ಜಗದೋದ್ಧಾರನ ಆಡಿಸಿದಳೆಶೋದೆ!

7

ಜಗದೋದ್ಧಾರನ ಆಡಿಸಿದಳೆಶೋದೆ!

Published:
Updated:

ಅಮ್ಮ ಹಾಡು ಹೇಳುವವಳಾಗಿದ್ದರೆ, ಮಗುವೂ ಅಮ್ಮನೊಡನೆ ಗುನುಗುನಿಸುತ್ತದೆ; ಅಮ್ಮ ಶಿಕ್ಷಕಿಯಾಗಿದ್ದರೆ ತಾನೂ ಅಮ್ಮನಂತೆ ಪಾಠ ಹೇಳಿಕೊಡುವ ಆಟ; ಅಮ್ಮ ಡಾಕ್ಟರ್ ಆಗಿದ್ದರೆ ಅಮ್ಮನಂತೆ ತಾನೂ ಎಲ್ಲರನ್ನೂ ಸ್ಟೆತಸ್ಕೋಪ್‌ನಿಂದ ಪರೀಕ್ಷಿಸುವ ಆಟ - ಹೀಗೆ ಅಮ್ಮ ಮಾಡಿದ್ದನೆಲ್ಲಾ ಮಾಡಲು ಬಯಸುವ ಪುಟ್ಟ ಬಂಗಾರುವನ್ನು, ಅದರ ಆಟಪಾಟ, ಅದರ ತೊದಲು ಮಾತನ್ನು ಕಣ್ತುಂಬಿ ಮನದುಂಬಿ ಅನುಭವಿಸುತ್ತಾಳೆ, ಅಮ್ಮ. ಪ್ರತಿ ಮಗುವೂ ಪುಟ್ಟ ಕೃಷ್ಣನೇ; ಪ್ರತಿ ತಾಯಿಯೂ ಯಶೋದೆಯೇ! ...

ಪ್ರತಿ ಮಗುವೂ ಪುಟ್ಟ ಕೃಷ್ಣನೇ; ಪ್ರತಿ ತಾಯಿಯೂ ಯಶೋದೆಯೇ! ಈ ವಾಕ್ಯದಲ್ಲಿ ವ್ಯಕ್ತವಾದ ಅರ್ಥವು, ಮಗುವಿನ ಲಿಂಗ ಹಾಗೂ ಆ ಮಗುವಿನ ಮನೆಯಲ್ಲಿ ಪಾಲಿಸುವ ಧರ್ಮವನ್ನೂ ಮೀರಿದ್ದು. ಅದೆಂತಹ ಆಪ್ಯಾಯಮಾನ ಸಂಬಂಧ ತಾಯಿ–ಮಗುವಿನದ್ದು! ಯಾವುದಕ್ಕೆ ಹೋಲಿಸಿದರೂ ಈ ಸಂಬಂಧದ ಸವಿಗೆ ನ್ಯಾಯ ಒದಗಿಸುವಂತಹ ಹೋಲಿಕೆಯೇ ಸಿಗದೇನೋ! ತಾಯಿಯ ಗರ್ಭದಲ್ಲಿ ಶಿಶುವು ಚಿಗುರೊಡೆದಾಗಲೇ ತಾಯಿ–ಮಗುವಿನ ಅವಿನಾಭಾವ ಮೈತ್ರಿಗೆ ನಾಂದಿ; ಗರ್ಭದಲ್ಲಿರುವ ಕೂಸಿಗೆ 5-6 ತಿಂಗಳು ತುಂಬುತ್ತಲೇ, ಅದು ಅತ್ತಿಂದಿತ್ತ ಚಲಿಸಿದಾಗ ತಾಯಾಗುತ್ತಿರುವ ಹೆಣ್ಣಿಗೆ ಮೈಮನಗಳೆಲ್ಲಾ ಪುಳಕ. ಒಳಗಿರುವ ಶಿಶುವಿಗೆ ಹೊರಗಿನಿಂದಲೇ ತಾಯಿಯ ಮಾತು, ಮನಸಿನ ಅನಾವರಣವಾಗುತ್ತಿರುತ್ತದೆ; ಮತ್ತು ತಾಯಿಗೂ ಮಗುವು ಏನೂ ಹೇಳದೆಯೂ ಅದರ ಬೇಕು ಬೇಡ ತಿಳಿಯುತ್ತಿರುತ್ತದೆ. ಒಳಗೆ ಅಮ್ಮನ ಗರ್ಭಚೀಲದಲ್ಲೇ ಫುಟ್ಬಾಲ್ ಆಡೋ ಕಂದ, ಕರುಳಬಳ್ಳಿ ಕಡೆದು ಹೊರಬಂದ ಕ್ಷಣದಿಂದಲೇ, ಅನನ್ಯವಾದ ಕರುಳ ಸಂಬಂಧವು ತಾಯಿ-ಮಗುವಿನ ನಡುವೆ ಗಟ್ಟಿಗೊಳ್ಳುತ್ತದೆ.

ತಾಯಿ ತನ್ನ ಮಗುವು ತನಗೆ ಕೊಡಮಾಡುವ ಪ್ರತಿ ಚಿಕ್ಕ ದೊಡ್ಡ ಅನುಭವವನ್ನು ಅಪರಿಮಿತ ಆನಂದದಿಂದ ಅನುಭವಿಸುತ್ತಾಳೆ; ಹಾಲುಗಲ್ಲದ ಕೂಸು ಮೊಲೆಹಾಲನ್ನು ಸೇವಿಸುವಾಗ ಮುದ್ದು ಮುಖದ ಕಳ್ಳನೋಟದಲ್ಲಿ, ಹೊಟ್ಟೆ ತುಂಬಿದ ಮೇಲೂ ಅಮ್ಮನನ್ನು ಕಾಡಿಸುತ್ತಾ ಆಡುವಾಗ, ತಾಯಿಗೆ ನೋವಿನಲ್ಲೂ ಸಂತೃಪ್ತಿಯ ನಗೆ! ಹಾಗೆ ಹಾಲು ಕುಡಿಯುವಾಗಲೂ ಪುಟ್ಟ ಪಾದಗಳು ಅಮ್ಮನನ್ನು ಒದೆಯುತ್ತಾ, ಆಡುತ್ತಾ ಅಮ್ಮನಿಗೆ ಅಮಿತಾನಂದವನ್ನೇ ನೀಡುತ್ತಿರುತ್ತವೆ. ‘ತಾಯಿಯ ಕರೆಯಾ ಕೇಳಿದೆಯಾ, ಮಡಿಲಲಿ ಆಡಲು ಬಂದಿಹೆಯಾ... ಏನು ಕರುಣೆ ನಿನ್ನದೂ, ಎಂಥ ಭಾಗ್ಯ ನನ್ನದೂ’ ಎಂಬ ಸಾಲನ್ನು ತಾಯಿ, ದೈವಿಕ ಅನುಭವವನ್ನು ಕೊಡಮಾಡಿದ ಕಂದನಿಗೆ ಹಾಡುತ್ತಾಳೆ. ತೊಟ್ಟಿಲಲ್ಲಿ ಕಿಲಕಿಲ ನಗುವ ಪುಟಾಣಿಗೆ ಅಮ್ಮನ ಲಾಲಿ ಹಾಡು, ಲಲ್ಲೆ ಮಾತು ಅಪ್ಯಾಯಮಾನ. ಇನ್ನು ಜೋಲಿಯನ್ನು ಅಥವಾ ತೊಟ್ಟಿಲನ್ನು ಎಷ್ಟು ತೂಗಿದರೂ, ಈ ತುಂಟತನದ ಊಟೆಗಳಿಗೆ ಸಮಾಧಾನವೇ ಇಲ್ಲ; ಅಮ್ಮನ ಕೈ ಸೋಲುವವರೆಗೂ ತೂಗಿಸಿಕೊಂಡು, ‘ಸದ್ಯ ಮಗುವಿಗೆ ನಿದ್ದೆ ಬಂತಪ್ಪ’ ಎಂದು ಅಮ್ಮ ಬೇರೆ ಕೆಲಸದ ಕಡೆಗೆ ಹೊರಳಿದ ಕೂಡಲೇ, ಕಣ್ಣು ಬಿಟ್ಟು ‘ಹೋ’ ಎಂದು ಧ್ವನಿ ತೆಗೆದು ಅಮ್ಮನನ್ನು ಪುನಃ ಹತ್ತಿರ ಕರೆಯುವುದು ಹೇಗೆ ಅಂತ ಅದಕ್ಕೆ ಚೆನ್ನಾಗಿಯೇ ಗೊತ್ತು.

ಬಣ್ಣ ಬಣ್ಣದ ಗಿಲಕಿಯನ್ನು ನೋಡುತ್ತಾ ಬೆಳೆಯುವ ಕೂಸು, ಕುಳಿತುಕೊಳ್ಳಲು ಕಲಿತ ಮೇಲೆ ಅದರ ಆಟದ ಕ್ಷೇತ್ರ ವಿಸ್ತಾರವಾಗುತ್ತದೆ; ಅಮ್ಮನ ಅಡುಗೆಮನೆಯ ಪಾತ್ರೆಗಳನ್ನು ತಟ್ಟಿ ಕುಟ್ಟಿ, ಈಗ ಎಲ್ಲೆಡೆಯೂ ಲಭ್ಯವಿರುವ ಬಣ್ಣಬಣ್ಣದ ಆಟಿಕೆಗಳನ್ನು ತಿರುಗಿಸಿ, ಮುರುಗಿಸಿ ಮೂರು ಭಾಗ ಮಾಡಿ ಬಾಯಲ್ಲಿಟ್ಟು, ಜಗತ್ತಿಗೆ ದೊರಕದ ತನಗೆ ಮಾತ್ರವೇ ಅರ್ಥವಾಗುವ ರುಚಿ ಕಂಡುಕೊಂಡು ಪುಟ್ಟ ಜಟ್ಟಿ ಬೀಗುತ್ತದೆ. ಮನೆಯಲ್ಲಿ ಹಾಡು ಕೇಳುವ ಅಭ್ಯಾಸವಿದ್ದರೆ, ಆ ಹಾಡುಗಳನ್ನು ದಿನವೂ ಗಮನಿಸಿ ತನ್ನದೇ ಶೈಲಿಯಲ್ಲಿ ತಲೆದೂಗುತ್ತಾ ಮೈ ಕುಣಿಸುವ ಪರಿಯನ್ನು ನೋಡಿಯೇ ಸವಿಯಬೇಕು! ಅಮ್ಮ ಎಷ್ಟೇ ಮಟ್ಟಸವಾಗಿ ಮನೆಯನ್ನು ಇರಿಸಿಕೊಂಡರೂ, ಕಸ-ಕೊಳೆ ಎಲ್ಲಿರುತ್ತದೆ ಎಂದು ಪುಟಾಣಿಗೆ ಮಾತ್ರ ಚೆನ್ನಾಗಿ ಗೊತ್ತು. ಅಂಬೆಗಾಲಿಡುವ ಪುಟ್ಮರಿ, ಅಲ್ಲೇ ಸಿಗುವ ಉರಿಸಿ ಬಿಸಾಡಿದ ಬೆಂಕಿಕಡ್ಡಿಯೋ, ಎಲ್ಲಿಂದಲೋ ಗಾಳಿಗೆ ಹಾರಿಬಂದ ಕೂದಳೆಲೆಯೋ ಹುಡುಕಿ ಕೈಯಲ್ಲಿ ಪರೀಕ್ಷಿಸಿ, ಅಮ್ಮನ ಕಣ್ತಪ್ಪಿಸಿ ಬಾಯಲ್ಲಿರಿಸುವ ಚತುರತೆಯನ್ನು ಪ್ರದರ್ಶಿಸುತ್ತದೆ. ಏನಾದರೂ ಸದ್ದು ಮಾಡುತ್ತಲೇ ಇರುವ ಕಂದಮ್ಮ, ಯಾಕೋ ಸುಮ್ಮನಾಗಿದೆ ಎಂದರೆ ಅಲ್ಲೇನೋ ತರಲೆ ಕೆಲಸ ನಡೆಯುತ್ತಿದೆ ಎಂದೇ ಅರ್ಥ! ಕೆಲವೊಮ್ಮೆ, ಕಿಲಕಿಲ ನಗುತ್ತ ನೆಲದ ಮೇಲೆ ಕೈಯಲ್ಲಿ ಬಡಿಯುತ್ತಾ ಕೂಟ ಮಗುವಿನ ಹತ್ತಿರ ಹೋದರೆ, ಮೂಗಿಗೆ ಆಡರಿದ ನಾತವು ಮತ್ತೇನೋ ಆಗಿರುವುದನ್ನು ಸಾರಿ ಹೇಳುತ್ತದೆ. ಅಂದರೆ, ಪಾಯಿಖಾನೆಗೆ ಹೋಗಿ ಮಾಡಬೇಕಾದ ಕೆಲಸ ಎಲ್ಲೆಂದರಲ್ಲಿ ಯಾವಾಗೆಂದರೆ ಆವಾಗ ನಡೆದಿರುತ್ತದೆ! ಅದರಲ್ಲೂ, ಅಮ್ಮ ಎಂಬ ನಿರುಪದ್ರವಿ ಜೀವಿ ಎಲ್ಲ ಕೆಲಸ ಮುಗಿಸಿ, ಹೇಗೂ ಮಗು ಆಡ್ತಾ ಇದೆ, ಸ್ವಲ್ಪ ಊಟ ಮಾಡಿಬಿಡೋಣ ಅಂತ ಕೂತರೆ, ಮುಗಿದೇ ಹೋಯ್ತು ಕಥೆ! ನಿಗದಿತವಾಗಿ ಅದೇ ಸಮಯದಲ್ಲೇ ಮಗುವಿನ ಪಾಯಿಖಾನೆ ಡ್ಯೂಟಿಗೆ ಕರೆ ಬರುತ್ತದೆ. ಮಗುವಿಗೆ ನಿದ್ದೆ ಬಂದಿದೆ ಎಂದು ಭಾವಿಸಿ ಅಮ್ಮನ ಕಣ್ಣೆವೆ ಒಂದು ಕ್ಷಣ ಮುಚ್ಚಿದರೂ ಸಾಕು, ನಿದ್ದೆಯ ಪು ಹತ್ತುವಷ್ಟರಲ್ಲಿ, ಸೂರು ಹಾರಿ ಹೋಗುವ ಹಾಗೆ ಚಿಲ್ಟಾರಿಯ ಕೂಗು.

ಸುಮಾರು ಒಂದು ವರ್ಷದ ಮಗುವಂತೂ ತನ್ನ ಸುತ್ತಲಿನ ಎಲ್ಲವನ್ನೂ ಅನ್ವೇಷಣೆ ಮಾಡುವ ಹುಮ್ಮಸ್ಸಿನ ಪ್ರತಿರೂಪ. ಆಗಿನ್ನೂ ನಡೆಯಲು ಕಲಿಯುತ್ತಿರುವ ಮಗುವಿಗೆ ಪುಟ್ಟ ಪುಟ್ಟ ಹೆಜ್ಜೆಯನಿಡುವುದನ್ನು ಕಲಿಸುವ ಸುಖವೇ ಮತ್ತೊಂದು ವಿಭಿನ್ನ ಅನುಭೂತಿ. ಊರಿನ ಅಂಗಡಿಗಳೆಲ್ಲ ಸುತ್ತಿ ಎಷ್ಟೇ ಆಟದ ಸಾಮಾನು ತಂದು ಸುರಿದರೂ, ಆಡಲು ಕೂತಾಗ ಮುರಿದ ಚಕ್ರ, ಶೀಷೆಯ ಮುಚ್ಚಳ, ಒಣಗಿದ ಎಲೆ, ಅಮ್ಮನ ಸೀರೆಯ ತುಂಡೇ ಮಕ್ಕಳ ಫೇವರೆಟ್! ಮಕ್ಕಳು ದಿನವಿಡೀ ಆಡಿದ್ದಾಯ್ತು, ಈಗಲಾದರೂ ಸ್ವಲ್ಪ ಮನೆ ಸ್ವಚ್ಛ ಮಾಡೋಣ ಎಂದು ಆಟದ ಸಾಮಾನನ್ನು ಆರಿಸಿ ಹೆಕ್ಕಿ ತೆಗೆದು ಬುಟ್ಟಿಗೆ ತುಂಬಿಸಿದ್ದೇ ಬಂತು ಭಾಗ್ಯ; ಯಾವುದೋ ಕಾರೋ ಬೊಂಬೆಯೋ ಬೇಕೆಂದು ಅವು ಹಠ ಹಿಡಿದು, ಮತ್ತೆಲ್ಲಾ ಆಟಿಕೆಗಳನ್ನು ಕೆಳಗೆ ಸುರಿದು, ಕೋಣೆ ಮೊದಲಿನಂತಾದರೆ ಮಾತ್ರ ಅವಕ್ಕೆ ಸಮಾಧಾನ.

ಮಗುವು ಒಂದೊಂದೇ ಬೆಳವಣಿಗೆಯ ಮೈಲುಗಲ್ಲನ್ನು ದಾಟುತ್ತಿರುವಂತೆಯೇ, ತಾಯಿಗೆ ಹಿಗ್ಗೋ ಹಿಗ್ಗು! ಮಗುವಿಗೆ ಕತ್ತು ನಿಂತದ್ದು, ಮಗು ಬೋರಲು ತಿರುಗಿದ್ದು, ಮಗುವು ಕೂರಲು ಕಲಿತಿದ್ದು, ಮಾತಿನಂತೆ ಧ್ವನಿಸುವ ಸಣ್ಣ ಪುಟ್ಟ ಸದ್ದು ಹೊರಡಿಸಿದ್ದು, ಆರು ತಿಂಗಳ ಕೇವಲ ತಾಯಿಹಾಲಿನ ಸೇವನೆಯ ಹಂತ ದಾಟಿ, ಮೊದಲ ಹೊರಗಿನ ಆಹಾರವನ್ನು ಸೇವಿಸಿದ್ದು, ನೆತ್ತಿಯ ಹಸಿ ಆರಿದ್ದು, ಪುಟ್ಟ ಕಂದನ ಕೆನ್ನೆ ದುಂಡು ದುಂಡಗಾಗಿದ್ದು, ಅಂಬೆಗಾಲಿಡುವ ಪ್ರಯತ್ನ, ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆಯುವ ಪ್ರಯತ್ನ, ಹೊಸ್ತಿಲು ದಾಟಿದ್ದು, ಮಂಚ ಹತ್ತುವ ಇಳಿಯುವ ಪ್ರಯತ್ನದಿಂದ ಹಿಡಿದು ತಾನೇ ಸ್ನಾನ ಮಾಡೋದು, ಪುಟ್ಟ ಪುಟ್ಟ ಕೆಲಸಗಳಲ್ಲಿ ಅಮ್ಮನಿಗೆ ಸಹಾಯ ಮಾಡೋದು ಇಂತಹವನ್ನು ಕಂಡ ತಾಯಿ ಅದೆಷ್ಟು ಖುಷಿ ಪಡುತ್ತಾಳೆ ಎಂದರೆ, ಅದನ್ನು ವಿವರಿಸೋಕೆ ನಿಜವಾಗಲೂ ಯಾವ ಭಾಷೆಯ ಪದಗಳೂ ಸಾಕಾಗಲಿಕ್ಕಿಲ್ಲ.

ಮಗು ಹುಟ್ಟಿದಾಗ, ಆ ಮಗುವಿನೊಡನೆ ಒಬ್ಬ ತಂದೆಯೂ ಹುಟ್ಟುತ್ತಾನೆ ಎಂಬ ಮಾತಿದೆ; ಅದು ಸರಿಯೇ! ತಂದೆಯ ಬದುಕಿನಲ್ಲಿ ಮಗುವಿನ ಆಗಮನವು ಸ್ವಲ್ಪಮಟ್ಟಿನ ಬದಲಾವಣೆಯನ್ನು ತರುತ್ತದೆ, ಆದರೆ ತಾಯಿಯ ಬದುಕು 360 ಡಿಗ್ರಿ ಬದಲಾಗುತ್ತದೆ. ಮಗು ಹುಟ್ಟಿದ ದಿನದಿಂದಲೇ ಗಂಟೆಗೊಮ್ಮೆ ಹಾಲೂಡುವ ಹೊಸ ಅನುಭವ, ರಾತ್ರಿಯೆಲ್ಲಾ ನಿದ್ರೆಗೆಡುವ ವಿಚಿತ್ರ ಅನುಭವ – ಹೀಗೆ ಹೊಸ ಹೊಸ ಅನುಭವಗಳ ಯಾದಿ ಬೆಳೆಯುತ್ತಲೇ ಸಾಗುತ್ತದೆ. ಆದರೆ, ಇವೆಲ್ಲವೂ ಸಹನೀಯವಾಗುವುದು ಮಗುವಿನ ಮುಗ್ಧತೆ ಮತ್ತು ಮಗುವಿನ ಆಟಪಾಠದಿಂದ. ಈಗಂತೂ ಸಾಮಾನ್ಯವಾಗಿ ತಂದೆಯೂ ತಾಯಿಯೊಡನೆ ಮಗುವಿನ ಜವಾಬ್ದಾರಿ ಹಂಚಿಕೊಳ್ಳುವುದು ಹೆಚ್ಚೆಚ್ಚು ಕಾಣಸಿಗುತ್ತದೆ; ಆದರೂ, ಕಾರಣಾಂತರಗಳಿಂದ ತಾಯಿಯೊಡನೆಯೇ ಮಗುವು ಹೆಚ್ಚಿನ ಸಮಯ ಕಳೆಯಬೇಕಾಗುವುದು ಸಾಮಾನ್ಯ. ತಾಯಿಯು ಎಷ್ಟೇ ಕೆಲಸಗಳಿದ್ದರೂ, ತನ್ನ ಕೆಲಸದ ಜೊತೆಜೊತೆಗೇ ಮಕ್ಕಳನ್ನು ಆಡಿಸುತ್ತಾ ಕೆಲಸ ಮುಂದುವರೆಸುತ್ತಾಳೆ; ಅಡುಗೆ ಮಾಡುವಾಗ ತರಕಾರಿಗಳ ಹೋಳುಗಳಲ್ಲೋ ಸಿಪ್ಪೆಯಲ್ಲೋ ಯಾವುದೋ ವಿನ್ಯಾಸ ಬಿಡಿಸುತ್ತಾ ಮಕ್ಕಳನ್ನು ತೊಡಗಿಸಿಕೊಳ್ಳುತ್ತಾಳೆ; ಊಟ ಮಾಡಿಸುವಾಗ ತಟ್ಟೆಯಲ್ಲಿ ತುತ್ತುಗಳನ್ನು ಜೋಡಿಸಿಟ್ಟು ಸಂಖ್ಯೆಗಳನ್ನು, ಕೂಡುವಿಕೆ, ಕಳೆಯುವಿಕೆಯ ಸರಳ ಲೆಕ್ಕವನ್ನು ಕಲಿಸುತ್ತಾಳೆ. ಪ್ರಯಾಣಿಸುವಾಗ ದಾರಿ ಸವೆಯುತ್ತಿಲ್ಲ ಎನಿಸಿ ಮಕ್ಕಳು ಹಟ ಮಾಡಿದರೆ, ಹೊರಗಿನ ಗಾಡಿಗಳನ್ನು ಎಣಿಸಲು ಹೇಳುವುದೋ, ಒಂದೇ ಬಣ್ಣದ ಕಾರುಗಳನ್ನು ಗುರುತು ಹಿಡಿಯಲು ತಿಳಿಸುವುದೋ ಮಾಡುತ್ತಾ ಆಟದ ಜೊತೆಗೆ ಪಾಠವನ್ನೂ ಕಲಿಸುತ್ತಾಳೆ. ಅಮ್ಮನು ಯಾವ ವೃತ್ತಿಯಲ್ಲಿರುತ್ತಾಳೋ ಅದರ ಪರಿಣಾಮ ಮಗುವಿನ ಮೇಲೆ ಆಗುವುದು ಖಚಿತ; ಅಮ್ಮ ಮನೆಯಲ್ಲಿ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಮಗುವೂ ಲ್ಯಾಪ್‌ಟಾಪ್‌ನಲ್ಲಿ ಕೀಲಿಮಣೆ ಕುಟ್ಟುವ ಆಟ ಆಡುವುದು ಸರ್ವೇಸಾಮಾನ್ಯ; 

ಅಮ್ಮ ಅಡುಗೆ ಮಾಡಿದಂತೆ ತಾನೂ ಮಾಡುವ ಆಸೆಯಿಂದ ಪುಟ್ಟ ಪುಟ್ಟ ಪಾತ್ರೆಗಳಲ್ಲಿ ನೀರು ಹುರಿಗಡಲೆ ತುಂಬಿಸಿ ಮನೆಮಂದಿಗೆಲ್ಲಾ ‘ಮಮ್ಮು’ ಮಾಡಿ ಬಡಿಸಿದ್ದೆ ಬಡಿಸಿದ್ದು. ಅಮ್ಮ ಹಾಡು ಹೇಳುವವಳಾಗಿದ್ದರೆ, ಮಗುವೂ ಅಮ್ಮನೊಡನೆ ಗುನುಗುನಿಸುತ್ತದೆ; ಅಮ್ಮ ಶಿಕ್ಷಕಿಯಾಗಿದ್ದರೆ ತಾನೂ ಅಮ್ಮನಂತೆ ಪಾಠ ಹೇಳಿಕೊಡುವ ಆಟ, ಅಮ್ಮ ಡಾಕ್ಟರ್ ಆಗಿದ್ದರೆ ಅಮ್ಮನಂತೆ ತಾನೂ ಎಲ್ಲರನ್ನೂ ಸ್ಟೆತಸ್ಕೋಪ್‌ನಿಂದ ಪರೀಕ್ಷಿಸುವ ಆಟ – ಹೀಗೆ ಅಮ್ಮ ಮಾಡಿದ್ದನೆಲ್ಲಾ ಮಾಡಲು ಬಯಸುವ ಪುಟ್ಟ ಬಂಗಾರುವನ್ನು, ಅದರ ಆಟಪಾಠ, ಅದರ ತೊದಲು ಮಾತನ್ನು ಕಣ್ತುಂಬಿ ಮನದುಂಬಿ ಅನುಭವಿಸುತ್ತಾಳೆ ಅಮ್ಮ.

ಮಕ್ಕಳು ಬೆಳೆಯುತ್ತಾ ಸಾಗಿದ ಹಾಗೆ ಅವುಗಳದ್ದೇ ಆದ ಸ್ವತಂತ್ರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತವೆ; ಅದನ್ನು ಪ್ರತಿ ನಡೆ ನುಡಿಯಲ್ಲಿ ನಿರೂಪಿಸುತ್ತಾ ಇರುತ್ತವೆ. ತಲೆಗೆ ಸ್ನಾನ ಬೇಡ ಅಮ್ಮ, ಬಿಸಿ ನೀರು ಬೇಡ ಅಮ್ಮ, ರೆಡ್ ಟೀ ಶರ್ಟ್ ಬೇಕಮ್ಮ, ಬ್ಲೂ ಫ್ರಾಕ್ ಬೇಡಮ್ಮ, ಉಪ್ಪಿಟ್ಟು ಬೇಡ, ಜ್ಯೂಸ್‌ ಬೇಕು, ಬೆಂಡೆಕಾಯಿ ಇಷ್ಟ ಇಲ್ಲಮ್ಮ, ಕ್ಯಾರೆಟ್ ರುಚಿಯಾಗಿರತ್ತಮ್ಮ... – ಹೀಗೆ ಅವುಗಳ ಬೇಕು ಬೇಡದ ಪಟ್ಟಿಯನ್ನು ನಿಭಾಯಿಸುವಷ್ಟರಲ್ಲಿ ಅಮ್ಮ ಅಪ್ಪ ಸುಸ್ತೋ ಸುಸ್ತು. ಅದೆಲ್ಲಿಂದಾ ಬರುತ್ತೋ ಮಕ್ಕಳಿಗೆ ಅಷ್ಟು ಎನರ್ಜಿ! ಮೂರು ಹೊತ್ತೂ ಕುಣಿಯುತ್ತಾ ಇರುತ್ತವೆ; ಅವುಗಳಿಗೆ ಬೇಜಾರಾಗದಂತೆ ಸ್ವಲ್ಪ ಹೊತ್ತು ಚಿತ್ರ ಬಿಡಿಸೋದು, ಸ್ವಲ್ಪ ಹೊತ್ತು ಹಾಡು– ಡ್ಯಾನ್ಸು, ಆಮೇಲೆ ಅಕ್ಕಪಕ್ಕದ ಮಕ್ಕಳೊಂದಿಗೆ ಆಟ, ಕೆಲಹೊತ್ತು ಆಸಕ್ತಿಕರ ವಿಷಯಗಳ ಸಚಿತ್ರ ಪುಸ್ತಕದೊಂದಿಗೆ ಸಮಯ ಕಳೆಯುವಿಕೆ, ಪುಟ್ಟ ‘ಗ್ಲೋಬ್‌’ನೊಂದಿಗೆ ಸ್ವಲ್ಪ ಸಮಯ, ಪೇಪರ್ ಮ್ಯಾಛೆಬಾಲ್, ಗೊಂಬೆ ಇತ್ಯಾದಿ ಕರಕುಶಲ ವಸ್ತುಗಳ ತಯಾರಿ, ಗಾಳಿಪಟ ಹಾರಿಸುವುದು, ಸೈಕಲ್ ತುಳಿಯಲು ಕಲಿಸುವುದು ಒಂದೇ ಎರಡೇ! ಮಕ್ಕಳು ಯಾವುದೋ ಒಂದೇ ಕ್ಷೇತ್ರದಲ್ಲಿ ಹೆಚ್ಚು ಆಸಕ್ತರು ಎಂದು ತಿಳಿಯುವವರೆಗೂ, ಹಲವಾರು ಉಪಯುಕ್ತ ಹಾಗೂ ಸಂತೋಷಕರ ಚಟುವಟಿಕೆಗಳಲ್ಲಿ ಅವುಗಳನ್ನು ನಿರತರನ್ನಾಗಿಸುವುದು ಕ್ರಿಯಾಶೀಲ ಅಮ್ಮ ಅಪ್ಪನ ಲಕ್ಷಣ ಮತ್ತು ಕರ್ತವ್ಯ.

ಮಕ್ಕಳೊಂದಿಗೆ ಮನೆಯ ಹತ್ತಿರವೇ ಉದ್ಯಾನದಲ್ಲೋ ತೋಟದಲ್ಲೋ ಒಂದು ಪುಟ್ಟ ವಾಯುವಿಹಾರದೊಂದಿಗೆ ಹಲವು ವಿಚಾರಗಳ ಬಗ್ಗೆ ಆರೋಗ್ಯಕರ ಚರ್ಚೆಯು ಮಕ್ಕಳಲ್ಲಿ ಆರೋಗ್ಯದೆಡೆಗೆ ಕಾಳಜಿ ಮತ್ತು ತಮ್ಮ ಅನಿಸಿಕೆಗೂ ಬೆಲೆಯುಂಟು ಎಂಬ ಭಾವನೆ ತರಿಸಲಿಕ್ಕೆ ಸಾಕು. ಪ್ರತಿಯೊಂದು ವಿಚಾರದಲ್ಲೂ ನಾವು ನಮ್ಮದೇ ಆದ ಅನಿಸಿಕೆಯನ್ನು ಬೆಳೆಸಿಕೊಂಡುಬಿಟ್ಟಿರುತ್ತೇವೆ; ಯಾವುದೇ ವಿಚಾರವನ್ನು ಮತ್ತೊಂದು ದಿಕ್ಕಿನಿಂದಲೂ ನೋಡಬಹುದು ಎಂಬುದನ್ನು ನಮಗೆ ಕಳಿಸುವುದು ಮಕ್ಕಳೇ! ನಾನು ಮಾಡಿದ್ದನ್ನು ಮಾಡಬೇಡ ಹೇಳಿದ್ದನ್ನು ಮಾಡು ಎಂದು ಜನರು ಹೇಳುವುದನ್ನು ಕೇಳಿರುತ್ತೇವೆ; ಆದರೆ ಮಕ್ಕಳು ಮಾತ್ರ ನಾವು ಹೇಳಿದನ್ನಲ್ಲ, ನಾವು ಮಾಡಿದ್ದನ್ನೇ ಮಾಡುತ್ತವೆ; ನಮಗರಿವಿಲ್ಲದಂತೆಯೇ ನಮ್ಮನ್ನು ಕೂಲಂಕುಶವಾಗಿ ಗಮನಿಸುತ್ತಿರುತ್ತವೆ; ಹಾಗಾಗಿ ಸರಿಯಾದ ರೀತಿಯಲ್ಲಿ ನಡೆದುಕೊಳ್ಳುವಂತೆ, ಮೌಲ್ಯಗಳನ್ನು ನಿಜ ಜೀವನದಲ್ಲಿ ರೂಢಿಸಿಕೊಳ್ಳುವಂತೆ ನಮಗೆ ಪರೋಕ್ಷವಾಗಿ ಪ್ರೇರೇಪಿಸುವುದು ಮಕ್ಕಳೇ! ಬೇರೆ ಬೇರೆ ವಯಸ್ಸಿನ ಮಕ್ಕಳದ್ದು ಬೇರೆ ಬೇರೆ ಕಥೆ. ಆ ಮಗುವಿನ ಮನೆಯ ವಾತಾವರಣ ಮತ್ತು ಸ್ನೇಹಿತರ ವರ್ತುಲವು ಮಗುವಿನ ವ್ಯಕ್ತಿತ್ವದ ಮೇಲೆ ಅಪಾರವಾದ ಪರಿಣಾಮವನ್ನು ಬೀರುತ್ತವೆ; ಆದರೆ, ಮಗುವಿನ ತಾಯಿಯ ವ್ಯಕ್ತಿತ್ವ, ಆ ಮಗುವು ಆಕೆಯ ಗರ್ಭದೊಳಗೆ ರೂಪುಗೊಂಡಾಗಿನಿಂದ ಕಡೆಯವರೆಗೂ, ಮಗುವಿನ ಮನಸಿನ ಮೇಲೆ ಒದ್ದೆ ಗೋಡೆಗೆ ತಾಕಿದ ಹರಳಿನಂತೆ ಅಚ್ಚೊತ್ತುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !