ರಸ್ತೆಗಳಿಗೆ ಕಾಂಕ್ರಿಟ್ ‘ಟೋಪಿ’ ಹಾಕುವ ವೈಟ್ ಟಾಪಿಂಗ್ ಯೋಜನೆಯನ್ನು ಸಾರ್ವಜನಿಕರು ಯಾರೂ ಕೇಳಿರಲಿಲ್ಲ. ಆದರೆ, ಆಡಳಿತಗಾರರು ಬಿಡಲಿಲ್ಲ. ಹೆಚ್ಚಿನ ಕಾಸು ಬೇಡುವ, ದಟ್ಟಣೆಗೆ ಕಾರಣವಾಗುವ, ಮನೆಗಳಿಗೆ ನೀರು ನುಗ್ಗಿಸುವ, ಹಗರಣದ ವಾಸನೆ ಹೊರಸೂಸಿರುವ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಅದರಿಂದ ಆಗಿರುವ ಎಡವಟ್ಟುಗಳ ಮೇಲೆ ಬೆಳಕು ಚೆಲ್ಲಿದೆ ಈ ವಾರದ ‘ಒಳನೋಟ’

ಬೆಂಗಳೂರು: ಬೊಕ್ಕಸದ ಹಣ ಅಪವ್ಯಯ ಆಗಬೇಕು; ಅದರಲ್ಲಿ ಹಗರಣವಾಗಿ ತಮಗೂ ‘ಲಾಭ’ ಸಿಗಬೇಕು; ಕಾಮಗಾರಿ ಹೆಸರಿನಲ್ಲಿ ಜನಸಾಮಾನ್ಯರು ವರ್ಷಗಟ್ಟಲೆ ಚಿತ್ರಹಿಂಸೆ ಅನುಭವಿಸಬೇಕು; ಮಳೆ ಬಂದಾಗ ರಸ್ತೆಯ ನೀರು ಮನೆಗಳಿಗೇ ನುಗ್ಗಬೇಕು – ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಒಟ್ಟಾಗಿ ಇಂತಹ ಯೋಜನೆಗೆ ಇಟ್ಟ ಹೆಸರೇ ವೈಟ್ ಟಾಪಿಂಗ್!

ರಾಜಧಾನಿಯಲ್ಲೀಗ ಸಂಚಾರ ವ್ಯವಸ್ಥೆಯ ದಿಕ್ಕನ್ನೇ ತಪ್ಪಿಸಿ ನಡೆಸಲಾಗುತ್ತಿರುವ ವೈಟ್ ಟಾಪಿಂಗ್ (ಟಾರು ರಸ್ತೆಯ ಮೇಲೆ ಕಾಂಕ್ರಿಟ್ ಹೊದಿಕೆ ನಿರ್ಮಾಣ) ಕಾಮಗಾರಿಯ ಹಿನ್ನೆಲೆಯನ್ನು ಕೆದಕುತ್ತಾ ಹೋದರೆ ಈ ‘ಬಿಳಿ ಹೊದಿಕೆ’ ಯೋಜನೆ (ಬೊಕ್ಕಸಕ್ಕೆ ಬಿಳಿಯಾನೆ?) ಕುರಿತು ಬರಿ ‘ಕಪ್ಪು ಕಥೆ’ಗಳೇ ಕಿವಿಗೆ ಬೀಳುತ್ತವೆ.

ವಿಧಾನಸಭೆ ಚುನಾವಣೆ ಹತ್ತಿರವಾದಾಗ ಆಗಿನ ಕಾಂಗ್ರೆಸ್ ಸರ್ಕಾರ (ಅದರಲ್ಲೂ ಆ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದ ಕೆ.ಜೆ. ಜಾರ್ಜ್) ಸುಮಾರು ₹ 1,800 ಕೋಟಿ ವೆಚ್ಚದ ಉಕ್ಕಿನ ಸೇತುವೆ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಯತ್ನಿಸಿ, ಸಾರ್ವಜನಿಕರ ತೀವ್ರ ವಿರೋಧದ ಬಿಸಿಯಲ್ಲಿ ಕೈಸುಟ್ಟುಕೊಳ್ಳುವಂತಾಯಿತು. ಆಗ ಅಸ್ತವ್ಯಸ್ತಗೊಂಡ ‘ವ್ಯವಹಾರ’ವನ್ನು ಸರಿದೂಗಿಸುವ ಸಲುವಾಗಿಯೇ ಸದ್ದಿಲ್ಲದೆ ವೈಟ್ ಟಾಪಿಂಗ್ ಯೋಜನೆ ಬಂತು ಎನ್ನುತ್ತವೆ ನಗರಾಭಿವೃದ್ಧಿ ಇಲಾಖೆ ಮೂಲಗಳು.

ಯಾರದ್ದೋ ಹಿತ ಕಾಯಲು ಅನುಷ್ಠಾನಕ್ಕೆ ಬಂದ ಈ ಯೋಜನೆಯಿಂದ ಇಡೀ ನಗರದ ಜನ ಹಿಂಸೆ ಅನುಭವಿಸಬೇಕಿದೆ. 11ತಿಂಗಳ ಈ ಕಾಮಗಾರಿ ಕಳೆದ ಜುಲೈನಲ್ಲೇ ಮುಗಿಯಬೇಕಿತ್ತು. ನಿಗದಿಪಡಿಸಿದ್ದ ಕಾಲಾವಧಿ ಕೊನೆಗೊಂಡು ಮತ್ತೆ ನಾಲ್ಕು ತಿಂಗಳು ಕಳೆದರೂ ಪೂರ್ಣಗೊಂಡಿರುವ ಕಾಮಗಾರಿಯ ಪ್ರಮಾಣ ಶೇ 15ರಷ್ಟು ಮಾತ್ರ!

ಕಾಮಗಾರಿ ನಡೆಸಲು ಅಗತ್ಯವಾದ ಸಂಚಾರ ಮಾರ್ಗ ಬದಲಾವಣೆಗೆ ಪೊಲೀಸರಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ದೂರಿದರೆ, ಅವರಿಗೆ ನಗರದ ಸಂಚಾರ ದಟ್ಟಣೆ ಮತ್ತು ಅದರ ಪರಿಣಾಮಗಳ ಅರಿವೇ ಇಲ್ಲ ಎಂದು ಪೊಲೀಸರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹೀಗಿದೆ ಕಥೆ: ಮೊದಲ ಹಂತದಲ್ಲಿ ನಗರದ 29 ರಸ್ತೆಗಳಿಗೆ ಕಾಂಕ್ರಿಟ್ ಮೇಲು ಹೊದಿಕೆ ಹಾಕಿಸಲು ನಿರ್ಧರಿಸಿದ ಸರ್ಕಾರ, ಹೈದರಾಬಾದ್ನ ಮಧುಕಾನ್ ಪ್ರಾಜೆಕ್ಟ್ಸ್ ಮತ್ತು ಎನ್ಸಿಸಿ ಎಂಬ ಕಂಪನಿಗಳಿಗೆ ಕಾಮಗಾರಿಯನ್ನು ಗುತ್ತಿಗೆ ನೀಡಿದೆ. ಈ ಯೋಜನೆಗಾಗಿ ಅದು ₹ 986.46 ಕೋಟಿ ಖರ್ಚು ಮಾಡುತ್ತಿದೆ.

ಇದನ್ನೂ ಓದಿ:ಹತ್ತಿರವಿದ್ದೂ ದೂರವಾಯಿತು ಮನೆ!

ನಗರದ ರಸ್ತೆಗಳಲ್ಲಿ ಕಾಮಗಾರಿ ನಡೆಸುವುದು ಬಲು ಸಂಕೀರ್ಣವಾದ ಕೆಲಸ. ವಾಹನ ಹಾಗೂ ಜನ ಸಂಚಾರ ನಿಭಾಯಿಸುವುದು, ರಸ್ತೆ ಅಡಿಯಲ್ಲಿರುವ ಸೇವಾ ಮಾರ್ಗಗಳನ್ನು ಸ್ಥಳಾಂತರಿಸುವುದು – ಹೀಗೆ ಹತ್ತಾರು ಸಮಸ್ಯೆಗಳು. ಆದರೆ, ಕಾಮಗಾರಿ ಗುತ್ತಿಗೆ ಪಡೆದ ಮಧುಕಾನ್ ಪ್ರಾಜೆಕ್ಟ್ಸ್ನ ಕಮ್ಮ ಶ್ರೀನಿವಾಸ ರಾವ್ ಅವರಿಗೆ ಯಾವ ಸಂಶಯವೂ ಕಾಡಲಿಲ್ಲ. ಅದಕ್ಕಾಗಿಯೇ ತಾಂತ್ರಿಕ ಬಿಡ್ ಸಂದರ್ಭದಲ್ಲಿ ಅವರು ಒಂದೇ ಒಂದು ಪ್ರಶ್ನೆಯನ್ನೂ ಕೇಳಲಿಲ್ಲ!

ಗುತ್ತಿಗೆ ಒಪ್ಪಂದದ ಪ್ರಕಾರ, 2017ರ ಆಗಸ್ಟ್ನಲ್ಲಿ ಕಾಮಗಾರಿ ಶುರುವಾಗಿದೆ. ಈ ವರ್ಷದ ಜುಲೈನಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ನಗರದಲ್ಲಿ ಸದ್ಯ ನಾವು ಕಾಣುತ್ತಿರುವುದು ಏನನ್ನು? ಅಗೆದು ಹಾಕಲಾದ ಚರಂಡಿ, ಬಗೆದ ಹೊಟ್ಟೆಯಿಂದ ಕರುಳು ಹೊರಬಿದ್ದಂತೆ ಹರಡಿಕೊಂಡಿರುವ ಬಣ್ಣ–ಬಣ್ಣದ ಕೇಬಲ್, ರಾಶಿಬಿದ್ದ ಕಲ್ಲು–ಮರಳು, ಸಂಚಾರಕ್ಕೆ ಆಸ್ಪದವಿಲ್ಲದ ಮಾರ್ಗ... ಕಳೆದ ಒಂದು ವರ್ಷದಿಂದ ಈ ರಸ್ತೆಗಳೆಲ್ಲ ಭಗ್ನಾವಶೇಷಗಳನ್ನು ಹೊತ್ತ ಪಾಳು ಪ್ರದೇಶಗಳಂತೆ ಭಾಸವಾಗುತ್ತಿವೆ.

‘ವಿಳಂಬವಾಗಿರುವುದು ನಿಜ, ಇದುವರೆಗೆ ಎಂಟು ರಸ್ತೆಗಳಲ್ಲಿ ಮಾತ್ರ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ’ ಎಂದು ಒಪ್ಪಿಕೊಳ್ಳುತ್ತಾರೆ ಬಿಬಿಎಂಪಿ ಮುಖ್ಯ ಎಂಜಿನಿಯರ್ (ಯೋಜನೆ) ಕೆ.ಟಿ. ನಾಗರಾಜ್. ‘ಮಾರ್ಗ ಬದಲಾವಣೆಗೆ ಬದಲಿ ರಸ್ತೆಗಳು ಸಿಗಲಿಲ್ಲ. ಅಲ್ಲದೆ, ಮಧ್ಯೆ ಚುನಾವಣೆಗಳು ಬೇರೆ ಬಂದಿದ್ದರಿಂದ ನೀತಿ ಸಂಹಿತೆ ಜಾರಿಯಲ್ಲಿತ್ತು. ಹೀಗಾಗಿ ಕಾಮಗಾರಿ ತಡವಾಗಿದೆ’ ಎನ್ನುತ್ತಾರೆ.

ಚುನಾವಣೆ ಇರುವುದು ಮತ್ತು ಬದಲಿ ಮಾರ್ಗಗಳು ಇಲ್ಲದಿರುವುದು ದಿಗ್ಗನೇ ಉದ್ಭವಿಸಿದ ಸಮಸ್ಯೆಗಳಲ್ಲ. ಇವನ್ನೆಲ್ಲ ಗಮನದಲ್ಲಿ ಇರಿಸಿಕೊಂಡಿದ್ದ ಬಿಬಿಎಂಪಿಗೆ ಜುಲೈನಲ್ಲಿ ಕಾಮಗಾರಿ ಮುಗಿಯುವುದಿಲ್ಲ ಎಂಬುದರ ಸಂಪೂರ್ಣ ಅರಿವಿತ್ತು. ಹೀಗಿದ್ದೂ ಸುಳ್ಳು ಕಾಲಮಿತಿ ನಿಗದಿ ಮಾಡಿ ಜನರ ಕಣ್ಣಿಗೆ ಮಣ್ಣೆರೆಚಿರುವುದು ನಿಚ್ಚಳ.

‘ಹನ್ನೊಂದು ತಿಂಗಳುಗಳಲ್ಲಿ ಯೋಜನೆ ಅನುಷ್ಠಾನಗೊಳಿಸದ ಗುತ್ತಿಗೆದಾರರಿಗೆ ದಂಡ ಹಾಕುವುದಿಲ್ಲವೇ’ ಎಂದು ನಾಗರಾಜ್ ಅವರನ್ನು ಪ್ರಶ್ನಿಸಿದರೆ, ‘ಸರ್ಕಾರದ ಮಟ್ಟದಲ್ಲಿ ವಿವಿಧ ಕಾರಣಗಳಿಗಾಗಿ ರಸ್ತೆ ಹಸ್ತಾಂತರಿಸುವುದು ತಡವಾಗಿದ್ದರಿಂದ ಗುತ್ತಿಗೆದಾರರಿಗೆ ಕಾಲಮಿತಿಯಲ್ಲಿ ಕೆಲಸ ಮಾಡಲು ಆಗಿಲ್ಲ’ ಎಂದು ಹಾರಿಕೆ ಉತ್ತರ ನೀಡುತ್ತಾರೆ.

ಶೇ 25ರಷ್ಟು ಅಧಿಕ ಹಣ

ಟೆಂಡರ್ನಲ್ಲಿ ನಿಗದಿಯಾದ ಮೊತ್ತಕ್ಕಿಂತ ಶೇ 25ರಷ್ಟು ಹೆಚ್ಚುವರಿ ಮೊತ್ತಕ್ಕೆ ಕಾಮಗಾರಿಯನ್ನು ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಕೈಗೊಳ್ಳಬೇಕಾದ ರಸ್ತೆಯನ್ನು ಹಸ್ತಾಂತರಿಸಲು ಬಿಬಿಎಂಪಿ ತಡ ಮಾಡಿದ್ದರಿಂದ ಎಸ್ಆರ್ ದರ (ಷೆಡ್ಯೂಲ್ ಆಫ್ ರೇಟ್) ವ್ಯತ್ಯಾಸವಾಗಿದೆ ಎಂಬ ಕಾರಣ ನೀಡಿ ಹೆಚ್ಚುವರಿ ಪರಿಹಾರ ಮೊತ್ತಕ್ಕೂ ಈಗ ಗುತ್ತಿಗೆದಾರರು ಬೇಡಿಕೆ ಇಡುವ ಸಾಧ್ಯತೆ ಇದೆ. ಟೆಂಡರ್ ನಿಯಮಾವಳಿಯಲ್ಲಿ ಇದಕ್ಕೆ ಅವಕಾಶ ಕೂಡ ಉಂಟು ಎಂದು ಬಿಬಿಎಂಪಿ ಮೂಲಗಳು ಹೇಳುತ್ತವೆ.

ಮೈಮೇಲೆ ಬಿಳಿ ಹೊದಿಕೆ ಹೊದ್ದುಕೊಳ್ಳುತ್ತಿರುವ ರಸ್ತೆಗಳ ಆಜೂಬಾಜು ವಾಸವಾಗಿರುವ ನಾಗರಿಕರಿಗೀಗ ಹೆಜ್ಜೆ–ಹೆಜ್ಜೆಗೂ ಅಡೆತಡೆ. ಪಾದಚಾರಿಗಳಿಗೆ ಓಡಾಡಲು ದಾರಿಯೇ ಇಲ್ಲ. ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡವರು ಗಂಟೆಗಟ್ಟಲೆ ಕಾಯುತ್ತಾ ನಿಲ್ಲಬೇಕು. ದ್ವಿಚಕ್ರ ವಾಹನ ಸವಾರರು ಪಕ್ಕದ ದಾರಿಯಿಂದ ಈ ‘ಎತ್ತರ’ದ ರಸ್ತೆಗೆ ಬೈಕ್ ಏರಿಸಲು ದೊಡ್ಡ ಸರ್ಕಸ್ ನಡೆಸಬೇಕು. ಹಿರಿಯ ನಾಗರಿಕರು ಮನೆಯಿಂದ ಹೊರಗೆ ಬರುವಂತೆಯೇ ಇಲ್ಲ. ಅಕಸ್ಮಾತ್ ಬಂದರೆ ರಸ್ತೆಗೆ ಕಾಲಿಡಲು ಹರಸಾಹಸ ಮಾಡಬೇಕು. ಇಷ್ಟೆಲ್ಲ ಸಮಸ್ಯೆಗಳನ್ನು ಬೆನ್ನಿಗೆ ಹೊತ್ತುಕೊಂಡಿರುವ ಈ ಯೋಜನೆ ಯಾಕಾಗಿ ಮತ್ತು ಯಾರಿಗಾಗಿ ಎನ್ನುವುದು ನಾಗರಿಕರ ಪ್ರಶ್ನೆ.

ಕೆಲವೇ ತಿಂಗಳುಗಳ ಹಿಂದೆ ಟಾರು ಕಂಡಿದ್ದ ಹಾಗೂ ತುಂಬಾ ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನೇ ಹೆಚ್ಚಾಗಿ ಈ ಯೋಜನೆಗೆ ಆಯ್ಕೆ ಮಾಡಿಕೊಂಡಿರುವುದು ಹಣ ಪೋಲು ಮಾಡುತ್ತಿರುವುದಕ್ಕೆ ಪಕ್ಕಾ ನಿದರ್ಶನ.

ಉದಾಹರಣೆಗೆ, ಸಿ.ವಿ.ರಾಮನ್ ರಸ್ತೆಗೆ ಈಗ ವೈಟ್ ಟಾಪಿಂಗ್ ಮಾಡಲಾಗುತ್ತಿದೆ. ಕೆಲವೇ ತಿಂಗಳುಗಳ ಹಿಂದೆ ಈ ರಸ್ತೆಗೆ ಕೋಟ್ಯಂತರ ರೂಪಾಯಿ ವ್ಯಯಿಸಿ ಮರು ಡಾಂಬರೀಕರಣ ಮಾಡಲಾಗಿತ್ತು. ರಸ್ತೆ ಪಕ್ಕದ ಚರಂಡಿ, ಫುಟ್ಪಾತ್ಗಳನ್ನೂ ದುರಸ್ತಿ ಮಾಡಲಾಗಿತ್ತು. ಈಗ ಇದೇ ರಸ್ತೆಗೆ ಕಾಂಕ್ರಿಟ್ ಹಾಕಲಾಗಿದ್ದು, ಸುಸ್ಥಿತಿಯಲ್ಲಿದ್ದ ಚರಂಡಿ, ಫುಟ್ಪಾತ್ಗಳನ್ನು ಸಂಪೂರ್ಣ ಕಿತ್ತು ಹಾಕಲಾಗಿದೆ. ಬಸವನಗುಡಿಯ ಕೃಷ್ಣರಾವ್ ರಸ್ತೆ, ಹೆಬ್ಬಾಳದ ಬಳಿಯ ವರ್ತುಲ ರಸ್ತೆಯದ್ದೂ ಇದೇ ಕಥೆ. ಎಲ್ಲೆಡೆ ಪೋಲಾಗುತ್ತಿರುವುದು ತೆರಿಗೆದಾರರ ಹಣವೇ ಹೊರತು ಯಾರದ್ದೋ ಮನೆಯ ದುಡ್ಡಲ್ಲ.

‘ಪುಣೆ, ಚೆನ್ನೈ, ಹೈದರಾಬಾದ್ ಮತ್ತು ಮುಂಬೈನಲ್ಲಿ ರೂಪಿಸಿದ ವೈಟ್ ಟಾಪಿಂಗ್ ರಸ್ತೆಗಳ ಕುರಿತು ಅಧ್ಯಯನ ನಡೆಸಿದ ಮೇಲೆಯೇ ನಾವು ಈ ಯೋಜನೆಯ ಅನುಷ್ಠಾನಕ್ಕೆ ಮುಂದಾದೆವು. ಈ ರಸ್ತೆಗಳ ನಿರ್ವಹಣೆ ವೆಚ್ಚ ಕಡಿಮೆ, ತುಂಬಾ ದಿನ ಬಾಳಿಕೆ ಬರುತ್ತವೆ’ ಎನ್ನುತ್ತಾರೆ ನಾಗರಾಜ್.

ನಗರದಲ್ಲಿ ಸದ್ಯ ಈ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಬಗೆಯನ್ನು ಕಂಡವರು ಯಾರೂ ಇದಕ್ಕೆ ಸಹಮತ ವ್ಯಕ್ತಪಡಿಸುತ್ತಿಲ್ಲ. ‘ಹಾಲಿ ಇರುವ ರಸ್ತೆಗಳ ಮೇಲೆಯೇ ಸುಮಾರು 20 ಸೆಂಟಿ ಮೀಟರ್ ಗಾತ್ರದ ಕಾಂಕ್ರಿಟ್ ಹಾಕಲಾಗುತ್ತಿದೆ. ಇದರಿಂದ ರಸ್ತೆಯಂಚಿನ ಮೋರಿಗಳೆಲ್ಲ ಮುಚ್ಚಿಹೋಗಿದ್ದು, ಮಳೆನೀರು ನೇರವಾಗಿ ರಸ್ತೆ ಬದಿಯಲ್ಲಿರುವ ಮನೆಗಳಿಗೆ ನುಗ್ಗುತ್ತದೆ’ ಎನ್ನುತ್ತಾರೆ ವಾಸ್ತುಶಾಸ್ತ್ರಜ್ಞ ಸವೇರಿ ರಜಾಯ್.

ಹಲವೆಡೆ ಕಾಂಕ್ರಿಟ್ ಹಾಕುವ ಮುನ್ನ ರಸ್ತೆಯ ಅಡಿಯಲ್ಲಿರುವ ಸೇವಾ ಮಾರ್ಗಗಳನ್ನು ಸ್ಥಳಾಂತರ ಮಾಡಿಲ್ಲ. ಹೀಗಾಗಿ ಜಲಮಂಡಳಿ ಅಥವಾ ಬೆಸ್ಕಾಂ ಮಾರ್ಗಗಳಲ್ಲಿ ಏನಾದರೂ ದುರಸ್ತಿ ಮಾಡಬೇಕಿದ್ದರೆ ಕಾಂಕ್ರಿಟ್ ಪದರು ಕೊರೆದು, ದುರಸ್ತಿ ಮಾಡಿದ ಬಳಿಕ ರಸ್ತೆಯನ್ನು ಸುಸ್ಥಿತಿಗೆ ತರಲು ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಬಿಬಿಎಂಪಿ ಇದ್ಯಾವುದನ್ನೂ ಲೆಕ್ಕ ಹಾಕಿಲ್ಲ ಎಂದು ಅವರು ವಿಶ್ಲೇಷಿಸುತ್ತಾರೆ.

ತಜ್ಞರ ಆಕ್ಷೇಪ, ಜನರ ಆಕ್ರೋಶ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಎರಡನೇ ಹಂತದಲ್ಲಿ ಮತ್ತೆ 42 ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲು ಸಿದ್ಧತೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.