ಗೆಲುವು ಸಾಧಿಸಿದ ಎರ್ಡೊಗನ್‌

7

ಗೆಲುವು ಸಾಧಿಸಿದ ಎರ್ಡೊಗನ್‌

Published:
Updated:
ಟರ್ಕಿಯ ನೂತನ ಅಧ್ಯಕ್ಷರಾಗಿ ಪುನರಾಯ್ಕೆಯಾದ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರು, ಅಂಕಾರದಲ್ಲಿರುವ ತಮ್ಮ ಪಕ್ಷ ಎಕೆಪಿಯ ಕೇಂದ್ರ ಕಚೇರಿಯ ಹೊರಭಾಗದಲ್ಲಿ ಸೋಮವಾರ ಮುಂಜಾನೆ ಕತ್ತಲು ಸರಿಯುವ ಮುನ್ನವೇ ನೆರೆದಿದ್ದ ಬೆಂಬಲಿಗರತ್ತ ಕೈಬೀಸಿದರು –ಪಿಟಿಐ ಚಿತ್ರ

ಇಸ್ತಾಂಬುಲ್: ತೀವ್ರ ಪೈಪೋಟಿ ಇದ್ದ ಟರ್ಕಿ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಸೆಪ್ ತಯ್ಯಿಪ್ ಎರ್ಡೊಗನ್ (64) ಗೆಲುವು ಸಾಧಿಸಿದ್ದಾರೆ. ಈ ಮೂಲಕ, 15 ವರ್ಷಗಳಿಂದ ಈ ಸ್ಥಾನದ ಮೇಲಿದ್ದ ಅವರ ಹಿಡಿತ ಇನ್ನೂ 5 ವರ್ಷಗಳಿಗೆ ಮುಂದುವರಿಯಲಿದೆ. 

ಎರ್ಡೊಗನ್ ಶೇ 52.5 ಹಾಗೂ ಅವರ ಪ್ರತಿಸ್ಪರ್ಧಿ ಮುಹರಂ ಇನ್ಸ್ ಶೇ 30.07 ಮತ ಗಳಿಸಿದ್ದಾರೆ. ಚುನಾವಣಾ ಮಂಡಳಿ (ವೈಎಸ್‌ಕೆ) ಈ ವಾರಾಂತ್ಯದಲ್ಲಿ ಅಧಿಕೃತವಾಗಿ ಫಲಿತಾಂಶ ಘೋಷಿಸಬೇಕಿದೆ. ಆದರೆ ಎರ್ಡೊಗನ್ ಗೆಲುವು ಸಾಧಿಸಿದ್ದಾರೆ ಎಂದು ಮಂಡಳಿ ಅಧ್ಯಕ್ಷ ಸದಿ ಗುವೆನ್ ತಿಳಿಸಿದ್ದಾರೆ. 

ಎರ್ಡೊಗನ್ ಗೆಲುವಿನ ಅಂತರ ವಿಶ್ಲೇಷಕರು ಅಂದಾಜಿಸಿದ್ದಕ್ಕಿಂತ ಭಾರಿ ‍ಪ್ರಮಾಣದಲ್ಲಿ ಹೆಚ್ಚಿದೆ. 

2017ರ ಏಪ್ರಿಲ್‌ನಲ್ಲಿ ಜನಮತ ಸಂಗ್ರಹದ ಮೂಲಕ ಅಂಗೀಕರಿಸಲಾದ ನೂತನ ಸಂವಿಧಾನವನ್ನು ಶೀಘ್ರ ಜಾರಿಗೆ ತರುವುದಾಗಿ ಎರ್ಡೊಗನ್ ತಕ್ಷಣವೇ ಘೋಷಿಸಿದ್ದಾರೆ. ನೂತನ ಸಂವಿಧಾನದ ಅಡಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಇದರಿಂದಾಗಿ ಅವರು ಸರ್ವಾಧಿಕಾರಿ ವರ್ತನೆ ತೋರಬಹುದು ಎಂದು ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ.

ಟರ್ಕಿಯಲ್ಲಿ ಅಧ್ಯಕ್ಷರು ಎರಡು ಅವಧಿಗೆ ಮಾತ್ರ ಆಡಳಿತ ನಡೆಸಬಹುದು. ಆದರೆ ಇದೀಗ ನೂತನ ಸಂವಿಧಾನದ ಅಡಿಯಲ್ಲಿ, ಅಧ್ಯಕ್ಷರಾಗಿ ಎರ್ಡೊಗನ್ ಅವರಿಗೆ ಇದು ಮೊದಲ ಅವಧಿ ಆಗಲಿದೆ.

ಚುನಾವಣೆ ನಡೆಸಿದ ರೀತಿಯನ್ನು ವಿರೋಧ ಪಕ್ಷ ಇದೇ ವೇಳೆ ಪ್ರಶ್ನಿಸಿದೆ.

ಪ್ರಜಾಪ್ರಭುತ್ವದ ಪಾಠ: ಶೇ 88ರಷ್ಟು ಮತದಾನ ಆಗಿರುವುದನ್ನು ಉಲ್ಲೇ ಖಿಸಿದ ಎರ್ಡೊಗನ್, ‘ಟರ್ಕಿ ಇಡೀ ವಿಶ್ವಕ್ಕೇ ಪ್ರಜಾಪ್ರಭುತ್ವದ ಪಾಠ ಕಲಿಸಿದೆ’ ಎಂದಿದ್ದಾರೆ. 

ಇಸ್ತಾಂಬುಲ್‌ನಲ್ಲಿರುವ ಎರ್ಡೊ ಗನ್ ನಿವಾಸ ಹಾಗೂ ಅಂಕಾರದಲ್ಲಿರುವ ಅವರ ಆಡಳಿತಾರೂಢ ಪಕ್ಷ ಎಕೆಪಿ ಕೇಂದ್ರ ಕಚೇರಿ ಹೊರಭಾಗದಲ್ಲಿ ಬೆಂಬಲಿಗರು ವ್ಯಾಪಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

2016ರಲ್ಲಿ ದಂಗೆ ಯತ್ನ ವಿಫಲಗೊಂಡ ಬಳಿಕ ಟರ್ಕಿಯಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಆ ನಂತರದಲ್ಲಿ, ಎರ್ಡೊಗನ್ ನಾಗರಿಕ ಹಕ್ಕುಗಳನ್ನು ಹತ್ತಿಕ್ಕುತ್ತಿದ್ದಾರೆ ಮತ್ತು ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ ಎನ್ನುವುದು ವಿರೋಧಿಗಳ ಆರೋಪ.

 

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !