ಸೋಮವಾರ, ಸೆಪ್ಟೆಂಬರ್ 27, 2021
23 °C

ಅಮೆರಿಕ: ಎಚ್‌1–ಬಿ ವೀಸಾ ಅರ್ಜಿ ಶುಲ್ಕ ಏರಿಕೆಗೆ ಪ್ರಸ್ತಾವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಅಮೆರಿಕದಲ್ಲಿ ಉದ್ಯೋಗ ಮಾಡಲು ಅವಕಾಶ ಕಲ್ಪಿಸುವ ಎಚ್‌1–ಬಿ ವೀಸಾ ಅರ್ಜಿ ಶುಲ್ಕ ಏರಿಕೆ ಮಾಡಲು ಟ್ರಂಪ್ ಆಡಳಿತ ಮುಂದಾಗಿದೆ. 

ಕಾರ್ಮಿಕ ಇಲಾಖೆ ಈ ಕುರಿತು ಪ್ರಸ್ತಾವನೆ ಇರಿಸಿದೆ. ಎಚ್‌1–ಬಿ ವೀಸಾ ಅರ್ಜಿದಾರರಲ್ಲಿ ಭಾರತೀಯ ಐಟಿ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಒಂದು ವೇಳೆ ಪ್ರಸ್ತಾವ ಜಾರಿಗೆ ಬಂದರೆ ಈ ಕಂಪನಿಗಳಿಗೆ ಆರ್ಥಿಕ ಹೊರೆಯಾಗುವ ಸಾಧ್ಯತೆ ಇದೆ.

ತಂತ್ರಜ್ಞಾನ ಸಂಬಂಧಿ ಚಟುವಟಿಕೆಗಳಲ್ಲಿ ಅಮೆರಿಕದ ಯುವಜನತೆಗೆ ತರಬೇತಿ ನೀಡುವ ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಉದ್ದೇಶದಿಂದ ಶುಲ್ಕ ಏರಿಕೆಗೆ ಚಿಂತನೆ ನಡೆಸಲಾಗಿದೆ ಎಂದು ಕಾರ್ಮಿಕ ಕಾರ್ಯದರ್ಶಿ ಅಲೆಕ್ಸಾಂಡರ್ ಅಕೊಸ್ಟ ತಿಳಿಸಿದ್ದಾರೆ. 

ಆದರೆ ಎಷ್ಟು ಶುಲ್ಕ ಏರಿಕೆ ಮಾಡಲಾಗುತ್ತದೆ ಮತ್ತು ಯಾವ ವರ್ಗದವರಿಗೆ ಇದು ಅನ್ವಯವಾಗುತ್ತದೆ ಎಂಬ ಮಾಹಿತಿಯನ್ನು ಅವರು ನೀಡಿಲ್ಲ.  

ಅಮೆರಿಕದ ಕಂಪನಿಗಳು, ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಹೊಂದಿರುವ ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಎಚ್‌1–ಬಿ ವೀಸಾ ಅವಕಾಶ ಒದಗಿಸುತ್ತದೆ. ಅಮೆರಿಕದ ತಂತ್ರಜ್ಞಾನ ಕಂಪನಿಗಳು ಹೆಚ್ಚಾಗಿ ಭಾರತ ಮತ್ತು ಚೀನಾದಿಂದ ಐಟಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತವೆ.  

ಉದ್ಯೋಗ ಕ್ಷೇತ್ರದಲ್ಲಿ ಸ್ಪರ್ಧೆ ನೀಡುವ ವಿದೇಶಿಗರಿಂದ ಅಮೆರಿಕದ ಉದ್ಯೋಗಿಗಳಿಗೆ ಸಮಸ್ಯೆ ಎದುರಾಗುತ್ತದೆ ಎನ್ನುವುದು ಟ್ರಂಪ್ ಆಡಳಿತದ ವಾದ. ಈ ಕಾರಣದಿಂದಾಗಿ ಎಚ್‌1–ಬಿ ವೀಸಾ ನಿಯಮಾವಳಿಗಳನ್ನು ಈಗಾಗಲೇ ಕಠಿಣಗೊಳಿಸಲಾಗಿದೆ. ‌

ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಅಮೆರಿಕದ ಉದ್ಯೋಗಿಗಳ ಹಿತಾಸಕ್ತಿ ರಕ್ಷಿಸಲು ಕಾರ್ಮಿಕ ಇಲಾಖೆ, ಎಚ್‌1–ಬಿ ವೀಸಾ ಅರ್ಜಿ ಮಾದರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ ಎಂದು ಅಕೊಸ್ಟ ತಿಳಿಸಿದ್ದಾರೆ.

* ನಮ್ಮ ಪ್ರಜೆಗಳಿಗೆ ಮೊದಲ ಆದ್ಯತೆ ನೀಡುವ ಮೂಲಕ ಅಮೆರಿಕದ ಉದ್ಯೋಗಿಗಳನ್ನು ರಕ್ಷಿಸೋಣ

- ಪೌಲ್ ಗೊಸರ್, ಸಂಸದ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು