ಏಕಾಂಗಿ ಪ್ರವಾಸದಿಂದ ಧೈರ್ಯ ಹೆಚ್ಚಿತು

7

ಏಕಾಂಗಿ ಪ್ರವಾಸದಿಂದ ಧೈರ್ಯ ಹೆಚ್ಚಿತು

Published:
Updated:

ಸಮುದ್ರ ನೋಡಬೇಕು, ಅದರ ನೀರಿನಲ್ಲಿ ಮೈ ಮನವನ್ನು ಪುಲಕಿತಗೊಳಿಸಬೇಕೆಂದು ಬಾಲಕನಿದ್ದಾಗಲೇ ಕನಸು ಕಂಡಿದ್ದೆ.

ನಮ್ಮ ಶಿಕ್ಷಕರು ಸಮಾಜ ವಿಜ್ಞಾನ ಪಾಠ ಮಾಡುವಾಗ ಸಮುದ್ರದ ವಿಸ್ತಾರ, ಹಡಗುಗಳ ಸಂಚಾರ, ಆಳ, ಜೀವಸಂಕುಲದ ವಿಸ್ಮಯಗಳ ಕುರಿತು ಬಹಳ ಹೇಳುತ್ತಿದ್ದರು. ಇದು ನನ್ನ ಆಸೆಯನ್ನು ಇಮ್ಮಡಿಗೊಳಿಸಿತ್ತು. ಈಗಾಗಲೇ ಪ್ರವಾಸ ಮಾಡಿದ ಹಿರಿಯರು ಸಮುದ್ರದ ಕುರಿತು ತಾಸುಗಟ್ಟಲೆ ಹೇಳುತ್ತಿದ್ದರು. ಹಾಗಾಗಿ ನಾನೂ ಸಮುದ್ರ ನೋಡಬೇಕು ಎಂದುಕೊಂಡೆ.

ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಆಗ ತಾನೆ ಮುಗಿದಿತ್ತು. ಕಲ್ಲು ಗಣಿಯೊಂದರ ಮಾಲೀಕರಲ್ಲಿ ಒಂದು ವಾರ ಕೂಲಿ ಕೆಲಸಕ್ಕೆ ಬರುತ್ತೇನೆಂದು ಹೇಳಿ ₹500 ಮುಂಗಡ ಪಡೆದೆ. ಎರಡು ಜೊತೆ ಬಟ್ಟೆಗಳನ್ನು ಸಣ್ಣ ಬ್ಯಾಗಿನಲ್ಲಿ ಹಾಕಿಕೊಂಡು ಅದೇ ರಾತ್ರಿ ನನ್ನೂರು ರಾಣೇಬೆನ್ನೂರಿನಿಂದ ಉಡುಪಿಗೆ ಹೊರಟೆ. ರಾತ್ರಿ 10 ಗಂಟೆಗೆ ಬಸ್‌ ಹೊರಟಾಗ ರೋಮಾಂಚನವಾಯಿತು. ಹರಿಹರ ದಾಟಿದ ಮೇಲೆ ಸಣ್ಣಗೆ ಭಯಯೂ ಪ್ರಾರಂಭಿಸಿತು. ಆ ಭಯದಲ್ಲಿಯೇ ಕಣ್ಮುಚ್ಚಿಕೊಂಡವನು ಯಾವಾಗ ನಿದ್ದೆಗೆ ಜಾರಿದೆನೊ ತಿಳಿಯಲಿಲ್ಲ. ಡ್ರೈವರ್ ದಡಕ್ಕನೆ ಬ್ರೇಕ್ ಹಾಕಿದಾಗಲೇ ಎಚ್ಚರವಾಗಿದ್ದು.

ಕೊಟ್ಟಿಗೆಹಾರದಲ್ಲಿ ಬಸ್‌ ನಿಲ್ಲಿಸಿ ಡ್ರೈವರ್ ಚಹಾ ಕುಡಿಯಲು ಹೋದನು. ಮತ್ತೆ ಬಸ್ಸು ಹೊರಟಿತು. ಮುಂದಿನ ಪಯಣ ನನಗೆ ಹೊಸ ರೀತಿಯಲ್ಲಿ ಕಾಣಿಸತೊಡಗಿತು. ಬಸ್ಸು ಬೆಟ್ಟವನ್ನು ಏರುವಂತೆ ಜೋರಾಗಿ ಒದರುತ್ತಾ, ತಿರುವುಗಳಲ್ಲಿ ಸಾಗುತ್ತಿತ್ತು. ಕೆಲವೊಮ್ಮೆ ಬಸ್ ಬಿದ್ದೇ ಬಿಡುತ್ತದೇನೊ ಎಂಬಂತೆ ಅತ್ತಿಂದಿತ್ತ ಓಲಾಡುತ್ತಿತ್ತು. ಈ ಸಂದರ್ಭದಲ್ಲಿ ಮನೆದೇವರು, ಕುಲದೇವರು ಎಲ್ಲರನ್ನು ನೆನಪಿಸಿಕೊಳ್ಳುತ್ತಿದ್ದೆ.

ಅಂತೂ ಇಂತೂ ಬೆಳಗ್ಗೆ ಎಂಟು ಗಂಟೆಗೆ ಹೊತ್ತಿಗೆ ನಮ್ಮ ಬಸ್‌ ಉಡುಪಿ ಬಸ್ ನಿಲ್ದಾಣ ತಲುಪಿತು. ಅದು ಕೊನೆಯ ನಿಲ್ದಾಣ. ಎಲ್ಲರೊಂದಿಗೆ ನಾನೂ ಇಳಿದೆ. ಎರಡು ರೂಪಾಯಿ ಕೊಟ್ಟು ಕಾಫಿ ಕುಡಿದು, ಅದೇ ಅಂಗಡಿಯವರಲ್ಲಿ ಸಮುದ್ರಕ್ಕೆ ಹೋಗುವ ದಾರಿ ಕೇಳಿದೆ. ಅವರು ಬಹಳ ಸಂತಸದಿಂದ ಉಡುಪಿ ಸುತ್ತಮುತ್ತಲ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ನೀಡಿದರು. ನಾನು ಅಲ್ಲಿಂದ ಮಲ್ಪೆಗೆ ಹೋದೆ. ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಬೋಟುಗಳಿಂದ ಮೀನು ಸಾಗಿಸುವುದು, ನನ್ನಷ್ಟು ಮತ್ತು ನನಗಿಂತಲೂ ದೊಡ್ಡ ಮೀನುಗಳನ್ನು ನೋಡಿ ಬೆರಗಾದೆ. 

ಮುಂದಿನ ಪಯಣ ಸಮುದ್ರದತ್ತ. ಆಕಾಶ, ಭೂಮಿ, ನೀರು ಒಂದಾದಂತೆ ಕಾಣುತ್ತಿದ್ದ ಜಲರಾಶಿ! ಮನದಣಿಯುವಷ್ಟು ಸಮುದ್ರವನ್ನು ನೋಡಿದ ಮೇಲೆ ಎರಡು ಗಂಟೆ ಈಜಾಡಿದೆ. ನನ್ನ ಬಹುದಿನದ ಆಸೆ ಫಲಿಸಿದ ತೃಪ್ತಿಯೊಂದಿಗೆ ಉಡುಪಿಗೆ ಮರಳಿದೆ. ಅಂದು ರಾತ್ರಿ ಉಡುಪಿ ದೇವಸ್ಥಾನಕ್ಕೆ ಭೇಟಿ ನೀಡಿ ಮರುದಿನ ಧರ್ಮಸ್ಥಳಕ್ಕೆ ಹೊರಟೆ. ದಟ್ಟವಾದ ಕಾಡಿನ ಹಾದಿಯ ಪ್ರಯಾಣ, ನೇತ್ರಾವತಿ ನದಿಯಲ್ಲಿ ಸ್ನಾನ, ದೇವಸ್ಥಾನದ ದರ್ಶನ ಮತ್ತು ಊಟ.. ಎಲ್ಲವೂ ನನಗೆ ಅವಿಸ್ಮರಣೀಯವಾಗಿತ್ತು. ರಾತ್ರಿ ನನ್ನೂರಿಗೆ ವಾಪಸಾದೆ. ಎರಡು ದಿನ ಏಕಾಂಗಿಯಾಗಿ ಪ್ರವಾಸ ಮಾಡಿದ್ದು ನನ್ನಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !