ಚಾಮರಾಜನಗರ: ಮತದಾನಕ್ಕೆ ಕ್ಷಣಗಣನೆ; 10 ಅಭ್ಯರ್ಥಿಗಳ ಭವಿಷ್ಯ ಒರೆಗೆ

ಬುಧವಾರ, ಏಪ್ರಿಲ್ 24, 2019
23 °C
ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ರ ವರೆಗೆ ಹಕ್ಕು ಚಲಾವಣೆಗೆ ಅವಕಾಶ, ಮತಗಟ್ಟೆಗಳಲ್ಲಿ ಬಿಗಿ ಭದ್ರತೆ

ಚಾಮರಾಜನಗರ: ಮತದಾನಕ್ಕೆ ಕ್ಷಣಗಣನೆ; 10 ಅಭ್ಯರ್ಥಿಗಳ ಭವಿಷ್ಯ ಒರೆಗೆ

Published:
Updated:
Prajavani

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಗುರುವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. 

ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಆರ್‌.ಧ್ರುವನಾರಾಯಣ, ಬಿಜೆಪಿಯ ವಿ.ಶ್ರೀನಿವಾಸ ಪ್ರಸಾದ್‌, ಬಿಎಸ್‌ಪಿಯ ಡಾ. ಶಿವಕುಮಾರ್‌ ಸೇರಿದಂತೆ 10 ಮಂದಿ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ₹16.86 ಲಕ್ಷ ಮಂದಿ ಅರ್ಹ ಮತದಾರರಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಎಲೆಕ್ಟ್ರಾನಿಕ್‌ ಮತಯಂತ್ರಗಳಲ್ಲಿ (ಇವಿಎಂ) ದಾಖಲಿಸಲಿದ್ದಾರೆ. 

ಕ್ಷೇತ್ರದಲ್ಲಿ ಒಟ್ಟು 2,005 ಮತಗಟ್ಟೆಗಳನ್ನು 1,025 (ಮೈಸೂರು ಜಿಲ್ಲೆ ಹಾಗೂ 980 ಚಾಮರಾಜನಗರ ಜಿಲ್ಲೆ) ತೆರೆಯಲಾಗಿದೆ. ಚುನಾವಣೆಗಾಗಿ ಕ್ಷೇತ್ರದಲ್ಲಿ ಚುನಾವಣಾ ಆಯೋಗವು 2,370 ಬ್ಯಾಲೆಟ್‌ ಯೂನಿಟ್‌ (ಇದರಲ್ಲಿ 365 ಯೂನಿಟ್‌ಗಳನ್ನು ಕಾಯ್ದಿರಿಸಿರುವುದು), 2,321 ಕಂಟ್ರೋಲ್‌ ಯೂನಿಟ್‌ (316 ಕಾಯ್ದಿಸಿರುವುದು) ಮತ್ತು 2,511 ಮತ ಖಾತರಿ ಯಂತ್ರಗಳನ್ನು (506 ಕಾಯ್ದಿರಿಸಿರುವುದು) ಬಳಸಲಿದೆ. 

ಮಸ್ಟರಿಂಗ್‌ ಕಾರ್ಯ: ಮತದಾನದ ಅಂತಿಮ ಹಂತದ ಸಿದ್ಧತೆಯ ಭಾಗವಾಗಿ ಬುಧವಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಸ್ಟರಿಂಗ್‌ ಕಾರ್ಯ ನಡೆಯಿತು. ಮತಗಟ್ಟೆಗಳಿಗೆ ನಿಯೋಜಿಸಿರುವ ಸಿಬ್ಬಂದಿ, ಮಸ್ಟರಿಂಗ್‌ ಕೇಂದ್ರಗಳಲ್ಲಿ ಮತಯಂತ್ರ (ಇವಿಎಂ), ಮತ ಖಾತರಿ ಯಂತ್ರ (ವಿವಿಪ್ಯಾಟ್‌) ಸೇರಿದಂತೆ ಅಗತ್ಯ ಸಲಕರಣೆಗಳನ್ನು ಪಡೆದು‌ ತಮಗೆ ನಿಗದಿಪಡಿಸಿರುವ ಮತಗಟ್ಟೆಗಳಿಗೆ ತೆರಳಿದರು.

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು, ಗುಂಡ್ಲುಪೇಟೆ ಊಟಿ ರಸ್ತೆಯಲ್ಲಿರುವ ಸೇಂಟ್‌ ಜಾನ್‌ ಇಂಗ್ಲಿಷ್‌ ಸ್ಕೂಲ್‌ ಹಾಗೂ ಕೊಳ್ಳೇಗಾಲದ ಎಂಜಿಎಸ್‌ವಿ ಪದವಿಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್‌ ಕಾರ್ಯ ನಡೆಯಿತು.

ಜಿಲ್ಲೆ ಮತ್ತು ಮೈಸೂರಿನ ವಿವಿಧ ಭಾಗಗಳಿಂದ ಮತಗಟ್ಟೆ ಸಿಬ್ಬಂದಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಕೇಂದ್ರಗಳನ್ನು ತಲುಪಿದರು. ಇವರನ್ನು ಕರೆತರಲು ಬಸ್‌ ವ್ಯವಸ್ಥೆ ಮಾಡಲಾಗಿತ್ತು. 

ಕೇಂದ್ರಗಳಲ್ಲಿ ಮತಯಂತ್ರ ಜೋಡಣೆ, ಅವುಗಳ ನಿರ್ವಹಣೆ, ಮತದಾನಕ್ಕೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳು ಸಿಬ್ಬಂದಿಗೆ ತಿಳಿ ಹೇಳಿದರು.  

ಮತಗಟ್ಟೆಗಳಿಗೆ ನಿಯೋಜಿಸಲಾಗಿರುವ ಸಿಬ್ಬಂದಿ ಮಧ್ಯಾಹ್ನದ ಭೋಜನ ಮುಗಿಸಿಕೊಂಡು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು.

ಆರೋಗ್ಯ ಕಿಟ್‌: ಜಿಲ್ಲಾ ಆರೋಗ್ಯ ಇಲಾಖೆಯು ಎಲ್ಲ ಮತಗಟ್ಟೆಗಳಿಗೆ ಆರೋಗ್ಯ ಕಿಟ್‌ಗಳನ್ನು ಪೂರೈಸಿದೆ. ಸುಸ್ತು, ಜ್ವರ ಸೇರಿದಂತೆ ಸಾಮಾನ್ಯ ಕಾಯಿಲೆಗಳಿಗೆ ಹಾಗೂ ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಗೆ ಬೇಕಾದ ಔಷಧಗಳನ್ನೂ ಇದು ಹೊಂದಿದೆ.

ಪೊಲೀಸರಿಗೆ ಆಹಾರ ಕಿಟ್‌: ಚುನಾವಣಾ ಕರ್ತವ್ಯನಿರತ ಭದ್ರತಾ ಸಿಬ್ಬಂದಿಗೆ ಪೊಲೀಸ್‌ ಇಲಾಖೆ ಆಹಾರ ಕಿಟ್‌ ಒದಗಿಸಿದೆ. ಇದು ರೈಸ್‌ ಬಾತ್‌, ಕೂರ್ಮ, ಚಟ್ನಿ, ಸಿಹಿ ತಿನಿಸು, ಮಜ್ಜಿಗೆ, ನೀರು, ಬಿಸ್ಕತ್ತು, ಡ್ರೈ ಫ್ರುಟ್ಸ್‌, ತಂಪು ಪಾನೀಯಗಳನ್ನು ಒಳಗೊಂಡಿದೆ. ಸ್ನಾನಕ್ಕೆ ಸಾಬೂನು, ರಾತ್ರಿ ಹೊತ್ತು ಸೊಳ್ಳೆಯಿಂದ ರಕ್ಷಣೆ ಪಡೆಯಲು ಕ್ರೀಮ್‌ ಅನ್ನೂ ನೀಡಲಾಗಿದೆ.

ಅಂಚೆ ಮತ: ಮಸ್ಟರಿಂಗ್‌ ಕೇಂದ್ರಗಳಲ್ಲಿ ಚುನಾವಣಾ ಕರ್ತವ್ಯನಿರತ ಸಿಬ್ಬಂದಿಗೆ ಅಂಚೆ ಮತಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿತ್ತು.

ಕಣದಲ್ಲಿರುವ ಅಭ್ಯರ್ಥಿಗಳು

1. ಆರ್‌.ಧ್ರುವನಾರಾಯಣ (ಕಾಂಗ್ರೆಸ್‌)

2. ಡಾ.ಶಿವಕುಮಾರ್‌ (ಬಿಎಸ್‌ಪಿ)

3. ವಿ.ಶ್ರೀನಿವಾಸ ಪ್ರಸಾದ್‌ (ಬಿಜೆಪಿ)

4. ಎಂ.ನಾಗರಾಜು (ಉತ್ತಮ ಪ್ರಜಾಕೀಯ ಪಾರ್ಟಿ)

5. ಪ್ರಸನ್ನಕುಮಾರ್ ಬಿ. (ಕರ್ನಾಟಕ ಪ್ರಜಾ ಪಾರ್ಟಿ, ರೈತಪರ್ವ)

6. ಸುಬ್ಬಯ್ಯ (ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿ)

7. ಆನಂದ. ಜಿ. (ಪಕ್ಷೇತರ)

8. ಎನ್.ಅಂಬರೀಷ್ (ಪಕ್ಷೇತರ)

9. ಎಂ.ಪ್ರದೀಪ್‍ಕುಮಾರ್ (ಪಕ್ಷೇತರ)

10. ಜಿ.ಡಿ.ರಾಜಗೋಪಾಲ್ (ಪಕ್ಷೇತರ)

10 ಸಖಿ ಮತಗಟ್ಟೆಗಳು (ಮಹಿಳೆಯರಿಗಾಗಿ)

1. ಹನೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಹನೂರು ವಿಧಾನಸಭಾ ಕ್ಷೇತ್ರ)

2. ರಾಮಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಹನೂರು ವಿಧಾನಸಭಾ ಕ್ಷೇತ್ರ)

3. ಕೊಳ್ಳೇಗಾಲದ ಮಹದೇಶ್ವರ ಐಟಿಐ ಕಾಲೇಜು (ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ)

4. ಕೊಳ್ಳೇಗಾಲದ ಲಯನ್ ಹಿರಿಯ ಪ್ರಾಥಮಿಕ ಶಾಲೆ (ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ)

5. ಮಾಂಬಳ್ಳಿಯ ಶ್ರೀಮತಿ ಕಮಲಮ್ಮ ಮತ್ತು ಶ್ರೀ ಕರಿಗೌಡರ ಸ್ಮಾರಕ ಸರ್ಕಾರಿ ಶಾಲೆ (ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ)

6. ಚಾಮರಾಜನಗರದ ಉಪ್ಪಾರಬೀದಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಚಾಮರಾಜನಗರ ವಿಧಾನಸಭಾ ಕ್ಷೇತ್ರ)

7. ಗಾಳಿಪುರದ ಬೀಡಿ ಕಾಲೊನಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ (ಚಾಮರಾಜನಗರ ವಿಧಾನಸಭಾ ಕ್ಷೇತ್ರ) 

8. ಮೂಡಲಹೊಸಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಚಾಮರಾಜನಗರ ವಿಧಾನಸಭಾ ಕ್ಷೇತ್ರ)

9. ಗುಂಡ್ಲುಪೇಟೆಯ ಶ್ರೀ ಮದ್ದಾನೇಶ್ವರ ಪ್ರೌಢಶಾಲೆ (ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ)

10. ಚಿಕ್ಕತುಪ್ಪೂರಿನ ಸರ್ಕಾರಿ ಸಂಯುಕ್ತ ಪ್ರೌಢಶಾಲೆ (ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ) 

ಸಾಂಸ್ಕೃತಿಕ ಬುಡಕಟ್ಟು ಮತಗಟ್ಟೆಗಳು

1. ಕೊಣನಕೆರೆಯ ಸರ್ಕಾರಿ ಗಿರಿಜನ ಆಶ್ರಮ ಶಾಲೆ (ಹನೂರು)

2. ಬಿಳಿಗಿರಿರಂಗನಬೆಟ್ಟದ ಪುರಾಣಿಪೋಡುವಿನ ಸರ್ಕಾರಿ ಗಿರಿಜನ ಆಶ್ರಮಶಾಲೆ (ಕೊಳ್ಳೇಗಾಲ)

3. ಕ್ಯಾತದೇವರಗುಡಿಯ (ಕೆ.ಗುಡಿ) ಆಶ್ರಮ ಶಾಲೆ (ಚಾಮರಾಜನಗರ)

4. ಮದ್ದೂರು ಕಾಲೊನಿಯ ಸರ್ಕಾರಿ ಗಿರಿಜನ ಆಶ್ರಮ ಶಾಲೆ (ಗುಂಡ್ಲುಪೇಟೆ)

ಅಂಗವಿಕಲರಿಗಾಗಿ ವಿಶೇಷ ಮತಗಟ್ಟೆ

1. ಕೊಳ್ಳೇಗಾಲದ ಶ್ರೀಮತಿ ವಸಂತಕುಮಾರಿ ಜೂನಿಯರ್ ಕಾಲೇಜು - ಹೊಸ ಕಟ್ಟಡ

2. ಚಾಮರಾಜನಗರದ ಯಡಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ಅಂಕಿ ಅಂಶ

16,86,023 ಮತದಾರರ ಸಂಖ್ಯೆ

8,42,742 ಪುರುಷರು

8,43,167 ಮಹಿಳೆಯರು

114 ಲೈಂಗಿಕ ಅಲ್ಪಸಂಖ್ಯಾತರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !