ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರುವ ಕಾರು: ಕನಸು ನನಸು!

Last Updated 10 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಜೇಮ್ಸಬಾಂಡ್ ಚಿತ್ರಗಳಲ್ಲಿ ಅಥವಾ ಹಾಲಿವುಡ್‌ನ ಕಾಲ್ಪನಿಕ ಥ್ರಿಲ್ಲರ್ ಚಿತ್ರಗಳಲ್ಲಿ ರಸ್ತೆಯಲ್ಲಿ ಚಲಿಸುತ್ತಿರುವ ಕಾರು ಆಕಾಶದಲ್ಲಿ ವಿಮಾನದಂತೆ ಹಾರಾಡುವುದನ್ನು ನೋಡಿರಬಹುದು.

ಭೂಮಿಯಲ್ಲಿ ಸಾಮಾನ್ಯ ಕಾರುಗಳಂತೆ ಚಲಿಸುವ, ಅಗತ್ಯವಿದ್ದಾಗ ಆಗಸದಲ್ಲಿ ಲೋಹದ ಹಕ್ಕಿಗಳಂತೆ ಹಾರಾಡುವ ಕಾರನ್ನು ರೂಪಿಸುವುದು ವಿಶ್ವದ ಹಲವು ವಾಹನ ತಯಾರಿಕಾ ಕಂಪನಿಗಳ ಕನಸೂ ಹೌದು.

ಕಳೆದ ಒಂದು ವಾರದ ಅವಧಿಯಲ್ಲಿ ಅಮೆರಿಕ ಮತ್ತು ನೆದರ್‌ಲೆಂಡ್‌ನಲ್ಲಿ ಎರಡು ಕಾರುಗಳು ಪರೀಕ್ಷಾರ್ಥವಾಗಿ  ಆಗಸದಲ್ಲಿ ಯಶಸ್ವಿಯಾಗಿ ಹಾರಾಡುವ ಮೂಲಕ ಕನಸು ನನಸಾಗುವ ವಿಶ್ವಾಸ ಗರಿಗೆದರುವಂತೆ ಮಾಡಿವೆ.

ನೆದರ್‌ಲೆಂಡ್‌ನ `ಪಿಎಎಲ್-ವಿ~ (PAL-V)  ಕಂಪನಿ ಮತ್ತು ಅಮೆರಿಕದ ಮೆಸಾಚುಸೆಟ್ಸ್‌ನ `ಟೆರ‌್ರಾಫ್ಯುಜಿಯಾ~ ಕಂಪನಿ ಈ ಎರಡು ಹಾರುವ ಕಾರಿನ ರೂವಾರಿಗಳು. ಎರಡೂ ಕಾರುಗಳ ವಿನ್ಯಾಸ, ಕಾರ್ಯನಿರ್ವಹಣೆವಿಭಿನ್ನವಾಗಿರುವುದು ವಿಶೇಷ. `ಪಿಎಎಲ್-ವಿ~ ರೂಪಿಸಿರುವ ಕಾರು ಹೆಲಿಕಾಪ್ಟರ್‌ನಂತೆ ಕಂಡರೆ,  ಟೆರ‌್ರಾಫ್ಯುಜಿಯಾ ಕಂಪೆನಿಯ ಕಾರು ಸಂಪೂರ್ಣವಾಗಿ ವಿಮಾನವನ್ನು ಹೋಲುತ್ತದೆ.

ಪಿಎಎಲ್-ವಿ-ಒನ್
`ಪಿಎಎಲ್-ವಿ~ ಕಂಪನಿಯು ತಾನು ರೂಪಿಸಿರುವ ಹಾರುವ ಕಾರಿಗೆ `ಪಿಎಎಲ್-ವಿ ಒನ್~ (ಅಔ್ಖ ಘೆಉ)  ಎಂದು ಹೆಸರಿಟ್ಟಿದೆ.  ನೆದರ್‌ಲೆಂಡ್‌ನ  ಅತ್ಯುನ್ನತ ಎಂಜಿನಿಯರ್‌ಗಳ ಶ್ರಮ ಈ ಕಾರಿನ ಹಿಂದಿದೆ. ಹಾರುವ ಕಾರಿನ ಅಭಿವೃದ್ಧಿಗೆ ಅಲ್ಲಿನ ಹಲವು ಕಂಪನಿಗಳು, ಖ್ಯಾತ ಶೈಕ್ಷಣಿಕ ಸಂಸ್ಥೆಗಳೂ ಸಹಕಾರ ನೀಡಿವೆ.

ಸರ್ಕಾರದ ಮೂರು ಸಚಿವಾಲಯಗಳೂ ಈ ಸಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.ರಸ್ತೆಯಲ್ಲಿ ಚಲಿಸುವ ಕಾರಿನ ಮೂಲ ಮಾದರಿಯನ್ನು `ಪಿಎಎಲ್-ವಿ~ ಸಂಸ್ಥೆ 2009ರಲ್ಲೇ ಪರೀಕ್ಷೆಗೊಳಪಡಿಸಿತ್ತು. ಕಳೆದ ವಾರ ನಡೆಸಿದ ಪರೀಕ್ಷಾರ್ಥ ಹಾರಾಟದಲ್ಲಿ `ಪಿಎಎಲ್-ವಿ ಒನ್~ ಯಶಸ್ವಿಯಾಗಿ ತನ್ನ ಗುರಿ ತಲುಪಿತು.

ಈ ಪ್ರಾಯೋಗಿಕ ಹಾರಾಟ ನಡೆಸುವುದಕ್ಕಿಂತಲೂ ಎರಡು ವಾರಗಳ ಮೊದಲು ಕಾರಿನ ಕಾರ್ಯನಿರ್ವಹಣೆಯನ್ನು ದೃಢಪಡಿಸಿಕೊಳ್ಳಲು ಹಲವು ಬಾರಿ ಪಿಎಎಲ್-ವಿ ಒನ್~, ಹಾರಾಟದ ತಾಲೀಮು ನಡೆಸಿತ್ತು.

ಎರಡು ಆಸನ ಸಾಮರ್ಥ್ಯದ ಮೂರು ಚಕ್ರಗಳನ್ನು ಹೊಂದಿರುವ `ಪಿಎಎಲ್-ವಿ ಒನ್~ ಆಗಸದಲ್ಲಿ ಹೆಲಿಕಾಪ್ಟರ್‌ನಂತೆ ಹಾರಾಡಿದರೆ ರಸ್ತೆಯಲ್ಲಿ ಸ್ಪೋರ್ಟ್ಸ್ ಕಾರಿನಂತೆ ಚಲಿಸುತ್ತದೆ!

`ಪಿಎಎಲ್-ವಿ ಒನ್~ ಕಾರಿನ ಕಾರ್ಯನಿರ್ವಹಣೆಗೆ ಪ್ರತ್ಯೇಕವಾಗಿ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸುವ ಅಗತ್ಯವಿಲ್ಲ. ಈಗ ಲಭ್ಯವಿರುವ ಮೂಲಸೌಕರ್ಯಗಳಲ್ಲೇ ಇದನ್ನು ಬಳಸಬಹುದು ಎನ್ನುವುದೇ ಇದರ ಹೆಗ್ಗಳಿಕೆ. ಸಾಮಾನ್ಯ ಕಾರಿನಲ್ಲಿ ಬಳಸುವ ಇಂಧನವನ್ನೇ (ಪೆಟ್ರೋಲ್) ಇದರಲ್ಲೂ ಬಳಸಲಾಗಿದೆ.

ಜೈವಿಕ ಡೀಸೆಲ್ ಮತ್ತು ಜೈವಿಕ ಇಥೆನಾಲ್‌ಗಳಿಂದಲೂ ಓಡಿಸಬಹುದಾದ/ಹಾರಿಸಬಹುದಾದ ಕಾರನ್ನೂ `ಪಿಎಎಲ್-ವಿ~ ರೂಪಿಸಿದೆ. ರಸ್ತೆಯಲ್ಲಿ ಮತ್ತು ಆಗಸದಲ್ಲಿ ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಇದಕ್ಕಿದೆ. ಹಾರಾಟದ ವಿಷಯಕ್ಕೆ ಬಂದರೆ ಈ ಕಾರು ಹೆಲಿಕಾಪ್ಟರ್‌ನಂತೆಯೇ ಕೆಲಸ ಮಾಡುತ್ತದೆ.

ನಿಧಾನವಾಗಿಯೇ ಟೇಕ್ ಆಫ್ ಮತ್ತು ಲ್ಯಾಂಡ್ ಆಗುವ  `ಪಿಎಎಲ್-ವಿ ಒನ್~ಗೆ ಟೇಕ್ ಆಫ್ ಆಗಲು ಕೇವಲ 165 ಮೀಟರ್‌ನಷ್ಟು ಸ್ಥಳಾವಕಾಶ ಇದ್ದರೆ ಸಾಕು ಎಂದು ಸಂಸ್ಥೆ ಹೇಳಿದೆ. ಅದು ಹುಲ್ಲಿನಿಂದ ಕೂಡಿದ ನೆಲವಾದರೂ ಆಗಬಹುದು ಅಥವಾ ರಸ್ತೆಯೂ ಆಗಬಹುದು.

ಈ ಕಾರಿನ ಚಾಲನಾ ಪರವಾನಗಿ ಪಡೆಯಬೇಕಾದರೆ ವ್ಯಕ್ತಿಯೊಬ್ಬರು ಕನಿಷ್ಠ 20ರಿಂದ 30 ಗಂಟೆ ತರಬೇತಿ ಪಡೆಯಬೇಕು. ವೃತ್ತಿಪರರು, ಕಾರ್ಪೊರೇಟ್ ಸಂಸ್ಥೆಗಳು, ತನಿಖಾ ಸಂಸ್ಥೆಗಳು `ಪಿಎಎಲ್-ವಿ ಒನ್~ ಕುರಿತು ಹೆಚ್ಚು ಆಸಕ್ತಿ ತೋರಿವೆ ಎಂದು ಸಂಸ್ಥೆ ಹೇಳಿದೆ.

ಟ್ರಾನ್ಸಿಷನ್
ಅಮೆೆರಿಕದ ಮೆಸಾಚ್ಯುಸೆಟ್ಸ್‌ನ ಟೆರ‌್ರಾಪ್ಯುಜಿಯಾ ಕಂಪನಿ ನಿರ್ಮಿಸಿರುವ `ಟ್ರಾನ್ಸಿಷನ್~ ಹಾರುವ ಕಾರು `ಪಿಎಎಲ್-ವಿ ಒನ್~ಗಿಂತ ಸಾಕಷ್ಟು ವಿಭಿನ್ನವಾಗಿದೆ. `ಟ್ರಾನ್ಸಿಷನ್~ ಸಂಪೂರ್ಣವಾಗಿ ವಿಮಾನವನ್ನೇ ಹೋಲುತ್ತದೆ. ಅದರ ಕಾರ್ಯನಿರ್ವಹಣೆ ಕೂಡ ವಿಮಾನದಂತೆಯೇ.

ಕಳೆದವಾರ ನಡೆದ ಪ್ರಾಯೋಗಿಕವಾಗಿ ನಡೆದ ಪರೀಕ್ಷೆಯಲ್ಲಿ `ಟ್ರಾನ್ಸಿಷನ್~ ಕಾರು-ವಿಮಾನ ಮಾದರಿ, ಎಂಟು ನಿಮಿಷಗಳ ಕಾಲ ಆಗಸದಲ್ಲಿ ಹಾರಾಡಿ ಯಶಸ್ವಿಯಾಗಿ ಧರೆಗಿಳಿದಿದೆ.

ನಾಲ್ಕು ಚಕ್ರಗಳನ್ನು ಹೊಂದಿರುವ ಎರಡು ಆಸನ ಸಾಮರ್ಥ್ಯದ `ಟ್ರಾನ್ಸಿಷನ್~ನ ಬೆಲೆ 2.79 ಲಕ್ಷ ಡಾಲರ್! (ಸುಮಾರು ರೂ 1,39,50,000 ). ಈಗಾಗಲೇ ಇಂತಹ 100  ಕಾರುಗಳಿಗೆ ಬೇಡಿಕೆ ಬಂದಿದೆ ಎಂದು ಟೆರ‌್ರಾಫ್ಯುಜಿಯಾ ಹೇಳಿದೆ. ಈ ಹಾರುವ ಕಾರನ್ನು ಮುಂದಿನ ವರ್ಷ ಮಾರುಕಟ್ಟೆಗೆ ಬಿಡುಗಡೆ ಮಾಡುವ ಯತ್ನ ಅದರದ್ದು.

ಮಡಚುವ ರೆಕ್ಕೆಗಳನ್ನು ಹೊಂದಿರುವ `ಟ್ರಾನ್ಸಿಷನ್~ ಗೆ ಟೇಕ್ ಆಫ್ ಆಗಲು 2500 ಅಡಿ ಉದ್ದದ ರನ್‌ವೇ ಬೇಕು. ಹಾಗಾಗಿ ಈ ಕಾರು ಹಾರಾಟಕ್ಕೆ ವಿಮಾನ ನಿಲ್ದಾಣಗಳನ್ನೇ ಅವಲಂಬಿಸಬೇಕು. ಇಲ್ಲವೇ ಅದಕ್ಕಾಗಿ ಪ್ರತ್ಯೇಕವಾದ ರನ್ ವೇ ನಿರ್ಮಿಸಬೇಕು. `ಪಿಎಎಲ್-ವಿ ಒನ್~ಗೆ  ಹೋಲಿಸಿದರೆ ಟ್ರಾನ್ಸಿಷನ್ನಿನ ಬಹುದೊಡ್ಡ ಮಿತಿ ಇದು.

ಸಾಮಾನ್ಯ ಕಾರಿನ ಗಾತ್ರವನ್ನೇ ಟ್ರಾನ್ಸಿಷನ್ ಹೊಂದಿದೆ. ರೆಕ್ಕೆಗಳನ್ನು ಮಡಿಸಬಹುದಾದ್ದರಿಂದ ಸಾಮಾನ್ಯ ಕಾರನ್ನು ನಿಲ್ಲಿಸಬಹುದಾದ ಸ್ಥಳದಲ್ಲೇ ಇದನ್ನು ನಿಲುಗಡೆ ಮಾಡಬಹುದು.

ಈ ಕಾರನ್ನು ಚಾಲನೆ ಮಾಡಬೇಕಾದರೆ ಕಾರಿನ ಮಾಲೀಕ, ಚಾಲನಾ ಪರವಾನಗಿ ಮತ್ತು ಪೈಲಟ್ ಪರವಾನಗಿಯನ್ನೂ ಪಡೆಯಬೇಕು. ಪೈಲಟ್ ಪರವಾನಗಿ ಪಡೆಯಬೇಕಾದರೆ ಕನಿಷ್ಠ 20 ಗಂಟೆಗಳ ಹಾರಾಟದ ಅನುಭವವೂ ಆತನಿಗಿರಬೇಕು.

ಕ್ರಮಿಸಬೇಕು ದೂರ...
ಹಾರುವ ಕಾರುಗಳ ನಿರ್ಮಾಣದ ಯತ್ನಗಳನ್ನು ಹಲವು ಕಂಪನಿಗಳು ಮಾಡುತ್ತಲೇ ಬಂದಿವೆ. ಎಲ್ಲ ಕಂಪನಿಗಳೂ ಪ್ರಯೋಗದಲ್ಲೇ ನಿರತವಾಗಿವೆ. ಅವುಗಳಲ್ಲಿ ಯಶಸ್ವಿಯಾದವು ಬಹಳ ಕಡಿಮೆ.

ಈಗ ಯಶಸ್ವಿಯಾಗಿರುವ ಎರಡು ಹಾರುವ ಕಾರಿನ ಯತ್ನಗಳು ಪ್ರಯೋಗಳಷ್ಟೇ. ವಾಣಿಜ್ಯ ಬಳಕೆಗೆ ಅವುಗಳನ್ನು ಬಳಸಬೇಕಾದರೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕು. ಅದಕ್ಕೆ ಹೆಚ್ಚಿನ ಬಂಡವಾಳವೂ ಬೇಕು.

ಕನಿಷ್ಠ ಕೆಲವರ ಮನೆಯ ಅಂಗಳದಲ್ಲಿಯಾದರೂ ಹಾರುವ ಕಾರು ಬಂದು ನಿಲ್ಲಬೇಕಾದರೆ ಕೆಲವು ವರ್ಷಗಳು ಬೇಕಾಗಬಹುದು ಎಂಬುದು ತಜ್ಞರ ಅಂಬೋಣ.
ಕೇವಲ ವಿಜ್ಞಾನದ ಕಾಲ್ಪನಿಕ ಕತೆಗಳಿಗೆ, ಹಾಲಿವುಡ್ ಚಿತ್ರಗಳಿಗೆ ಮೀಸಲಾಗಿದ್ದ ಹಾರುವ ಕಾರಿನ ಕಲ್ಪನೆ ವಾಸ್ತವ ಜಗತ್ತಿನಲ್ಲಿ ನಮ್ಮ ಕಣ್ಣ ಮುಂದೆ ನಿಜವಾಗುತ್ತಿದೆ ಎಂಬುದೇ ಕೌತುಕದ ವಿಷಯ.
                          
                                

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT