ಶುಕ್ರವಾರ, ಜೂನ್ 25, 2021
21 °C

ಒಂದು ಕೆಲಸ ಮಾಡಿ...

ಪ್ರಕಾಶ್ ಶೆಟ್ಟಿ Updated:

ಅಕ್ಷರ ಗಾತ್ರ : | |

ಅದೊಂದು ಸರ್ಕಾರಿ ಕಚೇರಿ. ನಿದ್ದೆಗೆ ಶರಣಾಗಿದ್ದ ಮೇಡಮ್ಮನ್ನು ಎಬ್ಬಿಸಿ, ‘ಖಾತ ಆಗಬೇಕಾಗಿತ್ತು’ ಎಂದೆ. ಮಹಿಳೆ ಸುತ್ತ ನೋಡಿ, ಯಾವುದೋ ಒಂದು ಟೇಬಲ್ ತೋರಿಸಿ, ‘ಅವರು ಇನ್ನೂ ಬಂದಿಲ್ಲ’ ಅಂದರು. ನಾನು ‘ಕಾಯ್ತೀನಿ’ ಅಂದೆ. ಅದಕ್ಕೆ ಮೇಡಮ್ಮು ‘ಇಲ್ಲ… ನೀವೊಂದು ಕೆಲಸ ಮಾಡಿ’ ಅಂದರು. ನಾನು ಇಲ್ಲಿಗೆ ಕೆಲಸ ಮಾಡಿಸುವುದಕ್ಕೆ ಬಂದಿದ್ದು. ಆದರೆ ಈ ಮೇಡಮ್ಮಿಗೆ ನನ್ನಿಂದಲೇ ಕೆಲಸ ಮಾಡಿಸುವ ಯೋಚನೆ ಬಂದಿದೆಯಲ್ಲಪ್ಪಾ! ‘ಏನ್ ಮೇಡಂ?’ ಅಂದೆ. ‘ನೀವು ನಾಳೆ ಬನ್ನಿ. ಇವತ್ತು ಅವರು ಬರೋದು ಡೌಟು’ ಎಂಬ ಪುಕ್ಕಟೆ ಸಲಹೆ ಸಿಕ್ಕಿತು.

ಹೀಗೆ ಪುಕ್ಕಟೆ ‘ಕೆಲಸ’ ಮಾಡಿಸುವವರು ನಮ್ಮಲ್ಲಿ ಅನೇಕರಿದ್ದಾರೆ. ತಮಾಷೆಯೆಂದರೆ ‘ನೀವೊಂದು ಕೆಲಸ ಮಾಡಿ’ ಅಥವಾ ‘ಒಂದು ಕೆಲಸ ಮಾಡ್ತೀರಾ...’ ಎಂದು ಯಾರಾದರೂ ನಮ್ಮಲ್ಲಿ ಹೇಳಿದರೆ ಅದೊಂದು ಕೆಲಸವೇ ಆಗಿರುವುದಿಲ್ಲ. ಸುಮ್ಮನೆ ಯಾರೋ ಸೃಷ್ಟಿಸಿದ ಮಾತು. ‘ನೀವೊಂದು ಕೆಲಸ ಮಾಡಿ… 45ನೇ ನಂಬರ್ ಬಸ್ ಹಿಡಿದು ಹೋಗಿ, ಕೊನೆಯ ಸ್ಟಾಪ್‌ನಲ್ಲಿ ಇಳಿದರೆ ಅಲ್ಲೇ ಸಿಗುತ್ತೆ ಅವರ ಆಫೀಸು’ ಎಂದು ಯಾರಾದರೂ ಹೇಳಿದರೆ ಅದೊಂದು ದೊಡ್ಡ ಕೆಲಸವೆಂದು ನಾವು ತಿಳಿದುಕೊಳ್ಳಬೇಕೇ?! ಇಂತಹ ಪುಕ್ಕಟೆ ಸಲಹೆಗಳಿಗೆ ‘ಒಂದು ಕೆಲಸ ಮಾಡಿ’ ಅನ್ನುವ ಮಾತು ಅದ್ಯಾಕೆ ಚಾಲ್ತಿಗೆ ಬಂತೋ!

ಓದುಗರೇ, ನೀವೊಂದು ಕೆಲಸ ಮಾಡಿ… ಬೇರೆ ಯಾವುದೇ ಕೆಲಸವಿಲ್ಲದಿದ್ದರೆ ಇಲ್ಲಿ ಕೊಟ್ಟಿರುವ ಅಂತಹ ಅರ್ಥವೇ ಇಲ್ಲದ ಪದ ಪ್ರಯೋಗಗಳನ್ನು ಓದಿ ಜೀರ್ಣಿಸಿಕೊಳ್ಳಿ.

ಬೆಳ್ಳಂಬೆಳಿಗ್ಗೆ ‘ಗುಡ್ ಮಾರ್ನಿಂಗ್’ನಿಂದ ಆರಂಭವಾಗುತ್ತದೆ ಈ ಅರ್ಥವಿಲ್ಲದ ಮಾತಿನ ಭಂಡಾರ. ಬೆಳಿಗ್ಗೆ ಪತ್ರಿಕೆಗಳಲ್ಲಿ ಕಚ್ಚಾಟ, ಭೀಕರ ಕೊಲೆಗಳು, ಆತ್ಮಹತ್ಯೆಗಳು, ಅಪಘಾತಗಳು, ಅತ್ಯಾಚಾರಗಳ ಸುದ್ದಿಗಳನ್ನು ಓದಿದ ಮೇಲೆ ಯಾರಾದರೂ ‘ಗುಡ್ ಮಾರ್ನಿಂಗ್’ ಅಂದರೆ ಹೇಗಾಗುತ್ತೆ ಹೇಳಿ! ಇದು ‘ಗುಡ್ ಮಾರ್ನಿಂಗ್’ ಹೇಳುವವರಿಗೂ ಗೊತ್ತಿದೆಯಾದರೂ ಅದೊಂದು ಅರ್ಥವಿಲ್ಲದ ರೂಢಿಯಾಗಿ ಹೋಗಿದೆ! ಈಗ ವಾಟ್ಸ್‌ ಆ್ಯಪ್‌ನಲ್ಲಂತೂ ಗುಡ್ ಮಾರ್ನಿಂಗ್‌ಗಳ ಮಳೆ ದೊಡ್ದ ರಗಳೆಯಾಗಿಬಿಟ್ಟಿದೆ.

ಡೈನಿಂಗ್ ಟೇಬಲ್‌ನಲ್ಲಿ ಕುಳಿತು ತಿನ್ನುತ್ತಿರುವ ಮಕ್ಕಳು ಎಲ್ಲಾದರೂ ಕೀಟಲೆ ಶುರು ಮಾಡಿದರೆ ಅಥವಾ ಗಂಡ ಮಹಾಶಯ ಪದಾರ್ಥ ‘ಲೈಕ್’ ಮಾಡದೆ ‘ಬ್ಯಾಡ್ ಕಮೆಂಟ್’ ಕೊಟ್ಟರೆ ಮನೆಯೊಡತಿಯಿಂದ ಉದುರುತ್ತದೆ, ‘ಸುಮ್ಮನೆ ಬಾಯ್ಮುಚ್ಕೊಂಡು ತಿನ್ನಿ!’ ಎಂದು. ಎಲ್ಲಾದ್ರೂ ಉಂಟೇ? ಬಾಯಿ ಮುಚ್ಚಿಕೊಂಡು ತಿನ್ನುವುದಾದರೂ ಹೇಗೆ?

‘ಒಂದ್ನಿಮಿಷ… ಟೀ ಕುಡಿದು ಹೋಗಿ’ ಅನ್ನುವ ಗೃಹಿಣಿಗೆ ನಿಜವಾಗಲೂ ಒಂದ್ನಿಮಿಷದಲ್ಲಿ ಟೀ ಮಾಡುವುದು ಸಾಧ್ಯವೇ? ವಿಶೇಷವೆಂದರೆ ಈ ‘ಸುಳ್ಳು’ ಆ ಗೃಹಿಣಿಗೂ ಗೊತ್ತಿರುತ್ತದೆ, ಅತಿಥಿಗಳಿಗೂ ಗೊತ್ತಿರುತ್ತದೆ.

ಕುಡಿದೋ ಕುಡಿಯದೆಯೋ ಗಂಡ ಪ್ರಚಂಡನಿಗೆ ಕೋಪ ನೆತ್ತಿಗೇರಿದರೆ ಆತನ ಬಾಯಿಯಿಂದ ಮೊದಲು ಉದುರುವ ಮಾತು ‘ಹಲ್ಲುದುರಿಸಿಬಿಡ್ತೀನಿ, ಹುಷಾರ್!’ ಅಥವಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘32 ಹಲ್ಲುಗಳನ್ನುದುರಿಸಿಬಿಡ್ತೀನಿ!’ ಹಾಗೇ ಹೇಳುವಾಗ ತನಗದು ಸುತರಾಂ ಸಾಧ್ಯವಿಲ್ಲವೆಂದು ಚೆನ್ನಾಗಿ ಗೊತ್ತಿರುತ್ತದೆ. ಆದರೂ ಬೈಯುವಾಗ ಒಂದು ‘ಸ್ಟೈಲು’ ಬೇಕಲ್ಲ!

ಯಾರೋ, ಎಲ್ಲೋ ಕೇಳಿದ್ದನ್ನು ಅದರ ಅರ್ಥವೇ ಗೊತ್ತಿಲ್ಲದೆ ಪುನರುಚ್ಚರಿಸುವುದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಪೊಲೀಸರ ಬಾಯಿಯಿಂದ ಬರುವ ಪದಪುಂಜಗಳು! ಅತಿ ಮುಖ್ಯವಾಗಿ ಅವರು ಹೇಳುವ ‘ಹಲ್ಕಾ ನನ್ಮಗನೇ!’ ಎಂಬ ಮಾತು. ಸಿಕ್ಕಿಬಿದ್ದ ಕಳ್ಳ ಅವರ ಮಗನೇ? ಇನ್ನೂ ಮದುವೆಯಾಗದ ಪೊಲೀಸ್ ಕೂಡಾ ‘ನನ್ಮಗನೇ…’ ಎಂದು ಆರ್ಭಟಿಸುವುದಕ್ಕೆ ಹಿಂಜರಿಯುವುದಿಲ್ಲ.

‘ಟ್ರೈ ಮಾಡ್ತೀನಿ’ ಅನ್ನುವ ಪದಕ್ಕೂ ಯಾವ ಅರ್ಥವೂ ಇಲ್ಲದಂತಾಗಿದೆ. ನೀವು ಟೈಲರ್ ಬಳಿ ಹೋಗಿ, ‘ಎರಡು ದಿವಸಗಳಲ್ಲಿ ಹೊಲಿದುಕೊಡಿ’ ಅಂದರೆ ಆತ ನಿಮ್ಮ ಒತ್ತಾಯಕ್ಕೆ ‘ಟ್ರೈ ಮಾಡ್ತೀನಿ’ ಎಂದು ಖಂಡಿತ ಹೇಳುತ್ತಾನೆ. ಪ್ಲಂಬಿಂಗ್ ರಿಪೇರಿಯವನನ್ನು ಕರೆದರೆ ಆತ ‘ನಾಳೆ ಬರೋಕೆ ಟ್ರೈ ಮಾಡ್ತೀನಿ’ ಅಂದುಬಿಟ್ಟರೆ, ಆತ ನಿಮ್ಮತ್ತ ಮುಖ ಹಾಕುವುದಕ್ಕೆ ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದೇ ಅರ್ಥ! ‘ನೋಡೋಣ’ ಅನ್ನುವವರು ಕೂಡ ಟ್ರೈ ಮಾಡುವ ಗುಂಪಿನವರೇ.

ಡಾಕ್ಟರ್‌ಗಳನ್ನೇ ತೆಗೆದುಕೊಳ್ಳಿ (ತೆಗೆದುಕೊಳ್ಳುವುದೆಂದರೆ ಏನು ಎಂದು ಕೇಳಬೇಡಿ!), ರೋಗಿ ಜಾಸ್ತಿ ದಿವಸ ಬದುಕುವುದಿಲ್ಲ ಎಂದು ಪಕ್ಕಾ ಗೊತ್ತಿದ್ದರೂ ಡಾಕ್ಟರ್‌ಗಳು ‘ಡೋಂಟ್ ವರಿ. ಏನೂ ಆಗಲ್ಲ’ ಅನ್ನುವುದಿಲ್ಲವೇ? ಹಾಗೆಂದು ರೋಗಿ ಸಾವನ್ನಪ್ಪಿದರೆ ಈ ‘ಡೋಂಟ್ ವರಿ’ಯನ್ನು ಸಂಬಂಧಿಕರು ಯಾರಾದರೂ ಗಂಭೀರವಾಗಿ ತೆಗೆದುಕೊಳ್ಳುತಾರೆಯೇ? ಖಂಡಿತ ಇಲ್ಲ.

‘ಭಾಷಣಕೋರ’ರನ್ನು ಇಲ್ಲಿ ನೆನಪಿಸದೆ ಇರುವ ಹಾಗಿಲ್ಲ. ‘ಎರಡೇ ಎರಡು ಮಾತುಗಳನ್ನಾಡುತ್ತೇನೆ…’ ಎಂದು ಶುರು ಮಾಡಿ ಕೊರೆತ ಅರ್ಧಗಂಟೆಗೇರಿಸಿ, ನಡುವೆ ‘ನನ್ನಈ ಎರಡು ಮಾತುಗಳನ್ನು ನಿಲ್ಲಿಸುತ್ತೇನೆ’ ಎಂದು ಹೇಳಿ, ಮತ್ತೆ ಅರ್ಧ ಗಂಟೆ ಮುಂದುವರಿಸುತ್ತಾರೆ. ಅವರ ‘ಎರಡು ಮಾತುಗಳನ್ನು’ ನಾವು ಹಾಗೇ ಸುಮ್ಮನೆ ಮರೆತುಬಿಡಬೇಕಷ್ಟೇ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು