ಬುಧವಾರ, ಅಕ್ಟೋಬರ್ 16, 2019
21 °C

ಉತ್ತರಾಖಂಡ-'ಹೂಗಳ ಕಣಿವೆ'ಯಲ್ಲೊಂದು ಪ್ರವಾಸ ಕಥನ

Published:
Updated:
Prajavani

ಅದು, ಪರ್ವತ ಶ್ರೇಣಿಗಳ ಮಧ್ಯೆ ಹಾದು ಹೋಗಿದ್ದ ಒಂದೇ ರಸ್ತೆ. ರಸ್ತೆಯ ಇಕ್ಕೆಲಗಳಲ್ಲಿ ಕೆಲವು ಸಣ್ಣ ಪುಟ್ಟ ಅಂಗಡಿಗಳು, ಪುಟ್ಟ ಗುಡಿಗಳು, ಮರದಿಂದ ನಿರ್ಮಿಸಲಾದ ಹಳೆಯ ಮನೆಗಳಿದ್ದವು. ತಲೆಮೇಲೆ ಹುಲ್ಲಿನ ಹೊರೆ, ಮಗುವನ್ನು ಬಟ್ಟೆಯಲ್ಲಿ ಬೆನ್ನಿಗೆ ಕಟ್ಟಿಕೊಂಡು ಕೆಲಸ ಮಾಡುತ್ತಿರುವ ಮಹಿಳೆಯರು, ಸಣ್ಣಗೆ ಹನಿಯುತ್ತಿದ್ದ ಮಳೆ, ರಸ್ತೆಯ ಬಲಭಾಗದಲ್ಲಿ ಹರಿಯುತ್ತಿದ್ದ ಭಾಗೀರಥಿ ನದಿ, ಆಗಾಗ ನಮ್ಮನ್ನು ಹಾದು ಹೋಗುತ್ತಿದ್ದ ಬೆಳ್ಮುಗಿಲು, ಆಗೊಮ್ಮೆ ಈಗೊಮ್ಮೆ ಬದರಿನಾಥದ ಕಡೆಯಿಂದ ಬರುವ, ಆ ಕಡೆಗೆ ಹೋಗುವ ಕಾರು, ಬಸ್ಸು, ಜೀಪುಗಳು, ಗುಂಪಾಗಿ ಕಾಲ್ನಡಿಗೆಯಲ್ಲಿ ಬದರಿಗೆ ತೆರಳುತ್ತಿದ್ದ ಯಾತ್ರಿಕರು, ಸಾಧುಗಳು..

ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ‘ಪಾಂಡುಕೇಶ್ವರ’ ಎಂಬ ಪುಟ್ಟ ಊರಿನಲ್ಲಿ ನನ್ನ ಬೊಗಸೆಗೆ ದಕ್ಕಿದ ಪರಿಸರವಿದು. ಹಿಮಾಲಯದಲ್ಲಿರುವ ಹಲವಾರು ಚಾರಣದ ತಾಣಗಳಲ್ಲಿ ಉತ್ತರಾಖಂಡ ರಾಜ್ಯದ ‘ಹೂಗಳ ಕಣಿವೆ’ಯೂ ಒಂದು. ಆ ತಾಣದಲ್ಲಿ ಚಾರಣವನ್ನು ಮುಗಿಸಿ ಬಂದ ನಾವು, ದಾರಿಯಲ್ಲಿ ಸಿಗುವ ಪಾಂಡುಕೇಶ್ವರದಲ್ಲಿ ಉಳಿದುಕೊಂಡು, ಮರುದಿನ ಅಲ್ಲಿಂದ 23 ಕಿ.ಮೀ ದೂರದಲ್ಲಿರುವ ಬದರಿನಾಥ ಕ್ಷೇತ್ರಕ್ಕೂ ಹೋಗುವ ಯೋಜನೆ ಇತ್ತು. ಆ ಯೋಜನೆಯಂತೆ ಅಲ್ಲೇ ರಾತ್ರಿ ಹೋಟೆಲ್‌ನಲ್ಲಿ ತಂಗಿದ್ದೆವು. ಮರುದಿನ ಬೆಳಿಗ್ಗೆ ನಮ್ಮನ್ನು ಬದರಿನಾಥಕ್ಕೆ ಕರೆದೊಯ್ಯುವ ಕಾರು ಬಂದು ನಿಂತಿತ್ತು. ನಾವು ಸಿದ್ಧರಾಗಿ ಉಪಾಹಾರಕ್ಕೆ ಕರೆ ಬರುವುದನ್ನೇ ಕಾಯುತ್ತಿದ್ದೆವು. ಆದರೆ ಒಂಬತ್ತು ಗಂಟೆಯಾದರೂ, ಅಡುಗೆಯವರ ಸುಳಿವೇ ಇಲ್ಲ. ಇದ್ದಕಿದ್ದಂತೆ ಹೋಟೆಲ್‌ನ ಎದುರಿಗಿದ್ದ ರಸ್ತೆಯಲ್ಲಿ ಮಿಂಚಿನ ಸಂಚಲನ ಶುರುವಾಯಿತು. ಕೆಲವು ಪೊಲೀಸ್‌ ಬೈಕ್ ಹಾಗೂ ಜೀಪುಗಳು ಬದರಿನಾಥದ ಕಡೆಗೆ ಹೋದುವು. ಒಂದೆರಡು ಆಂಬುಲೆನ್ಸ್ ಹಾರ್ನ್ ಮೊಳಗಿಸುತ್ತಾ ಹಿಂಬಾಲಿಸಿತು. ಪೊಲೀಸ್‌ ವಾಹನವೊಂದು ಅತ್ತಿಂದಿತ್ತ ಓಡಾಡುತ್ತಾ ಸ್ಥಳೀಯ ‘ಗಢವಾಲಿ’ ಭಾಷೆ ಯಲ್ಲಿ ಏನೋ ಸಂದೇಶ ಕೊಡುತ್ತಾ ಓಡಾಡತೊಡಗಿತು. ರಸ್ತೆಯಲ್ಲಿ ಜನ ಅಲ್ಲಲ್ಲಿ ಗುಂಪಾಗಿ ಕಾಣಿಸಲಾರಂಭಿಸಿದರು. ಏನೋ ಆಗಬಾರದ್ದು ಆಗಿದೆ ಎಂದಷ್ಟೇ ಅರ್ಥವಾಯಿತು.

ಸ್ವಲ್ಪ ಸಮಯದ ಬಳಿಕ ನಮ್ಮ ಹೋಟೆಲ್‌ನ ಮ್ಯಾನೇಜರ್ ಬಂದು, ‘ಕಾಲು ಗಂಟೆ ಹಿಂದೆ ಇಲ್ಲಿಂದ 3 ಕಿ.ಮೀ ದೂರದಲ್ಲಿ ಪರ್ವತದಿಂದ ದೊಡ್ಡ ಗಾತ್ರದ ಬಂಡೆ ಬದರಿನಾಥದ ಕಡೆಯಿಂದ ಬರುತ್ತಿದ್ದ ಬಸ್ಸೊಂದರ ಮೇಲೆ ಬಿದ್ದು 6 ಜನ ಸ್ಥಳದಲ್ಲಿಯೇ ಮೃತರಾದರು. ಸದ್ಯಕ್ಕೆ ರಸ್ತೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ’ ಎಂದರು. ‘ಬದರಿಗೆ ಹೋಗಲು ಇರುವುದು ಇದೊಂದೇ ದಾರಿ. ಪರಿಸ್ಥಿತಿ ಹೀಗಿರುವಾಗ ಇವತ್ತು ಬದರಿಗೆ ಹೋಗಲು ಸಾಧ್ಯವಿಲ್ಲ. ಮಧ್ಯಾಹ್ನದೊಳಗೆ ರಸ್ತೆ ತೆರವುಗೊಳಿಸಿದರೆ ಪ್ರಯಾಣ ಮುಂದುವರಿಸೋಣ’ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ವಿಷಯ ಕೇಳುತ್ತಿದ್ದಂತೆ ಜೀವವೇ ಬಾಯಿಗೆ ಬಂದಂತಾಯಿತು. ಸ್ವಲ್ಪ ಮೊದಲು ಹೊರಟಿದ್ದರೆ ಆ ಬಂಡೆ ನಮ್ಮ ಮೇಲೆಯೂ ಉರುಳುವ ಸಾಧ್ಯತೆ ಇತ್ತು. ಆಗ ‘ಹಿಮಾಲಯವೇ ನಿನ್ನ ಸೌಂದರ್ಯದೊಳಗೆ ಕ್ರೌರ್ಯವೂ ಇದೆ’ ಎನಿಸಿತು. ಯಾತ್ರೆ ಮುಗಿಸಿ ಹರ್ಷದಿಂದ ಮರಳುತ್ತಿದ್ದವರ ಮೇಲೆ ಯಮರಾಯನ ಅವಕೃಪೆಯಾಗಿದ್ದಕ್ಕೆ ಮರುಗಿದೆವು.

ನಮ್ಮ ಪ್ರಮುಖ ಚಾರಣ ಮುಗಿದಿದ್ದರಿಂದ, ಹೆಚ್ಚುವರಿಯಾಗಿ ಬದರೀನಾಥಕ್ಕೆ ಹೋಗುವುದನ್ನು ಸೇರಿಸಿಕೊಂಡಿದ್ದೆವು. ಆ ಭೇಟಿಗೆ ಕಲ್ಲು ಬಿದ್ದುದರಿಂದ ಸಹಜವಾಗಿಯೇ ಒಂದಿಬ್ಬರಿಗೆ ನಿರಾಸೆ. ಆಗ, ಕಾಯುವುದೊಂದೇ ನಮಗಿದ್ದ ಆಯ್ಕೆ. ಹೀಗಾಗಿ, ಹರಟೆ ಹೊಡೆಯುತ್ತಲೇ, ಪಾಂಡುಕೇಶ್ವರ ಪಟ್ಟಣದಲ್ಲಿ ಸುತ್ತು ಹಾಕಿದೆವು.

ರಸ್ತೆಯ ಉದ್ದಕ್ಕೂ ಮೇಲಕ್ಕೂ ಕೆಳಕ್ಕೂ ನಡೆದಾಡಿದೆವು. ಅಪಘಾತ ಸಂಭವಿಸಿದ ಸ್ಥಳದ ಕಡೆಗೆ ನಿಧಾನವಾಗಿ ಹೆಜ್ಜೆ ಹಾಕಿದೆವು. ಆಗಲೇ ಅಲ್ಲಿ ಜನಸಂದಣಿ ಸೇರಿತ್ತು. ದೊಡ್ಡ ಬಂಡೆ ಬಿದ್ದಿತ್ತು. ಟಿಪ್ಪರ್ ಬಾರದೆ ರಸ್ತೆ ತೆರವಾಗದು.. ಎಂಬ ಇತ್ಯಾದಿ ಸುದ್ದಿ ಹಬ್ಬಿತು. ರಸ್ತೆಯ ಎರಡೂ ಕಡೆ ವಾಹನಗಳು ಸಾಲುಗಟ್ಟಲಾರಂಭಿಸಿದ್ದುವು. ದೇಶದ ವಿವಿಧೆಡೆಗಳಿಂದ ಬಂದ ಯಾತ್ರಿಕರು ಅನಿರೀಕ್ಷಿತವಾದ ಈ ಘಟನೆಯಿಂದಾಗಿ ತಬ್ಬಿಬ್ಬಾಗಿ, ಅಲ್ಲೇ ಲಭ್ಯವಿದ್ದ ಪುಟ್ಟ ಹೋಟೆಲ್ ಗಳಲ್ಲಿ ಊಟ, ವಸತಿಗೆ ವಿಚಾರಿಸುತ್ತಿದ್ದರು.

ಯೋಗ ಬದರಿ ಭೇಟಿ

ಪಾಂಡುಕೇಶ್ವರದಲ್ಲಿದ್ದ ‘ಯೋಗ ಬದರಿ’ ಎಂಬ ಪುರಾತನವಾದ ಪುಟ್ಟ ಗುಡಿಗೆ ಭೇಟಿ ಕೊಟ್ಟೆವು. ಅಲ್ಲಿ, ಸ್ಥಳೀಯ ಮಹಿಳೆಯೊಬ್ಬರು ಪ್ರಸಾದವಾಗಿ ಖೀರು ಹಂಚುತ್ತಿದ್ದರು. ನಮಗೂ ಕೊಟ್ಟರು. ಖೀರ್ ಮೆ ಲಿಖಾ ಥಾ ಹಮಾರಾ ನಾಮ್ ! ಹಳ್ಳಿಯ ಗಲ್ಲಿಗಲ್ಲಿಗಳಲ್ಲಿ ಅಡ್ಡಾಡಿದೆವು. ಕಲ್ಲುಚಪ್ಪಡಿ ಹಾಗೂ ಮರಮಟ್ಟುಗಳನ್ನು ಬಳಸಿ ಕಟ್ಟಿದ ಮನೆಗಳು. ಅಕ್ಕಪಕ್ಕ ಓಡಾಡುತ್ತಿದ್ದ ಹಿರಿಯರು, ಗೌರವರ್ಣದ ಯುವಕ, ಯುವತಿಯರು, ಬೊಂಬೆಯಂತಹ ಮಕ್ಕಳು....ಎಲ್ಲರೂ ಬೊಜ್ಜಿಲ್ಲದ್ದ ಸುಂದರ ಶರೀರದ ಒಡೆಯ ಒಡತಿಯರು. ಅಲ್ಲಿನ ಶುದ್ದ ವಾತಾವರಣ, ಕಲುಷಿತವಾಗದ ಆಹಾರ ಮತ್ತು ದೈಹಿಕ ಶ್ರಮದ ಜೀವನಶೈಲಿಯಿಂದಾಗಿ ಅವರೆಲ್ಲಾ ಅಷ್ಟೊಂದು ಮಾಟವಾಗಿ, ದೇಹಕಾಂತಿಯಿಂದ ಕಂಗೊಳಿಸುತ್ತಿದ್ದಾರೆ ಎನ್ನುತ್ತಾ ನಮಗೆ ಹೋಲಿಸಿಕೊಂಡು ಕರುಬಿದೆವು!

ಬಂಡೆ ಉರುಳಿಬಿದ್ದ ಜಾಗಕ್ಕೂ ಹೋಗಲು ಪ್ರಯತ್ನಿಸಿದೆವಾದರೂ, ಹತ್ತಿರಕ್ಕೆ ಹೋಗಲಾಗಲಿಲ್ಲ. ನಾವು ನೋಡುತ್ತಿದ್ದಂತೆ ಪುನಃ ಸಣ್ಣ ಬಂಡೆಯೊಂದು ಶಬ್ದ ಮಾಡುತ್ತಾ ಉರುಳಿ ಬಿದ್ದಿತು. ‘ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಅಲ್ಲಲ್ಲಿ ಕಲ್ಲುಗಳು ಉರುಳುವುದು ಸಾಮಾನ್ಯ, ಈ ವರ್ಷದ ಪ್ರಥಮ ಅಪಘಾತವಿದು’ ಎಂದರು ಸ್ಥಳೀಯರು. ಸಂಜೆಯಾಗುತ್ತಿದ್ದಂತೆ ಸಾವಿನ ಸಂಖ್ಯೆ ಏರಿದ್ದು ತಿಳಿದು ಬೇಸರವಾಯಿತು.

ರಾತ್ರಿ ನಿರಂತರವಾಗಿ ಮಳೆ ಹನಿಯುತ್ತಿತ್ತು. ಮರುದಿನ ನಮ್ಮ ಮಾರ್ಗದರ್ಶಿ , ‘ಆಪ್ ಆಜ್ ಭೀ ಬದರಿನಾಥ್ ನಹೀ ಜಾ ಸಕೆ.. . ಟಿಪ್ಪರ್ ವಾಲಾ ಭೀ ಮರ್ ಗಯಾ....ಬರ್ಸಾತ್ ಹೋತೊ ಕಲ್ ಭೀ ರಾಸ್ತಾ ಬಂದ್ ಹೋ ಜಾಯೇಗಾ... ಅಪನಾ ರಿಟರ್ನ್ ಟಿಕೆಟ್ ಕೊ ಪ್ರಾಬ್ಲೆಂ ಹೋಗಾ...ಮನ್ ಛೋಟಾ ನಹೀ ಕರೇ ...ನೆಕ್ಟ್ ಟೈಮ್ ಅಚ್ಚೇ ಮೌಸಮ್ ಮೆ ಆಯಿಯೇ’ ಇತ್ಯಾದಿ ಹೇಳಿ ಬೀಳ್ಕೊಟ್ಟರು.

ಇದನ್ನೂ ಓದಿ: ಬದರಿನಾಥ, ಹೇಮಕುಂಡ ಸಾಹಿಬ್‌ ಯಾತ್ರೆಗೆ ಮತ್ತೆ ಅಡ್ಡಿ

ಹೀಗೆ, ಬದರಿನಾಥದಿಂದ ಕೇವಲ 23 ಕಿ.ಮೀ ದೂರದ ಊರಿನಲ್ಲಿ ಒಂದು ದಿನ ವಸತಿ ಮಾಡಿಯೂ ಕ್ಷೇತ್ರಕ್ಕೆ ಭೇಟಿ ಕೊಡಲಾಗದೆ ಹಿಂತಿರುಗಿದೆವು. ನಾನು ಮೊದಲೊಮ್ಮೆ ಬದರಿಗೆ ಹೋಗಿದ್ದ ಕಾರಣ ಹೆಚ್ಚೇನೂ ನಿರಾಸೆಯಾಗಲಿಲ್ಲ. ‘ಪಾಲಿಗೆ ಬಂದಿದ್ದು ಪಂಚಾಮೃತ’ಎಂಬಂತೆ, ಅನಿರೀಕ್ಷಿತವಾಗಿ ಹಿಮಾಲಯದ ಹಳ್ಳಿಯೊಂದರಲ್ಲಿ ಗಲ್ಲಿಗಳಲ್ಲಿ ಅಡ್ಡಾಡುವ ಅನುಭವವೂ ನಮ್ಮ ನೆನಪಿನ ಜೋಳಿಗೆಯಲ್ಲಿ ಜೋಪಾನವಾಗಿ ಸೇರಿತು.

ಚಿತ್ರಗಳು: ಲೇಖಕರವು

Post Comments (+)