ಕಾಯಿಲೆಗಳು ಹರಡುವ ಬಗೆ ಹೇಗೆ?

ಗುರುವಾರ , ಜೂನ್ 20, 2019
26 °C

ಕಾಯಿಲೆಗಳು ಹರಡುವ ಬಗೆ ಹೇಗೆ?

Published:
Updated:

ಕ್ಷಯ ರೋಗದಿಂದ ಬಳಲುತ್ತಿದ್ದ ಮಗನನ್ನು ಕರೆತಂದ ಆಕೆ ಮಗನನ್ನು ದೂರುತ್ತಾ ‘ನೋಡಿ ಮೇಡಂ, ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತೆರೆದಿಟ್ಟ ತಿಂಡಿ ತಿನಿಸುಗಳನ್ನು ತಿನ್ನಬೇಡ ಎಂದರೂ ಕೇಳುವುದಿಲ್ಲ. ಇದೀಗ ಈ ಕಾಯಿಲೆ ತಂದುಕೊಂಡಿದ್ದಾನೆ’ ಎಂದರು.

ಆದರೆ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿನಿಸುಗಳನ್ನು ತಿನ್ನುವುದರಿಂದ ಕ್ಷಯರೋಗ ಬರುವುದಿಲ್ಲ. ಅದು ಹರಡುವ ಬಗೆಯೇ ಬೇರೆ. ಇದನ್ನು ವಿವರಿಸಿದಾಗ ಆಕೆಗೆ ವಿಷಯ ಮನದಟ್ಟಾಯಿತು.

ಸಾಂಕ್ರಾಮಿಕ ರೋಗಗಳು ಹರಡುವ ಬಗೆಯು ಅದು ಆವರಿಸುವ ಅಂಗಾಂಗಗಳ ಮೇಲೆ ಮತ್ತು ಕಾಯಿಲೆಯನ್ನುಂಟು ಮಾಡುವ ರೋಗಾಣುವಿನ ಜೀವನಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ.

ಯಾವ ಕಾಯಿಲೆ ಹೇಗೆ ಹರಡುತ್ತದೆ?

ರೋಗಿಯೊಂದಿಗಿನ ಸಂಪರ್ಕ: ಆರೋಗ್ಯವಂತ ವ್ಯಕ್ತಿಯು ರೋಗಿಯೊಡನೆ ನೇರ ಸಂಪರ್ಕಕ್ಕೆ ಬಂದಾಗ ಅಥವಾ ರೋಗಿಯು ಬಳಸಿದ ಕೆಲವು ವಸ್ತುಗಳೊಂದಿಗೆ (ಕರವಸ್ತ್ರ, ಪೆನ್ನು, ಪೆನ್ಸಿಲ್, ಬಟ್ಟೆಗಳು, ಮಕ್ಕಳು ಬಳಸಿದ ಆಟಿಕೆಗಳು) ಸಂಪರ್ಕಕ್ಕೆ ಬಂದಾಗ ಕಾಯಿಲೆ ತಗಲಬಹುದು. ಕಣ್ಣಿನ ಕೆಲವು ಸೋಂಕುಗಳು ರೋಗಿಯು ಬಳಸುವ ಕರವಸ್ತ್ರದಿಂದ ಆರೋಗ್ಯವಂತ ವ್ಯಕ್ತಿಗೆ ಹರಡುವ ಸಂಭವ ಹೆಚ್ಚು.

ರೋಗಿಯ ಉಸಿರು ಅಥವಾ ಬಾಯಿಯ ಸ್ರಾವದ ಮೂಲಕ: ರೋಗಾಣುವು ಆರೋಗ್ಯವಂತ ವ್ಯಕ್ತಿಯ ದೇಹವನ್ನು ಆತನ ಉಸಿರಿನ ಮೂಲಕ ಪ್ರವೇಶಿಸಬಲ್ಲದು. ಜ್ವರ, ಎಚ್1ಎನ್1, ಕ್ಷಯ ಹರಡುವುದು ಈ ಬಗೆಯಲ್ಲಿಯೇ. ರೋಗಿಯು ಹೊರ ಬಿಡುವ ಶ್ವಾಸದ ಮೂಲಕ ಹೊರ ಬರುವ ರೋಗಾಣುಗಳು ಆತನ ಮೂಗು ಮತ್ತು ಬಾಯಿಯ ಮೂಲಕ ಹೊರ ಬಂದು ಗಾಳಿಯಲ್ಲಿ ಬಹುಕಾಲ ತೇಲುತ್ತಾ ಇದ್ದು ರೋಗವನ್ನು ಮತ್ತೊಬ್ಬರಿಗೆ ಹರಡುತ್ತವೆ.

ಕಲುಷಿತ ಆಹಾರ ಹಾಗೂ ಪಾನೀಯಗಳ ಸೇವನೆ: ಅತಿಸಾರ, ಕರುಳುಬೇನೆ, ಕಾಲರಾ, ಆಮಶಂಕೆ, ಕೆಲವು ಬಗೆಯ ಕಾಮಾಲೆ ( ಹೆಪಟೈಟಿಸ್ ಎ ಮತ್ತು ಇ ), ಕೆಲವು ಬಗೆಯ ಜಂತು ಹುಳುಗಳ ಬಾಧೆ ಮೊದಲಾದುವು ಈ ಬಗೆಯಲ್ಲಿ ಹರಡುತ್ತವೆ. ರೋಗದಿಂದ ಬಳಲುವ ವ್ಯಕ್ತಿಯ ಮಲದಲ್ಲಿ ವಿಸರ್ಜನೆಯಾಗುವ ರೋಗಾಣುಗಳು ಆಹಾರ ಪದಾರ್ಥಗಳನ್ನು ಕಲುಷಿತಗೊಳಿಸುತ್ತವೆ.

ರೋಗಾಣು ನೇರವಾಗಿ ವ್ಯಕ್ತಿಯ ಅಂಗಾಂಶದೊಳಗೆ ಹೊಕ್ಕಾಗ: ರೇಬಿಸ್, ಧನುರ್ವಾಯು, ಕೆಲವು ರೀತಿಯ ವೈರಾಣುವಿನ ಸೋಂಕುಗಳು ಹರಡುವುದು ಹೀಗೆಯೇ. ರೇಬಿಸ್ ಕಾಯಿಲೆಯಲ್ಲಿ ವೈರಾಣುವು ಪ್ರಾಣಿ ಸಾಮಾನ್ಯವಾಗಿ ನಾಯಿ) ಕಚ್ಚಿದಾಗ ಉಂಟಾದ ಗಾಯದ ಮೂಲಕ ನೇರವಾಗಿ ವ್ಯಕ್ತಿಯ ದೇಹವನ್ನು ಸೇರುತ್ತದೆ. ಹಾಗೆಯೇ ಮಣ್ಣು ಹಾಗೂ ಧೂಳಿನಲ್ಲಿ ಬಹುಕಾಲ ವಾಸಿಸಬಲ್ಲ ಧನುರ್ವಾಯು ರೋಗಾಣುವು ಕೂಡ ದೇಹದ ಮೇಲಿನ ಗಾಯಗಳ ಮೂಲಕ ವ್ಯಕ್ತಿಯ ಶರೀರವನ್ನು ಪ್ರವೇಶಿಸುತ್ತದೆ. ಕೆಲವೊಂದು ವಿಧದ ಕಾಮಾಲೆ ( ಹೆಪಟೈಟಿಸ್ ಬಿ, ಡಿ ಮತ್ತು ಸಿ) ಹಾಗೂ ಏಡ್ಸ್ ಕಾಯಿಲೆಯಿಂದ ಬಳಲುವ ರೋಗಿಗಳು ಬಳಸಿದ ಸಿರಿಂಜ್‌ಗಳನ್ನು ಆರೋಗ್ಯವಂತ ವ್ಯಕ್ತಿಯು ಬಳಸಿದಾಗ ವೈರಾಣುಗಳು ನೇರವಾಗಿ ಅಂಗಾಂಶದೊಳಗೆ, ಮುಖ್ಯವಾಗಿ ರಕ್ತದಲ್ಲಿ ಸೇರಿಕೊಳ್ಳುವ ಸಾಧ್ಯತೆಗಳಿರುತ್ತವೆ.

ಕೀಟಗಳ ಮೂಲಕ: ಕೆಲವು ಬಗೆಯ ಕೀಟಗಳು ಯಾಂತ್ರಿಕವಾಗಿ ರೋಗಾಣುವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಸಹಕರಿಸುತ್ತವೆ. ಉದಾಹರಣೆಗೆ ನೊಣವು ರೋಗಗ್ರಸ್ತ ವ್ಯಕ್ತಿಯ ಮಲದಿಂದ ರೋಗಾಣುವನ್ನು ಬೇರೆಡೆಗೆ ಸಾಗಿಸಲು ಸಹಕರಿಸುವುದು. ಆದರೆ, ಇನ್ನು ಕೆಲವು ಕೀಟಗಳು ರೋಗಾಣುವಿನ ಬೆಳವಣಿಗೆಗೆ ತಮ್ಮ ಶರೀರದಲ್ಲಿಯೇ ವ್ಯವಸ್ಥೆ ಮಾಡಿಕೊಡುವುದರ ಮೂಲಕ ಜೈವಿಕ ರೋಗವಾಹಕಗಳಾಗಿ ಪಾತ್ರವಹಿಸುತ್ತವೆ. ಉದಾಹರಣೆಗೆ ಸೊಳ್ಳೆಯು ಮಲೇರಿಯಾ, ಡೆಂಗಿ, ಚಿಕುನ್ ಗುನ್ಯಾ ಕಾಯಿಲೆಯನ್ನು ಹರಡುವುದು.

ಜನ್ಮಜಾತವಾಗಿ: ಗರ್ಭಿಣಿಯು ಕಾಯಿಲೆಯಿಂದ ಬಳಲುತ್ತಿದ್ದಾಗ ಅವಳಲ್ಲಿನ ರೋಗಾಣುಗಳು ಮಾಸು ಚೀಲದ ಮೂಲಕ ಗರ್ಭಾಶಯದಲ್ಲಿ ಬೆಳೆಯುತ್ತಿರುವ ಮಗುವನ್ನು ತಲುಪಿ ಅಲ್ಲಿ ಕಾಯಿಲೆ ಪ್ರಕ್ರಿಯೆಯನ್ನು ಆರಂಭಿಸಬಹುದು. ಇದು ಕೆಲವೊಮ್ಮೆ ಗರ್ಭಪಾತಕ್ಕೂ ಕಾರಣವಾಗಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ನ್ಯೂನತೆಗಳಿರುವ ಶಿಶುವಿನ ಜನನಕ್ಕೆ ಕಾರಣವಾಗಬಹುದು. ಜನ್ಮಜಾತ ಸಿಫಿಲಿಸ್ ಶಿಶುವಿನಲ್ಲಿ ಬೇರೆ ಬೇರೆ ನ್ಯೂನತೆಗಳಿಗೆ ಕಾರಣವಾಗಬಹುದು.

ಆಸ್ಪತ್ರೆ ಹಾಗೂ ಪ್ರಯೋಗಾಲಯಗಳಿಂದ ರೋಗಾಣು ಹರಡುವಿಕೆ: ಅಪರೂಪದ ಸಂದರ್ಭಗಳಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆಂದು ಮಾಡುವ ಕೆಲವು ವಿಧಾನಗಳು ಮೊದಲೇ ಕಾಯಿಲೆಯಿಂದ ಬಳಲುತ್ತಿರುವ ರೋಗಿಗೆ ಮತ್ತೊಂದು ರೋಗಾಣುವನ್ನು ಹರಡುವ ಸಾಧ್ಯತೆಗಳಿರುತ್ತವೆ. ಹಾಗೆಯೇ ಆಸ್ಪತ್ರೆಯ ಪ್ರಯೋಗಾಲಯಗಳಲ್ಲಿ ಕಾರ್ಯನಿರ್ವಹಿಸುವ ತಂತ್ರಜ್ಞರು ಇಂತಹ ಅಪಾಯಕ್ಕೆ ಈಡಾಗುವುದು ಹೆಚ್ಚು. ಸೋಂಕನ್ನು ಹರಡಬಲ್ಲ ರೋಗಿಯ ರಕ್ತ, ಕಫ, ಮೂತ್ರ, ಮಲ ಮುಂತಾದವುಗಳನ್ನು ತಪಾಸಣೆ ಮಾಡುವಾಗ ತಂತ್ರಜ್ಞರು ಸರಿಯಾದ ಕೈಗವಚಗಳನ್ನು ಹಾಗೂ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಲು ತೆಳುವಾದ ಪಾರದರ್ಶಕ ಮೋರೆ ಮುಸುಕುಗಳನ್ನು ಉಪಯೋಗಿಸುವುದು ಸೂಕ್ತ.

ಮುನ್ನೆಚ್ಚರಿಕೆಯ ಕ್ರಮಗಳು
ವೈಯಕ್ತಿತ ಸ್ವಚ್ಛತೆ:
ಆಹಾರವನ್ನು ತಯಾರಿಸುವ, ಬಡಿಸುವ ಹಾಗೂ ಸೇವಿಸುವ ಮೊದಲು ಸಾಬೂನನ್ನು ಬಳಸಿ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು. ಶೌಚಾಲಯಕ್ಕೆ ಹೋಗಿ ಬಂದ ನಂತರ ಕೈಕಾಲುಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು.

ಸೊಳ್ಳೆಗಳಿಂದ ರಕ್ಷಣೆ: ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳ ಬಳಕೆ. ಮನೆಯ ಒಳಗೂ ಮತ್ತು ಹೊರಗೂ ಸೊಳ್ಳೆಗಳ ಸಂತಾನಾಭಿವೃದ್ಧಿಗೆ ಅವಕಾಶ ಕೊಡದಂತೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು.

ಉಣ್ಣೆಗಳಿಂದ ರಕ್ಷಣೆ: ಕಾಡು ಪ್ರದೇಶಗಳಲ್ಲಿ ಕೆಲಸ ಮಾಡುವವರು ಸೂಕ್ತ ಎಣ್ಣೆ ನಿವಾರಕಗಳನ್ನು ಬಳಸಿ ಉಣ್ಣೆ ಕಡಿತದಿಂದ ರಕ್ಷಿಸಿಕೊಳ್ಳುವುದು.

ರಸ್ತೆ ಬದಿಯಲ್ಲಿ ಮಾರಾಟವಾಗುವ ತೆರೆದಿಟ್ಟ ತಿಂಡಿ ತಿನಿಸುಗಳನ್ನು ತಿನ್ನದಿರುವುದು.

ಹೊರಗಡೆ ತಿನ್ನುವಾಗ ಆದಷ್ಟು ಬೇಯಿಸಿದ ತಿನಿಸುಗಳನ್ನು ಮಾತ್ರವೇ ಬಳಸುವುದು. ಬೇಯಿಸದ ಪದಾರ್ಥಗಳಾದ ಮೊಸರು, ಮಜ್ಜಿಗೆ, ಕೋಸಂಬರಿ ಮತ್ತಿತರ ಪದಾರ್ಥಗಳನ್ನು ತಿನ್ನದಿರುವುದೇ ಒಳಿತು.

ಹೊಲ ಗದ್ದೆಗಳಲ್ಲಿ ನಡೆಯುವಾಗ ಸೂಕ್ತ ಪಾದರಕ್ಷೆಗಳನ್ನು ಬಳಸುವುದು. ಕೆಲಸ ಮುಗಿಸಿ ಬಂದ ನಂತರ ಕೈಕಾಲುಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಿಕೊಳ್ಳುವುದು.

ದೇಹದ ಯಾವುದೇ ಭಾಗದಲ್ಲಿ ಗಾಯಗಳಾದಾಗ ನಿರ್ಲಕ್ಷಿಸದೆ ಧನುರ್ವಾಯು ಲಸಿಕೆಯನ್ನು ಹಾಕಿಸಿಕೊಳ್ಳುವುದು.

ಅಧಿಕ ಪ್ರೊಟೀನ್ ಹಾಗೂ ಜೀವಸತ್ವಗಳಿರುವ ಪೌಷ್ಟಿಕ ಆಹಾರದ ಸೇವನೆಗೆ ಮಹತ್ವ ಕೊಟ್ಟು ನಮ್ಮ ಶರೀರದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವುದು.

 ಕೆಲವು ಕಾಯಿಲೆಗಳ ವಿರುದ್ಧ ಲಭ್ಯವಿರುವ ಲಸಿಕೆಗಳನ್ನು ವೈದ್ಯರ ಸಲಹೆಯ ಮೇರೆಗೆ ಹಾಕಿಸಿಕೊಳ್ಳುವುದು. ಉದಾಹರಣೆಗೆ ಹೆಪಟೈಟಿಸ್ ಎ (ಕಾಮಾಲೆ), ಹೆಪಟೈಟಿಸ್ ಬಿ ( ಇನ್ನೊಂದು ಬಗೆಯ ಕಾಮಾಲೆ), ಟೈಫಾಯ್ಡ್, ಧನುರ್ವಾಯು ಮೊದಲಾದವು.

ವರ್ಷಕ್ಕೊಮ್ಮೆ ಜಂತು ಹುಳುವಿನ ಬಾಧೆಗಾಗಿ ಮಾತ್ರೆಗಳನ್ನು ಸೇವಿಸುವುದು.

ಮುನ್ನೆಚ್ಚರಿಕೆಯ ಕ್ರಮಗಳು

* ವೈಯಕ್ತಿತ ಸ್ವಚ್ಛತೆ: ಆಹಾರವನ್ನು ತಯಾರಿಸುವ, ಬಡಿಸುವ ಹಾಗೂ ಸೇವಿಸುವ ಮೊದಲು ಸಾಬೂನನ್ನು ಬಳಸಿ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು. ಶೌಚಾಲಯಕ್ಕೆ ಹೋಗಿ ಬಂದ ನಂತರ ಕೈಕಾಲುಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು.

* ಸೊಳ್ಳೆಗಳಿಂದ ರಕ್ಷಣೆ: ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳ ಬಳಕೆ. ಮನೆಯ ಒಳಗೂ ಮತ್ತು ಹೊರಗೂ ಸೊಳ್ಳೆಗಳ ಸಂತಾನಾಭಿವೃದ್ಧಿಗೆ ಅವಕಾಶ ಕೊಡದಂತೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು.

* ಉಣ್ಣೆಗಳಿಂದ ರಕ್ಷಣೆ: ಕಾಡು ಪ್ರದೇಶಗಳಲ್ಲಿ ಕೆಲಸ ಮಾಡುವವರು ಸೂಕ್ತ ಎಣ್ಣೆ ನಿವಾರಕಗಳನ್ನು ಬಳಸಿ ಉಣ್ಣೆ ಕಡಿತದಿಂದ ರಕ್ಷಿಸಿಕೊಳ್ಳುವುದು.

* ರಸ್ತೆ ಬದಿಯಲ್ಲಿ ಮಾರಾಟವಾಗುವ ತೆರೆದಿಟ್ಟ ತಿಂಡಿ ತಿನಿಸುಗಳನ್ನು ತಿನ್ನದಿರುವುದು.

* ಹೊರಗಡೆ ತಿನ್ನುವಾಗ ಆದಷ್ಟು ಬೇಯಿಸಿದ ತಿನಿಸುಗಳನ್ನು ಮಾತ್ರವೇ ಬಳಸುವುದು. ಬೇಯಿಸದ ಪದಾರ್ಥಗಳಾದ ಮೊಸರು, ಮಜ್ಜಿಗೆ, ಕೋಸಂಬರಿ ಮತ್ತಿತರ ಪದಾರ್ಥಗಳನ್ನು ತಿನ್ನದಿರುವುದೇ ಒಳಿತು.

* ಹೊಲ ಗದ್ದೆಗಳಲ್ಲಿ ನಡೆಯುವಾಗ ಸೂಕ್ತ ಪಾದರಕ್ಷೆಗಳನ್ನು ಬಳಸುವುದು. ಕೆಲಸ ಮುಗಿಸಿ ಬಂದ ನಂತರ ಕೈಕಾಲುಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಿಕೊಳ್ಳುವುದು.

* ದೇಹದ ಯಾವುದೇ ಭಾಗದಲ್ಲಿ ಗಾಯಗಳಾದಾಗ ನಿರ್ಲಕ್ಷಿಸದೆ ಧನುರ್ವಾಯು ಲಸಿಕೆಯನ್ನು ಹಾಕಿಸಿಕೊಳ್ಳುವುದು.

* ಅಧಿಕ ಪ್ರೊಟೀನ್ ಹಾಗೂ ಜೀವಸತ್ವಗಳಿರುವ ಪೌಷ್ಟಿಕ ಆಹಾರದ ಸೇವನೆಗೆ ಮಹತ್ವ ಕೊಟ್ಟು ನಮ್ಮ ಶರೀರದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವುದು.

* ಕೆಲವು ಕಾಯಿಲೆಗಳ ವಿರುದ್ಧ ಲಭ್ಯವಿರುವ ಲಸಿಕೆಗಳನ್ನು ವೈದ್ಯರ ಸಲಹೆಯ ಮೇರೆಗೆ ಹಾಕಿಸಿಕೊಳ್ಳುವುದು. ಉದಾಹರಣೆಗೆ ಹೆಪಟೈಟಿಸ್ ಎ (ಕಾಮಾಲೆ), ಹೆಪಟೈಟಿಸ್ ಬಿ ( ಇನ್ನೊಂದು ಬಗೆಯ ಕಾಮಾಲೆ), ಟೈಫಾಯ್ಡ್, ಧನುರ್ವಾಯು ಮೊದಲಾದವು.

* ವರ್ಷಕ್ಕೊಮ್ಮೆ ಜಂತು ಹುಳುವಿನ ಬಾಧೆಗಾಗಿ ಮಾತ್ರೆಗಳನ್ನು ಸೇವಿಸುವುದು.

(ಲೇಖಕಿ ಶಿವಮೊಗ್ಗದಲ್ಲಿ ಪ್ಯಾಥಾಲಜಿಸ್ಟ್‌)

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !