ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಮತ್ತು ತಂತ್ರಜ್ಞಾನ: ಜೇನುಸಾಕಣೆಗೂ ಬಂತು ಕೃತಕ ಬುದ್ಧಿಮತ್ತೆ

Published 6 ಡಿಸೆಂಬರ್ 2023, 0:01 IST
Last Updated 6 ಡಿಸೆಂಬರ್ 2023, 0:01 IST
ಅಕ್ಷರ ಗಾತ್ರ

ಕೃಷಿಯತ್ತ ವಾಲುತ್ತಿರುವ ಯುವ ಸಮುದಾಯಕ್ಕೆ ಹೆಚ್ಚಿನ ಪರಿಶ್ರಮ ಬೇಡದ ಹಾಗೂ ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಬಹುದಾದ ಜೇನುಸಾಕಣೆ ಉಪಕರಣವೊಂದು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಗಮನ ಸೆಳೆಯಿತು.

ಮಂಗಳೂರಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 4ನೇ ವರ್ಷದಲ್ಲಿ ಓದುತ್ತಿರುವ ಆರು ವಿದ್ಯಾರ್ಥಿಗಳು ಇಂಥದ್ದೊಂದು ರೈತಸ್ನೇಹಿಯಾದ ಆಧುನಿಕ ಜೇನುಪೆಟ್ಟಿಗೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಬೇರೊಂದು ವೃತ್ತಿ ಮಾಡುತ್ತಲೇ ಊರಿನ ಜಮೀನಿನಲ್ಲಿರುವ ಜೇನುಪೆಟ್ಟಿಗೆಯನ್ನು ದೂರದಿಂದಲೇ ಅವಲೋಕಿಸಿ, ಅದನ್ನು ನಿರ್ವಹಿಸಬಹುದಾದ ತಂತ್ರಜ್ಞಾನ ಇದಾಗಿದೆ. 

ಜೇನುಸಾಕಣೆಯಲ್ಲಿ ನಿತ್ಯವೂ ಪೆಟ್ಟಿಗೆಯತ್ತ ಒಂದು ಸುತ್ತು ಹಾಬೇಕಾದ್ದು ಅನಿವಾರ್ಯ. ತುಪ್ಪದ ಇಳುವರಿ ಉತ್ತಮವಾಗಿರಬೇಕೆಂದರೆ ಜೇನುಪರಿವಾರದ ನಿತ್ಯದ ಚಟುವಟಿಕೆ ಮೇಲೆ ನಿಗಾ ಇರಬೇಕಾದ್ದು ಅಷ್ಟೇ ಮುಖ್ಯ. ಅದಕ್ಕಾಗಿಯೇ ಅಗತ್ಯ ಸೆನ್ಸರ್‌ಗಳನ್ನು ಅಭಿವೃದ್ಧಿಪಡಿಸಿರುವ ಈ ವಿದ್ಯಾರ್ಥಿಗಳ ತಂಡ, ಅವುಗಳನ್ನು ಪೆಟ್ಟಿಗೆಯೊಳಗೆ ಅಳವಡಿಸಿದೆ. ಇದಕ್ಕೆ ‘ಹೈವ್‌ಲಿಂಕ್‌’ ಎಂಬ ಹೆಸರನ್ನೂ ಇಟ್ಟಿದೆ.

ಈ ತಂತ್ರಜ್ಞಾನದಿಂದ ಪೆಟ್ಟಿಗೆಯೊಳಗಿನ ತಾಪಮಾನದ ಮಾಹಿತಿ, ಆಧ್ರತೆಯ ಪ್ರಮಾಣ, ತುಪ್ಪ ಉತ್ಪಾದನೆ ಮೇಲೆ ನಿರಂತರ ನಿಗಾ ಇಡುವ ತೂಕ ಮಾಪನ, ಮಳೆಗಾಲದಲ್ಲಿ ಕೃತಕವಾಗಿ ನೀಡಬೇಕಾದ ಆಹಾರದ ಸಮರ್ಪಕ ಬಳಕೆಯ ಮಾಹಿತಿ ಇತ್ಯಾದಿಗಳು ಲಭ್ಯ.

ಇಷ್ಟು ಮಾತ್ರವಲ್ಲದೇ, ಜೇನುನೊಣಗಳ ಕುಟುಂಬದಲ್ಲಿನ ವಿಘಟನೆ, ಯಾವುದೋ ಕಾರಣಕ್ಕೆ ಇಡೀ ಜೇನುಕುಟುಂಬವೇ ಪರಾರಿಯಾಗುವುದು, ಅನ್ಯ ಕೀಟಗಳ ದಾಳಿ ಹಾಗೂ ಜೇನುಹುಳುಗಳ ಅಸಹಜ ಸಾವು, ಜೇನುತುಪ್ಪದ ಇಳುವರಿ ಸಮಯ – ಹೀಗೆ ಇವೆಲ್ಲದರ ಮಾಹಿತಿಯನ್ನು ನೀಡುವ ಸೆನ್ಸರ್‌ಗಳನ್ನು ಈ ಪೆಟ್ಟಿಗೆಯಲ್ಲಿ ಅಳವಡಿಸಲಾಗಿದೆ.

ಮನೆ ಅಥವಾ ತೋಟದ ಆಯಕಟ್ಟಿನ ಸ್ಥಳಗಳಲ್ಲಿ ಪೆಟ್ಟಿಗಳನ್ನು ಇಟ್ಟು, ಅವುಗಳಲ್ಲಿ ಒಂದೊಂದಕ್ಕೂ ಈ ಸಾಧನ ಅಳವಡಿಸಬಹುದು. ಅದರ ಮಾಹಿತಿಯನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡುವ ಅಪ್ಲಿಕೇಷನ್‌ನಲ್ಲಿ ನಮೂದಿಸಬೇಕು. ಅದಾದ ನಂತರ ಪ್ರತಿ ಪೆಟ್ಟಿಗೆಯ ಗ್ರಾಫ್‌ ಸಹಿತ ಮಾಹಿತಿ ಲಭ್ಯವಾಗುತ್ತದೆ. ಇಲ್ಲಿ ಪೆಟ್ಟಿಗೆಗಳಿಂದ ಲಭ್ಯವಾಗುವ ಮಾಹಿತಿ ಆಧರಿಸಿ ಕೃತಕ ಬುದ್ಧಿಮತ್ತೆಯ ಆಧಾರದ ತಂತ್ರಾಂಶವು ತನ್ನ ವರದಿ ನೀಡುತ್ತದೆ. ಯಾವ ಪೆಟ್ಟಿಗೆಗೆ ಹೆಚ್ಚಿನ ನಿಗಾ ಅಗತ್ಯ, ಯಾವುದರಲ್ಲಿ ಹೆಚ್ಚು ತುಪ್ಪ ಆಗುತ್ತಿದೆ. ಸಮಸ್ಯೆ ಇರುವ ಪೆಟ್ಟಿಗೆಯ ಸ್ಥಳಾಂತರ ಇತ್ಯಾದಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯ ಎಂದೆನ್ನುತ್ತಾರೆ, ತಂಡದ ಅಜ್ವಿನ್‌ ಡಿಸೋಜಾ.

‘ಈ ಸಾಧನವನ್ನುಇನ್ನಷ್ಟು ಉತ್ತಮಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಲವು ಪ್ರಶಸ್ತಿಗಳನ್ನೂ ನಮ್ಮ ಈ ಪ್ರಯೋಗ ಪಡೆದುಕೊಂಡಿದೆ. ಇದು ಯುವರೈತರಿಗೆ ಹೆಚ್ಚು ನೆರವಾಗಲಿದೆ’ ಎಂದೆನ್ನುತ್ತಾರೆ, ಅವರು.

ಅಬ್ದುಲ್ ಬಸಿತ್ ಮತ್ತು  ದೀಪ್ತಿ ಪಿ., ವಿಯೋಲಾ ರೋಡ್ರಿಗಸ್, ಜಾಯ್ವಿನ್ ಬೆನ್ನಿಸ್, ಕಂಪ್ಯೂಟರ್ ಸೈನ್ಸ್ ವಿಭಾಗದ ಜೋಶುವಾ ಕ್ವಿಂಥಿನೋ ಅಲ್ಬುಕರ್ಕ್ ಈ ಸಂಶೋಧನಾ ತಂಡದ ಇತರ ಸದಸ್ಯರು. ಈ ತಂಡಕ್ಕೆ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಗ್ಲೆನ್ಸನ್ ಟೋನಿ ಸಂಯೋಜಕರಾಗಿದ್ದಾರೆ. ಜತೆಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಜೇನುಸಾಕಣೆ ವಿಭಾಗದ ಸಹಾಯಕ ಪ್ರಧ್ಯಾಪಕ ಕೆ.ಟಿ. ವಿಜಯಕುಮಾರ್ ಮಾರ್ಗದರ್ಶಕರಾಗಿದ್ದಾರೆ.

ಬ್ಯಾಟರಿಚಾಲಿತ ಗಾಲಿಕುರ್ಚಿ

ಮಂಗಳೂರಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಯುವ ತಂತ್ರಜ್ಞರ ತಂಡವು ಗಂಭೀರ ಸ್ವರೂಪದ ಆರೋಗ್ಯಸಮಸ್ಯೆಯಿಂದ ಹಾಸಿಗೆ ಹಿಡಿದವರಿಗೆ ಹಾಸಿಗೆಯಾಗಿ ಬದಲಾಗುವ ಗಾಲಿಕುರ್ಚಿಯನ್ನು ಅಭಿವೃದ್ಧಿಪಡಿಸಿದೆ. ಇದು ಬ್ಯಾಟರಿ ಚಾಲಿತವಾಗಿದ್ದು ಮತ್ತೊಬ್ಬರನ್ನು ಅವಲಂಬಿಸುವ ಪ್ರಮಾಣವನ್ನು ತಗ್ಗಿಸುತ್ತದೆ. ಜತೆಗೆ ಮುಂಗೈ ಇಲ್ಲದವರಿಗೆ ಪ್ರಾಸ್ಥೆಟಿಕ್‌ ಆರ್ಮ್‌ ಅಭಿವೃದ್ಧಿಪಡಿಸಿದ್ದೂ ಅದೂ ಈ ಪ್ರದರ್ಶನದಲ್ಲಿ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT