ಮತದಾನಕ್ಕೆ ಜಿಲ್ಲಾಡಳಿತ ಸಿದ್ಧತೆ; 2,005 ಮತಗಟ್ಟೆಗಳು, 6,820 ಮತಗಟ್ಟೆ ಸಿಬ್ಬಂದಿ

ಭಾನುವಾರ, ಏಪ್ರಿಲ್ 21, 2019
26 °C
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹೇಳಿಕೆ

ಮತದಾನಕ್ಕೆ ಜಿಲ್ಲಾಡಳಿತ ಸಿದ್ಧತೆ; 2,005 ಮತಗಟ್ಟೆಗಳು, 6,820 ಮತಗಟ್ಟೆ ಸಿಬ್ಬಂದಿ

Published:
Updated:
Prajavani

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಗುರುವಾರ (ಏಪ್ರಿಲ್‌ 18) ನಡೆಯಲಿರುವ ಮತದಾನಕ್ಕೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದ್ದು, ಕೊನೆ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿ.ಬಿ.ಕಾವೇರಿ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಿದ್ಧತೆಗಳ ಬಗ್ಗೆ ವಿವರಗಳನ್ನು ನೀಡಿದರು.

‘ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 16.86 ಲಕ್ಷ ಮತದಾರರಿದ್ದಾರೆ. 2,005 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 261 ಮತಗಟ್ಟೆಗಳು ನಗರ ಹಾಗೂ 1,744 ಮತಗಟ್ಟೆಗಳು ಗ್ರಾಮೀಣ ಪ್ರದೇಶಗಳಲ್ಲಿ ಇವೆ. ಚಾಮರಾಜನಗರ ಜಿಲ್ಲೆಯಲ್ಲಿ 197 ಮತ್ತು ಮೈಸೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 166 ಸೇರಿದಂತೆ ಒಟ್ಟು 363 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಚಾಮರಾಜನಗರ ಜಿಲ್ಲೆಯಲ್ಲಿ 81 ಮತ್ತು ಮೈಸೂರು ಜಿಲ್ಲೆಯಲ್ಲಿ 31 ಮತಗಟ್ಟೆಗಳು ಕಾಡಂಚಿನಲ್ಲಿದ್ದು, ದೂರವಾಣಿ ಸೌಲಭ್ಯ ಇಲ್ಲದ ಈ ಮತಗಟ್ಟೆಗಳೊಂದಿಗೆ ಸಂಪರ್ಕ ಸಾಧಿಸಲು ತಾತ್ಕಾಲಿಕ ವೈರ್‌ಲೆಸ್‌ ಮತ್ತು ಸಿಬ್ಬಂದಿ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಅರಣ್ಯ ಇಲಾಖೆಯ ವೈರ್‌ಲೆಸ್‌ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಇಲ್ಲಿಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಪ್ರಾಣಿಗಳಿಂದ ರಕ್ಷಣೆ ನೀಡಲೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.

ಅಂಚೆ ಮತಪತ್ರಗಳು: ಚುನಾವಣಾ ಕರ್ತವ್ಯದಲ್ಲಿ ನಿರತ ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ಲೋಕಸಭಾ ಕ್ಷೇತ್ರದಲ್ಲಿ 5,124 ಅಂಚೆ ಮತಪತ್ರಗಳನ್ನು ಹಾಗೂ 3,496 ಚುನಾವಣಾ ಕರ್ತವ್ಯನಿರತ (ಇಡಿಸಿ) ಅಧಿಕಾರಿ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಇಡಿಸಿಗಳು ಈ ಪ್ರಮಾಣಪತ್ರದ ಆಧಾರದಲ್ಲಿ ತಾವು ಕರ್ತವ್ಯ ನಿರ್ವಹಿಸುತ್ತಿರುವ ಮತಗಟ್ಟೆಯಲ್ಲೇ ಕೊನೆಗೆ ಮತದಾನ ಮಾಡಬಹುದಾಗಿದೆ’ ಎಂದರು.

ಇಂದು ಮಸ್ಟರಿಂಗ್‌ ಕಾರ್ಯ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಿಗೆ ನೇಮಕ ಮಾಡಿರುವ ಅಧಿಕಾರಿಗಳನ್ನು ಮತಗಟ್ಟೆಗಳಿಗೆ ತಲುಪಿಸಲು 182 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪಡೆಯಲಾಗಿದೆ. ಬುಧವಾರ ಮಸ್ಟರಿಂಗ್‌ ಕಾರ್ಯ ನಡೆಯಲಿದ್ದು, ಮತಗಟ್ಟೆ ಅಧಿಕಾರಿಗಳು ಮಸ್ಟರಿಂಗ್‌ ಕೇಂದ್ರಕ್ಕೆ ತಲುಪಲು ಅನುಕೂಲವಾಗುವಂತೆ ಬಸ್‌ ವ್ಯವಸ್ಥೆ ಮಾಡಲಾಗಿದೆ’  ಎಂದು ತಿಳಿಸಿದರು.

ಮೂಲ ಸೌಕರ್ಯ: ಮತದಾನ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್‌, ಶೌಚಾಲಯ, ನೆರಳಿನ ವ್ಯವಸ್ಥೆ, ರ‍್ಯಾಂಪ್‌ ಸೇರಿದಂತೆ ಕನಿಷ್ಠ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮತಗಟ್ಟೆಗಳಲ್ಲಿ ಮತದಾರರಿಗೆ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಾಲು ಇರಲಿದೆ. ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಆದ್ಯತೆ ನೀಡಲಾಗುತ್ತದೆ‌. ದುರ್ಬಲ ಮತದಾರರಿಗೆ ಮತ ಚಲಾಯಿಸಲು ಅನುಕೂಲ ಮಾಡಿಕೊಡಲು ಶಿಕ್ಷಣ ಇಲಾಖೆಯು ಸ್ವಯಂಸೇವಕರನ್ನು ಗುರುತಿಸಿದೆ’ ಎಂದು ಹೇಳಿದರು.

ಜಿಲ್ಲೆಯಲ್ಲಿ 10,496 ಅಂಗವಿಕರಲನ್ನು ಗುರುತಿಸಲಾಗಿದೆ. ಅವರಿಗೆ ಮತಗಟ್ಟೆಗೆ ಬರಲು ಮತ್ತು ವಾಪಸ್‌ ಮನೆಗೆ ತೆರಳಲು ಉಚಿತ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ಅಂಗವಿಕಲರಿಗೆ ಗಾಲಿ ಕುರ್ಚಿ, ದೃಷ್ಟಿದೋಷ ಇರುವವರಿಗೆ ಭೂತಕನ್ನಡಿ ವ್ಯವಸ್ಥೆ ಮಾಡಲಾಗಿದೆ. 245 ಅಂಧ ಹಾಗೂ 1,044 ದೃಷ್ಟಿದೋಷ ಇರುವ ಮತದಾರರನ್ನು ಗುರುತಿಸಲಾಗಿದೆ. ಅಂಧ ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಬ್ರೈಲ್‌ ಲಿಪಿಯ ಮತ ಪತ್ರದ ಪ್ರತಿಕೃತಿ ಹಾಗೂ ಸಹಾಯಕರ ವ್ಯವಸ್ಥೆ ಮಾಡಲಾಗಿದೆ’ ಎಂದು ಕಾವೇರಿ ಅವರು ತಿಳಿಸಿದರು.

ನಗದು, ಮದ್ಯ ವಶ: ‘ಚುನಾವಣಾ ಅಧಿಸೂಚನೆ ಹೊರಡಿಸಿದ ನಂತರ ಇಲ್ಲಿಯವರೆಗೆ ₹ 14,11,961 ನಗದು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ₹ 6,78,460 ಮೊತ್ತಕ್ಕೆ ದಾಖಲೆಗಳನ್ನು ಸಲ್ಲಿಸಿರುವುದರಿಂದ ಇಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ. ನಗದು ಹಣ ವಶ ಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಐದು ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ₹ 38.34 ಲಕ್ಷ ಮೌಲ್ಯದ ಚುನಾವಣಾ ಸಾಮಗ್ರಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ₹ 48 ಲಕ್ಷ ಮೌಲ್ಯದ 9,350 ಲೀಟರ್‌ ಮದ್ಯ ಹಾಗೂ 1,772 ಲೀಟರ್‌ ಬಿಯರ್‌ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 23 ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌ ಇದ್ದರು.

10 ಸಖಿ, 4 ಬುಡಕಟ್ಟು, 2 ಅಂಗವಿಕಲರ ಮತಗಟ್ಟೆ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ ಕೆ.ಎಸ್‌.ಲತಾಕುಮಾರಿ ಮಾತನಾಡಿ, ‘ಜಿಲ್ಲೆಯಲ್ಲಿ ಮಹಿಳಾ ಮತದಾರರಿಗಾಗಿ 10 ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಹನೂರಿನಲ್ಲಿ 2, ಕೊಳ್ಳೇಗಾಲ–3, ಚಾಮರಾಜನಗರ–3 ಮತ್ತು ಗುಂಡ್ಲುಪೇಟೆಯಲ್ಲಿ 2 ಮತಗಟ್ಟೆಗಳನ್ನು ತೆರೆಯಲಾಗಿದೆ’ ಎಂದು ಹೇಳಿದರು.

‘ಮತದಾನದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ, ನೈತಿಕ ಮತದಾನಕ್ಕೆ ಪ್ರೇರೇಪಿಸುವ ಉದ್ದೇಶದಿಂದ ಈ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಮೊದಲು ಮತ ಚಲಾಯಿಸುವ 100 ಮಹಿಳೆಯರಿಗೆ ನುಗ್ಗೆ/ಕರಿ ಬೇವಿನಗಿಡಗಳನ್ನು ನೀಡಲಾಗುವುದು’ ಎಂದು ಅವರು ಹೇಳಿದರು. 

‘ಜಿಲ್ಲೆಯ 4 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಒಂದೊಂದು ಸಾಂಸ್ಕೃತಿಕ ಬುಡಕಟ್ಟು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿರುವ 23,210 ಬುಡಕಟ್ಟು ಮತದಾರರಲ್ಲಿ ಮತದಾನದ ಬಗ್ಗೆ ಆಸಕ್ತಿ ಹೆಚ್ಚಿಸುವ ಮತ್ತು ಮತದಾನಕ್ಕೆ ಪ್ರೇರೇಪಿಸುವ ಉದ್ದೇಶದಿಂದ ಈ ಮತಗಟ್ಟೆಗಳನ್ನು ತೆರೆಯಲಾಗಿದೆ’ ಎಂದರು.

‘ಅಂಗವಿಕಲರಿಗಾಗಿ ಕೊಳ್ಳೇಗಾಲ ಮತ್ತು ಚಾಮರಾಜನಗರದಲ್ಲಿ ತಲಾ ಒಂದು ಮತಗಟ್ಟೆಗಳನ್ನು ಗುರುತಿಸಲಾಗಿದೆ’ ಎಂದೂ ಅವರು ಮಾಹಿತಿ ನೀಡಿದರು. 

ಸಿ–ವಿಜಿಲ್‌: 35 ದೂರು

‘ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ನಿಗಾ ಇಡುವ ಚುನಾವಣಾ ಆಯೋಗದ ಸಿ–ವಿಜಿಲ್‌ ಮೊಬೈಲ್‌ ಆ್ಯಪ್‌ನಲ್ಲಿ ಇದುವರೆಗೆ 35 ದೂರುಗಳು ಬಂದಿವೆ. ಈ ಪೈಕಿ 5 ದೂರುಗಳನ್ನು ಮೈಸೂರು ಜಿಲ್ಲೆಗೆ ವರ್ಗಾಯಿಸಲಾಗಿದೆ. 17 ದೂರುಗಳು ಸಮರ್ಪಕವಾಗಿದ್ದವು. ಅವುಗಳನ್ನು ಸಹಾಯಕ ಚುನಾವಣಾಧಿಕಾರಿಗಳ ಹಂತದಲ್ಲಿ ಬಗೆಹರಿಸಲಾಗಿದೆ. 13 ದೂರುಗಳು ನೀತಿ ಸಂಹಿತೆ ಉಲ್ಲಂಘನೆ ಸಂಬಂಧಪಟ್ಟಿರಲಿಲ್ಲ’ ಎಂದು ಬಿ.ಬಿ. ಕಾವೇರಿ ತಿಳಿಸಿದರು.

ಅಂಕಿ –ಅಂಶ

16.86 ಲಕ್ಷ ಒಟ್ಟು ಮತದಾರರು

2,005 ಕ್ಷೇತ್ರದಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳು

363 ಸೂಕ್ಷ್ಮ ಮತಗಟ್ಟೆಗಳು

6,820 ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲಿರುವ ಅಧಿಕಾರಿಗಳ ಸಂಖ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !