ಶುಕ್ರವಾರ, ಆಗಸ್ಟ್ 7, 2020
25 °C

ಇವರು ತೇಜಸ್ವಿಯಹುಡುಗರು..

ಸದಾಶಿವ್ ಸೊರಟೂರು Updated:

ಅಕ್ಷರ ಗಾತ್ರ : | |

Prajavani

ಮೊನ್ನೆ ಒಂದು ಕೆಲಸದ ನಿಮಿತ್ತ ಮಾಗಡಿ ತಾಲೂಕಿನ ಅಂದಗೆರೆಗೆ ಹೋಗಿದ್ದೆ. ಅದು ಆನೆ (ಆನೆ ರೌಡಿ ರಂಗನ ಊರು) ದಾಳಿ ಮಾಡಿ ಮನುಷ್ಯರನ್ನು ಕೊಂದ ಜಾಗ. ಅಲ್ಲಿ, ಆನೆಯಷ್ಟೇ ಅಲ್ಲ, ಹುಲಿ ಚಿರತೆಗಳೂ ಇವೆ. ಇಳಿ ಸಂಜೆ ಹೊತ್ತಿಗೆ ಕಾಡಿನಿಂದ ಬರುತ್ತಿದ್ದಾಗ ಏಳೆಂಟು ಹುಡುಗರ ಗುಂಪೊಂದು ಕಣ್ಣಿಗೆ ಬಿತ್ತು.‘ಅರೆ, ಸಿಟಿ ಹುಡುಗರು ಈ ಕಾಡನ್ನೇನು ಬೀಚ್‌ ಅಂದ್ಕೊಂಡ್ರಾ. ಹಿಂಗೆ ಕುಳಿತವ್ರಲ್ಲಾ ಇವರು’ ಎಂದು ಮನಸ್ಸಿನಲ್ಲೇ ಅಂದುಕೊಂಡೆ. ಆದರೂ, ಕುತೂಹಲ ತಡೆಯಲಾಗದೇ ‘ಎಲ್ಲಿಗೆ ಹೋಗಿದ್ರಿ?’ ಅಂತ ಆ ಗುಂಪಿನಲ್ಲಿದ್ದ ಒಬ್ಬ ಹುಡುಗನನ್ನು ಕೇಳಿದೆ. ಆತ ಕೊಟ್ಟ ಉತ್ತರ ನಿಜಕ್ಕೂ ನನ್ನನ್ನು ಅಚ್ಚರಿಗೊಳಿಸಿತು.

ಅವರೆಲ್ಲ ಪರಿಸರ ಚಿಂತಕ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಬರಹ, ಬದುಕಿನಿಂದ ಪ್ರಭಾವಿತವಾದ ಯುವಕರು. ‘ನಿರುತ್ತರ’ ಎನ್ನುವ ಒಂದು ಗುಂಪು ಕಟ್ಟಿಕೊಂಡಿರುವ ಈ ಯುವಕರು, ‘ಕಾಡು ಎಂದರೆ ಏನು ? ಕಾಡನ್ನು ಹೇಗೆ ನೋಡಬೇಕು? ಕಾಡಿಗೆ ಬಂದವರು ಹೇಗೆ ವರ್ತಿಸಬೇಕು? ಟ್ರೆಕ್ಕಿಂಗ್ ಅಂದರೆ ಏನು?’ ಎಂಬಂತಹ ಕಾಡಿನ ಕುರಿತ ಹಲವು ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂದು ಅವರು ಕಾಡಿಗೆ ಹೋಗಿದ್ದೂ ಕೂಡ ಇಂಥದ್ದೇ ಟ್ರೆಕ್ಕಿಂಗ್‌ಗೆ ಯೋಜನೆ ರೂಪಿಸಲು. ಅವರೊಂದಿಗೆ ಮಾತಿಗಿಳಿದಾಗ ಇಂಥ ಹಲವು ವಿಚಾರಗಳು ಆಚೆ ಬಂದವು.

ತೇಜಸ್ವಿ ವರ್ಲ್ಡ್‌ ಸ್ಟೇಷನ್

‘ಕಾಡುಗಳಲ್ಲಿ, ಗುಡ್ಡಗಳಲ್ಲಿ ಮನಸ್ಸಿಗೆ ಬಂದಂತೆ ಅಲೆಯುವುದು ಟ್ರೆಕ್ಕಿಂಗ್ ಅಲ್ಲ. ಕಾಡಿನಲ್ಲಿ ಗಲಾಟೆ ಎಬ್ಬಿಸುವುದು ಕೂಡ ಅಲ್ಲ. ನಮ್ಮ ಖುಷಿಗೆ ಕಾಡನ್ನು ಗಲಿಬಿಲಿಗೊಳಿಸುವುದಲ್ಲ’ – ಇದು ನಿರುತ್ತರ ತಂಡದ ಅಭಿಮತ. ಇದೇ ವಿಚಾರಗಳನ್ನಿಟ್ಟುಕೊಂಡು ಈ ತಂಡ ಕರ್ನಾಟಕದ ಅನೇಕ ಕಾಡು, ಬೆಟ್ಟ, ಗುಡ್ಡಗಳಲ್ಲಿ ಟ್ರೆಕ್ಕಿಂಗ್, ಶಿಬಿರಗಳನ್ನು ಏರ್ಪಡಿಸಿದೆ. ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ‘ಕಾಡು ಎಂದರೆ, ಒಂದಷ್ಟು ಮರಗಳ ಗುಂಪಲ್ಲ. ಅದರ ರೂಪವೇ ಬೇರೆ’ ಎಂಬುದನ್ನು ತೋರಿಸಿಕೊಡುವ ಪ್ರಯತ್ನ ಮಾಡಿದೆ. ಇದಕ್ಕಾಗಿಯೇ ಈ ಯುವ ತಂಡದ ಸದಸ್ಯರು ‘ತೇಜಸ್ವಿ ವರ್ಲ್ಡ್‌ ಸ್ಟೇಷನ್’ ಎನ್ನುವ ಒಂದು ವೇದಿಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಯುಳ್ಳ ಮೊಬೈಲ್ ಅಪ್ಲಿಕೇಷನ್‌ ಕೂಡ ಇದೆ. ಇದರಲ್ಲಿ ಕಾಡಿನ ಬಗೆಗಿನ ನೈಜ ವಿಚಾರಗಳನ್ನು ತಿಳಿಸುವ ಪ್ರಯತ್ನವಿದೆ.

‘ಕಾಡು ಯಾರಿಗೂ ಉತ್ತರ ಕೊಡದಷ್ಟು ನಿಗೂಢ. ಅಲ್ಲಿ ಬಗೆದಷ್ಟೂ ಕುತೂಹಲವಿದೆ. ವನವಿಹಾರಕ್ಕೆ ಅಂತ ಬರುವ ಅನೇಕರು ಕಾಡಿನಲ್ಲಿ ಗಲಾಟೆ ಎಬ್ಬಿಸಿ ಒಂದಷ್ಟು ಹಾಳು ಮಾಡಿ ಹೋಗ್ತಾರೆ. ಈ ನಿಟ್ಟಿನಲ್ಲಿ ಅವರನ್ನು ಎಜುಕೇಟ್ ಮಾಡುವ ಒಂದು ಸಣ್ಣ ಪ್ರಯತ್ನವಿದು. ಕಾಡಿನಲ್ಲಿ ಟೆಂಟ್ ಹಾಕೋದು ಹೇಗೆ? ಯಾವ ಬಣ್ಣದ ಬಟ್ಟೆ ತೊಡಬೇಕು? ಶಬ್ದ ಮಾಡಲೇಬೇಕಾದ ಸಂದರ್ಭದಲ್ಲಿ ಹೇಗೆ ಮಾಡಬೇಕು? ಪ್ರಾಣಿಗಳ ಜೊತೆ ಹೇಗೆ ಸಂಪರ್ಕ ಸಾಧಿಸಬೇಕು? ಕಾಡಿನ ಸುತ್ತಮುತ್ತಲಿರುವ ಜನರ ಕಾಡಿನ ಜ್ಞಾನವನ್ನು ಜಗತ್ತಿಗೆ ಪರಿಚಯಿಸುವುದು.. ಇಂತಹದ್ದೇ ಹತ್ತಾರು ವಿಷಯಗಳ ಬಗ್ಗೆ ಯುವಕರಿಗೆ ಮಾಹಿತಿ ನೀಡುವುದು ಟ್ರೆಕ್ಕಿಂಗ್‌ನ ನಿಜವಾದ ಉದ್ದೇಶ’’ ಎನ್ನುತ್ತಾರೆ ತಂಡದ ಮುಖ್ಯಸ್ಥ ಶಿವಪ್ರಸಾದ್.

ಬೈಗಿನ ಗುಡ್ಡ

ಕಾಡಿನ ಬಗ್ಗೆ ಹೀಗೆಲ್ಲ ಅರಿವು ಮೂಡಿಸುತ್ತಿರುವ ನಿರುತ್ತರ ತಂಡ, ಸಾಹಿತ್ಯಾಸಕ್ತರಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ‘ಬಯೋಪಾರ್ಕ್‌’ನಲ್ಲಿ ‘ಬೈಗಿನ ಗುಡ್ಡ’ ಎಂಬ ತಾಣವನ್ನು ಹುಟ್ಟು ಹಾಕಿದೆ. ಈ ಪಾರ್ಕ್‌ನಲ್ಲಿ 2500 ದಶಲಕ್ಷ ವರ್ಷದ ಹಿಂದಿನ ರೂಪಾಂತರ ಶಿಲೆ ಇದೆ. ಒಂದು ಚಿಕ್ಕ ಗುಡ್ಡದ ರೀತಿ ಹರಡಿಕೊಂಡಿದೆ. ಅಲ್ಲಲ್ಲಿ ಸದಾ ನೀರು ಇರುತ್ತದೆ. ಈ ಗೆಳೆಯರ ಬಳಗ ಆ ಜಾಗದಲ್ಲಿ ಸಂಜೆ ಹೊತ್ತಿನಲ್ಲಿ ಸೇರಿ ಸಾಹಿತ್ಯದ ಕೃತಿಗಳನ್ನು ಓದುವುದು ಮತ್ತು ವಿಷಯಗಳ ಚರ್ಚೆ ಮಾಡುತ್ತಿದ್ದರು. ಹೀಗಾಗಿ ಆ ಸ್ಥಳಕ್ಕೆ ಬೈಗಿನ ಗುಡ್ಡ ಎಂದು ಹೆಸರಿಡಲಾಗಿದೆ. ಸುಮಾರು ಏಳೆಂಟು ಎಕರೆಯಷ್ಟು ಜಾಗ. ಈ ಗುಂಪು ಅಲ್ಲಿ ಸಾವಿರಾರು ಗಿಡಗಳನ್ನು ನೆಟ್ಟಿದೆ. ಕುವೆಂಪು ಮನೆಯಿಂದ ತರಲಾದ ಹಲಸಿನ ಗಿಡವೂ ಇಲ್ಲಿದೆ. ಪ್ರತಿವಾರವೂ ಅಲ್ಲಿ ಕಾರ್ಯಕ್ರಮಗಳಿರುತ್ತವೆ. ಇವರೆಲ್ಲ ಪ್ರಕೃತಿಯ ಮಧ್ಯೆ ಕುಳಿತು ಮುಕ್ತ ಸಾಹಿತ್ಯ ಚರ್ಚೆಗೆ ತೊಡಗಿಕೊಳ್ಳುತ್ತಾರೆ. ಅನೇಕ ಸಾಹಿತಿಗಳು ಇಲ್ಲಿಗೆ ಭೇಟಿ ಕೊಟ್ಟು ಹೋಗಿದ್ದಾರೆ. ಇದೆಲ್ಲಾ ತೇಜಸ್ವಿಯವರ ಅಭಿಮಾನದೊಂದಿಗೆ ಹುಟ್ಟಿಕೊಂಡಿರುವಂತದ್ದು. ಬೈಗಿನ ಗುಡ್ಡ ಅಂತ ನೀವು ಗೂಗಲ್‌ನಲ್ಲಿ ಕೇಳಿದರೆ ದಾರಿ ತೋರಿಸುತ್ತದೆ.ನಾನು ಎಂತೆಂಥದೋ ಅಭಿಮಾನಿ ಬಳಗವನ್ನು ನೋಡಿದ್ದೇನೆ. ಆದರೆ ಒಬ್ಬ ಸಾಹಿತಿಗೆ ಈ ಮಟ್ಟಿನ ಅಭಿಮಾನಿಗಳು ಇರುವುದು ಮತ್ತು ಆ ವಿಚಾರಗಳನ್ನು ಸದಾ ಜಾರಿಯಲ್ಲಿಡುವ ಪ್ರಯತ್ನ ಮಾಡುತ್ತಿರುವುದು ತುಂಬಾ ಖುಷಿಯ ವಿಚಾರ.

ತಂಡದ ಶಿವಪ್ರಸಾದ್, ಮಹಾಂತೇಶ್ ಆಧುನಿಕ್, ಪುನೀತ್ ಕುಮಾರ್, ಜಯಸಿಂಹ, ಹನುಮಂತ ದೇವರಾಜು, ಅವರಿಗೆ ಅಭಿನಂದನೆಗಳು ಸಲ್ಲಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು