ಕುತೂಹಲದ ಖಗೋಳ ಉತ್ಸವ

7
ವಿಜ್ಞಾನ

ಕುತೂಹಲದ ಖಗೋಳ ಉತ್ಸವ

Published:
Updated:

ಖಗೋಳ ಲೋಕದ ವಿಸ್ಮಯ ಜಗತ್ತನ್ನು ಕಣ್ತುಂಬಿಕೊಳ್ಳುವ ಬಯಕೆ ಹಲವರದ್ದು. ಬರಿಗಣ್ಣಿಗೆ ಕಾಣುವ ಸೂರ್ಯ–ಚಂದ್ರರಿಂದ ಹಿಡಿದು ರಾತ್ರಿಯಲ್ಲಿ ಮಿನುಗುವ ನಕ್ಷತ್ರಗಳನ್ನು ಎಣಿಸುತ್ತಲೇ ಖಗೋಳದ ವಿದ್ಯಮಾನ ಅರಿಯುವ ಕುತೂಹಲ ಅನೇಕರದ್ದು. ಅಂಥ ಕುತೂಹಲಿಗಳಿಗಾಗಿಯೇ  ನಗರದ ಜವಾಹರ ಲಾಲ್ ನೆಹರು ತಾರಾಲಯ ಜ. 10ರಿಂದ 13ರ ತನಕ ‘ಖಗೋಳ ಉತ್ಸವ: ನೂರು ಗಂಟೆಗಳ ಖಗೋಳ ವಿಜ್ಞಾನ’ ಎನ್ನುವ ವಿನೂತನ ಕಾರ್ಯಕ್ರಮ ಆಯೋಜಿಸಿದೆ.

ಇಂದಿಗೆ ನೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಅಂತರರಾಷ್ಟ್ರೀಯ ಖಗೋಳ ಒಕ್ಕೂಟಕ್ಕೆ ಈಗ ನೂರರ ಸಂಭ್ರಮ. ಈ ಸಡಗರಕ್ಕಾಗಿಯೇ ವಿಶ್ವದಾದ್ಯಂತ ಹಲವು ಖಗೋಳ ವಿಜ್ಞಾನ ಸಂಘಟನೆಗಳು ಈ ನಾಲ್ಕು ದಿನಗಳ ಕಾಲ ಖಗೋಳಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಿವೆ.

ಜವಾಹರ ಲಾಲ್ ನೆಹರು ತಾರಾಲಯವು ಭಿತ್ತಿ ಚಿತ್ರಗಳ ಪ್ರದರ್ಶನ, ದೂರದರ್ಶಕ ಪ್ರದರ್ಶನ,  ನಕ್ಷತ್ರ ವೀಕ್ಷಣೆ, ಸಾರ್ವಜನಿಕ ಉಪನ್ಯಾಸ, ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗಾಗಿ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ.‌

ಜ.10ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3.30ರ ತನಕ ‘ಹಗಲಿನ ಖಗೋಳ ವಿಜ್ಞಾನ’ ಶೀರ್ಷಿಕೆಯಡಿ ಶಾಲಾ ಮಕ್ಕಳಿಗಾಗಿ ಕಾರ್ಯಾಗಾರ ಆಯೋಜಿಸಿದೆ.

ನೋಮೊನ್ ಉಪಕರಣದ ನೆರಳಿನ ಮೂಲಕ  ಉತ್ತರ ದಿಕ್ಕನ್ನು ಗುರುತಿಸುವ ಕುರಿತು ಪ್ರಾತ್ಯಕ್ಷಿಕೆ ಸೇರಿದಂತೆ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಕಾರ್ಯಾಗಾರ ನೀಡಲಿದೆ. ಕಾರ್ಯಾಗಾರದಲ್ಲಿ ಬಿಬಿಎಂಪಿ ಸರ್ಕಾರಿ ಶಾಲೆಗಳ 35 ಮಕ್ಕಳು ಸೇರಿದಂತೆ ಒಟ್ಟು 70 ಮಕ್ಕಳು ಭಾಗವಹಿಸಲಿದ್ದಾರೆ  ಎಂದು ಮಾಹಿತಿ ನೀಡಿದರು ಜವಾಹರ ಲಾಲ್ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಜಿ. ಗಲಗಲಿ.


ಜವಾಹರ ಲಾಲ್ ನೆಹರು ತಾರಾಲಯದಲ್ಲಿ ದೂರದರ್ಶಕದ ಮೂಲಕ ಆಕಾಶ ವೀಕ್ಷಿಸುತ್ತಿರುವ ಪುಟಾಣಿ – ಚಿತ್ರ: ಎಂ.ಎಸ್.ಮಂಜುನಾಥ್

‘ಅಂತರರಾಷ್ಟ್ರೀಯ ಖಗೋಳ ಒಕ್ಕೂಟವು 100 ವರ್ಷಗಳಲ್ಲಿ ಖಗೋಳ ವಿಜ್ಞಾನ ನಡೆದು ಬಂದ ಹಾದಿಯ ಕುರಿತು ವಿವಿಧ ಪೋಸ್ಟರ್‌ಗಳನ್ನು  ತಯಾರಿಸಿದೆ. ಈ ಪೋಸ್ಟರ್‌ಗಳನ್ನು ತಾರಾಲಯ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮುದ್ರಿಸಿ, ಜ. 11ರಂದು ಸಾರ್ವಜನಿಕ ವೀಕ್ಷಣೆಗೆ ಆಯೋಜಿಸಿದೆ.  ‘ಇಸ್ರೊ’ದ ಅಸ್ಟ್ರೋಸ್ಯಾಟ್ ಉಪಗ್ರಹ ತೆಗೆದಿರುವ ಖಗೋಳದ ವೈವಿಧ್ಯಮಯ ಚಿತ್ರಗಳು ಮತ್ತು ಮಾಹಿತಿಗಳ ಜತೆಗೆ ನಗರದ ಹವ್ಯಾಸಿ ಖಗೋಳಿಗರು ತೆಗೆದಿರುವ ಛಾಯಾಚಿತ್ರ ಪ್ರದರ್ಶನಗಳನ್ನು ಆಯೋಜಿಸಿರುವುದು ವಿಶೇಷ. ಹವ್ಯಾಸಿ ಖಗೋಳ ಛಾಯಾಗ್ರಾಹಕರು ಬಳಸುತ್ತಿರುವ ಉಪಕರಣಗಳನ್ನು ಇಲ್ಲಿ ವೀಕ್ಷಿಸಬಹುದು. ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡಿರುತ್ತಾರೆ. ಅಂಥ ಉಪಕರಣಗಳ ಕುರಿತು ಸಾರ್ವಜನಿಕರೊಂದಿಗೆ ಮಾಹಿತಿ ವಿನಿಮಯವೂ ಇಲ್ಲಿ ನಡೆಯಲಿದೆ’ ಎನ್ನುತ್ತಾರೆ ಅವರು.

‘11ರಿಂದ 13ರ ವರೆಗೆ ಸಾರ್ವಜನಿಕರಿಗಾಗಿಯೇ ‘ಯೂನಿವರ್ಸ್ ಇನ್ ದ ಕ್ಲಾಸ್ ರೂಂ’ ಎನ್ನುವ ವಿಶೇಷ ಕಾರ್ಯಾಗಾರ ನಡೆಯಲಿದೆ. ಇದಕ್ಕೆ ₹ 500 ಪ್ರವೇಶ ಶುಲ್ಕವಿದ್ದು, ಖಗೋಳ ವಿಜ್ಞಾನದ ಮೂಲಕ ಮಾಹಿತಿಗಳ ಕುರಿತು ಆಸಕ್ತಿಕರ ವಿಷಯಗಳನ್ನು ತಿಳಿಸಲಾಗುವುದು. ಈ ಕಾರ್ಯಾಗಾರಕ್ಕೆ ಕೇವಲ 30 ಮಂದಿಗೆ ಅವಕಾಶವಿದ್ದು, ಮೊದಲ ಬಂದವರಿಗೆ ಆದ್ಯತೆ ನೀಡಲಾಗುತ್ತದೆ. ಸಾರ್ವಜನಿಕರಿಗಾಗಿ ರಾತ್ರಿ 7ರಿಂದ ನಕ್ಷತ್ರ ವೀಕ್ಷಣೆ (ಆಕಾಶ ಶುಭ್ರವಾಗಿದ್ದರೆ) ಕಾರ್ಯಕ್ರಮವೂ ನಡೆಯಲಿದೆ.  12ರಂದು ‘ಭಾರತೀಯ ಖಗೋಳ ಶಾಸ್ತ್ರದ ಮುಖ್ಯಾಂಶಗಳು’ ವಿಷಯ ಕುರಿತು ಭಾರತೀಯ ವಿದ್ಯಾಭವನದ ಡಾ.ಬಾಲಚಂದ್ರ ರಾವ್ ಹಾಗೂ 13ರಂದು ‘ಉತ್ತರಾಯಣದ ಪ್ರಾಮುಖ್ಯತೆ’ ಕುರಿತು  ಡಾ.ಬಿ.ಎಸ್. ಶೈಲಜಾ ಅವರಿಂದ ಉಪನ್ಯಾಸ ಆಯೋಜಿಸಲಾಗಿದೆ’ ಎಂದರು.

ಖಗೋಳ ಕ್ಯಾಲೆಂಡರ್: ಪ್ರತಿ ವರ್ಷವೂ ತಾರಾಲಯ ಖಗೋಳ ಮಾಹಿತಿಯನ್ನೊಳಗೊಂಡ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿ ಮಾರಾಟ ಮಾಡುತ್ತದೆ. ಈ ಬಾರಿ ದೇಶದ ವಿವಿಧೆಡೆ ಇರುವ ವೀಕ್ಷಣಾಲಯಗಳ ಜತೆಗೆ ಅವು ತೆಗೆದಿರುವ ಅಪರೂಪದ ಖಗೋಳ ವಿಸ್ಮಯಗಳ ಚಿತ್ರಗಳನ್ನೂ ಅಳವಡಿಸಿರುವುದು ವಿಶೇಷ. ಈ ಕ್ಯಾಲೆಂಡರಿನ ಬೆಲೆ ₹ 135. ಆಸಕ್ತರು ಇದನ್ನು ತಾರಾಲಯದ  ಕಚೇರಿಯಲ್ಲಿ ಖರೀದಿಸಬಹುದು.


ಜವಾಹರ್ ಲಾಲ್ ನೆಹರು ತಾರಾಲಯ –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್

ಖಗೋಳ ಉತ್ಸವದಲ್ಲಿ ಶಾಲಾ ಮಕ್ಕಳಿಗಾಗಿ ‘ಚಂದ್ರನ ಕಲೆಗಳು’, ‘ಚಂದ್ರನ ಭ್ರಮಣೆ, ಪರಿಭ್ರಮಣೆ’, ‘ಗ್ರಹಣಗಳ ಭ್ರಮಣೆಯ ಅಕ್ಷಗಳ ಓರೆ ಕೋನಗಳು’ ಮತ್ತು ‘ನಕ್ಷತ್ರ ಸೂಚಿ’ ಕುರಿತು ಕಾಗದದ ಮಾಡೆಲ್‌ಗಳನ್ನು ಬಿಡುಗಡೆ ಮಾಡಲಾಗುವುದು. ಈ ಮಾದರಿಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿವೆ. ಅಪರೂಪದ ದೂರದರ್ಶನಕ ಪ್ರದರ್ಶನವೂ ನಡೆಯಲಿದೆ.

ಮಾಹಿತಿಗಾಗಿ ತಾರಾಲಯ ಕಚೇರಿ: 080– 2237 9725. ವೆಬ್‌ಸೈಟ್: www.taralaya.org

ಡಿಸೆಂಬರ್‌ನಲ್ಲೇ ಪಥ ಬದಲಾವಣೆ!

‘ಸಾಮಾನ್ಯವಾಗಿ ಸುಗ್ಗಿಹಬ್ಬ ‘ಸಂಕ್ರಾಂತಿ’ಯಂದು ಸೂರ್ಯ ಪಥ ಬದಲಾಯಿಸುತ್ತಾನೆ ಎನ್ನುವ ನಂಬಿಕೆ ಇದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸೂರ್ಯ ಡಿಸೆಂಬರ್‌ ತಿಂಗಳಿನಲ್ಲೇ ಪಥ ಬದಲಾಯಿಸುತ್ತಿದ್ದಾನೆ. ಇದಕ್ಕೆ ಅನೇಕ ವೈಜ್ಞಾನಿಕ ಕಾರಣಗಳಿವೆ’ ಎನ್ನುತ್ತಾರೆ ಜವಾಹರ ಲಾಲ್ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಜಿ. ಗಲಗಲಿ.

ಪಥ ಬದಲಾವಣೆಯ ವೈಜ್ಞಾನಿಕ ಕಾರಣಗಳ ಕುರಿತು ಡಾ.ಬಿ.ಎಸ್. ಶೈಲಜಾ ಅವರು ಜ. 13ರಂದು ಸಂಜೆ 5.30ಕ್ಕೆ ಸಾರ್ವಜನಿಕ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು ಅವರು.

ಖಗೋಳ ಉತ್ಸವ (100 ಗಂಟೆಗಳ ಖಗೋಳ ವಿಜ್ಞಾನ): ಉದ್ಘಾಟನೆ–ಗಂಗಾಂಬಿಕೆ ಮಲ್ಲಿಕಾರ್ಜುನ, ಅತಿಥಿಗಳು–ಪ್ರೊ.ಜಯಂತ್ ಮೂರ್ತಿ, ಅಧ್ಯಕ್ಷತೆ–ಎ.ಎಸ್.ಕಿರಣ್ ಕುಮಾರ್. ಆಯೋಜನೆ,ಸ್ಥಳ–ಜವಾಹರ್ ಲಾಲ್ ನೆಹರು ತಾರಾಲಯ, ಟಿ.ಚೌಡಯ್ಯ ರಸ್ತೆ, ಹೈಗ್ರೌಂಡ್ಸ್. ಗುರುವಾರ ಬೆಳಿಗ್ಗೆ 10

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !