ಆ ಭಯಾನಕ ರೈಲು ಪಯಣ

7

ಆ ಭಯಾನಕ ರೈಲು ಪಯಣ

Published:
Updated:
Deccan Herald

1973-74 ರಲ್ಲಿ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಓದುತ್ತಿದ್ದೆ. ತಂದೆಯವರು ಹೊಳೇನರಸಿಪುರದ ಬಾಲಕಿಯರ ಪ್ರೌಢಶಾಲೆಯಲ್ಲಿ ಅಧ್ಯಾಪಕರು. ಮಳೆಗಾಲದ ಒಂದು ದಿನ ತಂದೆಯವರು ಮೈಸೂರಿಗೆ ಬಂದಿದ್ದರು. ಮನೆಗೆ ಬೇಕಾದ ಕೆಲವು ಸಾಮಾನುಗಳನ್ನು ಕೊಳ್ಳುವುದಿತ್ತು. ಮೈಸೂರಿಗೆ ಬಂದು ಹೋಗಲು ರೈಲಿದ್ದುದರಿಂದ ಹೆಚ್ಚು ಹೊರೆಯಾಗುತ್ತಿರಲಿಲ್ಲ. 

ಬೆಳಿಗ್ಗೆಯ ರೈಲಿಗೆ ಬಂದಿದ್ದ ತಂದೆಯವರು ಹಾಗೂ ನಾನು ಮಧ್ಯಾಹ್ನ ಮಾರುಕಟ್ಟೆಗೆ ಹೋದೆವು. ಸಾಮಾನುಗಳನ್ನು ಕೊಳ್ಳುವ ಹೊತ್ತಿಗೆ ಸಂಜೆಯಾಗಿತ್ತು. ಸಂಜೆಯ ಐದು ಘಂಟೆಯ ಸುಮಾರಿಗೆ ಮಳೆ ಶುರುವಾಯಿತು. ಲಗ್ಗೇಜ್ ಹೆಚ್ಚಿಗೆ ಇದ್ದುದರಿಂದ ‘ನಾಳೆ ವಾಪಸ್ ಬರುವಂತೆ, ನೀನೂ ಬಾ’ ಎಂದರು. ಊರಿಗೆ ಹೋಗಲೆಂದು ಸಂಜೆಯ ರೈಲಿಗೆ ಕುಳಿತೆವು.

ಹತ್ತು ಘಂಟೆಗೆಲ್ಲಾ ರೈಲು ಹೊಳೇನರಸಿಪುರ ತಲುಪಬೇಕಿತ್ತು. ಮಳೆ ಜಾಸ್ತಿಯಿದ್ದುದರಿಂದ ನಿಧಾನವಾಗಿ ಚಲಿಸುತ್ತಿತ್ತು. ರಾತ್ರಿ ಹನ್ನೊಂದು ಹನ್ನೊಂದೂವರೆಯ ಸಮಯಕ್ಕೆ ಹೊಳೆನರಸಿಪುರದಿಂದ ಹತ್ತು ಮೈಲಿಯಷ್ಟು ಹಿಂದೆ ಇರುವ ಮಂದಗೆರೆ ಎಂಬ ನಿಲ್ದಾಣಕ್ಕೆ ಬಂದ ರೈಲು ನಿಂತೇಬಿಟ್ಟಿತು. ಹೊರಡುವ ಲಕ್ಷಣವೇ ಕಾಣಲಿಲ್ಲ. ರೈಲಿನಿಂದ ಇಳಿದು ವಿಚಾರಿಸಿದರೆ ‘ಹೊಳೆನರಸಿಪುರದ ಹತ್ತಿರ ಕಂಬಿಗೆ ತೊಂದರೆಯಾಗಿದೆ, ರೈಲು ಮುಂದೆ ಹೋಗುವುದಿಲ್ಲ’ ಎಂದರು. ರಾತ್ರಿಯೆಲ್ಲಾ ರೈಲೊಳಗೇ ಕುಳಿತು ಕಾಲ ಕಳೆದು, ಬೆಳಿಗ್ಗೆ ಮೂರು ಮೈಲಿ ನಡೆದು ರಸ್ತೆಗೆ ಬಂದೆವು. ಬಸ್ಸು ಹತ್ತಿ ಮನೆಗೆ ಬಂದಾಗ ಎಂಟು ಘಂಟೆಯ ಮೇಲಾಗಿತ್ತು.

ನನಗೆ ಅಂದು ಕಾಲೇಜಿಗೆ ಹೋಗಲಾಗಲಿಲ್ಲ. ‘ಮೈಸೂರು ಕಡೆಯ ಎಲ್ಲಾ ರೈಲುಗಳೂ ರದ್ದಾಗಿವೆ’ ಎಂದು ಯಾರೋ ಹೇಳಿದರು. ಏನಾಗಿದೆ ನೋಡೋಣ ಎಂದು ಸ್ನೇಹಿತರ ಜತೆ ಹೊರಟೆ. ಹೊಳೆನರಸಿಪುರಕ್ಕೆ ಮೂರು ಕಿಲೋಮೀಟರ್ ಹಿಂದೆ ಒಂದು ಕೆರೆ ಇದ್ದು ಅದರ ಮಧ್ಯೆ ಬೈತಲೆ ತೆಗೆದಂತೆ ಮಣ್ಣಿನ ಏರಿ ಮಾಡಿ ಅದರ ಮೇಲೆ ರೈಲು ಕಂಬಿ ಹಾಕಿದ್ದರು. ಮಳೆ ಬಂದಿದ್ದರಿಂದ ಕೆರೆಯ ನೀರಿನ ಮಟ್ಟ ಏರಿತ್ತು. ಎರಡೂ ಬದಿಯ ನೀರಿನ ಒತ್ತಡಕ್ಕೆ ಏರಿ ಕೊಚ್ಚಿ ಹೋಗಿ ಉದ್ದದ ರೈಲು ಕಂಬಿ ಆಧಾರವಿಲ್ಲದೆ ನೇತಾಡುತ್ತಿತ್ತು!

ಗ್ಯಾಂಗ್‍ಮನ್ ಒಬ್ಬರು ಇದನ್ನು ಗಮನಿಸಿ ಆ ಮಳೆಯ ನಡುವೆಯೂ ಹತ್ತು ಹನ್ನೆರಡು ಕಿಲೋಮೀಟರ್ ದೂರವನ್ನು ಓಡುತ್ತಾ ಕ್ರಮಿಸಿ ಹಿಂದಿನ ನಿಲ್ದಾಣವಾದ ಮಂದಗೆರೆಗೆ ವಿಷಯ ಮುಟ್ಟಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದರು. ಒಂದು ವೇಳೆ ರಾತ್ರಿ ನಮ್ಮ ರೈಲು ಬಂದುಬಿಟ್ಟಿದ್ದರೆ ಘೋರ ಅನಾಹುತ ನಡೆದು ನೂರಾರು ಮಂದಿಯ ಪ್ರಾಣ ಹೋಗಬಹುದಾಗಿತ್ತು. ಈಗಲೂ, ಊಹಿಸಿಕೊಂಡರೇ ಭಯವಾಗುತ್ತದೆ.

ಹೇಮಾವತಿನಗರ, ಹಾಸನ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !