ಬುಧವಾರ, ನವೆಂಬರ್ 13, 2019
22 °C

ಭೂಮ್‌ ಚಿತ್ರದಿಂದ ನಷ್ಟಟೈಗರ್‌ ಶ್ರಾಫ್‌ ನೆನಪು

Published:
Updated:
Prajavani

‘ಭೂಮ್‌’ ಸಿನಿಮಾ ಸೋಲಿನ ನಂತರ ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ ನಟ ಟೈಗರ್‌ ಶ್ರಾಫ್‌. 

2003ರಲ್ಲಿ ‘ಭೂಮ್‌’ ಚಿತ್ರವನ್ನು ಟೈಗರ್‌ ಶ್ರಾಪ್‌ ಅವರ ಅಮ್ಮ ಆಯೇಷಾ ನಿರ್ಮಾಣ ಮಾಡಿದ್ದರು. ಈ ಚಿತ್ರ ಬಾಕ್ಸಾಫೀಸಿನಲ್ಲಿ ಭಾರಿ ಸೋಲು ಕಂಡಿದ್ದರಿಂದ ಶ್ರಾಫ್‌ ಕುಟುಂಬ ಭಾರಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿತ್ತು. ಕೊನೆಗೆ ಮನೆಯ ಪೀಠೋಪಕರಣಗಳನ್ನು ಸಹ ಮಾರಲಾಯಿತು ಎಂದು ಶ್ರಾಫ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ಭೂಮ್‌’ ಚಿತ್ರದ ಮೂಲಕ ನಟಿ ಕತ್ರಿನಾ ಕೈಫ್‌ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಆ ಚಿತ್ರ ಬಿಡುಗಡೆಗೂ ಮುನ್ನ ಆನ್‌ಲೈನ್‌ನಲ್ಲಿ ಲೀಕ್‌ ಆಗಿತ್ತು. ಹಾಗಾಗಿ ಬಾಕ್ಸಾಫೀಸ್‌ ಕಲೆಕ್ಷನ್‌ನ ಮೇಲೆ ಹೊಡೆತ ಬಿತ್ತು. 

ಆನ್‌ಲೈನ್‌ನಲ್ಲಿ ಚಿತ್ರ ಲೀಕ್‌ ಆಗಿದ್ದರಿಂದ ಈ  ಚಿತ್ರವನ್ನು ಪ್ರದರ್ಶನ ಮಾಡಲು ಸಿನಿಮಾ ಹಂಚಿಕೆದಾರರು ಹಿಂದೇಟು ಹಾಕಿದಾಗ ಜಾಕಿಶ್ರಾಫ್‌ ಅವರು ಸಿನಿಮಾ ಬಿಡುಗಡೆ ಮಾಡುವ ಧೈರ್ಯ ಮಾಡಿದರು. ಇದರಿಂದ ಶ್ರಾಫ್‌ ಕುಟುಂಬ, ಬಾಂದ್ರಾದಲ್ಲಿನ ನಾಲ್ಕು ಬೆಡ್‌ರೂಮ್‌ ಅಪಾರ್ಟ್‌ಮೆಂಟ್‌ ಅನ್ನು ಮಾರಿ, ಎರಡು ಬೆಡ್‌ರೂಮ್‌ ಮನೆಗೆ ತೆರಳಿದರು. ಸಿನಿಮಾ ನಿರ್ಮಾಣ ಬಗ್ಗೆ ಜಾಕಿ ಶ್ರಾಫ್‌ ಅವರು ತೆಗೆದುಕೊಂಡ ಹಣಕಾಸಿನ ತಪ್ಪು ನಿರ್ಧಾರಗಳು ಕುಟುಂಬವನ್ನು ಆರ್ಥಿಕ ನಷ್ಟಕ್ಕೆ ಈಡು ಮಾಡಿತ್ತಂತೆ.

‘ನಾನು ಪ್ರತಿದಿನ ನೋಡುತ್ತಿದ್ದ, ಮನೆಯಲ್ಲಿನ ವಸ್ತುಗಳು ಒಂದೊಂದಾಗಿ ಕಾಣೆಯಾಗುತ್ತಿದ್ದವು. ಕೊನೆಗೆ ಒಂದು ದಿನ ನನ್ನ ಮಂಚ ಕೂಡ ಕಾಣದಾಯಿತು. ನೆಲದ ಮೇಲೆ ಮಲಗುವುದನ್ನು ಅಭ್ಯಾಸ ಮಾಡಿಕೊಂಡೆ. ಅಮ್ಮ ಮಾಡಿದ ಕಲಾಕೃತಿಗಳು, ಲ್ಯಾಂಪ್‌ಗಳನ್ನು ಕೂಡ ಒಂದೊಂದಾಗಿ ಮಾರಿದರು. ಆ ವಯಸ್ಸಿನಲ್ಲಿ ನಾನು ಕೆಲಸ ಮಾಡಿ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಅಂದುಕೊಂಡಿದ್ದೆ. ಆದರೆ ಏನು ಮಾಡಿದರೆ ಸಹಾಯ ಆಗುತ್ತೆ ಎಂಬುದೇ ಗೊತ್ತಿರಲಿಲ್ಲ. ಆ ದಿನಗಳು ನನ್ನ ಜೀವನದ ಕೆಟ್ಟ ದಿನಗಳು’ ಎಂದು ಆ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 

ಆ ಸಮಯದಲ್ಲಿ ಕುಟುಂಬದಲ್ಲಿ ಬರಿ ಅನಿಶ್ಚಿತತೆ ಹಾಗೂ ಚಿಂತೆಯೇ ಇರುತ್ತಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ನಟನಾ ಕ್ಷೇತ್ರಕ್ಕೆ ಪ್ರವೇಶಿಸಿದಾಗ ಟೈಗರ್‌ ಶ್ರಾಫ್‌ ತಮ್ಮ ಅಮ್ಮನಿಗೆ ಬಾಂದ್ರಾದ ಅಪಾರ್ಟ್‌ಮೆಂಟ್‌ ಅನ್ನು ವಾಪಸ್‌ ಖರೀದಿಸುವುದಾಗಿ ಮಾತು ನೀಡಿದ್ದರು. 2017ರಲ್ಲಿ ಈ ಮಾತನ್ನು ಪೂರೈಸಿದ್ದಾರೆ. 

‘ಆ ಕಷ್ಟದ ದಿನಗಳ ಕಾರಣದಿಂದಾಗಿಯೇ ಪ್ರಯೋಗಾತ್ಮಕ ಪಾತ್ರಗಳನ್ನು ಆಯ್ಕೆ ಮಾಡುವಾಗ ನನಗೆ ಭಯವಾಗುತ್ತದೆ. ವಿಭಿನ್ನ ಪಾತ್ರಗಳಲ್ಲಿ ನನ್ನನ್ನು ಸ್ವೀಕರಿಸಲು ಪ್ರೇಕ್ಷಕರಿಗೆ ಕೊಂಚ ಕಷ್ಟವಾಗುತ್ತಿದೆ ಎಂಬುದು ನನಗೆ ಗೊತ್ತಾಗಿದೆ’ ಎಂದು ಟೈಗರ್‌ ಮನದ ಆತಂಕ ಬಿಚ್ಚಿಟ್ಟಿದ್ದಾರೆ. ಅವರು ನಟಿಸಿದ ‘ಸ್ಟೂಡೆಂಟ್‌ ಆಫ್‌ ದಿ ಇಯರ್‌ 2’ ಇದಕ್ಕೆ ಉದಾಹರಣೆ. ಆ ಚಿತ್ರ ಥಿಯೇಟರ್‌ಗಳಲ್ಲಿ ಭಾರಿ ಸೋಲು ಕಂಡಿತ್ತು.

ಪ್ರತಿಕ್ರಿಯಿಸಿ (+)