರವಾರ, ನವೆಂಬರ್ 22, 2019
27 °C
ಪ್ರೌಢಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಪೂರ್ಣ

234 ಶಿಕ್ಷಕರಿಗೆ ಸ್ಥಳ ನಿಯೋಜನೆ

Published:
Updated:

ಮೈಸೂರು: ಮೈಸೂರು ವಿಭಾಗದ ಪ್ರೌಢಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿತು.

ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಆವರಣದಲ್ಲಿನ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಬುಧವಾರ, ಗುರುವಾರ ಎರಡು ದಿನ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ನಡೆಯಿತು.

ವಿಭಾಗ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಒಟ್ಟು 292 ಶಿಕ್ಷಕರು ಕಡ್ಡಾಯ ವರ್ಗಾವಣೆ ಪಟ್ಟಿಯಲ್ಲಿದ್ದರು. ತೀವ್ರ ಪ್ರತಿರೋಧದ ನಡುವೆಯೂ ಕೌನ್ಸೆಲಿಂಗ್‌ ನಡೆದಿದೆ. ಮೊದಲ ದಿನ ಡಮ್ಮಿ ಕೌನ್ಸೆಲಿಂಗ್‌ ಹೆಚ್ಚಾಗಿ ನಡೆದಿತ್ತು. ಎರಡನೇ ದಿನ 102 ಶಿಕ್ಷಕರಲ್ಲಿ ಒಬ್ಬರು ಮಾತ್ರ ಗೈರಾಗಿದ್ದು, ಅವರಿಗೆ ಡಮ್ಮಿ ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯೋಜನೆ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಕಡ್ಡಾಯ ವರ್ಗಾವಣೆ ಪಟ್ಟಿಯಲ್ಲಿದ್ದ ಶಿಕ್ಷಕರಲ್ಲಿ 234 ಜನರಿಗೆ ಕೌನ್ಸೆಲಿಂಗ್‌, ಡಮ್ಮಿ ಕೌನ್ಸೆಲಿಂಗ್ ಮೂಲಕ ಸ್ಥಳ ನೀಡಲಾಗಿದೆ. 58 ಶಿಕ್ಷಕರು ಖಾಲಿ ಹುದ್ದೆಗಳು ಇಲ್ಲದಿದ್ದುದರಿಂದ ಹಾಗೂ ವಿವಿಧ ಕಾರಣಗಳಿಂದ ವಿನಾಯಿತಿ ಪಡೆದಿದ್ದಾರೆ ಎಂದು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಎಚ್‌.ಎನ್‌.ಗೀತಾಂಬ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ವಿಭಾಗದೊಳಗಿನ ವ್ಯಾಪ್ತಿಯ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅಂತರ ವಿಭಾಗ ವರ್ಗಾವಣೆ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)