ಕ್ಷೇತ್ರದ 648 ಹಳ್ಳಿಗಳಲ್ಲೂ ಮತದಾನ ಜಾಗೃತಿ

ಶುಕ್ರವಾರ, ಏಪ್ರಿಲ್ 26, 2019
21 °C
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ, ಜಿ.ಪಂ. ಸಿಇಒ ವಿಕಾಸ್ ಕಿಶೋರ್ ಸುರಳ್‌ಕರ್‌ ಹೇಳಿಕೆ

ಕ್ಷೇತ್ರದ 648 ಹಳ್ಳಿಗಳಲ್ಲೂ ಮತದಾನ ಜಾಗೃತಿ

Published:
Updated:
Prajavani

ವಿಜಯಪುರ: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಖಾಡದಲ್ಲಿರುವ ಸ್ಪರ್ಧಾ ಕಲಿಗಳು, ಬೆಂಬಲಿಗರು ಪೈಪೋಟಿಯಿಂದ ಮತ ಯಾಚನೆ ನಡೆಸಿದ್ದಾರೆ.

ತಮ್ಮ ವೋಟ್‌ ಬ್ಯಾಂಕ್‌ ಹೆಚ್ಚಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಇದೀಗ ಕ್ಷೇತ್ರದಾದ್ಯಂಥ ಪ್ರಚಾರ ತಾರಕಕ್ಕೇರಿದೆ. ಇದರ ನಡುವೆಯೇ ಜಿಲ್ಲಾ ಸ್ವೀಪ್‌ ಸಮಿತಿ ಸಹ ಮತದಾನ ಜಾಗೃತಿಯ ಪ್ರಚಾರ ನಡೆಸಿದ್ದು, ಹಳ್ಳಿ ಹಳ್ಳಿಯಲ್ಲೂ ಜಾಗೃತಿ ಅಭಿಯಾನ ನಡೆದಿದೆ.

ಮತದಾನ ಜಾಗೃತಿಗಾಗಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ವಿನೂತನ ಕಾರ್ಯಕ್ರಮ, ವಿಶೇಷ ಅಭಿಯಾನ ಕುರಿತಂತೆ ಜಿಲ್ಲಾ ಪಂಚಾಯ್ತಿ ಸಿಇಒ, ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರು ಆಗಿರುವ ವಿಕಾಸ್‌ ಕಿಶೋರ್‌ ಸುರಳ್‌ಕರ್‌ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

* ಯಾವ್ಯಾವ ಚಟುವಟಿಕೆ ನಡೆಸಿದ್ದೀರಿ ?

ಸರಣಿಯೋಪಾದಿಯಾಗಿ ಜಾಥಾ ನಡೆದಿವೆ. ಎಲ್ಲೆಡೆ ಅಭಿಯಾನ, ಆಂದೋಲನ ನಡೆದಿವೆ. ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಿದ್ದೆವು. ಕ್ಯಾಂಡಲ್‌ ವಾಕ್‌, ಬೀದಿ ನಾಟಕ, ಹಾಸ್ಯ ಸಂಜೆ, ಮಕ್ಕಳಿಂದ ಪಾಲಕರಿಗೆ ಅಂಚೆ ಮೂಲಕ ಪತ್ರ ರವಾನೆ, ಪ್ಯಾರಾ ಮೋಟರಿಂಗ್, ಮಕ್ಕಳ ನಾಟಕ... ಇನ್ನಿತರೆ ಚಟುವಟಿಕೆಗಳು ಜಿಲ್ಲೆಯಾದ್ಯಂಥ ನಡೆದಿವೆ.

ಇವುಗಳ ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಮತದಾನದ ಮಹತ್ವ ಬಿಂಬಿಸುವ ವಿಡಿಯೊ ತುಣುಕುಗಳನ್ನು ಅಪ್‌ಲೋಡ್‌ ಮಾಡಿದ್ದು, ಒಟ್ಟಾರೆ ಮತದಾನದ ಜಾಗೃತಿ ಮೂಡಿಸುವಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಮುಂಚೂಣಿಯಲ್ಲಿದೆ.

* ಜನರ ಪ್ರತಿಕ್ರಿಯೆ ಹೇಗಿದೆ ?

ಹಿಂದಿನ ಚುನಾವಣೆಗಳಲ್ಲಿ ಮತದಾನ ಕಡಿಮೆಯಾದ ಸ್ಥಳಗಳಲ್ಲಿ ಈಗಾಗಲೇ ಖ್ಯಾತ ಹಾಸ್ಯ ಕಲಾವಿದರಿಂದ ಹಾಸ್ಯ ಸಂಜೆ ಆಯೋಜಿಸಿದ್ದೆವು. ‘ನಕ್ಕು ನಕ್ಕು ಚಲಾಯಿಸಿ ಹಕ್ಕು’ ಎಂಬ ಹೆಸರಿನಡಿ ನಡೆದ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ.

ಎಲ್ಲೆಲ್ಲೂ ಜನಸ್ತೋಮವೇ ನೆರೆದಿತ್ತು. ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ, ಇಂದುಮತಿ ಸಾಲಿಮಠ, ಬಸವರಾಜ ಹೊಸಮನಿ ಪ್ರತ್ಯೇಕವಾಗಿ ನಡೆಸಿಕೊಟ್ಟ ಹಾಸ್ಯ ಕಾರ್ಯಕ್ರಮಗಳಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಮನಮುಟ್ಟುವಂತೆ ಮತದಾನದ ಮಹತ್ವ ತಿಳಿಸಿದ್ದಾರೆ. ಇದರ ಪರಿಣಾಮ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸಲಿದೆ. ಇನ್ನಿತರೆ ಚಟುವಟಿಕೆಗಳಿಗೂ ಸ್ಪಂದನೆ ದೊರೆತಿದೆ.

* ಗುರಿ ತಲುಪುತ್ತೀರಾ ?

ಹಾಸ್ಯ ಸಂಜೆ ಕಾರ್ಯಕ್ರಮಕ್ಕೆ ಒಂದೊಂದು ಕಡೆ ಕನಿಷ್ಠ 1000 ಮಂದಿ ನೆರೆದಿದ್ದರು. ನಮ್ಮ ಗುರಿ ಶೇ 100ರ ಮತದಾನ. ಹಿಂದಿನ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆಯಲ್ಲಿ ನಡೆದ ಮತದಾನಕ್ಕಿಂತ ಹೆಚ್ಚಿನ ಮತದಾನ ಈ ಬಾರಿ ನಡೆಯಬೇಕು ಎಂಬ ನಿರೀಕ್ಷೆಯಿಂದಲೇ ಸಾಕಷ್ಟು ವಿಭಿನ್ನ ಕಾರ್ಯಕ್ರಮ ರೂಪಿಸಿದ್ದೇವೆ.

ಪ್ರಸಕ್ತ ಚಿತ್ರಣ ಗಮನಿಸಿದರೆ ಶೇ 75ಕ್ಕೂ ಹೆಚ್ಚು ಮತದಾನವಾಗುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಇನ್ನೂ ಹಲ ಕ್ರಮ ತೆಗೆದುಕೊಂಡಿದ್ದೇವೆ. ಅಂಗವಿಕಲರಿಗಾಗಿ ವಿಶೇಷ ವ್ಯವಸ್ಥೆಗಳ ಜತೆಗೆ, ಮನೆ ಬಾಗಿಲಿನಿಂದ ಮತಗಟ್ಟೆಗೆ ಕರೆದೊಯ್ದು, ಮತ ಹಾಕಿಸಿ ಮತ್ತೆ ಮನೆಗೆ ವಾಪಸ್ ಬಿಡಲು ವಾಹನ ವ್ಯವಸ್ಥೆ ರೂಪಿಸಿದ್ದೇವೆ.

* ಎಲ್ಲೆಲ್ಲಿ ಜಾಗೃತಿ ನಡೆಸಿದ್ದೀರಿ ?

ಕ್ಷೇತ್ರ ವ್ಯಾಪ್ತಿಯಲ್ಲಿನ 648 ಹಳ್ಳಿಗಳಲ್ಲೂ ಮತದಾನ ಜಾಗೃತಿಗೆ ಸಂಬಂಧಿಸಿದ ಒಂದಿಲ್ಲೊಂದು ಕಾರ್ಯಕ್ರಮ ನಡೆದಿವೆ. ಚುನಾವಣೆಗೆ ಅಧಿಸೂಚನೆ ಹೊರಡುವುದುಕ್ಕೂ ಮುನ್ನಾ ದಿನಗಳಲ್ಲೇ ಸ್ವೀಪ್‌ ಚಟುವಟಿಕೆ ನಡೆದಿದ್ದವು.

ಪ್ರತಿ ಹಳ್ಳಿಯಲ್ಲೂ ವಾರಕ್ಕೊಂದು ಕಾರ್ಯಕ್ರಮ ನಡೆದಿವೆ. ಪ್ರಚಾರ ಬಿರುಸುಗೊಂಡು, ಕಣದಲ್ಲಿನ ಚಿತ್ರಣ ತುರುಸುಗೊಂಡ ಸಂದರ್ಭ ಮತದಾನ ಜಾಗೃತಿ ಕಾರ್ಯಕ್ರಮಗಳು ಅಷ್ಟೇ ಪರಿಣಾಮಕಾರಿಯಾಗಿ ಎಲ್ಲೆಡೆ ನಡೆದಿವೆ.

* ನಗರ–ಪಟ್ಟಣದಲ್ಲಿ ಮತದಾನ ಹೆಚ್ಚಿಸಲು ಏನು ಮಾಡಿದ್ದೀರಿ..?

ನಗರ, ಪಟ್ಟಣದ ಮತದಾರರಲ್ಲಿನ ಉದಾಸೀನತೆ ಕಡಿಮೆಗೊಳಿಸಿ, ಮತಗಟ್ಟೆಯತ್ತ ಹೆಜ್ಜೆ ಹಾಕುವಂತೆ ಹಲವು ಕಾರ್ಯಕ್ರಮ ರೂಪಿಸಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಬರುವಂತೆ ಮನವೊಲಿಕೆ ಜತೆಗೆ, ಮತದ ಮಹತ್ವವನ್ನು ಮನದಟ್ಟು ಮಾಡಿಕೊಡುವ ಯೋಜನೆ ಹಮ್ಮಿಕೊಂಡಿದ್ದೇವೆ. ಹಾಸ್ಯ ಸಂಜೆ ಕಾರ್ಯಕ್ರಮಗಳು ನಗರ/ಪಟ್ಟಣದಲ್ಲೂ ನಡೆದಿವೆ. ಜನರನ್ನು ಸೆಳೆದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !