ಆರೋಗ್ಯದಿಂದ ಇರಲು ಎಲ್ಲರೂ ಬಯಸುತ್ತಾರೆ. ಅದಕ್ಕೆಂದೇ ವ್ಯಾಯಾಮ, ಆಹಾರ ಪಥ್ಯೆ, ವೈದ್ಯರ ಸಲಹೆ ಪಾಲಿಸುತ್ತಾರೆ. ಇದಕ್ಕೀಗ ಫಿಟ್ಬಿಟ್ ಧರಿಸಬೇಕಾಗಿಲ್ಲ. ಕೈಗೆ ಆ್ಯಪಲ್ ವಾಚ್ ಕಟ್ಟಿಕೊಳ್ಳಬೇಕಾಗಿಲ್ಲ. ಕೈಯಲ್ಲಿ ಫೋನ್ ಒಂದಿದ್ದರೆ ಸಾಕು. ಇದರಲ್ಲಿನ ಆ್ಯಪ್ ಸಹ ಆರೋಗ್ಯ ಕಾಪಾಡಿಕೊಳ್ಳುವ ಸರ್ವತ್ರ ಸಾಧನವಾಗಿ ಕೆಲಸ ಮಾಡುತ್ತದೆ. ನಾವು ಮಾಡುವ ವ್ಯಾಯಾಮಗಳು, ಯಾವ ರೀತಿ ಮಾಡಬೇಕು, ಏನು ಮಾಡಬೇಕು ಎಂಬ ಮಾಹಿತಿ ನೀಡುತ್ತದೆ.
ಮೊಬೈಲ್ ಯುಗದಲ್ಲಿ ಆ್ಯಪ್ಗಳದ್ದೇ ಕಾರುಬಾರು. ಎಲ್ಲವೂ ಆ್ಯಪ್ಗಳಿಂದಲೇ ಆರಂಭವಾಗಿ ಅವುಗಳಿಂದಲೇ ಮುಗಿ ಯುತ್ತದೆ. ಇನ್ನು, ಆರೋಗ್ಯ ಸಂಬಂಧಿತ ಆ್ಯಪ್ಗಳಿಗೇನು ಪ್ಲೇಸ್ಟೋರ್ನಲ್ಲಿ ಕೊರತೆ ಇಲ್ಲ. ಅಂಗೈಯಲ್ಲೇ ಎಲ್ಲ ಮಾಹಿತಿ ದೊರೆಯುವಾಗ ಮೊಬೈಲ್ ಬಳಕೆದಾರ ಹೆಚ್ಚು ಕಷ್ಟಪಡಬೇಕಾಗಿಲ್ಲ.
**
ಎಂಡೊಮೆಂಡೊ
ಈಗ ಇಂತಹ ಆರೋಗ್ಯ ಆ್ಯಪ್ಗೆ ಮತ್ತೊಂದು ಸೇರ್ಪಡೆಯಾಗಿದೆ. ಅದರ ಹೆಸರು Endomondo. ಇದೊಂದು ಐಒಎಸ್ ಮತ್ತು ಆಂಡ್ರಾಯ್ಡ್
ಆ್ಯೊಪ್ ಆಗಿದ್ದು, ನಡಿಗೆ, ಓಡುವುದು, ಬೈಕ್ ಸವಾರಿ ಹೀಗೆ ಪ್ರತಿಯೊಂದು ವ್ಯಾಯಾಮಗಳ ಬಗ್ಗೆ ಮಾಹಿತಿ ನೀಡುತ್ತದೆ.
ಮೊಬೈಲ್ ಪರದೆಯಲ್ಲೇ ಈ ಆ್ಯಪ್ ವ್ಯಾಯಾಮಕ್ಕಾಗಿ ಕಳೆದ ಸಮಯ, ಓಡಿದ ದೂರ, ಕ್ಯಾಲೊರಿ ಎಷ್ಟು ನಷ್ಟವಾಗಿದೆ ಎಂಬ ಬಗ್ಗೆ ತಿಳಿಸುತ್ತದೆ. ಜಿಪಿಎಸ್ ಆಧಾರಿತ ಮ್ಯಾಪ್ ಬಳಸಿ ಎಲ್ಲಿದ್ದೀರಿ ಮತ್ತು ಎಲ್ಲಿಗೆ ಹೋಗಬೇಕು ಎಂಬುದರ ಕುರಿತು ಮಾಹಿತಿ ನೀಡುತ್ತದೆ.
ಮ್ಯಾಪ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗೆಳೆಯರೊಂದಿಗೆ ಹರಟೆ ಹೊಡೆಯಬಹುದು. ಅವರಿಗೂ ನಿಮ್ಮೊಂದಿಗೆ ವ್ಯಾಯಾಮ ಮಾಡಲು ಸವಾಲು ಎಸೆಯಬಹುದು. ವಾರದ ವ್ಯಾಯಾಮದ ಪಟ್ಟಿಯನ್ನು ಮಾಡಿಟ್ಟು ಕೊಳ್ಳಬಹುದು. ಇದರಿಂದ ಯಾವುದೇ ದಿನ ಸಮಯ ವ್ಯರ್ಥ ಮಾಡದಂತೆ ಎಚ್ಚರಿಕೆ ವಹಿಸುತ್ತದೆ. ನೀವೇನಾದರೂ ಓಟಗಾರ ಆಗಿದ್ದರೆ ಇದರಲ್ಲಿನ ಕೋಚಿಂಗ್ ವ್ಯವಸ್ಥೆ ಪ್ರೋತ್ಸಾಹಿಸುತ್ತದೆ ಮತ್ತು ನಿಮ್ಮ ಓಟದ ಸಾಮರ್ಥ್ಯವನ್ನೂ ಸುಧಾರಿಸುತ್ತದೆ.