ಬುಧವಾರ, ಸೆಪ್ಟೆಂಬರ್ 22, 2021
25 °C
ಮನೆಯಂಗಳದಲ್ಲಿ ಮಾತುಕತೆ

67 ವರ್ಷದಿಂದ ಸಂಶೋಧನೆ, ವಯಸ್ಸು ಮನಸ್ಸಿನಲ್ಲಿದೆ: ಸಿ.ಎನ್‌.ಆರ್‌.ರಾವ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿ.ಎನ್.ಆರ್.ರಾವ್

ಬೆಂಗಳೂರು: ‘ನಾನು ವಿಜ್ಞಾನ ಬಿಟ್ಟು ಬೇರೆ ಏನೂ ಮಾಡಲಿಲ್ಲ. ಸಂಗೀತ, ಸಾಹಿತ್ಯ ಯಾವುದೇ ಆದರೂ ಒಂದೊಂದೇ ಆಸಕ್ತಿ ಇರಬೇಕು. ಆಗಲೇ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಭಾರತ ರತ್ನ ಪುರಸ್ಕೃತ ಪ್ರೊ.ಸಿ.ಎನ್‌.ಆರ್‌.ರಾವ್‌ ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ 'ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಅಕ್ಷರ ರೂಪದಲ್ಲಿ ಅವರ ಮಾತುಗಳು: 

ಪ್ರಪಂಚದಲ್ಲಿ ಬೇಕಾದಷ್ಟು ವಿಜ್ಞಾನಿಗಳಿದ್ದಾರೆ. ಆದರೆ, ಎಲ್ಲರೂ ಗಮನಿಸುವಂಥ ಕೆಲಸ ಮಾಡಲು ಎಲ್ಲರಿಗೂ ಆಗಲ್ಲ. ನನಗೆ ವಿಜ್ಞಾನ ಬಿಟ್ಟು ಇನ್ನೇನು ಮಾಡಲು ಆಗುವುದಿಲ್ಲ. ಇಲ್ಲಿ ನನಗೆ ನನ್ನ ಹೆಂಡತಿ ಬೆಂಬಲ ಸಹ ಬಹಳ ಮುಖ್ಯವಾಗಿದೆ. 

ಅಮ್ಮ ಹೇಳುತ್ತಿದ್ದರು, ‘ಲಕ್ಷ್ಮಿ ಬೇಕಾದರೆ ನಮಸ್ಕಾರ ಮಾಡಿದರೆ ನಿನಗೆ ದುಡ್ಡು ಕೊಟ್ಟುಬಿಡ್ತಾಳೆ. ಸರಸ್ವತಿಯನ್ನು ಮೆಚ್ಚಿಸಲು ಬಹಳ ಕಷ್ಟ. ಬಹಳ ಕಷ್ಟಪಡಬೇಕು’ ಎನ್ನುತ್ತಿದ್ದರು. ಸಾಕಷ್ಟು ಜನ ದುಡ್ಡುದುಡ್ಡು ಅಂತಾ ಇರ್ತಾರೆ. ಇಟ್ಕೊಂಡು ಏನು ಮಾಡ್ತೀರಿ ಹೇಳಿ? 

ವಿಜ್ಞಾನ ಬಿಟ್ಟು, ವಿದ್ಯಾರ್ಥಿಗಳು ಬೇರೆ ಯಾವ ವಿಷಯದ ಬಗ್ಗೆ ಯೋಚನೆ ಮಾಡ್ತೀರಿ. ನಾನು ಕಾಲೇಜು ಇಂಟರ್‌ಮಿಡಿಯಟ್ ಇದ್ದಾಗ ಭಾರತಕ್ಕೆ ಸ್ವಾತಂತ್ರ್ಯ ಬಂತು. 15ನೇ ಆಗಸ್ಟ್ 1947 ಇವತ್ತೂ ನಾನು ಕಣ್ಮುಚ್ಚಿಕೊಂಡರೆ ನೆನಪಾಗುತ್ತೆ. ಭಾರತದ ಸ್ವಾತಂತ್ರ್ಯ ಬಹಳ ಮುಖ್ಯವಾದದ್ದು. ಆಗ ಬೆಂಗಳೂರಿನಲ್ಲಿ ಎಲ್ಲಿಯೂ ಸರಿಯಾಗಿ ರೇಶನ್ ಸಿಗ್ತಾ ಇರಲಿಲ್ಲ. ಆಗ ಸೈನ್ಸ್ ಕಾಲೇಜು, ಎಂಜಿನಿಯರಿಂಗ್ ಒಂದೊಂದೇ ಇತ್ತು. ಈಗ ನೋಡಿದರೆ ರಾಜ್ಯದಲ್ಲಿ 3000 ಕಾಲೇಜುಗಳಿವೆಯಂತೆ. ದೇಶ ಈಗ ಮುಂದೆ ಬಂದಿದೆ. ಹಾಗಂತ ಹೆಮ್ಮೆ ಪಡುವಂಥದ್ದೇನೂ ಆಗಿಲ್ಲ. 

ವಿಜ್ಞಾನದ ರಾಜಧಾನಿ ಬೆಂಗಳೂರು

ಬೆಂಗಳೂರು ಐಟಿ ಬೆಂಗಳೂರು ಆಗಿದೆ. ಆದರೆ, ಬೆಂಗಳೂರು ಭಾರತದ ವಿಜ್ಞಾನದ ರಾಜಧಾನಿಯೂ ಆಗಿದೆ.  ನಮ್ಮ ಚುನಾವಣೆಯಲ್ಲೂ, ನಮ್ಮ ಸರ್ಕಾರದವರೂ ಯಾರೂ ಇದನ್ನು ಹೇಳುವುದಿಲ್ಲ. ಯಾಕಂದರೆ, ಐಟಿಯಲ್ಲಿ ದುಡ್ಡು ಇದೆ! 

ಭಾರತ ಮುಂದೆ ಬರಬೇಕು ಅಂದ್ರೆ ವಿಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆಯಾಗಬೇಕು.  ಅದರಲ್ಲಿ ಬೆಳವಣಿಗೆಯಾಗದೆ ಪ್ರಯೋಜನವಿಲ್ಲ. ಅಮೆರಿಕವನ್ನು ಹಿಂದಿಟ್ಟು ನಂ.1 ಆಗಬೇಕು ಅಂತ ಚೀನಾ ಯೋಚಿಸುತ್ತೆ. ನಾವು ಯಾಕೆ ಹಾಗೆ ಯೋಚಿಸಬಾರದು? 

ಭಾರತಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ದಿನ ಆದರೂ ವಿಜ್ಞಾನ, ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡುವ ಪ್ರಮಾಣ ಶೇ 0.9 ಇದೆ. ಇದು ಶೇ 1 ಕ್ಕಿಂತ ಕಡಿಮೆ. ಈ ದುಡ್ಡು ಸಹ ಬಾಹ್ಯಾಕಾಶ, ಅಣುವಿಜ್ಞಾನಕ್ಕೆ ಕ್ಷೇತ್ರಕ್ಕೆ ಹೋಗುತ್ತೆ. ವಿಜ್ಞಾನ ಕ್ಷೇತ್ರ ಮುಂದೆ ಬರೋದು, ಭೌತವಿಜ್ಞಾನ, ರಸಾಯನಶಾಸ್ತ್ರ ಹಾಗೂ ಜೀವ ವಿಜ್ಞಾನದಲ್ಲಿ ಮುಂದೆ ಬರಬೇಕು.

ನಾವು ಭಾರತೀಯರು ಸ್ವಲ್ಪ ಸೋಮಾರಿಗಳು. ಕೊರಿಯಾ, ಚೀನಾ, ಜಪಾನ್‌ಗಳಲ್ಲಿ ಹಗಲಿರುಳು ಕೆಲಸ ಮಾಡುತ್ತಾರೆ. ಭಾರತ ಮುಂದೆ ಬರಬೇಕು. 

24ನೇ ವರ್ಷದಲ್ಲಿ ನನ್ನ ಮೊದಲ ಪುಸ್ತಕ

ಸಿ.ವಿ.ರಾಮನ್ ನನಗೆ ತುಂಬಾ ಬೇಕಾದವರು. ನನ್ನ ಮೊದಲ ಪುಸ್ತಕ ಬಂದಾಗ ನನಗೆ 24 ವರ್ಷ. ನನ್ನ ಎರಡನೇ ಪುಸ್ತಕ ಬಂದಾಗ 29 ವರ್ಷ. ಪುಸ್ತಕ ಓದಿದ ಸಿ.ವಿ.ರಾಮನ್ 1963ರಲ್ಲಿ ಕಾಗದ ಬರೆದರು. ಈ ಪುಸ್ತಕ ಬರೆದವರು ನಮ್ಮ ಅಕಾಡೆಮಿ ಸದಸ್ಯರು ಆಗಬೇಕು ಎಂದಿದ್ದರು. ನನ್ನನ್ನು ಸದಸ್ಯನನ್ನಾಗಿ ಮಾಡಿದ್ದರು. 

ನಾನು ಅವರನ್ನು ಭೇಟಿಯಾದಾಗ ಅವರಿಗೆ 81 ವರ್ಷ. ಬೆಂಗಳೂರಿನಲ್ಲಿ ವಾರ್ಷಿಕ ಅಧಿವೇಶನ ಮಾಡಿದ್ರು. ನಾನು ಐಐಟಿ ಕಾನ್‌ಪುರದಲ್ಲಿ ಪ್ರಾಧ್ಯಾಪಕನಾಗಿದ್ದೆ. ಮತ್ತೆ ವಾಪಸ್ ಬಂದೆ. ನೀವು ಇಲ್ಲಿಗೆ ಬಂದು ಸಂಶೋಧನೆ ಮಾಡಬೇಕು ಅಂದರು. ಬಂದು ಸೇರಿಕೊಂಡೆ. 

ಟೀ ಬ್ರೇಕ್‌ನಲ್ಲಿ– ‘ನನಗೆ ಒಂದೇ ಒಂದು ಬೇಜಾರಿದೆ. ನಾನು ಇಷ್ಟೆಲ್ಲಾ ಮಾತಾಡಿದ್ರೂ ಭಾರತ ಯಾಕೆ ಮುಂದೆ ಬರ್ತಿಲ್ಲ ಅನ್ನೋ ದುಃಖ ನನಗಿದೆ’ ಅಂದರು.

ದೇವರು ಒಳ್ಳೇ ಬುದ್ಧಿ ಕೊಟ್ಟಿದ್ದಾನೆ. ದುಡ್ಡಿನಿಂದ ಒಂದೇ ಎಲ್ಲವೂ ಆಗಲ್ಲ. ವಿಜ್ಞಾನ, ಸಾಹಿತ್ಯ, ಬೇರೆ ಯಾವುದರಲ್ಲಿಯೇ ಆಗಲಿ. ಒಳ್ಳೇ ಸಂಗೀತಗಾರರು ಅಭ್ಯಾಸ ನಿಲ್ಲಿಸುವಂತೆಯೇ ಇಲ್ಲ. ಸಾಯುವವರೆಗೂ ಮಾಡಬೇಕು. ವಿಜ್ಞಾನದಲ್ಲಿಯೂ ಹಾಗೆಯೇ ಸಂಶೋಧನೆ ನಿರಂತರವಾಗಿರಬೇಕು. ವಿಜ್ಞಾನದಲ್ಲಿ ಮುಂದೆ ಬರುವುದು ಅಷ್ಟೇ ಅಲ್ಲ. ಹತ್ತು ವರ್ಷದಲ್ಲಿ ಆಗಲಿ, 15 ವರ್ಷದಲ್ಲಿ ಆಗಲಿ ನಮ್ಮ ಭಾರತ ಚೀನಾದ ರೀತಿ ಮುಂದೆ ಬರದಿದ್ದರೆ ಕಷ್ಟವಾಗುತ್ತೆ. 

ತುಂಬಾ ಜನ, ತುಂಬಾ ದೇಶಗಳು ಪೈಪೋಟಿ ಮಾಡುತ್ತಿವೆ. ಕೊರಿಯಾ ಜಪಾನ್‌ಗಿಂತ ಮುಂದೆ ಹೋಗುತ್ತಿದೆ. ಕಷ್ಟಪಟ್ಟು ಕೆಲಸ ಮಾಡಬೇಕು. 67 ವರ್ಷದಿಂದ ಸಂಶೋಧನೆ ಮಾಡ್ತಿದ್ದೀನಿ. ಇನ್ನು ಎಷ್ಟು ವರ್ಷ ಅಂದ್ರೆ? ಮಾಡ್ತಾನೇ ಇರ್ತೀನಿ. ವಯಸ್ಸು ಅನ್ನೋದು ಮನಸಿನಲ್ಲಿದೆ. ನನ್ನನ್ನು ನಾನು ಮುದುಕು ಅಂದುಕೊಂಡ್ರೆ ಆಗಲ್ಲ.

ಕಬೀರರು ಹೇಳಿದ್ದಾರೆ– ‘ಮನಮೇ ಗಂಗಾ, ಮನಮೇ ಕಾಶಿ...’ ಅಂತ. ಹಾಗೇ ಮನಸಿನಲ್ಲಿ ವಯಸ್ಸು ಇದೆ.

ಬಿಸ್ಮಿಲ್ಲಾ ಖಾನ್, ‘ನಾನು ಸಾಯುವವರೆಗೂ ಸಂಗೀತದಲ್ಲಿ ಇರಬೇಕು’ ಅಂತ ಕೇಳಿಕೊಳ್ಳುತ್ತಿದ್ದರು. ಅದೇ ರೀತಿ ‘ಕೊನೆಯ ಉಸಿರಿರುವವರೆಗೂ ನಾನು ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಬೇಕು’ ಎಂದು ಕೋರುತ್ತೇನೆ. 

 

ಸಿ.ಎನ್‌.ಆರ್‌.ರಾವ್‌ ಅವರ ಕಿರುಪರಿಚಯ: 

ಚಿಂತಾಮಣಿ ನಾಗೇಶ್ ರಾವ್ ರಾಮಚಂದ್ರರಾವ್– ಇದು ಸಿ.ಎನ್.ಆರ್. ರಾವ್ ಅವರ ಪೂರ್ಣ ಹೆಸರು. ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತರತ್ನ’ಕ್ಕೆ ಭಾಜನರಾಗಿರುವ ಇವರು ಕನ್ನಡ ನಾಡಿನವರು ಎನ್ನುವುದು ಹೆಮ್ಮೆಯ ವಿಷಯ.

ಜಗತ್ತಿನ ಪ್ರತಿಷ್ಠಿತ ರಸಾಯನ ಶಾಸ್ತ್ರ ವಿಜ್ಞಾನಿಗಳ ಸಾಲಿನಲ್ಲಿ ಕಂಗೊಳಿಸುತ್ತಿರುವ ಇವರು ಸುಮಾರು 1650ಕ್ಕೂ ಹೆಚ್ಚು ಸಂಶೋಧನಾ ಲೇಖನ ಹಾಗೂ 50ಕ್ಕೂ ಹೆಚ್ಚು ಪುಸ್ತಕಗಳ ಕರ್ತೃ. ಪರ್ಡ್ಯೂ, ಬೋರ್ಡೆಕ್ಸ್‌, ಆಕ್ಸ್‌ಫರ್ಡ್‌, ಮ್ಯಾಂಚೆಸ್ಟರ್, ಬನಾರಸ್, ಕೋಲ್ಕತ್ತಾ ಸೇರಿದಂತೆ ಜಗತ್ತಿನ 77 ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿವೆ. ರಾಯಲ್ ಸೊಸೈಟಿ ಆಫ್ ಲಂಡನ್, ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ರಷ್ಯನ್, ಫ್ರೆಂಚ್, ಜಪಾನ್ ಅಕಾಡೆಮಿಗಳು ಸೇರಿದಂತೆ ಹಲವು ಪ್ರತಿಷ್ಠಿತ ಅಕಾಡೆಮಿಗಳ ಸದಸ್ಯತ್ವ ಇವರಿಗಿದೆ.

ಪದಾರ್ಥ ವಿಜ್ಞಾನದಲ್ಲಿನ ಅತ್ಯುನ್ನತ ಸಂಶೋಧನೆಗಾಗಿ 2005ರಲ್ಲಿ  ಜಗದ್ವಿಖ್ಯಾತ ಡಾನ್ ಡೇವಿಡ್ ಪ್ರಶಸ್ತಿ ಮತ್ತು ಈ ವಿಜ್ಞಾನ ಕ್ಷೇತ್ರದ ಅತ್ಯುನ್ನತ ಗೌರವ ವಾನ್ ಹಿಪ್ಪಲ್ ಪ್ರಶಸ್ತಿ 2017ರಲ್ಲಿ  ಇವರ ಮುಡಿಗೇರಿವೆ. ಹದಿನಾಲ್ಕು ವರ್ಷಗಳ ಕಾಲ ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹೆಗಾರರಾಗಿ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿ 10 ವರ್ಷಗಳ ಕಾಲ ಅವಿರತ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಜವಾಹರಲಾಲ್ ನೆಹರೂ ಅತ್ಯುನ್ನತ ವೈಜ್ಞಾನಿಕ ಸಂಶೋಧನಾ
ಸಂಸ್ಥೆಯ ಗೌರವ ಅಧ್ಯಕ್ಷರಾಗಿ ಹಾಗೂ ಲೈನಸ್ ಪೌಲಿಂಗ್ ಸಂಶೋಧನಾ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಹಂತ ಹಂತವಾಗಿ ಮೇಲೇರಿ ಜಾಗತಿಕಮಟ್ಟದ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ಹಿರಿಮೆ ಅವರದ್ದು. 84ನೇ ವಯಸ್ಸಿನಲ್ಲೂ ಸಹ ದಣಿವರಿಯದೆ ವೈಜ್ಞಾನಿಕ ಸಂಶೋಧನೆ ನಡೆಸುತ್ತಾ ನೂರಾರು ಸಂಶೋಧಕರಿಗೆ ಮಾರ್ಗದರ್ಶಕರಾಗಿ, ಚೈತನ್ಯದ ಚಿಲುಮೆಯಂತಿರುವ ಇವರ ದೈತ್ಯಪ್ರತಿಭೆಗೆ ಸರಿಸಾಟಿಯಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು