‘ಮತ ಗಣಿತ’ದ ಗುಣಿತ; ನಾಯಕರ ನಿವಾಂತ..!

ಶನಿವಾರ, ಮೇ 25, 2019
25 °C
ಮೊಮ್ಮಕ್ಕಳ ಜತೆ ಆಟ, ಪೂಜೆಯಲ್ಲಿ ತಲ್ಲೀನ; ಅಭ್ಯರ್ಥಿಗಳು, ಮುಖಂಡರಲ್ಲಿ ಗೆಲುವಿನ ವಿಶ್ವಾಸ...

‘ಮತ ಗಣಿತ’ದ ಗುಣಿತ; ನಾಯಕರ ನಿವಾಂತ..!

Published:
Updated:
Prajavani

ವಿಜಯಪುರ: ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮಂಗಳವಾರ ಮುಸ್ಸಂಜೆ ಮುಗಿದ ಬೆನ್ನಿಗೆ; ಚುರುಕುಗೊಂಡ ‘ಮತ ಗಣಿತ’ದ ಗುಣಿತ ಬುಧವಾರವೂ ಮುಂದುವರೆಯಿತು.

ಅಭ್ಯರ್ಥಿಗಳು, ಬೆಂಬಲಿಗರು, ಕಾರ್ಯಕರ್ತರು, ಮುಖಂಡರು ಸಹ ಯಾವ್ಯಾವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಮಗೆ ಯಾವ ರೀತಿ ಮತದಾನ ನಡೆದಿದೆ ಎಂಬ ಸಂಕಲನ, ವ್ಯವಕಲನದಲ್ಲಿ ಮಗ್ನರಾಗಿರುವ ಚಿತ್ರಣವೇ ಎಲ್ಲೆಡೆ ಗೋಚರಿಸಿತು.

ಗ್ರಾಮೀಣ ಪ್ರದೇಶದಲ್ಲೂ ಈ ಚಿತ್ರಣ ಕಂಡುಬಂದಿತು. ನಮ್ಮೂರ ಮತಗಟ್ಟೆಯಲ್ಲಿ ನಮಗೆ ಎಷ್ಟು ಮತ ಬಂದಿವೆ. ಎದುರಾಳಿ ಪಾಳೆಯಕ್ಕೆ ಎಷ್ಟು ಮತ ಹೋಗಿವೆ ಎಂಬ ಲೆಕ್ಕಾಚಾರದ ಚಿತ್ರಣವನ್ನು ಮುಖಂಡರ ಜತೆ ಹಂಚಿಕೊಂಡಿದ್ದು ವಿಶೇಷವಾಗಿತ್ತು.

ಇಪ್ಪತ್ತೈದಕ್ಕೂ ಹೆಚ್ಚು ದಿನ ಚಟುವಟಿಕೆಯ ತಾಣವಾಗಿದ್ದ ಬಿಜೆಪಿ ಚುನಾವಣಾ ಕಚೇರಿ, ಜೆಡಿಎಸ್ ಚುನಾವಣಾ ಕಚೇರಿಗಳು ಬುಧವಾರ ಜನರಿಲ್ಲದೆ ಬಿಕೋ ಎನ್ನುವಂತಿದ್ದವು. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಕಚೇರಿಗಳ ಚಿತ್ರಣವೂ ಇದಕ್ಕಿಂತ ಭಿನ್ನವಾಗಿರಲಿಲ್ಲ.

15–20 ದಿನದಿಂದ ಕ್ಷೇತ್ರದಲ್ಲೇ ಬೀಡುಬಿಟ್ಟು ಅಹೋರಾತ್ರಿ ಅಹರ್ನಿಶಿ ದುಡಿದಿದ್ದ ಸಚಿವರು, ಶಾಸಕರು, ಆಯಾ ಕ್ಷೇತ್ರಗಳ ಮುಖಂಡರು ಮಂಗಳವಾರ ಮುಸ್ಸಂಜೆ ಮತದಾನ ಮುಗಿಯುತ್ತಿದ್ದಂತೆ, ವಿಶ್ರಾಂತಿಯ ಮೊರೆ ಹೊಕ್ಕರು. ಹಲವರು ಗೆಳೆಯರೊಟ್ಟಿಗೆ ಹೊರಗೆ ತೆರಳಿದರೆ; ಕೆಲವರು ರಾಜಧಾನಿ ಬೆಂಗಳೂರಿಗೆ ದೌಡಾಯಿಸಿದರು.

ಪೂಜೆ–ಚರ್ಚೆ–ನಿರಾಳ:

ಜೆಡಿಎಸ್‌ ಅಭ್ಯರ್ಥಿ ಡಾ.ಸುನೀತಾ ದೇವಾನಂದ ಚವ್ಹಾಣ ತಮ್ಮ ನಿತ್ಯದ ದಿನಚರಿಯಲ್ಲಿ ಕೊಂಚ ವ್ಯತ್ಯಾಸ ಮಾಡಿಕೊಂಡಿದ್ದರು. ನಿತ್ಯವೂ ನಸುಕಿನಲ್ಲೇ ಎದ್ದು, ಶುಚಿರ್ಭೂತರಾಗಿ ಸೂರ್ಯೋದಯದ ಬೆನ್ನಿಗೆ ಮನೆಯಿಂದ ಹೊರ ಬೀಳುತ್ತಿದ್ದವರು, ಬುಧವಾರ ವಿಳಂಬವಾಗಿ ಹಾಸಿಗೆಯಿಂದ ಮೇಲೆದ್ದರು.

ಎಚ್ಚರಗೊಂಡ ಬಳಿಕ ಎಂದಿನಂತೆ ತಮ್ಮ ನಿತ್ಯ ಕರ್ಮ ಪೂರೈಸಿಕೊಂಡು; ಬಹು ದಿನಗಳ ಬಳಿಕ ಮನೆಯಲ್ಲೇ ಸುದೀರ್ಘ ಪೂಜೆ ನೆರವೇರಿಸಿದರು. ದೇವಿ ಮಂಟಪದ ಎದುರು ಕುಳಿತು ಪ್ರಾರ್ಥಿಸಿದರು. ಬಳಿಕ ಕುಟುಂಬದವರೊಟ್ಟಿಗೆ ಕೆಲ ಹೊತ್ತು ಹರಟಿದರು. ನಾಷ್ಟಾ ಮಾಡಿದರು. ಮನೆಯ ಮಕ್ಕಳನ್ನು ಮುದ್ದು ಮಾಡಿ, ಮನಸ್ಸು ನಿರಾಳ ಮಾಡಿಕೊಂಡರು.

ಈ ವೇಳೆಗಾಗಲೇ ಭೇಟಿಗಾಗಿ ಮನೆಗೆ ಬಂದಿದ್ದ ಕಾರ್ಯಕರ್ತರನ್ನು ಒಳ ಕರೆಸಿಕೊಂಡು ಕುಶಲೋಪರಿ ವಿಚಾರಿಸಿದರು. ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ ಎಂಬುದರ ಮಾಹಿತಿ ಪಡೆದುಕೊಂಡರು. ತಮ್ಮ ಪರ–ವಿರೋಧದ ಮಾಹಿತಿಯನ್ನೂ ಸಂಗ್ರಹಿಸಿದರು.

ಪತಿ, ಶಾಸಕ ದೇವಾನಂದ ಚವ್ಹಾಣ ಮಂಗಳವಾರ ರಾತ್ರಿಯೇ ಬೆಂಗಳೂರಿಗೆ ತೆರಳಿದ್ದರಿಂದ, ನಾಗಠಾಣ ಮತ ಕ್ಷೇತ್ರದ ಕಾರ್ಯಕರ್ತರ ಅಹವಾಲು ಸಹ ಆಲಿಸಿದ್ದು ವಿಶೇಷವಾಗಿತ್ತು. ಬೆಂಗಳೂರಿಗೆ ತೆರಳುವ ಮುನ್ನವೇ ದೇವಾನಂದ ಸ್ಥಳೀಯವಾಗಿ ಮಾಹಿತಿ ಕಲೆ ಹಾಕಿದ್ದರು. ಕಾಂಗ್ರೆಸ್‌ ಸಚಿವರು, ಶಾಸಕರು, ಜೆಡಿಎಸ್ ಶಾಸಕ, ಮುಖಂಡರು ಮತದಾನ ಮುಗಿದ ಬೆನ್ನಿಗೆ ಬೆಂಗಳೂರಿಗೆ ದೌಡಾಯಿಸಿದರು.

ಸಾವು–ಮದುವೆ–ಮೊಮ್ಮಕ್ಕಳ ಜತೆ..!

ಜಿಗಜಿಣಗಿ ಎಂದಿನಂತೆಯೇ ತಮ್ಮ ದಿನಚರಿ ಆರಂಭಿಸಿದರು. ಮಾತನಾಡಿಸಲಿಕ್ಕಾಗಿಯೇ ಮನೆಗೆ ಬಂದಿದ್ದ ಮುಖಂಡರು, ದೋಸ್ತರು, ಕಾರ್ಯಕರ್ತರ ಜತೆ ಚುನಾವಣಾ ಚರ್ಚೆ ನಡೆಸಿದರು.

ಇದರ ನಡುವೆಯೇ ತಮ್ಮ ಪರಿಚಯದ ಎ.ಎಸ್.ಪಾಟೀಲ ಹೊನ್ನುಟಗಿ ಧರ್ಮ ಪತ್ನಿ ಸುಶೀಲಾಬಾಯಿ ಅ.ಪಾಟೀಲ ಮಂಗಳವಾರ ನಿಧನರಾಗಿದ್ದು, ಬುಧವಾರ ಬೆಳಿಗ್ಗೆ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಜತೆ ಹೊನ್ನುಟಗಿ ಗ್ರಾಮಕ್ಕೆ ತೆರಳಿ, ಮೃತರಿಗೆ ಹಾರ ಹಾಕಿ ನಮಿಸಿ, ಭೂತನಾಳದ ತಮ್ಮ ನಿವಾಸಕ್ಕೆ ಮರಳಿದರು.

ಅಷ್ಟರೊಳಗೆ ತಮ್ಮ ಗೃಹ ಕಚೇರಿಯಲ್ಲಿ ನೆರೆದಿದ್ದ ಮತ್ತೊಂದಿಷ್ಟು ಜನರ ಜತೆಗೆ ಮಾತುಕತೆ ನಡೆಸಿದ ಜಿಗಜಿಣಗಿ, ಯಾವ್ಯಾವ ಭಾಗದಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ ಎಂಬ ಪಕ್ಕಾ ಲೆಕ್ಕ ಪಡೆದರು. ನಂತರ ಸ್ನಾನಗೈದು, ದೇವರ ಪೂಜೆ ಸಲ್ಲಿಸಿ, ಉಪಾಹಾರ ಸೇವಿಸಿದರು. ಬಹು ದಿನಗಳ ಬಳಿಕ ಮೊಮ್ಮಕ್ಕಳೊಂದಿಗೆ ಕಾಲ ಕಳೆದರು.

ನಾಗಠಾಣ ಜಿಲ್ಲಾ ಪಂಚಾಯ್ತಿ ಸದಸ್ಯ ನವೀನ ಅರಕೇರಿ ತಂಗಿ ಲಗ್ನ ಅಥಣಿಯಲ್ಲಿ ನಡೆಯಿತು. ಅಥಣಿ ಜಿಗಜಿಣಗಿಯ ಹಳೆಯ ಮತ ಕ್ಷೇತ್ರ. ಎರಡೂ ಕಡೆಯಿಂದ ಆಹ್ವಾನವಿದ್ದುದಕ್ಕೆ ಅಥಣಿಗೆ ತೆರಳಿ, ಮದುವೆಯಲ್ಲಿ ರಮೇಶ ಭಾಗಿಯಾದರು. ಈ ಸಂದರ್ಭ ಸ್ಥಳೀಯ ಮುಖಂಡರು, ಹಳೆಯ ಮಿತ್ರರ ಜತೆ ಚುನಾವಣಾ ಮಾಹಿತಿ ವಿನಿಮಯ ಮಾಡಿಕೊಂಡರು.

ಮಧ್ಯಾಹ್ನದ ವೇಳೆಗೆ ಮದುವೆ ಮುಗಿಸಿಕೊಂಡು ವಿಜಯಪುರಕ್ಕೆ ಮರಳಿ ಮೊಮ್ಮಕ್ಕಳೊಂದಿಗೆ ಕಾಲ ಕಳೆದು ವಿರಮಿಸಿದರು. ಅತ್ಯಾಪ್ತರ ಜತೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !