ಯುಜಿಸಿ ನಿಷೇಧ ಇದ್ದರೂ ದೂರಶಿಕ್ಷಣ

ಭಾನುವಾರ, ಮೇ 26, 2019
32 °C
2019–20ನೇ ಸಾಲಿಗೆ ಅರ್ಜಿ ಆಹ್ವಾನಿಸಿದ ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ

ಯುಜಿಸಿ ನಿಷೇಧ ಇದ್ದರೂ ದೂರಶಿಕ್ಷಣ

Published:
Updated:

ಬೆಂಗಳೂರು: ದೂರ ಶಿಕ್ಷಣದ ಮೂಲಕ ಕೃಷಿ ಕೋರ್ಸ್‌ಗಳನ್ನು ನೀಡುವುದಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಿಷೇಧ ವಿಧಿಸಿದ್ದರೂ, ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಅರ್ಜಿ ಆಹ್ವಾನಿಸಿದೆ.

ಕೃಷಿ ವಿಶ್ವವಿದ್ಯಾಲಯವು 2019–20ನೇ ಸಾಲಿಗೆ ಮೂರು ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದ್ದು, ಯುಜಿಸಿ ನಿಷೇಧವನ್ನು ಕಡೆಗಣಿಸಿದೆ.

ಕೃಷಿ ಕೋರ್ಸ್‌ಗಳಿಗೆ ಪ್ರಾಯೋಗಿಕ ಮತ್ತು ಪ್ರಯೋಗಾಲಯದ ಅನುಭವ ಮುಖ್ಯವಾಗಿದೆ. ಇದನ್ನು ತಾಂತ್ರಿಕ ಪದವಿ ಶಿಕ್ಷಣ ಎಂದೇ ಪರಿಗಣಿಸಬೇಕಾಗುತ್ತದೆ. ಹೀಗಾಗಿ ಕೃಷಿ ಮತ್ತು ಮುಕ್ತ ವಿಶ್ವವಿದ್ಯಾಲಯಗಳು ಕೃಷಿ ಕೋರ್ಸ್‌ಗಳಲ್ಲಿ ದೂರ ಶಿಕ್ಷಣ ನೀಡುವುದಕ್ಕೆ ಯುಜಿಸಿ ಇದೇ ಮಾರ್ಚ್‌ನಲ್ಲಿ ನಿಷೇಧ ವಿಧಿಸಿತ್ತು. ಕೃಷಿಯಂತೆ ತಾಂತ್ರಿಕ ಕೋರ್ಸ್‌ಗಳಿಗೆ ಸಹ ಯುಜಿಸಿ ನಿಷೇಧ ವಿಧಿಸಿದೆ.

‘ಇಂತಹ ಕೋರ್ಸ್‌ಗಳಿಂದ ಪ್ರಾಯೋಗಿಕ ಅನುಭವ ಸಿಗುವುದಿಲ್ಲ, ಪ್ರಾಯೋಗಿಕ ಅನುಭವ ಇಲ್ಲದೆ ಇಂತಹ ಕೋರ್ಸ್‌ಗಳಿಗೆ ಬೆಲೆಯೂ ಇಲ್ಲ ಎಂಬ ಕಾರಣಕ್ಕೆ ಈ ನಿಷೇಧ ವಿಧಿಸಲಾಗಿದೆ’ ಎಂದು ಯುಜಿಸಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇಂತಹ ಕೋರ್ಸ್‌ಗಳಿಗೆ ಅನುಮತಿ ಕೊಡದಂತೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ (ಐಸಿಎಆರ್‌) ಮನವಿ ಮಾಡಲು ಸಹ ಯುಜಿಸಿ ನಿರ್ಧರಿಸಿದೆ.

ಬೆಂಗಳೂರು ಕೃಷಿ ವಿ.ವಿಯ ಇಂತಹ ಕೋರ್ಸ್‌ಗಳಿಗೆ ಇದುವರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮುಂದಿನ ಶೈಕ್ಷಣಿಕ ವರ್ಷದ ಕೋರ್ಸ್‌ಗೆ ಸಹ ಬಹಳ ಉತ್ತಮ ಸ್ಪಂದನ ವ್ಯಕ್ತವಾಗಿದೆ.

‘ನಮ್ಮ ವಿಶ್ವವಿದ್ಯಾಲಯ ನೀಡುವ ದೂರ ಶಿಕ್ಷಣ ಸರ್ಟಿಫಿಕೇಟ್‌ ಕೋರ್ಸ್‌ ಅಷ್ಟೇ ಅಲ್ಲ, ನಾವು ವಾರಾಂತ್ಯಗಳಲ್ಲಿ ತರಗತಿಗಳನ್ನೂ ನಡೆಸುತ್ತೇವೆ. ಇತರ ದೂರ ಶಿಕ್ಷಣ ನಿರ್ದೇಶನಾಲಯಗಳು ಮತ್ತು ಮುಕ್ತ ವಿಶ್ವವಿದ್ಯಾಲಯಗಳಂತೆ ನಾವು ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿಲ್ಲ. ಇಲ್ಲಿ ಕೋರ್ಸ್‌ಗಳು ನಮ್ಮ ನಿಯಂತ್ರಣದಲ್ಲೇ ಇದ್ದು, ಗುಣಮಟ್ಟದೊಂದಿಗೆ ಎಂದೂ ರಾಜಿ ಮಾಡಿಕೊಂಡಿಲ್ಲ’ ಎಂದು ಕೃಷಿ ವಿಜ್ಞಾನ ವಿ.ವಿ ಕುಲಪತಿ ಡಾ.ರಾಜೇಂದ್ರ ಪ್ರಸಾದ್‌ ಸಮರ್ಥಿಸಿಕೊಂಡರು.

‘ನಮ್ಮ ವಿ.ವಿಯ ‘ಸಮಗ್ರ ಕೃಷಿ’ ಎಂಬ ಕೋರ್ಸ್‌ಗೆ ಬಹಳ ಬೇಡಿಕೆ ಇದೆ. ಅಪಾರ ಕೃಷಿ ಅನುಭವ ನೀಡುವ ಈ ಕೋರ್ಸ್‌ ಮಾಡಲು ವಾರದ ದಿನಗಳಲ್ಲಿ ಬಹಳ ತುರ್ತು ಕಾರ್ಯಬಾಹುಳ್ಯ ಹೊಂದಿರುವವರೂ ಬಯಸುತ್ತಾರೆ. ನಾವು ಪ್ರಾಯೋಗಿಕ ತರಗತಿಗಳನ್ನೂ ನಡೆಸಿಕೊಡುತ್ತಿದ್ದೇವೆ‘ ಎಂದು ವಿ.ವಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ನಾವು ಐಸಿಎಆರ್‌ ಮುಂದೆ ಈ ವಿಷಯ ಪ್ರಸ್ತಾಪಿಸಿ ಮನವರಿಕೆ ಮಾಡಲಿದ್ದೇವೆ. ಅನುಮತಿ ನೀಡಲು ಕೋರಿ ಯುಜಿಸಿ ಮುಂದೆಯೂ ಪಠ್ಯಕ್ರಮ ಹಾಜರುಪಡಿಸಲಿದ್ದೇವೆ. ಅಭ್ಯರ್ಥಿಗಳು ಈ ಕೋರ್ಸ್‌ನಿಂದ ವಂಚಿತರಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಡಾ.ರಾಜೇಂದ್ರ ಪ್ರಸಾದ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !