ಶನಿವಾರ, ಮಾರ್ಚ್ 25, 2023
27 °C
ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಸೈಕಲ್‌ ಜಾಥಾ

ಜೀವನಶೈಲಿ ಬದಲಾದರೆ ಹೃದ್ರೋಗ ನಿರ್ಮೂಲನೆ: ಡಾ.ಡಿ.ಎಚ್‌.ರಾಜೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ಜೀವನ ಶೈಲಿ ಬದಲಾದರೆ ಹೃದಯ ಸಂಬಂಧಿ ಕಾಯಿಲೆಯಿಂದ ಮುಕ್ತಿ ಸಿಗಲಿದೆ ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ ಡೀನ್‌ ಮತ್ತು ನಿರ್ದೇಶಕ ಡಾ.ಡಿ.ಎಚ್‌.ರಾಜೇಂದ್ರ ಹೇಳಿದರು.

ಜೆಎಸ್‌ಎಸ್‌ ಸ್ಕೂಲ್‌ ಆಫ್‌ ನರ್ಸಿಂಗ್‌ ಮತ್ತು ಜೆಎಸ್‌ಎಸ್‌ ಆಸ್ಪತ್ರೆಯು ‘ವಿಶ್ವ ಹೃದಯ ದಿನಾಚರಣೆ’ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೃದಯವು ದೇಹದ ಪ್ರಮುಖ ಅಂಗ. ಇಂದಿನ ಅನಾರೋಗ್ಯಕರ ಜೀವನ ಶೈಲಿಗೆ ದಾಸರಾಗಿರುವ ಜನರು ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಎಲ್ಲರೂ ಪ್ರತಿನಿತ್ಯ ಸಮಯಕ್ಕೆ ತಕ್ಕಂತೆ ವ್ಯಾಯಾಮ, ನಿಗದಿತ ಆಹಾರ ಸೇವನೆ ಮಾಡಿದರೆ ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು ಎಂದರು.

ವಯಸ್ಸಿಗೆ ಅನುಗುಣವಾಗಿ ವ್ಯಾಯಾಮ ಮಾಡಬೇಕು. ಅದರಂತೆ ಜೀವನಕ್ರಮ ಅನುಸರಿಸಬೇಕು. ಹಾಗಾದರೆ ಮಾತ್ರ 80 ವರ್ಷದವರೆಗೂ ಬದುಕಬಹುದು. ಪ್ರತಿ ಕೆಲಸಗಳಿಗೂ ಸಮಯ ಎನ್ನುವುದು ಇರುತ್ತದೆ. ಅದರ ಅನುಸಾರವಾಗಿ ಕೆಲಸಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.

ಪ್ರತಿ 5 ಜನರಲ್ಲಿ ಒಬ್ಬರಿಗೆ ಹೃದಯಾಘಾತ ಆಗುತ್ತಿದೆ. ನಿಯಮಿತ ಆಹಾರ ಪದ್ಧತಿಯಿಂದ ಇದನ್ನು ದೂರ ಮಾಡಬಹುದು. ಯುವಕರಿರುವಾಗಲೇ ಆರೋಗ್ಯಕರವಾಗಿರಲು ವ್ಯಾಯಾಮ ಮಾಡಬೇಕು. ಇಳಿ ವಯಸ್ಸಿನಲ್ಲೇ ಆಯಾ ವಯಸ್ಸಿಗೆ ಸರಿ ಹೊಂದುವ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ನರ್ಸಿಂಗ್‌ ವಿದ್ಯಾರ್ಥಿಗಳು ಸೈಕಲ್‌ ಜಾಥಾ ನಡೆಸಿ ‘ಹೃದಯ ಸಂಬಂಧಿ ಕಾಯಿಲೆ’ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಜಾಥಾ ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಆಸ್ಪತ್ರೆಗೆ ತೆರಳಿತು.

ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ ಉದ್ಘಾಟಿಸಿದರು. ಜೆಎಸ್ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಟಿ.ಪಿ.ಮಂಜುನಾಥ್, ಆಡಳಿತಾಧಿಕಾರಿ ಡಾ.ಬಿ.ರವೀಶ್ ಇದ್ದರು.

ತಂತ್ರಜ್ಞಾನದ ಬಳಕೆ ಹೃದಯಕ್ಕೆ ಹಾನಿಕರ

ತಂತ್ರಜ್ಞಾನ ಯುಗದಲ್ಲಿ ಬಳಸುವ ಮೊಬೈಲ್, ಕಂಪ್ಯೂಟರ್‌ ಹಾಗೂ ಇನ್ನಿತರ ತಾಂತ್ರಿಕ ವಸ್ತುಗಳ ಅತಿಯಾದ ಬಳಕೆಯಿಂದಲೂ ಹೃದಯ ಸಂಬಂಧಿ ಕಾಯಿಲೆ ಬರುತ್ತದೆ. ಇವುಗಳಿಂದ ಯುವ ಸಮುದಾಯ ದೂರವಿರಬೇಕು. ಉತ್ತಮ ಆರೋಗ್ಯ ಹೊಂದಬೇಕು ಎಂದು ಡಾ.ಡಿ.ಎಚ್.ರಾಜೇಂದ್ರ ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು