ಆರ್‌ಟಿಪಿಎಸ್‌ಗಾಗಿ 0.6 ಟಿಎಂಸಿ ಅಡಿ ನೀರು ನದಿಗೆ

ಶನಿವಾರ, ಮೇ 25, 2019
28 °C

ಆರ್‌ಟಿಪಿಎಸ್‌ಗಾಗಿ 0.6 ಟಿಎಂಸಿ ಅಡಿ ನೀರು ನದಿಗೆ

Published:
Updated:
Prajavani

ಆಲಮಟ್ಟಿ:‌ ರಾಯಚೂರು ಉಷ್ಣ ವಿದ್ಯುತ್‌ ಸ್ಥಾವರದ ಬಳಕೆಗಾಗಿ ಆಲಮಟ್ಟಿಯ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಶನಿವಾರದಿಂದ ನೀರು ಬಿಡುಗಡೆ ಮಾಡಲಾಗಿದೆ.

ಬೇಡಿಕೆಯಂತೆ ಆರ್‌ಟಿಪಿಎಸ್‌ಗೆ ಅಗತ್ಯವಿರುವ 0.6 ಟಿಎಂಸಿ ಅಡಿಯಷ್ಟು ನೀರನ್ನು ಸದ್ಯ ಆಲಮಟ್ಟಿಯಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಆರ್‌.ಪಿ.ಕುಲಕರ್ಣಿ ತಿಳಿಸಿದರು.

‘ಶನಿವಾರದಿಂದ 3,877 ಕ್ಯುಸೆಕ್‌ನಷ್ಟು ನೀರನ್ನು ನಾರಾಯಣಪುರ ಜಲಾಶಯ ಹಾಗೂ ವಿವಿಧ ಉದ್ದೇಶಕ್ಕೆ ಆಲಮಟ್ಟಿ ಜಲಾಶಯದಿಂದ ಹರಿಸಲಾಗುತ್ತಿದೆ. ರಾತ್ರಿಯಿಂದ ಹೊರಹರಿವು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

ಗುರುವಾರಷ್ಟೇ ಜಲಾಶಯ ಮುಂಭಾಗದ, ನಾರಾಯಣಪುರ ಜಲಾಶಯ ಹಿಂಭಾಗದ ಗ್ರಾಮಗಳಿಗೆ ಕುಡಿಯುವ ನೀರಿನ ಉದ್ದೇಶದಿಂದ 0.5 ಟಿಎಂಸಿ ಅಡಿಯಷ್ಟು ನೀರನ್ನು ಹರಿಸಲಾಗಿತ್ತು. ಈಗ ಮತ್ತೇ 0.6 ಟಿಎಂಸಿ ಅಡಿ ನೀರು ನದಿಗೆ ಬಿಡಲಾಗಿದೆ.

ಜಿಂದಾಲ್‌ಗೆ ಪೂರೈಕೆ?: ‘ಆಲಮಟ್ಟಿ ಜಲಾಶಯದ ಮುಂಭಾಗದ, ನಾರಾಯಣಪುರ ಜಲಾಶಯದ ಹಿಂಭಾಗದಲ್ಲಿರುವ ಜಿಂದಾಲ್‌ ಕಾರ್ಖಾನೆಯ ಜಾಕ್‌ವೆಲ್‌ನಿಂದ ಈ ನೀರು ಹೊಸಪೇಟೆಯತ್ತ ಹೊರಟಿದೆ. ಇದರಿಂದ ಆಲಮಟ್ಟಿಯಿಂದ ಬಿಟ್ಟ ನೀರಿನ ಅರ್ಧದಷ್ಟು ನಾರಾಯಣಪುರ ಜಲಾಶಯಕ್ಕೆ ತಲುಪುತ್ತಿಲ್ಲ. ನೀರು ಬಿಡುವ ಹಿಂದೆ ಜಿಂದಾಲ್‌ ಕಾರ್ಖಾನೆಯ ಹಿತಾಸಕ್ತಿ ಕಾಪಾಡುವುದು ಅಡಗಿದೆ’ ಎಂದು ರೈತ ಮುಖಂಡ ಬಸವರಾಜ ಕುಂಬಾರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಾನಂದ ಅವಟಿ ಆರೋಪಿಸಿದರು.

‘ಕಳೆದ ಎರಡು ವರ್ಷದ ಹಿಂದೆ ಬೇಸಿಗೆಯಲ್ಲಿ ತೆಲಂಗಾಣಕ್ಕೆ 2 ಟಿಎಂಸಿ ಅಡಿ ನೀರು ಹರಿಸಲಾಗಿತ್ತು. ಈಗಲೂ ಆಲಮಟ್ಟಿ ಜಲಾಶಯದಿಂದ ಸ್ವಲ್ಪ ಸ್ವಲ್ಪ ನೀರನ್ನು ನಾರಾಯಣಪುರ ಜಲಾಶಯಕ್ಕೆ ಬಿಟ್ಟು, ತೆಲಂಗಾಣಕ್ಕೆ ನೀರು ಹರಿಸುವ ಉದ್ದೇಶ ಹೊಂದಿರಬಹುದು’ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ಆಲಮಟ್ಟಿ ಜಲಾಶಯದ ನೀರಿನ ಮಟ್ಟ: 519.60 ಮೀಟರ್‌ ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಶನಿವಾರ 509.88 ಮೀಟರ್‌ನಷ್ಟು ನೀರಿದೆ. 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶನಿವಾರ 30.34 ಟಿಎಂಸಿ ಅಡಿ ನೀರು ಇದ್ದು, 11.709 ಟಿಎಂಸಿ ಅಡಿ ಲೈವ್‌ ಸ್ಟೋರೇಜ್‌ ನೀರಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !