‘ಥಾಲಿ’ಎಂಬ ಪರಿಪೂರ್ಣ ಊಟ

7

‘ಥಾಲಿ’ಎಂಬ ಪರಿಪೂರ್ಣ ಊಟ

Published:
Updated:
Prajavani

ಒಂದು ಅಗಲವಾದ ಸ್ಟೀಲ್‌ ತಟ್ಟೆ. ತಟ್ಟೆಯ ಮೇಲೆ ನೀಟಾಗಿ ಜೋಡಿಸಿದ್ದ ಪುಟ್ಟ ಪುಟ್ಟ ಕಪ್‌ಗಳು, ಕಪ್‌ಗಳ ಒಳಗೆ ಬಾಯಲ್ಲಿ ನೀರೂರಿಸುವ ಬಗೆ ಬಗೆ ಖಾದ್ಯಗಳು, ಹಪ್ಪಳ, ಸಂಡಿಗೆಯ ಸುವಾಸನೆ, ತಟ್ಟೆಯ ತುದಿಯಲ್ಲಿಟ್ಟ ಹೋಳಿಗೆಯ ಮೇಲೆ ತೇಲುವ ತುಪ್ಪ, ಇನ್ನೊಂದು ತುದಿಯಲ್ಲಿ ಹಸಿ ತರಕಾರಿಗಳ ಸಲಾಡ್‌ ಹೀಗೆ ಒಂದಲ್ಲ ಎರಡಲ್ಲ ಬರೋಬ್ಬರಿ 10 ರಿಂದ 12 ಖಾದ್ಯಗಳನ್ನು ತುಂಬಿರುವ ಒಂದು ಪರಿಪೂರ್ಣ ಊಟದ ಮೆನು ಥಾಲಿ. ಈ ಥಾಲಿ ಊಟ ಹಸಿದ ಹೊಟ್ಟೆಯನ್ನು ತುಂಬಿಸಿ, ಜಿಹ್ವ ಚಾಪಲ್ಯವನ್ನು ತಣಿಸುತ್ತದೆ. 

ಹಿಂದಿನಿಂದಲೂ ಚಾಲ್ತಿಯಲ್ಲಿರುವ ಥಾಲಿ ಊಟ ಇನ್ನಷ್ಟು ಬದಲಾವಣೆಗಳೊಂದಿಗೆ ಈಗ ಆಹಾರಪ್ರಿಯರ ಅಚ್ಚುಮೆಚ್ಚು. ಅನೇಕ ಹೋಟೆಲ್‌ಗಳು ಬಗೆ ಬಗೆಯ ಥಾಲಿಗಳನ್ನು ಪರಿಚಯಿಸುವ ಮೂಲಕ ಲಾಲಾ ರಸವನ್ನು ಉಕ್ಕಿಸುತ್ತಿವೆ. ಮೊದಲೆಲ್ಲಾ ಒಂದು ಊಟವೆಂದರೆ ಅನ್ನ, ಸಾಂಬಾರ್, ರಸಂ, ಉಪ್ಪಿನಕಾಯಿ ಹಾಗೂ ಹಪ್ಪಳ, ಮಜ್ಜಿಗೆ ಇಷ್ಟಕ್ಕೇ ಸೀಮಿತವಾಗಿತ್ತು. ಆದರೆ ಥಾಲಿ ಎಂಬ ಹೆಸರಿನೊಂದಿಗೆ ಬಗೆ ಬಗೆಯ ಖಾದ್ಯಗಳನ್ನು ಒಂದು ತಟ್ಟೆಯಲ್ಲಿ ತುಂಬಿಸಿ ಪರಿಚಯಿಸಿದ ಖ್ಯಾತಿ ಪಂಜಾಬಿಗರದ್ದು.

‘ಕಂಪ್ಲೀಟ್ ಇಂಡಿಯನ್ ಮೀಲ್ಸ್‌‘ ಎಂದೇ ಖ್ಯಾತಿ ಪಡೆದಿರುವ ಥಾಲಿ ಊಟ ಕೇವಲ ಬಾಯಿಗೆ ರುಚಿಸಿ, ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.

ಕೇವಲ ಅನ್ನ ತಿಂದರೆ ಸಪ್ಪೆ, ಬೊಜ್ಜು ಬರಬಹುದು ಎಂಬ ಭಾವನೆ ಹುಟ್ಟಿಕೊಂಡಾಗ ರೋಟಿ, ಚಪಾತಿ, ವಿಧ ವಿಧದ ಪಲ್ಯಗಳು ಥಾಲಿ ತಟ್ಟೆಯನ್ನು ಆವರಿಸಿದ್ದವು. ಜೊತೆಗೆ ಒಂದಷ್ಟು ಹಸಿ ತರಕಾರಿ, ಮೊಳಕೆ ಕಾಳುಗಳಿಗೂ ವಿಶೇಷ ಪ್ರಾಧಾನ್ಯತೆ ಸಿಕ್ಕಿತು.

ಥಾಲಿ ಊಟ ಉತ್ತರ ಭಾರತದಿಂದ ಆರಂಭವಾಗಿ ದಕ್ಷಿಣವನ್ನು ಪ್ರವೇಶಿಸಿತು. ದಕ್ಷಿಣದ ಮಂದಿ ಥಾಲಿ ಊಟದೊಂದಿಗೆ ಮಾಂಸಾಹಾರವನ್ನು ಪರಿಚಯಿಸಿದರು. ಹೀಗೆ ನಾರ್ಥ್ ಇಂಡಿಯನ್ ಥಾಲಿ ಹಾಗೂ ಸೌತ್‌ ಇಂಡಿಯನ್ ಥಾಲಿ ಎಂಬ ಎರಡು ಬಗೆಯ ಥಾಲಿಗಳು ರೂಢಿಗೆ ಬಂದವು.

ಹೋಟೆಲ್‌ಗಳಲ್ಲಿ ಆಯಾ ರಾಜ್ಯದ ಹೆಸರಿನ ಮೇಲೆ ಥಾಲಿಗಳು ಹುಟ್ಟಿಕೊಂಡಿವೆ. ಪಂಜಾಬ್ ಥಾಲಿ, ಕೇರಳ ಥಾಲಿ, ಚೆನ್ನೈ ಥಾಲಿ, ರಾಜಸ್ಥಾನಿ ಥಾಲಿ ಹೀಗೆ. ಆಯಾ ರಾಜ್ಯದ ವಿಶೇಷ ಖಾದ್ಯಗಳು ರಾಜ್ಯದ ಹೆಸರಿನ ಥಾಲಿಯ ತಟ್ಟೆಯನ್ನು ತುಂಬುತ್ತಿವೆ.

ಸಸ್ಯಹಾರಿ ಥಾಲಿಗಳಲ್ಲಿ ಜನ ಹೆಚ್ಚು ಇಷ್ಟಪಡುವುದು ಮಹಾರಾಷ್ಟ್ರ ಥಾಲಿಯನ್ನು. ಕಾಜು ಬರ್ಫಿ, ಬಾಸುಂದಿ, ರಸಗುಲ್ಲಾದಂತಹ ಸಿಹಿ ತಿನಿಸುಗಳು, ಮಿಸಳ್, ವಡಾಪಾವ್‌ ಈ ಥಾಲಿಯ ಮೂಲಕ ಬಾಯಿಯಲ್ಲಿ ನೀರೂರಿಸುವುದು ಸುಳ್ಳಲ್ಲ.

ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಹೆಚ್ಚು ಇಷ್ಟಪಡುವವರು ಹರಿಯಾಣ ಥಾಲಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿನ ಥಾಲಿಯಲ್ಲಿ ತಾಜಾ ಹಾಲು, ಬೆಣ್ಣೆಯಿಂದ ತಯಾರಿಸಿದ ಖಾದ್ಯಗಳನ್ನು ಸವಿಯಬಹುದು.

ತೆಂಗಿನೆಣ್ಣೆಯಲ್ಲಿ ತಯಾರಿಸುವ ಖಾದ್ಯಗಳು ನಾಲಿಗೆಗೆ ನೆಚ್ಚುತ್ತವೆ ಎಂದಾದರೆ ಕೇರಳ ಥಾಲಿಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ವೆಜ್ ಹಾಗೂ ನಾನ್ ವೆಜ್‌ ಎರಡೂ ಬಗೆಯ ಖಾದ್ಯಗಳು ಸಿಗುವ ಕೇರಳ ಥಾಲಿಯಲ್ಲಿ ಕೆಂಪಕ್ಕಿ ಅನ್ನ ಹಾಗೂ ಮೆಣಸಿನ ರಸಂ ಬಾಯಿಗೆ ರುಚಿಸುತ್ತವೆ.

ಬೇರೆ ಬೇರೆ ರುಚಿಗಳು ಒಂದೇ ತಟ್ಟೆಯಲ್ಲಿ

ಅನ್ನ ಸಾರಿನೊಂದಿಗೆ ಸಿಹಿಯಷ್ಟೇ ಇರುತ್ತಿದ್ದ ಊಟದ ಜಾಗದಲ್ಲಿ ಥಾಲಿ ವಿಭಿನ್ನ ರುಚಿಯನ್ನು ಒಂದೇ ಊಟದಲ್ಲಿ ಸಿಗುವಂತೆ ಮಾಡಿದೆ. ಉಪ್ಪು, ಹುಳಿ, ಖಾರ, ಸಿಹಿ ಈ ಎಲ್ಲವೂ ಸಿಗುವ ಬೇರೆ ಬೇರೆ ಖಾದ್ಯಗಳಿರುವ ಥಾಲಿಯನ್ನು ಇಷ್ಟಪಡದವರು ಕಡಿಮೆ ಎನ್ನಬಹುದು.

ಉಪ್ಪಿನಕಾಯಿಯಿಂದ ಆರಂಭವಾಗುವ ಥಾಲಿ ಊಟ ಸಿಹಿ ಹುಳಿಯ ಚಟ್ನಿ, ಸಲಾಡ್‌, ಎರಡರಿಂದ ಮೂರು ವಿವಿಧ ಬಗೆಯ ಪಲ್ಯ, ಹಪ್ಪಳ, ಸಂಡಿಗೆ, ರೈಸ್ ಬಾತ್, ಚಪಾತಿ/ ರೋಟಿ, ಅನ್ನ ರಸಂ/ ಸಾಂಬಾರ್, ಮೊಸರನ್ನ, ಹೋಳಿಗೆ/ ಜಾಮೂನ್, ಪಾಯಸ, ಬಾಳೆಹಣ್ಣು, ಬೀಡಾ ಹೀಗೆ ಮುಗಿಯುತ್ತದೆ.

ಮಾಸಾಂಹಾರದ ಥಾಲಿಯಲ್ಲೂ ಚಿಕನ್, ಮಟನ್‌ ಹಾಗೂ ಮೀನಿನ ಖಾದ್ಯಗಳ ವೈವಿಧ್ಯ ಮಾಂಸಾಹಾರ ಪ್ರಿಯರ ಹೊಟ್ಟೆ ತುಂಬಿಸುತ್ತದೆ. ಚಿಕನ್ ಫ್ರೈ, ಫಿಶ್ ಫ್ರೈ, ಬೇಯಿಸಿದ ಎಗ್‌, ಬಿರಿಯಾನಿ, ಚಿಕನ್ ಕೂರ್ಮಾ, ಚಪಾತಿ/ರೋಟಿ/ ಪರಾಟ, ಚಿಕನ್ ಸಾಂಬಾರ್ ರೈಸ್ ಹೀಗೆ ಮುಂದುವರಿಯುತ್ತದೆ ನಾನ್‌ ಥಾಲಿಯ ಊಟ.

ಭಾರತದ ಕೆಲವು ಪ್ರಮುಖ ಥಾಲಿಗಳು

ಹರಿಯಾನ್ವಿ ಥಾಲಿ, ಮಹಾರಾಷ್ಟ್ರಿಯನ್‌ ಥಾಲಿ, ಗೋವನ್ ಥಾಲಿ, ರಾಜಸ್ಥಾನಿ ಥಾಲಿ, ಅಸ್ಸಾಂ ಥಾಲಿ, ಬೆಂಗಾಲಿ ಥಾಲಿ, ಭೋಜ್‌ಪುರಿ ಥಾಲಿ, ಗುಜರಾತಿ ಥಾಲಿ, ಛತ್ತೀಸ್‌ಗಡ ಥಾಲಿ, ಪಂಜಾಬಿ ಥಾಲಿ, ಆಂಧ್ರ ಥಾಲಿ, ಕೇರಳ ಥಾಲಿ, ಕಾಶ್ಮೀರಿ ಥಾಲಿ,...

ಥಾಲಿಯ ಉಪಯೋಗಗಳು

ನೀಡಿದ ಹಣಕ್ಕೆ ಮೋಸವಿಲ್ಲ: ಒಂದು ತಟ್ಟೆಯಲ್ಲಿ ವಿವಿಧ ಬಗೆಯ ಪ್ರಾಂತೀಯ ಆಹಾರಗಳನ್ನು ಸೇವಿಸಬಹುದು. ಒಂದು ಸಂಪೂರ್ಣ ಥಾಲಿಯಲ್ಲಿ ಕನಿಷ್ಠ ಮೂರರಿಂದ ನಾಲ್ಕು ಬಗೆಯ ಖಾದ್ಯಗಳಾದರೂ ನಮ್ಮ ಬಾಯಿಗೆ ರುಚಿಸುವಂತಹ ತಿನಿಸುಗಳು ಇರುತ್ತವೆ.

ಸಮತೋಲಿತ ಆಹಾರ: ವಿವಿಧ ಪದಾರ್ಥಗಳನ್ನು ಸೇರಿಸಿ ತಯಾರಿಸುವ ವಿವಿಧ ರುಚಿಯ ಖಾದ್ಯಗಳನ್ನು ಹೊಂದಿರುವ ಥಾಲಿ ಊಟದಲ್ಲಿ ಪ್ರೊಟೀನ್‌, ಕಾರ್ಬೋಹೈಡ್ರೇಟ್ಸ್‌ ಹಾಗೂ ಇನ್ನಿತರ ಪೌಷ್ಟಿಕ ಅಂಶಗಳನ್ನು ಒಳಗೊಂಡಿರುತ್ತದೆ.

ಕಾಲಕ್ಕೆ ತಕ್ಕಂತಹ ಖಾದ್ಯಗಳು: ಆಯಾ ಪ್ರದೇಶಕ್ಕೆ ತಕ್ಕಂತೆ ಸಿಗುವ ಖಾದ್ಯದ ಜೊತೆಗೆ ಕಾಲಕ್ಕೆ ತಕ್ಕಂತಹ ಖಾದ್ಯಗಳನ್ನು ತಯಾರಿಸುವುದು ವಿಶೇಷ. ಮಾವಿನ ಕಾಲಕ್ಕೆ ಮಾವಿನಹಣ್ಣಿನ ಖಾದ್ಯಗಳು, ಹಲಸಿನ ಕಾಲಕ್ಕೆ ಹಲಸಿನ ಖಾದ್ಯಗಳು, ಹುರುಳಿ ಕಾಲಕ್ಕೆ ಹುರುಳಿ ಖಾದ್ಯಗಳು ಥಾಲಿಯ ತಟ್ಟೆ ತುಂಬುವುದರಿಂದ ತಿನ್ನಲು ಬೇಸರ ಎನ್ನಿಸುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !