ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಲೆ ಸಂಸ್ಕರಣಾ ಯಂತ್ರ

Last Updated 7 ಜನವರಿ 2019, 19:30 IST
ಅಕ್ಷರ ಗಾತ್ರ

ಸಿರಿಧಾನ್ಯಗಳಾದ ನವಣೆ, ಸಾಮೆ, ಸಜ್ಜೆ, ಹಾರಕ, ಕೊರಲೆ, ಬರಗು, ಊದಲು ಈಗ ಹೆಚ್ಚು ಪ್ರಚಾರದಲ್ಲಿವೆ. ಬೆಳೆಯುವವರ ಸಂಖ್ಯೆ, ಬಳಸುವವರ ಸಂಖ್ಯೆ ಎರಡೂ ಹೆಚ್ಚುತ್ತಿದೆ. ಆದರೆ,‌ ಧಾನ್ಯಗಳನ್ನು ರೈತರ ಹಂತದಲ್ಲಿ ಸಂಸ್ಕರಿಸುವಂತಹ ಯಂತ್ರಗಳ ಕೊರತೆ ಕಾಡುತ್ತಿದೆ.

ಇಂಥದ್ದೇ ಸಮಸ್ಯೆ ಎದುರಿಸುತ್ತಿದ್ದ ಶ್ರೀರಂಗಪಟ್ಟಣ ಸಮೀಪದ ಗಂಜಾಂ ನಿವಾಸಿ ಟಿ. ಮನೋಹರ್, ಕೊರಲೆ ಸಂಸ್ಕರಿಸುವ ಯಂತ್ರವನ್ನು ಸಿದ್ಧಪಡಿಸಿದ್ದಾರೆ. ಯಂತ್ರಗಳ ನಿರ್ಮಾಣದ ಘಟಕವನ್ನು ಹೊಂದಿರುವ ಅವರು, ತಮ್ಮ ಮೂರೂವರೆ ಎಕರೆಯಲ್ಲಿ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ.

ಈ ಹಿಂದೆ, ರಾಗಿ, ನವಣೆ ಸೇರಿದಂತೆ ವಿವಿಧ ಸಿರಿಧಾನ್ಯಗಳ ಸಂಸ್ಕರಿಸುವ ಯಂತ್ರವನ್ನು ಸಿದ್ಧಪಡಿಸಿದ್ದರು. ಕೊರಲೆ ಸಂಸ್ಕರಣೆಗೆ ಯಂತ್ರವಿಲ್ಲದೇ, ರೈತರು ಪರದಾಡುತ್ತಿದ್ದನ್ನು ಗಮನಿಸಿದರು. ಸತತ ನಾಲ್ಕು ವರ್ಷಗಳ ಸತತ ಪ್ರಯತ್ನಗಳ ನಂತರ ಈ ಹಿಂದೆ ಸಿರಿಧಾನ್ಯಗಳ ಸಂಸ್ಕರಣೆಗೆ ಬಳಸುತ್ತಿದ್ದ ಯಂತ್ರವನ್ನೇ ಸುಧಾರಣೆ ಮಾಡಿ, ಕೊರಲೆ ಸಂಸ್ಕರಣಾ ಯಂತ್ರ ಸಿದ್ಧಪಡಿಸಿದ್ದಾರೆ. ‘ನನ್ನ ಬಳಿ ಈ ಹಿಂದೆ ಇದ್ದ ರಾಗಿ ಹಿಟ್ಟು ಮಾಡುವ ಯಂತ್ರದ ತಂತ್ರಜ್ಞಾನವನ್ನೇ ಮೂಲವಾಗಿ ಇಟ್ಟುಕೊಂಡು ಸಿರಿಧಾನ್ಯ ಒಕ್ಕಣೆ ಯಂತ್ರ ಅಭಿವೃದ್ಧಿಪಡಿಸಿದ್ದೇನೆ’ ಎಂದು ಮನೋಹರ್ ಖುಷಿಯಿಂದ ಹೇಳುತ್ತಾರೆ. ಪ್ರಸ್ತುತ ಈ ಯಂತ್ರ, ಸದ್ಯ ರಾಜ್ಯವಲ್ಲದೇ, ಹೊರ ರಾಜ್ಯಗಳಿಗೂ ರವಾನೆಯಾಗುತ್ತಿದೆ.

ಈ ಮೊದಲು ಬಳಕೆಯಲ್ಲಿದ್ದ ಸಾಧಾರಣ ‘ಚಕ್ಕಿಮಿಲ್’ (ಕಲ್ಮಿಲ್) ಯಂತ್ರದಿಂದ ಸಿರಿಧಾನ್ಯ ಸಂಸ್ಕರಣೆ ಮಾಡುತ್ತಿದ್ದಾಗ ಪೌಷ್ಟಿಕಾಂಶ ಭಾಗಶಃ ನಷ್ಟವಾಗುತ್ತಿತ್ತು. ಧಾನ್ಯದಲ್ಲಿ ನುಚ್ಚು, ಹಿಟ್ಟು ಕೂಡ ಬರುತ್ತಿತ್ತು. ಆದರೆ ಈಗ ಸುಧಾರಿತ ಯಂತ್ರದಲ್ಲಿ ಆ ಸಮಸ್ಯೆಗಳಿಲ್ಲ. ಗ್ರಾಹಕರ ಕಣ್ಣಿಗೆ ಒಪ್ಪುವಂತೆ ಧಾನ್ಯವನ್ನು ಶುದ್ಧೀಕರಿಸುವ ಮಾದರಿಯಲ್ಲಿ ಯಂತ್ರ ರೂಪುಗೊಂಡಿದೆ ಎನ್ನುತ್ತಾರೆ ಮನೋಹರ್.

ಕೊರಲೆ ಧಾನ್ಯ ಸಂಸ್ಕರಣೆ ಡಿ–ಸ್ಟೋನಿಂಗ್, ಹಲ್ಲಿಂಗ್ ಮತ್ತು ಗ್ರೇಡಿಂಗ್ ಎಂಬ ಮೂರು ಹಂತಗಳಲ್ಲಿ ನಡೆಯಬೇಕು. ಈಗ ಮನೋಹರ್ ಸಂಶೋಧಿಸಿರುವ ಯಂತ್ರದಲ್ಲಿ ಮೂರು ಪ್ರಕ್ರಿಯೆಗಳು ಒಂದೇ ಯಂತ್ರದಲ್ಲಿ ಆಗುತ್ತವೆ ಎಂಬುದು ವಿಶೇಷ. ‘ಸಿರಿಧಾನ್ಯಗಳಿಗೆ ಜೋಡಿಸಿದ್ದ ಬಿಡಿಭಾಗಗಳನ್ನೇ ಕೊರಲೆಯಂತ್ರಕ್ಕೆ ಜೋಡಿಸಿದ್ದೇನೆ. ರೈತರ ಹಂತಕ್ಕೆ ಈ ಯಂತ್ರ ತಲುಪಬೇಕು. ಅವರು ಬೆಳೆದ ಧಾನ್ಯವನ್ನು ಅವರೇ ಸಂಸ್ಕರಿಸಿಕೊಳ್ಳುವಂತಾಗಬೇಕೆಂಬುದು ನನ್ನ ಆಶಯ’ ಎನ್ನುವುದು ಮನೋಹರ್ ಅಭಿಲಾಷೆ.

ಈ ಸಿರಿಧಾನ್ಯ ಒಕ್ಕಣೆ ಯಂತ್ರಕ್ಕೆ ಬೇಡಿಕೆ ಇದೆ. ಬೆಂಗಳೂರಿನಲ್ಲಿ ಈಚೆಗೆ ನಡೆದ ಕೃಷಿ ಮೇಳದಲ್ಲಿ ಈ ಯಂತ್ರವನ್ನು ಪ್ರದರ್ಶನಕ್ಕೆ ಇಟ್ಟು ಕೃಷಿ ಪಂಡಿತರು ಮತ್ತು ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಯಂತ್ರ ಕುರಿತ ಮಾಹಿತಿಗಾಗಿ ಮನೋಹರ್ ಸಂಪರ್ಕ ಸಂಖ್ಯೆ: ಮೊ:9448052150.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT