ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿದುಳಿನ ಕೋಶದ 3ಡಿ ಪ್ರಿಂಟ್: ಅಲ್ಜೈಮರ್ಸ್, ಪಾರ್ಕಿನ್ಸನ್ಸ್ ರೋಗಿಗಳಿಗೆ ವರದಾನ

Published 12 ಮಾರ್ಚ್ 2024, 23:49 IST
Last Updated 12 ಮಾರ್ಚ್ 2024, 23:49 IST
ಅಕ್ಷರ ಗಾತ್ರ

ಅಲ್ಜೈಮರ್ಸ್, ಪಾರ್ಕಿನ್ಸನ್ಸ್ ಮುಂತಾದ ಕಾಯಿಲೆಗಳಿಂದ ಬಳಲುವ ರೋಗಿಗಳಿಗೆ ವರದಾನವಾಗುವಂತಹ ಮಹತ್ತರವಾದ ಸಂಶೋಧನೆಯನ್ನು ಅಮೆರಿಕದ ವಿಸ್ಕಿನ್ಸನ್ ಮ್ಯಾಡಿಸನ್‌ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡವು ನಡೆಸಿದೆ. ವಿಶ್ವದಲ್ಲಿ ಪ್ರಪ್ರಥಮವಾಗಿ ಕೃತಕವಾಗಿ ಮಿದುಳಿನ ಕೋಶಗಳನ್ನು 3ಡಿ ಪ್ರಿಂಟ್‌ ಮಾಡಿ ಯಶಸ್ಸನ್ನೂ ಕಂಡಿದ್ದಾರೆ.

ಈ ಸಂಶೋಧನೆಯನ್ನು 21ನೇ ಶತಮಾನದ ಮಹತ್ತರವಾದ ಸಂಶೋಧನೆಗಳಲ್ಲಿ ಎಂದು ವ್ಯಾಖ್ಯಾನಿಸಲಾಗಿದೆ. ಅಲ್ಜೈಮರ್ಸ್‌ ಕಾಯಿಲೆಯಿಂದ ಮರೆಗುಳಿತನ ಎದುರಾಗುವುದು, ಪಾರ್ಕಿನ್ಸನ್ಸ್ ಕಾಯಿಲೆಯಿಂದ ನರರೋಗ ಸಂಬಂಧಪಟ್ಟ ತೊಂದರೆಗಳು ಎದುರಾಗುವ ಬಗ್ಗೆ ನಮಗೆ ತಿಳಿದೇ ಇದೆ. ಈ ಸಮಸ್ಯೆಗಳಿಗೆ ವೈದ್ಯಕೀಯವಾಗಿ ಪರಿಹಾರ ಕಂಡುಹಿಡಿಯುವ ಪ್ರಯತ್ನ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದರೆ ಜೀವ–ಕಂಪ್ಯೂಟರ್ ವಿಜ್ಞಾನಿಗಳು 3ಡಿ ಪ್ರಿಂಟ್‌ ಮೂಲಕ ಅಸ್ವಸ್ಥ ಅಥವಾ ನಶಿಸಿದ ಮಿದುಳಿನ ಜೀವಕೋಶಗಳನ್ನು ಏಕೆ ಕೃತಕವಾಗಿ ಮುದ್ರಿಸಬಾರದು ಎಂದು ಯೋಚಿಸಿ ಅದನ್ನು ಸಾಧಿಸಿ ತೋರಿಸಿದ್ದಾರೆ.
ಅಲ್ಜೈಮರ್ಸ್‌ ಕಾಯಿಲೆಯಲ್ಲಿ ಮಿದುಳಿನ ಜೀವಕೋಶಗಳು ಕುಸಿಯುತ್ತವೆ ಅಥವಾ ನಾಶವಾಗುತ್ತವೆ. ಅದರೊಂದಿಗೆ ಆ ಕುಸಿಯುವ ಜೀವಕೋಶಗಳಲ್ಲಿ ಸಂಗ್ರಹವಾಗಿರುವ ದತ್ತಾಂಶ ಅಥವಾ ಸ್ಮರಣೆಯು ನಾಶವಾಗುತ್ತದೆ. ಇದೇ ಕಾರಣದಿಂದಾಗಿ ಹಳೆಯ ನೆನಪುಗಳು ನಶಿಸಿಹೋಗಿ ಮರೆಗುಳಿತನ ಎದುರಾಗುವುದು. ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಈ ಸಮಸ್ಯೆ ಹೆಚ್ಚು. ಕೆಲವು ಪ್ರಕರಣಗಳಲ್ಲಿ ಕಿರಿಯ ವಯಸ್ಸಿನಲ್ಲೂ ಈ ಸಮಸ್ಯೆ ಎದುರಾಗಬಹುದು. ವೈದ್ಯಕೀಯವಾಗಿ ಈ ಸಮಸ್ಯೆಗೆ ಪರಿಹಾರವೇ ಇಲ್ಲ ಎಂದು ವ್ಯಾಖ್ಯಾನಿಸಲಾಗಿದೆ. ಮಿದುಳಿನ ಕೋಶಗಳು ಕುಸಿಯುವ ವೇಗ ಹಾಗೂ ಪ್ರಮಾಣವನ್ನು ಕಡಿಮೆ ಮಾಡಬಹುದೇ ಹೊರತು, ಈಗಾಗಲೇ ನಶಿಸಿರುವ ಕೋಶಗಳನ್ನು ವಾಪಸು ತರಲು ಸಾಧ್ಯವೇ ಇಲ್ಲ ಎಂದು ವಿಜ್ಞಾನಿಗಳು ಕೈಚೆಲ್ಲಿದ್ದರು. ಆದರೆ, ಅಮೆರಿಕದ ವಿಸ್ಕಿನ್ಸನ್ ಮ್ಯಾಡಿಸನ್‌ ವಿಶ್ವವಿದ್ಯಾನಿಲಯದ ಜೀವ–ಕಂಪ್ಯೂಟರ್ ವಿಜ್ಞಾನಿಗಳು ಅದು ಏಕೆ ಅಸಾಧ್ಯ ಎಂದು ಸವಾಲಾಗಿ ಸ್ವೀಕರಿಸಿ, ಕೃತಕವಾಗಿ ಕೋಶಗಳನ್ನು ಮುದ್ರಿಸಿ ಮಿದುಳಿಗೆ ಶಸ್ತ್ರಚಿಕಿತ್ಸೆಯ ಮೂಲಕ ಕೂರಿಸಿದ್ದಾರೆ.

ಅಮೆರಿಕದ ವಿಸ್ಕಿನ್ಸನ್ ಮ್ಯಾಡಿಸನ್‌ ವಿಶ್ವವಿದ್ಯಾನಿಲಯದ ನರವಿಜ್ಞಾನ ಹಾಗೂ ನರರೋಗ ವಿಭಾಗದ ಪ್ರಾಧ್ಯಾಪಕ ಸು–ಶಾಂಗ್ ಝಾಂಗ್ ಅವರ ಮಾತಿನಲ್ಲೇ ಈ ಸಂಶೋಧನೆಯ ಮಹತ್ವವವನ್ನು ತಿಳಿಯಬೇಕು – ‘ಜಗತ್ತಿನ ಎಲ್ಲ ಬಗೆಯ ರಾಸಾಯನಿಕ ವಸ್ತುಗಳನ್ನು ಗುರುತಿಸಿ ಅವನ್ನು ಪುನರ್‌ ಸೃಷ್ಟಿಸಬಹುದಾದ ತಂತ್ರಜ್ಞಾನ ನಮಗೆ ಇಂದು ಲಭ್ಯವಿದೆ. ನಮಗೆ ಬೇಕಿರುವುದು ಕೇವಲ ರಾಸಾಯನಿಕ ಸೂತ್ರವಷ್ಟೇ. ನಾವು ಮಿದುಳುಕೋಶಗಳ ರಾಸಾಯನಿಕ ಸೂತ್ರವನ್ನು ಇಲ್ಲಿ ನಕಲು ಮಾಡಿದ್ದೇವೆ. ಮಿದುಳಿನ ಕೋಶಗಳಂತೆಯೇ ಹೋಲುವ ಕೋಶಗಳನ್ನು 3ಡಿ ಮುದ್ರಣದ ಮೂಲಕ ಮುದ್ರಿಸಿ, ಅವುಗಳ ಮೂಲ ಜಾಗಕ್ಕೆ ಕೂರಿಸಿದ್ದೇವೆ. ಈ ಕೃತಕ ಜೀವಕೋಶಗಳನ್ನು ಮಾನವ ಮಿದುಳು ಸ್ವೀಕರಿಸಿದೆ. ಇದನ್ನು ನಾವು ಯಶಸ್ಸು ಎಂದೇ ವ್ಯಾಖ್ಯಾನಿಸುತ್ತೇವೆ’ ಎಂದಿದ್ದಾರೆ.

ನೆನಪುಗಳು ಮರುಕಳಿಸಬಹುದೇ?:

ಮಿದುಳಿನ ಕೋಶಗಳನ್ನು ಕೃತಕವಾಗಿ ಮುದ್ರಿಸಿ ಮೂಲಸ್ಥಳದಲ್ಲಿ ಕೂರಿಸಿದರೆ ಕಳೆದುಹೋಗಿರುವ ನೆನಪುಗಳು ಮರುಕಳಿಸಬಹುದೇ ಎಂಬ ಪ್ರಶ್ನೆ ಇವರಿಗೆ ಎದುರಾಗಿದೆ. ಇದಕ್ಕೆ ಈ ವಿಜ್ಞಾನಿ ತಂಡದ ಉತ್ತರ ಸರಳವಾಗಿದೆ. ‘ಮಿದುಳು ಕೃಶಗೊಂಡು ನೆನಪುಗಳು ನಶಿಸಿರುತ್ತವೆ ಎಂಬುದು ನಿಜ. ಕೃಶಗೊಂಡ ಮಿದುಳು ಸ್ವಸ್ಥವಾಗಿ ಅದರ ಮೂಲಸ್ಥಿತಿಗೆ ಮರುಕಳಿಸಿದ ಮೇಲೆ ನೆನಪುಗಳು ಬರುವುದಿಲ್ಲ ಎಂದು ಏಕೆ ಅನುಮಾನಿಸಬೇಕು. ಎಲ್ಲ ಸಂಶೋಧನೆಗಳಿಗೂ ಅವುಗಳದೇ ಆದ ಮಿತಿಗಳಿರುತ್ತವೆ. ನಮ್ಮ ಸಂಶೋಧನೆಯ ಮಹತ್ತರವಾದ ಪ್ರಯೋಜನವೆಂದರೆ, ಅದು ಕೇವಲ ನೆನಪುಗಳನ್ನು ಕಾಪಾಡುವುದಲ್ಲ. ಮಿದುಳುಕೋಶಗಳು ಕೃಶಗೊಂಡರೆ ದೇಹದ ಅನೇಕ ಭಾಗಗಳ ಕಾರ್ಯವೈಖರಿಯೂ ಕುಸಿಯುತ್ತದೆ ಎಂಬುದನ್ನು ಮರೆಯಬಾರದು. ನಾವು ಒಮ್ಮೆ ಮಿದುಳನ್ನು ಮರು ಸ್ಥಾಪಿಸಿದ ಮೇಲೆ ದೇಹದ ಕಾರ್ಯರಚನೆಯಂತೂ ಪುನಶ್ಚೇತನಗೊಳ್ಳುತ್ತದೆ. ಇವನ್ನು ನಾವು ಪ್ರಾಯೋಗಿಕವಾಗಿ ಸಾಬೀತು ಮಾಡಿದ್ದೇವೆ’ ಎಂದು ಹೇಳಿದ್ದಾರೆ.

ವೈದ್ಯಕೀಯ ನಿಯಮಗಳು ಹಾಗೂ ನೀತಿಗಳ ಅನುಸಾರವಾಗಿ ಈಗ ಪ್ರಾಣಿಗಳ ಮೇಲೆ ಈ ಪ್ರಯೋಗವನ್ನು ಮಾಡಿ ಯಶಸ್ಸು ಕಂಡಿದ್ದೇವೆ. ಮುಂದಿನ ಹಂತಗಳಲ್ಲಿ ಮಾನವ ಪ್ರಯೋಗವೂ ನಡೆಯಲಿದೆ. ಇದರಿಂದ ಅನೇಕ ರೋಗಿಗಳ ಜೀವನವು ಸುಧಾರಿಸಲಿದೆ. ಪಾರ್ಕಿನ್ಸನ್ಸ್ ಮಾದರಿಯ ಕಾಯಿಲೆಗಳು ರೋಗಿಯನ್ನು ಕ್ರೂರವಾಗಿ ನರಳಿಸುತ್ತವೆ. ಇಂತಹ ನರಳಾಟದಿಂದ ಮುಕ್ತಿ ಸಿಗುತ್ತದೆ ಎಂಬುದರಲ್ಲಿ ನಮಗೆ ಯಾವುದೇ ಅನುಮಾನವೂ ಉಳಿದಿಲ್ಲ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಎಲ್ಲೆಲ್ಲಿ ಇದರ ಬಳಕೆ?:
ವೈದ್ಯಕೀಯ ರಂಗದಲ್ಲಿ ಇದರ ಬಳಕೆ ಹೆಚ್ಚಾಗಲಿದೆ. ವಿಜ್ಞಾನಿಗಳು ಈ ಸಂಶೋಧನೆಯನ್ನು ಕೇವಲ ಮಿದುಳಿನ ಕೋಶಗಳಿಗೆ ಮಾತ್ರವೇ ಮೀಸಲು ಎಂದು ಕರೆದಿಲ್ಲ. ಬದಲಿಗೆ, ದೇಹದ ಯಾವುದೇ ಅಂಗ ನಷ್ಟವಾದರೂ ಅಲ್ಲಿ ಈ ಸಂಶೋಧನೆಯ ಅಳವಡಿಕೆ ಸಾಧ್ಯ ಎಂದು ಹೇಳಿದ್ದಾರೆ. ರಸ್ತೆ ಅಪಘಾತಗಳಲ್ಲಿ ಅಂಗಾಗಗಳನ್ನು ಕಳೆದುಕೊಳ್ಳುವವರಿಗೆ ಅಂಗಗಳನ್ನು ಯಥಾವತ್ತಾಗಿ 3ಡಿ ತಂತ್ರಜ್ಞಾನದ ಮೂಲಕ ಮುದ್ರಿಸಿ ಸ್ವಸ್ಥ ಹಾಗೂ ಸ್ವಾಭಾವಿಕ ಜೀವನವನ್ನು ಮರುಸ್ಥಾಪಿಸಬಹುದು ಎಂದು ವಿಜ್ಞಾನಿಗಳು ಭರವಸೆ ನೀಡಿದ್ದಾರೆ.

ಈ ತಂತ್ರಜ್ಞಾನವು ಅತಿ ಸಂಕೀರ್ಣವಾಗಿದೆ. ಏಕೆಂದರೆ, ಕೇವಲ ಕೋಶಗಳ 3ಡಿ ಮುದ್ರಣ ಇಲ್ಲಿ ಸಾಲದು. ಮಾಂಸಖಂಡಗಳ ಜೊತೆಗೆ, ನರಕೋಶಗಳನ್ನೂ ಮುದ್ರಿಸಿ, ಕೃತಕನರವು ಮೂಲ ನರದೊಂದಿಗೆ ಬೆಸೆಯುವಂತೆ ಮಾಡಬೇಕು. ಸಾಮಾನ್ಯವಾಗಿ ಬಾಹ್ಯವಸ್ತುವೊಂದನ್ನು ದೇಹ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ನಾವು ಸೃಷ್ಟಿಸುವ ಕೋಶವು ಅತ್ಯಂತ ಸ್ವಾಭಾವಿಕವಾಗಿದ್ದರೆ ಮಾತ್ರ ಅದನ್ನು ದೇಹ ಸ್ವೀಕರಿಸುತ್ತದೆ. ಇದರ ಮೂಲಕ ನಮ್ಮ ಸಂಶೋಧನೆಯು ಎಷ್ಟು ನಿಖರವಾಗಿರಬಹುದು ಎಂದು ಊಹಿಸಿ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT