ಕುರ್ದಿಶ್‌ ಪಡೆಗೆ ತೊಂದರೆಯಾದರೆ ಟರ್ಕಿ ಧ್ವಂಸ: ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ

7

ಕುರ್ದಿಶ್‌ ಪಡೆಗೆ ತೊಂದರೆಯಾದರೆ ಟರ್ಕಿ ಧ್ವಂಸ: ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ

Published:
Updated:
Prajavani

ವಾಷಿಂಗ್ಟನ್‌: ‘ಸಿರಿಯಾದಲ್ಲಿರುವ ಅಮೆರಿಕ ಬೆಂಬಲಿತ ಕುರ್ದಿಶ್ ಪಡೆಗಳ ಮೇಲೆ ದಾಳಿ ನಡೆಸಿದರೆ, ಟರ್ಕಿಯನ್ನು ಆರ್ಥಿಕವಾಗಿ ಧ್ವಂಸಗಗೊಳಿಸಲಾಗುವುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನೇರ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಭಯೋತ್ಪಾದಕರ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಟರ್ಕಿ ತಿರುಗೇಟು ನೀಡಿದೆ.

ಸಿರಿಯಾದಲ್ಲಿ ಬೀಡುಬಿಟ್ಟಿದ್ದ 2 ಸಾವಿರ ಅಮೆರಿಕ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕಳೆದ ತಿಂಗಳು ಘೋಷಿಸಿದ್ದರು. ಕಳೆದ ವಾರದಿಂದ ಈ ಪ್ರಕ್ರಿಯೆ ಆರಂಭಗೊಂಡಿದೆ.

ಇದರ ಬೆನ್ನಲ್ಲೇ ಕುರ್ದಿಶ್‌ ಪಡೆಗಳನ್ನು ಗುರಿಯಾಗಿರಿಸಿಕೊಂಡು, ಟರ್ಕಿ ಸೇನೆಯು ದಾಳಿ ನಡೆಸಲು ಆರಂಭಿಸಿದೆ. ಈ ಬೆಳವಣಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಮತ್ತಷ್ಟು ಕೆರಳಿಸಿದೆ. ಆದರೆ ತನ್ನ ನಿಲುವನ್ನು ಸಮರ್ಥಿಸಿಕೊಂಡಿರುವ ಟರ್ಕಿ, ಕುರ್ದಿಶ್‌ ಪಡೆಗಳು ಕೂಡ ಭಯೋತ್ಪಾದಕ ಸಂಘಟನೆಯಾಗಿದ್ದು, ದೇಶದ ಒಳಗಿನ ದಂಗೆಕೋರರು ಎಂದು ತಿಳಿಸಿದೆ.

ಟ್ರಂಪ್‌ ಟ್ವೀಟ್‌ನಲ್ಲೇನಿದೆ ?

‘ಕುರ್ದಿಶ್‌ ಪಡೆಗಳ ಮೇಲೆ ದಾಳಿ ನಡೆಸಿದರೆ, ಟರ್ಕಿಯನ್ನು ಆರ್ಥಿಕವಾಗಿ ಧ್ವಂಸಗೊಳಿಸಲಾಗುವುದು. ಅಗತ್ಯಬಿದ್ದರೆ, 20 ಕಿ.ಮೀ. ಸುರಕ್ಷಿತ ವಲಯವನ್ನು ನಿರ್ಮಿಸಲಾಗುವುದು. ಅಂತೆಯೇ ಕುರ್ದಿಶ್‌ ಪಡೆಯೂ ಟರ್ಕಿಯನ್ನು ಪ್ರಚೋದಿಸಲು ಬಯಸುವುದಿಲ್ಲ’ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ ಮೂಲಕ ಎಚ್ಚರಿಕೆ ಸಂದೇಶ ಕಳುಹಿಸಿದ್ದಾರೆ.

‘ಸಿರಿಯಾದಿಂದ ಸೇನೆ ಹಿಂಪಡೆಯುವ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ರಕ್ರಿಯೆ ಆರಂಭಗೊಂಡಿದೆ. ಇಸ್ಲಾಮಿಕ್‌ ಸ್ಟೇಟ್‌ ಉಗ್ರಗಾಮಿ ಸಂಘಟನೆ ಅಸ್ತಿತ್ವ ಸಣ್ಣ ಪ್ರಮಾಣದಲ್ಲಿ ಉಳಿದಿದ್ದು, ಅಗತ್ಯಬಿದ್ದರೆ ಸನಿಹದ ಪ್ರದೇಶಗಳಿಂದ ಮತ್ತಷ್ಟು ದಾಳಿ ನಡೆಸಲಾಗುವುದು’ ಎಂದು ಟ್ರಂಪ್‌ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದರು.

ಟರ್ಕಿ ತಿರುಗೇಟು: ಇದರ ಬೆನ್ನಲ್ಲೇ ಟ್ರಂಪ್‌ ಟ್ವೀಟ್‌ಗೆ ತಿರುಗೇಟು ನೀಡಿರುವ ಟರ್ಕಿಯ ಅಧ್ಯಕ್ಷ ತಯೀಪ್‌ ಎರ್ಡೋಗನ್‌  ವಕ್ತಾರ ಇಬ್ರಾಹಿಂ ಕಲಿನ್‌, ‘ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಹಾಗೂ ಕುರ್ದಿಶ್‌ ಪೀಪಲ್ಸ್‌ ಪ್ರೊಟೆಕ್ಷನ್‌ ಯುನಿಟ್ಸ್‌ (ವೈಪಿಜಿ) ನಡುವೆ ಯಾವುದೇ ವ್ಯತ್ಯಾಸವಿಲ್ಲ. ಮಾನ್ಯ ಡೊನಾಲ್ಡ್‌ ಟ್ರಂಪ್‌ ಅವರೇ, ಭಯೋತ್ಪಾದಕರು ಎಂದಿಗೂ ನಿಮ್ಮ ಸಹಭಾಗಿಗಳು ಆಗಲು ಸಾಧ್ಯವಿಲ್ಲ. ದ್ವಿಪಕ್ಷೀಯ ಬಾಂಧವ್ಯವನ್ನು ಅಮೆರಿಕ ಗೌರವಿಸುತ್ತದೆ ಎಂದು ಟರ್ಕಿ ಭಾವಿಸುತ್ತದೆ, ಭಯೋತ್ಪಾದಕರ ಕಾರಣಕ್ಕಾಗಿ ಇಂತಹ ಬೆದರಿಕೆ ಒಡ್ಡುವುದು ಸರಿಯಲ್ಲ. ಡಯೆಸ್‌, ಪಿಕೆಕೆ, ಪಿವೈಡಿ ಹಾಗೂ ವೈಪಿಜಿ ಸಂಘಟನೆ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಅವರ ವಿರುದ್ಧ ಹೋರಾಟ ಮುಂದುವರಿಸಲಾಗುತ್ತದೆ’ ಎಂದು ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !