ನೀರ್ಗಲ್ಲಿನ ಜಲಪಾತಟ್ರುಮ್ಮೆಲ್‌ಬ್ಯಾಕ್

7

ನೀರ್ಗಲ್ಲಿನ ಜಲಪಾತಟ್ರುಮ್ಮೆಲ್‌ಬ್ಯಾಕ್

Published:
Updated:
Deccan Herald

ನೀರಿನ ಭೋರ್ಗರೆತದ ಸದ್ದು ಕಿವಿಗೆ ಅಪ್ಪಳಿಸುತ್ತಿದ್ದಂತೆ ರೋಮಾಂಚನಗೊಳ್ಳುತ್ತೇವೆ. ಸುತ್ತ ಆವರಿಸಿದ ಬೆಟ್ಟದ ಒಳಗೆ ಧುಮ್ಮಿಕ್ಕುವ ನೀರಿನ ಶಬ್ದ ಪ್ರತಿಧ್ವನಿಸುತ್ತದೆ. ಒಂದೆಡೆ ನೀರಿನ ಅಬ್ಬರ ಗುಡುಗಿನಂತೆ ಭಾಸವಾದರೆ, ಮತ್ತೊಂದೆಡೆ ತುಂತುರು ಹನಿಗಳು ಮಂತ್ರಾಕ್ಷತೆಯಂತೆ ಉದುರುತ್ತಿರುತ್ತವೆ. ಆವರಿಸಿದ ಮಂಜು, ಆಳದಲ್ಲೆಲ್ಲೋ ನೀರಿನ ತೊಯ್ದಾಟ, ಬಂಡೆಗಲ್ಲುಗಳ ನಡುವಿನಿಂದ ಇಣುಕುವ ಬೆಳಕು ನಿಗೂಢತೆಯ ಜಗತ್ತನ್ನು ಸೃಷ್ಟಿಸಿರುತ್ತದೆ.

ಸ್ವಿಟ್ಜರ್‌ಲ್ಯಾಂಡ್‌ನ ಇಂಟರ್‌ಲೇಕನ್ ಜಿಲ್ಲೆಯ ಲಾಟರ್ ಬ್ರುನೆನ್ ಕಣಿವೆಯ ಟ್ರುಮ್ಮೆಲ್‌ಬ್ಯಾಕ್ ಜಲಪಾತವಿದು. ಹಿಮನದಿಯ ಈ ಜಲಪಾತ ಯೂರೋಪ್‌ನಲ್ಲಿರುವ ಏಕೈಕ ಭೂಗರ್ಭದ ಜಲಪಾತ. ಮಾನವ ನಿರ್ಮಿತ ಸುರಂಗಗಳ ಸರಣಿಯು ಪರ್ವತದ ಗುಹೆಗಳನ್ನು ಪ್ರವೇಶಿಸಲು ಅವಕಾಶ ಮಾಡಿಕೊಡುತ್ತದೆ. ಆ ಮೂಲಕ ಜಲಪಾತವನ್ನು ಸಮೀಪದಿಂದ ನೋಡುವ, ನೀರಿನ ಹನಿಗಳಿಂದ ತೊಯ್ಯುವ ಹಾಗೂ ಅದರ ಶಬ್ದವನ್ನು ಮನದಲ್ಲಿ ತುಂಬಿಸಿಕೊಳ್ಳಬಹುದಾಗಿದೆ.

ಸದಾ ಹಸಿರಿನ ಮಡಿಲಲ್ಲಿ ಮಲಗಿರುವ ಸುಂದರ ಊರು ಲಾಟರ್ ಬ್ರುನೆನ್. ‘ಹಲವು ನೀರಝರಿಗಳು’ ಎಂಬುದು ಈ ಹೆಸರಿನ ಅರ್ಥ. ಲಾಟರ್ ಬ್ರುನೆನ್ ಕಣಿವೆಯಲ್ಲಿ 72 ಜಲಪಾತಗಳಿವೆಯಂತೆ. ಟ್ರುಮ್ಮೆಲ್‌ಬ್ಯಾಕ್ ಈ ಪ್ರದೇಶದ ರಾಣಿ!

ಪರ್ವತದ ಒಳಗಿರುವ ಈ ಜಲಪಾತವನ್ನು ನೋಡಲು ಲಿಫ್ಟ್ ಮೂಲಕ ಹೋಗಬೇಕು. ಎಲ್ಲೆಡೆ ಲಿಫ್ಟ್ ಲಂಬವಾಗಿ ಮೇಲಕ್ಕೆ ಚಲಿಸಿದರೆ ಇಲ್ಲಿ ಒಂದು ಕೋನದಲ್ಲಿ ಲಿಫ್ಟ್ ಚಲಿಸುತ್ತದೆ. ಜಲಪಾತವನ್ನು ನೋಡಲು ಲಿಫ್ಟ್, ಸುರಂಗದ ದಾರಿ, ಮೆಟ್ಟಿಲುಗಳ ಪಥ ಹಾಗೂ ನಿಂತು ನೋಡಲು ವೇದಿಕೆಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಮೆಟ್ಟಿಲು ಹತ್ತಿ ಹೋಗಿ ನೋಡಬಹುದಾದ ಹತ್ತು ವೀಕ್ಷಣಾಗೋಪುರಗಳಿವೆ. ಬೆಟ್ಟದಲ್ಲಿ ಸುರಂಗ ಕೊರೆದು ಲಿಫ್ಟ್ ಅಳವಡಿಸಿ, ಮೆಟ್ಟಿಲುಗಳನ್ನು ಮಾಡಿದ್ದು, ಪಕ್ಕದಲ್ಲಿ ಕಬ್ಬಿಣದ ಪೈಪುಗಳ ಆಧಾರವಿದೆ.

ಪ್ರತಿ ಸೆಕೆಂಡಿಗೆ 20,000 ಲೀಟರ್‌ಗಳಷ್ಟು ನೀರು ಧುಮ್ಮಿಕ್ಕುವುದರಿಂದ ಸಂಪೂರ್ಣ ಪರ್ವತವೇ ನಡುಗುತ್ತಿರುವಂತೆ ಭಾಸವಾಗುತ್ತದೆ. ಈ ನೈಸರ್ಗಿಕ ಜಲಪಾತದ ಪ್ರದೇಶ ವಿಶ್ವ ಪರಂಪರೆಯ ತಾಣವಾಗಿದೆ.

ಲಿಫ್ಟ್ ಮೂಲಕ ಮೇಲೆ ಏರಿದ ಮೇಲೆ ಕಡಿದಾದ ಏರು ದಾರಿಯಿದೆ. ಸುರಂಗಗಳ ಹಾದಿಯಲ್ಲಿ ಮೆಟ್ಟಿಲುಗಳನ್ನು ಏರಿ ಸಾಗುವಾಗ ನಡುನಡುವೆ ಜಲಪಾತವನ್ನು ನೋಡಲು ಅಟ್ಟಣಿಗೆಗಳಿವೆ. ಸಿಂಪಡಿಕೆಯಾದ ನೀರಿನಿಂದ ನಡೆಯುವ ಹಾದಿ ಜಾರಿಕೆಯಾಗಿರುತ್ತದೆ. ಮೇಲೆ ಹತ್ತಿ ಹೋಗಿ ಸಮೀಪದಿಂದ ನೋಡುವುದು ರೋಮಾಂಚನಕಾರಿಯಾದ ಅನುಭವ. ಸಾವಿರಾರು ವರ್ಷಗಳಿಂದ ಹರಿದು ಬರುತ್ತಿರುವ ನೀರು ಬಂಡೆಗಲ್ಲುಗಳನ್ನು ಸವೆಸಿ ಕಲಾಕೃತಿಗಳಂತೆ ಮಾಡಿದೆ.

ಟ್ರುಮ್ಮೆಲ್‌ಬ್ಯಾಕ್ ಜಲಪಾತದ ಬಳಿಗೆ ಹೋಗುವ ಹಾದಿಯೂ ಸ್ವರ್ಗದ ಹಾದಿಯಂತಿದೆ. ಹೂಮಳೆಯಂತೆ ಮಂಜು ಬೀಳುತ್ತಾ ಹಸಿರ ಹಾದಿಯಲ್ಲಿ ನಡೆದು ಸಾಗುತ್ತಿದ್ದರೆ ಸ್ವರ್ಗದ ಹಾದಿಯಲ್ಲಿ ನಡೆಯುವಂತಿರುತ್ತದೆ.

ಬಾಲಿವುಡ್ ನಟ, ನಿರ್ದೇಶಕ ರಾಜ್‌ಕಪೂರ್ ನ ‘ಸಂಗಮ್’ ಜಲಪಾತ ನೋಡಲು ಹೋಗುವ ಮೆಟ್ಟಿಲ ಹಾದಿ ಹಿಂದಿ ಚಲನಚಿತ್ರವನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಅದರಲ್ಲಿ ಒಂದು ದೃಶ್ಯವಿದೆ - ಯೂರೋಪ್ ಪ್ರವಾಸದಲ್ಲಿದ್ದ ರಾಜ್‌ಕಪೂರ್ ಮತ್ತು ವೈಜಯಂತಿಮಾಲಾರನ್ನು ಅವರ ಸ್ನೇಹಿತ ರಾಜೇಂದ್ರಕುಮಾರ್ ಟ್ರುಮ್ಮೆಲ್‌ಬ್ಯಾಕ್ ಜಲಪಾತದಲ್ಲಿ ಭೇಟಿ ಮಾಡುತ್ತಾನೆ. ‘ಗೋಪಾಲ್ (ರಾಜೇಂದ್ರಕುಮಾರ್) ನೀನು ಬಂದದ್ದರಿಂದ ಈ ಹಿಮದ ಬಂಡೆಗಳೂ ಬೆಚ್ಚಗಾದವು’ ಎಂದು ರಾಜ್‌ಕಪೂರ್ ಉದ್ಗರಿಸುತ್ತಾನೆ. ಈ ಚಲನಚಿತ್ರದಲ್ಲಿನ ಪಾತ್ರಧಾರಿಗಳ ಮನಸ್ಸಿನ ತುಮುಲಗಳನ್ನು, ಭೋರ್ಗರೆತವನ್ನು, ಭಾವನೆಗಳ ಜಲಪಾತವನ್ನು, ಪರ್ವತದೊಳಗಿನ ಜಲಪಾತ ಪ್ರತಿನಿಧಿಸುವಂತೆ ರಾಜ್‌ಕಪೂರ್ ಕೆಲವು ದೃಶ್ಯಗಳನ್ನು ಇಲ್ಲಿ ಚಿತ್ರೀಕರಿಸಿದ್ದಾರೆ. ಚಿತ್ರಗಳು: ಲೇಖಕರವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !