ಟೊಮೆಟೊ ಬೆಲೆ ದಿಢೀರ್‌ ಹೆಚ್ಚಳ!

7
ಭಾರತ ಬಂದ್‌ ಪರಿಣಾಮ ಕಾರಣ– ವ್ಯಾಪಾರಿಗಳ ಹೇಳಿಕೆ

ಟೊಮೆಟೊ ಬೆಲೆ ದಿಢೀರ್‌ ಹೆಚ್ಚಳ!

Published:
Updated:
Prajavani

ಚಾಮರಾಜನಗರ: ಅಚ್ಚರಿ ಎಂಬಂತೆ ಟೊಮೆಟೊ ಬೆಲೆಯಲ್ಲಿ ದಿಢೀರ್‌ ಏರಿಕೆ ಕಂಡಿದೆ. ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಮಂಡಿಯಲ್ಲಿ ಭಾನುವಾರ ಕೆಜಿ ಟೊಮೆಟೊ ಬೆಲೆ ₹38ಕ್ಕೆ ಏರಿಕೆಯಾಗಿತ್ತು. 

ಶನಿವಾರದವರೆಗೆ ₹17–₹18 ಇತ್ತು. ಸೋಮವಾರ ಮತ್ತೆ ₹8 ಕುಸಿದಿದ್ದು, ₹30ಕ್ಕೆ ಮಾರಾಟವಾಗುತ್ತಿತ್ತು. ಎರಡು ದಿನ ಭಾರತ ಬಂದ್‌ ಇರುವ ಕಾರಣಕ್ಕೆ ಬೆಲೆ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಚಾಮರಾಜನಗರದ (ಭಾನುವಾರ ರಜಾ) ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ತರಕಾರಿ ಮಂಡಿ ಮತ್ತು  ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ (ಶನಿವಾರ ರಜಾ) ಮಾರುಕಟ್ಟೆಯಲ್ಲಿ ಮೂರು ದಿನಗಳಿಂದ ಟೊಮೆಟೊ ಬೆಲೆ ಹೆಚ್ಚಳವಾಗಿದೆ. ಇವೆರಡು ಮಂಡಿಗಳು ತರಕಾರಿ ಮಾರಾಟಕ್ಕೆ ಪ್ರಮುಖ ಕೇಂದ್ರವಾಗಿದೆ. ಸಮೀಪದ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ತರಕಾರಿ ಬೆಳೆಗಳನ್ನು ಇಲ್ಲಿ ಮಾರಾಟ ಮಾಡುತ್ತಾರೆ. 

ದರ ಹೆಚ್ಚಳವಾಗಿರಿವುದು ಟೊಮೆಟೊ ಬೆಳೆದ ರೈತರ ಮೊಗದಲ್ಲಿ ಸಂತಸ ತಂದಿಟ್ಟಿದೆ. ಆದರೆ, ಮುಂದಿನ ದಿನಗಳಲ್ಲಿ ಟೊಮೆಟೊ ದರ ಯಥಾಸ್ಥಿತಿಯಲ್ಲಿರಲಿದೆ ಎನ್ನುವ ಆತಂಕ ಕೂಡ ಅವರಲ್ಲಿದೆ. 

‘ಸಾಮಾನ್ಯವಾಗಿ ಮಳೆಗಾಲಕ್ಕೆ ಟೊಮೆಟೊ ಬೆಲೆ ಹೆಚ್ಚಳವಾಗುತ್ತದೆ. ಆದರೆ, ಈಗ ಚಳಿಗಾಲ ಮತ್ತು ಶೀತಗಾಳಿ ಇದೆ ಈ ವಾತಾವರಣದಲ್ಲಿ ಬೆಲೆ ಏರಿಕೆ ಕಂಡಿರುವುದು ಅಚ್ಚರಿ ಮೂಡಿಸಿದೆ. ಅನೇಕ ರೈತರು ಟೊಮೆಟೊ ಬೆಳೆ ಬೆಳೆದಿಲ್ಲ. ಈಗ ಕಡಿಮೆ ಪ್ರಮಾಣದಲ್ಲಿ ರೈತರು ತರಕಾರಿ ಮಂಡಿಗಳಿಗೆ ಹಾಕುತ್ತಾರೆ. ಮೂರು ವಾರ ಇದೇ ದರ ಮುಂದುವರಿದರೆ ರೈತರಿಗೆ ಅನುಕೂಲವಾಗಲಿದೆ’ ಎಂದು ಅರಕಲವಾಡಿ ಗ್ರಾಮದ ರೈತ ಸುಬ್ಬಣ್ಣ ಹೇಳಿದರು.

ಕೇರಳ ಬಂದ್‌ ಪರಿಣಾಮವಿಲ್ಲ: ಇತ್ತೀಚಿನ ದಿನಗಳಲ್ಲಿ ಶಬರಿಮಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಪರಿಣಾಮ ಕೇರಳ ರಾಜ್ಯ ಬಂದ್‌ ಆಗಿತ್ತು. ಇದರಿಂದ ತರಕಾರಿ ಹೋಗುತ್ತಿಲ್ಲ. ಇದರಿಂದ ಟೊಮೆಟೊ ತರಕಾರಿ ದರ ಇಳಿಕೆಯಾಗಬೇಕು. ಆದರೆ, ಭಾನುವಾರ ಮತ್ತು ಸೋಮವಾರ ದರ ಹೆಚ್ಚಳವಾಗಿದೆ. ದರ ಹೆಚ್ಚಳದಲ್ಲಿ ಕೇರಳ ಬಂದ್‌ ಯಾವುದೇ ಪರಿಣಾಮ ಇಲ್ಲ ಎಂದು ತೆರಕಣಾಂಬಿ ತರಕಾರಿ ಮಂಡಿ ವ್ಯಾಪಾರಸ್ಥರು ಹೇಳುತ್ತಾರೆ.

‘ದಿನಕ್ಕೆ 8ರಿಂದ 10 ಸಾವಿರ ಕೆಜಿಯಷ್ಟು ಟೊಮೆಟೊ ಬರುತ್ತದೆ. ಶುಕ್ರವಾರದವರೆಗೂ ಟೊಮೆಟೊ ದರ ₹ 16 ರಿಂದ ₹ 18ರ ವರೆಗೆ ಇತ್ತು. ಈಗ ಮಾತ್ರ ಬೆಲೆ ಹೆಚ್ಚಳವಾಗಿದೆ. ಮಂಗಳವಾರ ಹಾಗೂ ಬುಧವಾರ ಭಾರತ ಬಂದ್‌ ಇರುವುದರಿಂದ ತರಕಾರಿ ಮಂಡಿ (ತೆರಕಣಾಂಬಿ ಮಂಡಿ) ತೆರೆಯುವುದಿಲ್ಲ. ಹೀಗಾಗಿ, ತರಕಾರಿ ಶೇಖರಣೆಯಿಂದ ಬೆಲೆ ಹೆಚ್ಚಳವಾಗಿದೆ’ ಎಂದು ನಾಗರಾಜಪ್ಪ ‘ಪ್ರಜಾವಾಣಿ’ಗೆ ಹೇಳಿದರು.

ಭಾರತ ಬಂದ್‌ ಪರಿಣಾಮ

‘ಮಂಗಳವಾರ ಮತ್ತು ಬುಧವಾರ ದೇಶವ್ಯಾಪಿ ಬಂದ್‌ ಇರಲಿದೆ ಎಂದು ತಳ್ಳುಗಾಡಿ ವ್ಯಾಪಾರಿಗಳು ಹಾಗೂ ಚಿಲ್ಲರೆ ಅಂಗಡಿ ಮಳಿಗೆ ವ್ಯಾಪಾರಸ್ಥರು ಎರಡು ದಿನ ಮೊದಲೇ ಟೊಮೆಟೊ ಖರೀದಿ ಮಾಡಿದ್ದರಿಂದ ಬೆಲೆ ಹೆಚ್ಚಳವಾಗಿದೆ. ಗುರುವಾರದಿಂದ ಬಹುತೇಕ ದರ ಹಿಂದಿನಂತೆಯೇ ಇರಲಿದೆ’ ಎಂದು ತೆರಕಣಾಂಬಿ ತರಕಾರಿ ಮಂಡಿ ವ್ಯಾಪಾರರಾದ ನಾಗರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !