ನೋಂದಣಿ ವಿಳಂಬ; ಆತಂಕದಲ್ಲಿ ಅನ್ನದಾತ

7
ಬುಧವಾರದಿಂದ 57 ಕೇಂದ್ರಗಳಲ್ಲಿ ರೈತರ ನೋಂದಣಿ; ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ

ನೋಂದಣಿ ವಿಳಂಬ; ಆತಂಕದಲ್ಲಿ ಅನ್ನದಾತ

Published:
Updated:

ವಿಜಯಪುರ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗಾಗಿ ರಾಜ್ಯ ಸರ್ಕಾರ ವಾರದ ಹಿಂದೆಯೇ ರೈತರ ನೋಂದಣಿ ಪ್ರಕ್ರಿಯೆ ಆರಂಭಿಸಲು ಆದೇಶಿಸಿದ್ದರೂ; ಜಿಲ್ಲೆಯಲ್ಲಿ ಈವರೆಗೆ ಪ್ರಕ್ರಿಯೆ ಆರಂಭಗೊಳ್ಳದಿರುವುದರಿಂದ ಅನ್ನದಾತರು ಆತಂಕದಲ್ಲಿದ್ದಾರೆ.

2018–19ನೇ ಸಾಲಿನಲ್ಲಿ ಪ್ರತಿ ಕ್ವಿಂಟಲ್‌ ತೊಗರಿ ಖರೀದಿಗೆ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ₹ 5675ರ ಜತೆ ಪ್ರೋತ್ಸಾಹ ಧನವನ್ನಾಗಿ ಕ್ವಿಂಟಲ್‌ಗೆ ₹ 425 ಘೋಷಿಸಿದ್ದ ರಾಜ್ಯ ಸರ್ಕಾರ, ರೈತರಿಂದ ಪ್ರತಿ ಕ್ವಿಂಟಲ್‌ ತೊಗರಿಯನ್ನು ₹ 6100ರಂತೆ ಖರೀದಿಸಲು ನಿರ್ಧರಿಸಿತ್ತು. ಇದಕ್ಕಾಗಿ ಕಳೆದ ಡಿ.24ರಿಂದ ಜ.7ರವರೆಗೆ 15 ದಿನ ರೈತರು ಖರೀದಿ ಕೇಂದ್ರಗಳಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸುವಂತೆ ಆದೇಶ ಹೊರಡಿಸಿತ್ತು.

ಈ ವೇಳೆಗೆ ರೈತರು ಹೆಸರು ನೋಂದಣಿ ಮಾಡುವುದು ಆರಂಭಗೊಂಡು ಒಂಬತ್ತು ದಿನ ಗತಿಸಬೇಕಿತ್ತು. ಆದರೆ ಇದೂವರೆಗೂ ಪ್ರಕ್ರಿಯೆಗೆ ಇನ್ನೂ ಚಾಲನೆ ಸಿಗದಿರುವುದರಿಂದ, ಉಳಿದ ಆರು ದಿನಗಳಲ್ಲೇ ಎಲ್ಲೆಡೆ ನೋಂದಣಿ ಕಾರ್ಯ ನಡೆಯಬೇಕಿದೆ. ಈ ಅಲ್ಪ ಅವಧಿಯಲ್ಲಿ ಎಲ್ಲ ರೈತರ ನೋಂದಣಿ ಕಷ್ಟಸಾಧ್ಯ ಎಂಬುದು ರೈತ ಸಮೂಹದಿಂದ ಕೇಳಿ ಬಂದಿದೆ.

‘ಆರಂಭದಲ್ಲಿ ಮಳೆ ಆಗಿದ್ದು ನೋಡಿದ್ರೆ ಚಲೋ ಬೆಳಿತಾದ ಅನ್ಕೊಂಡಿದ್ದೆ. ಹೇಳಿಕೊಳ್ಳುವಂತಹ ಬೆಳಿ ಬರಲಿಲ್ಲ. ಬಂದ ಫಸಲಿಗೂ ಮಾರುಕಟ್ಟೆಯಲ್ಲಿ ಧಾರಣೆ ಬಾಳ ಕಡಿಮೆ ಐತಿ. ವಾರದ ಹಿಂದೆಯೇ ಸರ್ಕಾರದವ್ರು ₹ 6100ರ ಧಾರಣೆಯಲ್ಲಿ ಖರೀದಿ ಮಾಡುವುದಾಗಿ ಪತ್ರಿಕೆ ಮೂಲಕ ತಿಳಿಸಿದ್ದರು. ಆದರೆ ಇವತ್ತಿಗೂ ನೋಂದಣಿ ಆರಂಭಿಸಿಲ್ಲ. ಇನ್ನೂ ಖರೀದಿ ಯಾವಾಗ ಮಾಡ್ತಾರೋ ದೇವರ ಬಲ್ಲ’ ಎನ್ನುತ್ತಾರೆ ಜೈನಾಪುರದ ರೈತ ಜಗದೀಶ ಉಳ್ಳಾಗಡ್ಡಿ.

‘15 ದಿನಗಳ ಹಿಂದೆಯೇ ಡಿ.24ರಿಂದ ನೋಂದಣಿ ಆರಂಭಗೊಳ್ಳಲಿದೆ ಎಂದು ಪತ್ರಿಕೆಯಲ್ಲಿ ನೋಡಿದ್ದೆ. ಆ ದಿನ ದಾಟಿ ಏಳೆಂಟು ದಿನ ಕಳೆದರೂ ಇನ್ನೂ ಆರಂಭಿಸಿಲ್ಲ. ಇವತ್ತು ಮಾಡ್ತಾರೆ, ನಾಳೆ ಮಾಡ್ತಾರೆ ಅಂಥ ಕಾಯುತ್ತಿದ್ದೇನೆ. ನಮ್ಮ ವ್ಯಾಪ್ತಿಯ ಇಂಗಳೇಶ್ವರ ಸೊಸೈಟಿಯಲ್ಲಿ ಕೇಳಿದರೆ ಮೇಲಿಂದ ಆದೇಶ ಬಂದಿಲ್ಲ. ಬಂದ ನಂತರ ಮಾಡ್ತೀವಿ ಅಂತಾರೆ. ಯಾವಾಗ ಆದೇಶ ಬರ್ತಾದೋ, ನಮ್ಮ ಸಮಸ್ಯೆ ಪರಿಹಾರ ಎಂದ್‌ ಸಿಗ್ತಾದ ತಿಳಿವಲ್ದಂಗ ಆಗ್ಯಾದ’ ಎಂದು ಮಸಬಿನಾಳದ ರೈತ ರವಿ ಬೈಚಬಾಳ ಹೇಳಿದರು.

‘ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಒಟ್ಟು 77 ಕೇಂದ್ರಗಳನ್ನು ತೆರೆಯಲಾಗಿದೆ. ಡಿ.24ರಿಂದ ನೋಂದಣಿ ಆರಂಭಗೊಳ್ಳಬೇಕಿತ್ತು. ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗಿದ್ದು, ಮಂಗಳವಾರ (ಜ.1 ರಂದು) ಪ್ರತಿಯೊಂದು ಕೇಂದ್ರಗಳ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಜ.2ರಿಂದ ಮೊದಲ ಹಂತದ 57 ಕೇಂದ್ರಗಳಲ್ಲಿ ನೋಂದಣಿ ಆರಂಭಗೊಳ್ಳಲಿದೆ. ಎರಡನೇ ಹಂತದ 22 ಕೇಂದ್ರಗಳಲ್ಲಿ ಶೀಘ್ರ ನೋಂದಣಿ ನಡೆಯಲಿದೆ’ ಎಂದು ರಾಜ್ಯ ಸಹಕಾರಿ ಮಾರಾಟ ಮಹಾಮಂಡಳದ ವಿಜಯಪುರ ಶಾಖಾ ವ್ಯವಸ್ಥಾಪಕ ವೆಂಕಟೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಂತ್ರಿಕ ತೊಂದರೆಯಾಗಿ ನೋಂದಣಿ ಪ್ರಕ್ರಿಯೆ ವಿಳಂಬವಾದರೂ ಸಹ ಸರ್ಕಾರದ ಆದೇಶದಂತೆ ಜ.7 ರವರೆಗೆ ಮಾತ್ರ ರೈತರಿಂದ ನೋಂದಣಿ ಮಾಡಿಕೊಳ್ಳಲಾಗುವುದು. ಮುಂದುವರೆಸಿ ಆದೇಶ ಬಂದರೆ ಮಾತ್ರ ನೋಂದಣಿ ಪ್ರಕ್ರಿಯೆ ಮುಂದುವರೆಯಲಿದೆ. ಉತಾರಿ ಮತ್ತು ಆಧಾರ್‌ ಕಾರ್ಡ್‌ ನಕಲು ಪ್ರತಿ ನೀಡಿ ತಮ್ಮ ವ್ಯಾಪ್ತಿಯ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !