ಕೆಲಸಕ್ಕಿದ್ದ ಕಂಪನಿ ವಾಹನಗಳನ್ನೇ ಕದ್ದರು.. !

ಸೋಮವಾರ, ಜೂನ್ 24, 2019
29 °C
ತಿಲಕನಗರ ಪೊಲೀಸರ ಕಾರ್ಯಾಚರಣೆ * ‘ಬೌನ್ಸ್‌’ ಟೀಂ ಲೀಡರ್ ಸೇರಿ ಇಬ್ಬರ ಸೆರೆ

ಕೆಲಸಕ್ಕಿದ್ದ ಕಂಪನಿ ವಾಹನಗಳನ್ನೇ ಕದ್ದರು.. !

Published:
Updated:
Prajavani

ಬೆಂಗಳೂರು: ನಗರದಲ್ಲಿ ಮೊಬೈಲ್‌ ಆ್ಯಪ್‌ ಆಧರಿತ ಬಾಡಿಗೆ ಬೈಕ್‌ ಸೇವೆ ಒದಗಿಸುವ ‘ಬೌನ್ಸ್’ ಕಂಪನಿಯ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪದಡಿ, ಅದೇ ಕಂಪನಿಯ ಇಬ್ಬರು ನೌಕರರನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ.

ಶ್ರೀನಿವಾಸ್ ನಗರದ ಧೀರಜ್ ಹಾಗೂ ದರ್ಶನ್ ಅಲಿಯಾಸ್ ಕೀರ್ತಿಪುರುಷೋತ್ತಮ ಬಂಧಿತರು. ಅವರಿಂದ 8 ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಆರೋಪಿ ದರ್ಶನ್‌, ಕಂಪನಿಯ ಟೀಂ ಲೀಡರ್ ಆಗಿದ್ದ. ಆತನ ಅಧೀನದಲ್ಲಿ ಎಕ್ಸಿಕ್ಯೂಟಿವ್ ಆಗಿ ಧೀರಜ್ ಕೆಲಸ ಮಾಡುತ್ತಿದ್ದ. ಕಂಪನಿಯ ವಾಹನಗಳ ನಿರ್ವಹಣೆ ಜವಾಬ್ದಾರಿಯನ್ನು ಆರೋಪಿಗಳಿಗೆ ವಹಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

ಜಿಪಿಎಸ್, ಆ್ಯಪ್ ನಿಷ್ಕ್ರಿಯಗೊಳಿಸಿ ಕೃತ್ಯ: ‘ಮೊಬೈಲ್ ಆ್ಯಪ್ ಮೂಲಕ ಸೇವೆ ಒದಗಿಸುತ್ತಿರುವ ಕಂಪನಿ, ಸುಜುಕಿ ಹಾಗೂ ಹೊಂಡಾ ಕಂಪನಿಯ ದ್ವಿಚಕ್ರ ವಾಹನಗಳಿಗೆ ‘ಬೌನ್ಸ್‌’ ಹೆಸರಿನ ಸ್ಟಿಕರ್‌ ಅಂಟಿಸಿ ಬಳಕೆ ಮಾಡುತ್ತಿದೆ. ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಸಾರ್ವಜನಿಕರಿಗೆ ನೀಡುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಪ್ರತಿ ವಾಹನಕ್ಕೂ ಜಿಪಿಎಸ್ ಸಾಧನ ಅಳವಡಿಸಲಾಗಿದೆ’ ಎಂದು ತಿಳಿಸಿದರು.

‘ಸಾರ್ವಜನಿಕರು ಆ್ಯಪ್ ಮೂಲಕ ವಾಹನ ಬುಕ್‌ ಮಾಡುತ್ತಾರೆ. ನಂತರ, ಮೊಬೈಲ್‌ಗೆ ಬರುವ ಪಿನ್ ಸಂಖ್ಯೆಯನ್ನು ವಾಹನದಲ್ಲಿರುವ ಸಾಧನದಲ್ಲಿ ದಾಖಲಿಸಿ ಬಳಸುತ್ತಾರೆ. ನಗರದ ಯಾವುದೇ ಸ್ಥಳದಲ್ಲಾದರೂ ಈ ವಾಹನ ಪಡೆದು, ಬಳಿಕ ಎಲ್ಲಿಯಾದರೂ ಬಿಟ್ಟು ಹೋಗಬಹುದು’ ಎಂದರು.

‘ಇಂಥ ವಾಹನಗಳ ನಿರ್ವಹಣೆ ಬಗ್ಗೆ ತರಬೇತಿ ಪಡೆದಿದ್ದ ಆರೋಪಿಗಳು, ಜಿಪಿಎಸ್ ಹಾಗೂ ಆ್ಯಪ್ ನಿಷ್ಕ್ರಿಯಗೊಳಿಸಿ ಕೃತ್ಯ ಎಸಗುತ್ತಿದ್ದರು. ಸ್ಟಿಕರ್‌ಗಳನ್ನು ಕಿತ್ತುಹಾಕಿ ಆ ವಾಹನಗಳ ನೋಂದಣಿ ಫಲಕವನ್ನು ಬದಲಾಯಿಸಿ ಮಾರಾಟ ಮಾಡುತ್ತಿದ್ದರು’ ಎಂದು ಹೇಳಿದರು.

ವಾರಕ್ಕೊಂದು ವಾಹನ ಕಳವು: ‘ಆರೋಪಿಗಳು ನಿರ್ವಹಣೆ ಮಾಡುತ್ತಿದ್ದ ವಾಹನಗಳು ಮೇಲಿಂದ ಮೇಲೆ ಕಳುವಾಗುತ್ತಿದ್ದವು. ಆ ಬಗ್ಗೆ ವಿಚಾರಿಸಿದಾಗ, ‘ರಸ್ತೆಯಲ್ಲಿ ನಿಲ್ಲಿಸಿ ಹೋದ ವಾಹನಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದಾರೆ’ ಎಂದು ಆರೋಪಿಗಳು ಕಂಪನಿಯ ಹಿರಿಯ ಅಧಿಕಾರಿಗಳಿಗೆ ಹೇಳುತ್ತಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಆರೋಪಿಗಳ ಹೇಳಿಕೆಯಿಂದ ಅನುಮಾನಗೊಂಡಿದ್ದ ಅಧಿಕಾರಿಗಳು, ವಾಹನ ಕಳವು ಸಂಬಂಧ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು’ ಎಂದು ಹೇಳಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 1

  Frustrated
 • 4

  Angry

Comments:

0 comments

Write the first review for this !