ಸಿದ್ಧಾಂತ: ಬೆಳಕೋ? ದೂಳೋ?

ಸೋಮವಾರ, ಜೂನ್ 17, 2019
28 °C

ಸಿದ್ಧಾಂತ: ಬೆಳಕೋ? ದೂಳೋ?

Published:
Updated:
Prajavani

ಸೈದ್ಧಾಂತಿಕ ಚರ್ಚೆ ಇತ್ತೀಚೆಗೆ ಹೆಚ್ಚಿಗೆ ನಡೆಯುತ್ತಿದೆ. ಬದುಕನ್ನು ಅರ್ಥ ಮಾಡಿಕೊಳ್ಳಲು ಸಿದ್ಧಾಂತಗಳು ನೆರವಾಗುತ್ತವೆ. ಆದರೆ ನಮ್ಮ ಸೈದ್ಧಾಂತಿಕ ಚರ್ಚೆಗಳು ದಿನೇ ದಿನೇ ಬಹಳ ಬಿಗಿಯಾಗುತ್ತಾ ಸಾಗಿ, ಬದುಕಿನ ಸಹಜತೆಯನ್ನೂ ಸಿದ್ಧಾಂತದ ಆಧಾರದಲ್ಲಿ ಅರ್ಥ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿ, ಬದುಕಿನ ಆಪ್ತತೆಯನ್ನೇ ನಾಶ ಮಾಡಿಬಿಡುತ್ತವೆಯೇನೋ ಅನಿಸುತ್ತದೆ. ಸಾಲ ತೆಗೆದುಕೊಂಡವನು ಮರುಪಾವತಿಸದೆ ಇದ್ದಾಗ ಸಿಟ್ಟುಗೊಂಡು ಬೈಯ್ಯುವುದು, ಯಾರಾದರೂ ಅವಮಾನ ಮಾಡಿದಾಗ ಅವರ ಬಗ್ಗೆ ಮನಸು ಕಹಿ ಮಾಡಿಕೊಳ್ಳುವುದು ಸಹಜ ಸ್ಪಂದನೆ. ಇದು ಪ್ರತಿವಾದಿಯ ಜಾತಿ, ಧರ್ಮ, ವರ್ಗ, ಲಿಂಗಗಳ ಆಧಾರದಲ್ಲಿ ಅರ್ಥೈಸಿ ನಡೆಯುವುದಿಲ್ಲ. ಇಂಥಾದ್ದನ್ನೆಲ್ಲ ಸೈದ್ಧಾಂತಿಕವಾಗಿ ಅರ್ಥೈಸುತ್ತಾ ಹೋದ ಹಾಗೆ, ಕಣ್ಣೆದುರಿನ ಬೆಳಕಾಗಬೇಕಾದ ಸಿದ್ಧಾಂತಗಳು ಕಣ್ಣಿಗೆ ರಾಚಿದ ದೂಳಾಗಿ ನಮ್ಮ ದಾರಿಯನ್ನು ಅಸ್ಪಷ್ಟಗೊಳಿಸುತ್ತವೆ.

ಪ್ರಸ್ತುತ ಹೆಚ್ಚು ಚರ್ಚೆಯಲ್ಲಿರುವುದು ಹಿಂದುತ್ವದ ಸಿದ್ಧಾಂತ, ಮಾರ್ಕ್ಸ್‌ವಾದಿ ಸಿದ್ಧಾಂತ, ಅಂಬೇಡ್ಕರ್‌ವಾದಿ ಸಿದ್ಧಾಂತ ಮತ್ತು ಗಾಂಧೀವಾದ. ಇವುಗಳಲ್ಲಿ ಗಾಂಧೀವಾದ ಒಂದು ಸಿದ್ಧಾಂತ ಅಲ್ಲ. ಸ್ವತಃ ಗಾಂಧಿಯವರೇ ಹೇಳಿದ ಹಾಗೆ ಗಾಂಧೀವಾದ ಎನ್ನುವುದೊಂದು ಇಲ್ಲ. ನಿಜವಾಗಿ ‘ಗಾಂಧಿ’ ಎನ್ನುವುದು ಒಂದು ಕ್ರಿಯೆ. ಗಾಂಧಿ ಚಿಂತನೆಗಳು ಸೈದ್ಧಾಂತಿಕ ರೂಪದಲ್ಲಿ ವಿಸ್ತರಿಸಿದ್ದರೆ ಅದು ಲೋಹಿಯಾವಾದದ ಮೂಲಕ. ಆದರೆ ಲೋಹಿಯಾವಾದ ಇವತ್ತು ಚರ್ಚೆಯ ಪ್ರಧಾನ ಭೂಮಿಕೆಯಲ್ಲಿ ಅಷ್ಟೊಂದು ಕ್ರಿಯಾತ್ಮಕವಾಗಿಲ್ಲ. ಬದಲಿಗೆ ಗಾಂಧಿಯೇ ಚರ್ಚೆಯ ಪ್ರಧಾನ ಭೂಮಿಕೆಯಲ್ಲಿ ಉಳಿದ ಸಿದ್ಧಾಂತಗಳೊಂದಿಗೆ ಇದ್ದಾರೆ. ಅನೇಕ ಬಾರಿ ಗಾಂಧಿ ಚಿಂತನೆಗಳು, ಎಲ್ಲಿಯೂ ನೆಲೆ ಕಾಣಲು ಆಗದವರಿಗೆ ನೆಲೆಯಾಗಲು ವೇದಿಕೆಯೂ ಆಗುತ್ತವೆ. ಹಾಗಾದಾಗ ಗಾಂಧಿ ಒಂದು ಅರಿವಾಗುವ ಬದಲಿಗೆ, ಒಂದು ಗುಂಗಾಗುತ್ತಾರೆ. ಗಾಂಧಿ ಒಂದು ಶಕ್ತಿಯಾಗುವ ಬದಲು ಒಬ್ಬ ವ್ಯಕ್ತಿಯಾಗುತ್ತಾರೆ. ಗಾಂಧೀಜಿಯ ಭಟ್ಟಂಗಿಗಳು ಹುಟ್ಟಿಕೊಳ್ಳುತ್ತಾರೆ. ಅದರ ಜೊತೆಗೆ ಗಾಂಧಿ ಚಿಂತನೆಗಳು ನೇಪಥ್ಯಕ್ಕೆ ಸರಿಯುತ್ತವೆ. ಗಾಂಧಿಯನ್ನು ಕೂಡ ಕಟುವಾದ ವಿಮರ್ಶೆಗೆ ಒಳಪಡಿಸಲು ಸಾಧ್ಯವಿಲ್ಲದವನು ಗಾಂಧಿ ಚಿಂತನೆಗಳ ಬಗ್ಗೆ ಗೌರವ ಹೊಂದಿದವನಾಗಲು ಸಾಧ್ಯವಿಲ್ಲ. ತನ್ನ ಆತ್ಮಕಥೆಯನ್ನೇ ಸತ್ಯದೊಂದಿಗಿನ ಪ್ರಯೋಗಗಳು ಎಂದು ಕರೆದುಕೊಂಡ ಗಾಂಧಿ ಚಿಂತನೆಗಳ ಬಗ್ಗೆ ತನಗೆ ಕಂಡ ಸತ್ಯವನ್ನು ಹೇಳಬೇಕಾದ್ದೇ ಗಾಂಧಿಗೆ ಸಲ್ಲಿಸಬಹುದಾದ ಗೌರವ.

ಸತ್ಯ ಹೇಳುವುದು, ಕಟು ವಿಮರ್ಶೆಗೆ ಒಳಪಡಿಸುವುದು ಎಂದರೆ ಬೈಯ್ಯುವುದಲ್ಲ.  ಸಿದ್ಧಾಂತವನ್ನು ಕಣ್ಣಿಗೆ ಬಿದ್ದ ದೂಳಾಗಿ ಮಾಡಿಕೊಂಡಾಗ ಬೈಗುಳಗಳು ಹುಟ್ಟಿಕೊಳ್ಳುತ್ತವೆ. ಗಾಂಧಿ ಎಂದ ತಕ್ಷಣ ‘ಹಿಂದೂಗಳಿಗೆ ಅನ್ಯಾಯ’ ಎಂಬ ಭಾವನೆ ಹುಟ್ಟಿ ಮನಸು ಕಹಿಯಾಗುವುದು ಸಿದ್ಧಾಂತದ ಗುಂಗಿನಿಂದಲೇ. ಗಾಂಧಿಯ ಸಮಗ್ರತೆಯಲ್ಲಿ ಹಿಂದೂಗಳ ಕುರಿತ ಅವರ ನಿರ್ವಹಣೆಯು ಚರ್ಚೆಯ ಒಂದು ಭಾಗವೇ ವಿನಾ ಅದೊಂದೇ ಗಾಂಧಿಯ ಸಮಗ್ರತೆಯಲ್ಲ. ಯಾವುದನ್ನು ಹೇಳಿದರೂ ‘ಹಿಂದೂಗಳಿಗೆ ಅನ್ಯಾಯ’ ಎಂಬ ಪರಿಕಲ್ಪನೆಯಲ್ಲೇ ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸುವುದು ಸಿದ್ಧಾಂತದ ಹಾದಿಯ ಅಸ್ಪಷ್ಟತೆಯನ್ನು ಸೂಚಿಸುತ್ತದೆ.

ಗಾಂಧಿಯ ಪರಿಕಲ್ಪನೆಯಲ್ಲೂ ರಾಮನಿದ್ದಾನೆ. ಆತ ಗಾಂಧಿಗೆ ಆತ್ಮಸಾಕ್ಷಿಯ ರೂಪದಲ್ಲಿ ಅಂತರಂಗದಲ್ಲಿರುವ ಆಧ್ಯಾತ್ಮಿಕ ರಾಮ. ಹಿಂದುತ್ವದಲ್ಲಿಯೂ ಒಬ್ಬ ರಾಮನಿದ್ದಾನೆ. ಇದರಲ್ಲಿ ಎರಡು ಆವೃತ್ತಿಗಳಿವೆ. ಒಂದು ಚಿಂತನಾತ್ಮಕವಾದದ್ದು. ಚಿಂತನಾತ್ಮಕ ಮಟ್ಟದಲ್ಲಿ ಹಿಂದುತ್ವದಲ್ಲಿಯೂ ರಾಮ ಆಪ್ತನಾದ ರಾಮನೇ. ಆದರೆ ಇಲ್ಲಿ ರಾಮನ ಜನಪ್ರಿಯ ಆವೃತ್ತಿಯ ಸಂಕೇತವಿದೆ. ಅವನು ಸಮುದ್ರರಾಜನ ಮೇಲೆ ಸಿಟ್ಟಿಗೆದ್ದು ಕೋದಂಡವನ್ನು ಹಿಡಿದು ಗರ್ಜಿಸುತ್ತಿರುವ ರಾಮ. ರಾಮ ಸಿಟ್ಟಿಗೆದ್ದ ಏಕೈಕ ಪ್ರಕರಣ ಅದು. ಆದರೆ ಆ ಸಿಟ್ಟು ಕೂಡ ರಾಮನ ಉತ್ಕಂಠ ಪ್ರೇಮದ ಫಲವೇ ಆಗಿದೆ ಎನ್ನುವುದು ಅರ್ಥವಾಗಬೇಕು. ಎಷ್ಟು ಮಂದಿ ಯುವತಿಯರನ್ನಾದರೂ ಪಡೆಯಬಹುದಾಗಿದ್ದ ರಾಮ, ತನಗೆ ಸೀತೆಯೇ ಬೇಕೆಂದು ಭಾವಿಸಿದವನು. ಸೀತೆ ಕಾಣೆಯಾದಾಗ, ತನ್ನ‌ ಮೇಲೆ ಬೇಸರ ಮಾಡಿಕೊಂಡು ಅಣುರೂಪ ಧರಿಸಿ ತರಗೆಲೆಗಳ ನಡುವೆ ಅಡಗಿದಳೇನೊ ಎಂದು ತರಗೆಲೆಗಳ ನಡುವಿನಲ್ಲೂ ಸೀತೆಯನ್ನು ಹುಡುಕುತ್ತಾನೆ. ಅಂತಹ ರಾಮನಿಗೆ ತನ್ನ ಪ್ರಾರ್ಥನೆಗೂ ಬೆಲೆ ಕೊಡದೆ ತನಗೂ ತನ್ನ ಪತ್ನಿಗೂ ನಡುವೆ ಸಮುದ್ರರಾಜ ಅಡ್ಡನಿಂತಾಗ ಆಕ್ರೋಶ ಹುಟ್ಟಿತು. ಆ ಆಕ್ರೋಶವನ್ನು ಪ್ರೇರೇಪಿಸಿದ್ದು ಪ್ರೀತಿಯೇ ಹೊರತು ದಮನ ಅಲ್ಲ. ಇದು ಅರ್ಥವಾದಾಗ ಹಿಂದುತ್ವ ಎನ್ನುವುದು ಕಣ್ಣೆದುರಿನ ಬೆಳಕಾಗಲು ಸಾಧ್ಯವಾಗುತ್ತದೆ.

ಗಾಂಧಿ, ಅಂಬೇಡ್ಕರ್, ಮಾರ್ಕ್ಸ್ ಎಲ್ಲರೂ ಮಹಾನ್ ವ್ಯಕ್ತಿತ್ವಗಳು ಹೌದು. ಆದರೆ ಜಗತ್ತು ಅವರ ಕಾಲಮಾನದಿಂದ ಒಂದಷ್ಟು ವರ್ಷ ಜಾಸ್ತಿ ಕಳೆದಿದೆ. ಈ ಯಾನದಲ್ಲಿ ಪರಿವರ್ತನೆಯಾಗದ ಅನೇಕ ಸಂಗತಿಗಳು ಖಂಡಿತವಾಗಿಯೂ ಇವೆ. ಆದರೆ ಪರಿವರ್ತನೆಯಾದ ಬಹಳಷ್ಟು ಸಂಗತಿಗಳೂ ಇವೆ. ಪರಿವರ್ತನೆಯೊಂದಿಗೆ ಸಿದ್ಧಾಂತವನ್ನು ಸ್ವೀಕರಿಸುವ ದೃಷ್ಟಿಕೋನದಲ್ಲೂ ಪರಿಷ್ಕರಣೆಯ ಅವಶ್ಯಕತೆಗಳಿರುತ್ತವೆ. ಕಾರ್ಲ್‌ ಮಾರ್ಕ್ಸ್ ಚಿಂತನೆಗಳು ಉತ್ಪಾದಕ ಕೈಗಾರಿಕಾ ಆರ್ಥಿಕತೆಯ ಹಿನ್ನೆಲೆಯಲ್ಲಿ ರೂಪುತಳೆದಂಥವು. ಆದರೆ ಇಂದು ವ್ಯಾಪಾರಿ ಆರ್ಥಿಕತೆಯೇ ಉತ್ಪಾದಕ ಕೈಗಾರಿಕೆಗಳ ಸ್ಥಾನದಲ್ಲಿ ಸ್ಥಾಪಿಸಲ್ಪಟ್ಟಿದೆ. ಉತ್ಪಾದಕ ಕೈಗಾರಿಕಾ ಆರ್ಥಿಕತೆಯಲ್ಲಿ ಕೈಗಾರಿಕೆಗೂ ಕೃಷಿ ರಂಗಕ್ಕೂ ಇರುವ ಸಂಬಂಧಗಳಿಗೂ, ವ್ಯಾಪಾರಿ ಆರ್ಥಿಕತೆಯಲ್ಲಿ ಕೃಷಿ ರಂಗಕ್ಕೂ- ಕೈಗಾರಿಕೆಗೂ ನಡುವೆ ಇರುವ ಸಂಬಂಧಕ್ಕೂ ವ್ಯತ್ಯಾಸಗಳಿವೆ. ಮಾರ್ಕ್ಸ್‌ವಾದದ ವಿತರಣೆಯ ಪರಿಕಲ್ಪನೆಗೆ ಇಂದಿಗೂ ಪ್ರಸ್ತುತತೆ ಇದೆ. ಆದರೆ ಅದನ್ನು ಕೂಡ ಪರಿಷ್ಕೃತ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಬೇಕಾದ, ವಿವರಿಸಬೇಕಾದ ಅಗತ್ಯವಿದೆ.

ಅಂಬೇಡ್ಕರ್ ಅವರ ಚಿಂತನೆಗಳ ಪ್ರಧಾನ ತಳಹದಿ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆ ಮತ್ತು ಅದನ್ನು ಪಡೆಯಲು ನಡೆಸಬೇಕಾದ ರಾಜಕೀಯ ಹೋರಾಟ. ಇಂದಿಗೂ ಇವು ಮಹತ್ವದ ಪ್ರಶ್ನೆಗಳೇ. ಅಂಬೇಡ್ಕರ್ ಅವರ ಕಾಲಕ್ಕೆ ಕೃಷಿರಂಗದ ಆರ್ಥಿಕತೆಯಲ್ಲಿನ ಸಂಸ್ಕೃತಿಯಿಂದ ರೂಪಿಸಲ್ಪಟ್ಟ ಸಾಮಾಜಿಕ ಅಸಮಾನತೆಗಳು ಮುಖ್ಯವಾಗಿದ್ದವು. ಇಂದು ಕೃಷಿ ರಂಗವೇ ದುರ್ಬಲವಾಗಿರುವಾಗ ಅಸಮಾನತೆಯ ಬಹುಮುಖಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ರಾಜಕೀಯ ಹೋರಾಟದ ಯಶಸ್ಸು, ಹೋರಾಟಕ್ಕೆ ಸ್ಪಂದಿಸಬೇಕಾದ ಪ್ರಭುತ್ವದ ಮನಸ್ಸನ್ನೂ, ಹೋರಾಟಗಾರರ ಸೈದ್ಧಾಂತಿಕ ನಿಷ್ಠೆಯ ಮಟ್ಟವನ್ನೂ ಅವಲಂಬಿಸಿರುತ್ತದೆ. ಬದಲಾದ ಸನ್ನಿವೇಶದಲ್ಲಿ ಅರ್ಥ ಮಾಡಿಕೊಂಡು ವಿವರಿಸಬೇಕಾದ ಅವಶ್ಯಕತೆ ಅಂಬೇಡ್ಕರ್ ವಾದಕ್ಕೂ ಇದೆ.

ಆದರೆ ಸೈದ್ಧಾಂತಿಕ ಹಿನ್ನೆಲೆ ನಿಲುವುಗಳು, ಚಲನಶೀಲತೆಯ ಅವಶ್ಯಕತೆಗಳನ್ನು ಗಮನಿಸದೆ ಇದ್ದಾಗ ತನ್ನ ನಿಲುವನ್ನು ಹೇರುವ, ತನ್ನದರ ಶ್ರೇಷ್ಠತೆಯನ್ನು ಒಪ್ಪಿಕೊಳ್ಳಲು ಬಲವಂತಪಡಿಸುವ ಮನಃಸ್ಥಿತಿಯಾಗಿ ಜಡ್ಡು ಕಟ್ಟುತ್ತವೆ. ಸಿದ್ಧಾಂತಗಳು ನಮ್ಮನ್ನು ರಕ್ಷಿಸುತ್ತವೆ ಎಂಬ ಆತ್ಮವಿಶ್ವಾಸದ ಜಾಗಕ್ಕೆ ನಾವೇ ಸಿದ್ಧಾಂತವನ್ನು ರಕ್ಷಿಸಬೇಕಾಗಿದೆ ಎಂಬ ಆತಂಕವು ಕಾಣಿಸಿಕೊಳ್ಳುತ್ತದೆ. ಆತಂಕದ ದೌರ್ಬಲ್ಯವು ತನ್ನದಲ್ಲದ್ದರ ಮೇಲೆ ಆಕ್ರಮಣ ಮಾಡುವ ನಡವಳಿಕೆಯಾಗಿ, ತನ್ನದಕ್ಕೆ ಎಲ್ಲ ಕಡೆಯಿಂದಲೂ ಅನ್ಯಾಯವೇ ಆಗುತ್ತಿದೆ ಎಂದು ಅರ್ಥ ಮಾಡಿಕೊಳ್ಳುವ ಕೊರಗಾಗಿ, ಭಿನ್ನವಾಗಿರುವವರು ನಿಜವಾಗಿ ಏನು ಎಂದು ತಿಳಿಯಲು ಹೋಗದೆ ತೀರ್ಪು ನೀಡುವ ಅವಸರವಾಗಿ ಕಾಡತೊಡಗುತ್ತದೆ. ಬದುಕಿನಲ್ಲಿ ನಡೆಯುವ ಎಲ್ಲವೂ ಸಿದ್ಧಾಂತವೇ ಅಲ್ಲ ಎಂಬ ಸಾಮಾನ್ಯ ಅರಿವು ಕೈಜಾರುತ್ತದೆ. ಈ ಸ್ಥಿತಿ ಸಮಾಜದಲ್ಲಿ ಕಹಿಯನ್ನು ಮಾತ್ರ ಉಳಿಸಬಲ್ಲದು. ಈಗ ನಿರ್ಮಾಣವಾಗತೊಡಗಿರುವ ಈ ಸ್ಥಿತಿಯಿಂದ ಪ್ರಜ್ಞಾಪೂರ್ವಕವಾಗಿ ಹೊರ ಬರಬೇಕಾದ ಅಗತ್ಯವಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 13

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !