ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭೂಮಿಕಾ: ನಮ್ಮ ಖುಷಿ ನಮ್ಮ ಹಕ್ಕು.. ಈ ಹುಡುಕಾಟ ನಿರಂತರ

Published 14 ಅಕ್ಟೋಬರ್ 2023, 0:11 IST
Last Updated 14 ಅಕ್ಟೋಬರ್ 2023, 0:11 IST
ಅಕ್ಷರ ಗಾತ್ರ

‘ಗಂಡನಿಗೆ ಬಿಸಿ ಬಿಸಿ ಚಪಾತಿ (ಫುಲ್ಕೆ/ಫುಲ್ಕ) ಮಾಡಿ ಕೊಡುವುದು ನನಗೆ ಖುಷಿ ಕೊಡುತ್ತದೆ. ನನ್ನ ತವರು ಮನೆಯಲ್ಲಿ ನನ್ನ ಅಮ್ಮನೂ ನನ್ನ ಅಪ್ಪನಿಗೆ ಬಿಸಿ ಬಿಸಿ ಚಪಾತಿ ಮಾಡಿಕೊಡುತ್ತಾಳೆ. ನನ್ನ ಅಜ್ಜಿ ಕೂಡ ಹೀಗೆ ಮಾಡುತ್ತಿದ್ದಳು. ನಮ್ಮಲ್ಲಿ ಇದು ಹೀಗೆ ನಡೆಯುವುದು’

‘ಇದು ಹೀಗೆ ನಡೆಯುವುದು ಎಂದರೆ ಅದು ಸರಿ ಇದೆ ಅಂತಲಾ’

‘ಯಾವುದು ಸರಿ, ಯಾವುದು ತಪ್ಪು ಅಂತ ನೀನು ಹೇಳುತ್ತೀಯಾ ಈಗ. ಗಂಡನ ಸೇವೆ ಮಾಡುವುದರಲ್ಲಿ ಯಾವುದೇ ತಪ್ಪೂ ಇಲ್ಲ’

‘ಹೌದು. ನಾನು ಇದನ್ನು ಒಪ್ಪುತ್ತೇನೆ. ಸೇವೆ ಮಾಡುವುದು ಪುಣ್ಯದ ಕೆಲಸವೇ ಸರಿ. ಆದರೆ, ಸೇವೆ ಒಂದೇ ಕಡೆಯಿಂದ ಆಗುತ್ತಿದ್ದರೆ, ಅದನ್ನು ಸೇವೆ ಎನ್ನುವುದಿಲ್ಲ; ಗುಲಾಮಗಿರಿ ಎನ್ನುತ್ತಾರೆ’

ಮೊದಲೇ ಹೇಳಿಬಿಡುತ್ತೇನೆ. ಇದು ಸಿನಿಮಾವೊಂದರ ಸಂಭಾಷಣೆ. ಆದರೆ, ಈ ಸಂಭಾಷಣೆಯ ರಚನೆಯನ್ನು ಗಮನಿಸಿದರೆ ಯಾರು ಯಾರಿಗೆ ಹೇಳಿದರು, ಯಾಕಾಗಿ ಹೇಳಿದರು, ಯಾವ ಸಂದರ್ಭದಲ್ಲಿ ಈ ಸಂಭಾಷಣೆ ನಡೆಯಿತು... ಬಹುಶಃ ಹೀಗೆ ಯಾವ ಪ್ರಶ್ನೆಯನ್ನು ಹಾಕಿಕೊಳ್ಳದೆಯೂ ನಮಗೆ ಉತ್ತರ ಸಿಕ್ಕಿಬಿಡುತ್ತದೆ. ಆದರೂ ಹೇಳಿಬಿಡುತ್ತೇನೆ. ಇದು ಇತ್ತೀಚೆಗಷ್ಟೇ ಬಿಡುಗಡೆಯಾದ ‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಥಾ’ ಸಿನಿಮಾದ ಸಂಭಾಷಣೆ. ಅತ್ತೆಯಾಗಲಿರುವ ಪೂನಂ ರನ್‌ಧಾವಾ (ಕ್ಷಿತಿ ಜೋಗ್‌) ಸೊಸೆಯಾಗಲಿರುವ ರಾಣಿ (ಆಲಿಯಾ ಭಟ್‌) ಮಧ್ಯೆ ನಡೆಯುವ ಸಂಭಾಷಣೆ ಇದು.

ಮದುವೆಯಾದ ಮಹಿಳೆಯರಿಗೆ ‘ಖುಷಿ’ ನೀಡುವ ಹಲವು ಸಂಗತಿಗಳಿವೆ. ಇವು ನಿಜಕ್ಕೂ ಅವರ ಮನಸ್ಸಿನಾಳದಿಂದ ಪಡುವ ಖುಷಿಯೋ ಅಥವಾ ಇಂಥ ವಿಷಯಕ್ಕೇ ಖುಷಿಪಡಬೇಕು ಎಂದು ಸಮಾಜವು ಹೇಳಿಕೊಟ್ಟ ಖುಷಿಯೋ ಎನ್ನುವುದೇ ಚರ್ಚಾ ವಿಷಯ. ಪುರುಷನೊಬ್ಬನಿಗೆ ಆಗುವ ಖುಷಿಗೆ ಕಾರಣಗಳು ಹಲವು ಇರುತ್ತವೆ ಮತ್ತು ಅವುಗಳು ಅವರ ವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಆಗಿರುತ್ತವೆ. ಆದರೆ, ಮಹಿಳೆಯ ವಿಷಯ ಹೀಗಲ್ಲ. ಗಂಡನಿಗೆ ರುಚಿಯಾದ ಅಡುಗೆ ಮಾಡುವುದು, ಮಕ್ಕಳನ್ನು ಚೆನ್ನಾಗಿ ಬೆಳೆಸುವುದು, ಮನೆ ಮರ್ಯಾದೆ ಕಾಪಾಡುವುದು, ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಹೀಗೆ ಪಟ್ಟಿ ಬೆಳೆಯುತ್ತದೆ ಮತ್ತು ಇವುಗಳೇ ಆಕೆ ಖುಷಿಪಡಬೇಕಾದ ವಿಷಯ ವ್ಯಾಪ್ತಿ.

ಮನೆ ಮರ್ಯಾದೆ ಕಾಪಾಡುವುದು ಎಂದ ಕೂಡಲೇ ನಮ್ಮ ಊರಿನಲ್ಲಿ ನಡೆದ ಘಟನೆಯೊಂದು ನೆನಪಿಗೆ ಬಂತು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಅಕ್ಕನಿಗೆ ಮದುವೆ ಮಾಡಲಾಯಿತು. ಆದರೆ, ಆಕೆಯ ಸಂಸಾರ ಸರಿಹೊಂದಲಿಲ್ಲ. ಗಂಡನಿಂದ ದೌರ್ಜನ್ಯ ಎದುರಿಸಿದಳು. ಇನ್ನು ಸಹಿಸಲು ಅಸಾಧ್ಯ ಎಂದಾಗ ತವರು ಮನೆಗೆ ಬಂದಳು. ತಂಗಿಯ ಮದುವೆಯೂ ನಡೆಯಿತು. ಆಕೆಯದ್ದೂ ಇದೇ ಪರಿಸ್ಥಿತಿ. ಗಂಡ, ಅತ್ತೆ ಸೇರಿ ಕೋಣೆಯಲ್ಲಿ ಕೂಡಿ ಹಾಕುತ್ತಿದ್ದರು. ಎರಡೆರಡು ದಿನ ಊಟವನ್ನೂ ನೀಡುತ್ತಿರಲಿಲ್ಲ. ಎರಡು ವರ್ಷದ ಮಗಳಿಗೂ ಹೊಡೆಯುತ್ತಿದ್ದರು. ತವರು ಮನೆಗೆ ಬರಬೇಕು ಅನ್ನಿಸಿದರೂ ಅಕ್ಕನಿಗೂ ಹೀಗೆಯೇ ಆಯಿತು, ತಂಗಿಗೂ ಹೀಗೆ ಆಯಿತು ಎಂದರೆ, ಸಮಾಜ ತನ್ನ ತಂದೆ–ತಾಯಿಯ ಬಗ್ಗೆ ಏನು ಅಂದುಕೊಳ್ಳುತ್ತದೆಯೋ ಎಂದು ಭಾವಿಸಿ ತಂಗಿ ತವರು ಮನೆಗೆ ಬರಲು ಒಪ್ಪಲಿಲ್ಲ. ಮನೆ ಮರ್ಯಾದೆ ಕಾಪಾಡಿದ ‘ಖುಷಿ’ ಅನುಭವಿಸಿದ್ದಳು ತಂಗಿ.

ಇಂಥ ಯಾವ ‘ಖುಷಿ’ಗಳನ್ನು ಹೆಣ್ಣೊಬ್ಬಳು ಅನುಭವಿಸಬೇಕಾಗಿಲ್ಲ. ಮತ್ತು ಇಂಥ ‘ಖುಷಿಯ ಮಾದರಿ’ಗಳಿಂದ ಹೊರಬರಬೇಕಿದೆ. ನಮ್ಮ ಬಗ್ಗೆ ನಾವು ಖುಷಿ ಪಡುವುದಕ್ಕೆ, ನಮ್ಮನ್ನು ನೋಡಿ ನಮ್ಮ ಸಮಾಜ ಹೆಮ್ಮೆ ಪಡುವುದಕ್ಕೆ, ಖುಷಿ ಪಡುವುದಕ್ಕೆ ಹಲವು ಬೇರೆ ಮಾರ್ಗಗಳಿವೆ. ಅವುಗಳನ್ನು ನಾವು ಕಂಡುಕೊಳ್ಳಬೇಕಿದೆ.

ಉದ್ಯೋಗದ ಖುಷಿ: ಮನೆಗೆಲಸದಲ್ಲೇ ಮುಳುಗಿರುವ ಮಹಿಳೆಯರಿಗೆ ಸ್ವಂತದ್ದೊಂದು ಉದ್ಯೋಗ ಮಾಡುವ ಆಸೆ ಇರುತ್ತದೆ. ಇಲ್ಲವೇ ಬೇರೆ ಕಡೆ ಕೆಲಸಕ್ಕೆ ಸೇರುವ ಕನಸು ಇರಬಹುದು. ಸ್ವತಂತ್ರವಾಗುವ ಖುಷಿಯೇ ಬೇರೆ. ಇದನ್ನು ಕಳೆದುಕೊಳ್ಳಬೇಡಿ; ಅನುಭವಿಸಿ. ಕೋವಿಡ್‌ ನಂತರವಂತೂ ಮಹಿಳೆಯರು ಹೆಚ್ಚು ಹೆಚ್ಚು ವ್ಲಾಗಿಂಗ್‌ ಮಾಡುತ್ತಿದ್ದಾರೆ. ದೇಶದ ಮೂಲೆ ಮೂಲೆಗಳ ಗ್ರಾಮಗಳಿಂದಲೂ ಮಹಿಳೆಯರು ತಮ್ಮ ದೈನಂದಿನ ಜೀವನವನ್ನು ತೋರಿಸುತ್ತಾ, ಆರೋಗ್ಯ, ಅಡುಗೆಯ, ಸೌಂದರ್ಯ ಟಿಪ್ಸ್‌ ನೀಡುತ್ತಾ ವಿಡಿಯೊಗಳನ್ನು ಮಾಡುತ್ತಿದ್ದಾರೆ. ಇದರಿಂದ ಆದಾಯವೂ ಬರುತ್ತಿದೆ.

ನಾನಿರುವುದೇ ಹೀಗೆ ಎಂದು ಸಾರುವ ಖುಷಿ: ನಾನು ದಪ್ಪ ಇದ್ದೇನೆ. ತೆಳ್ಳಗೆ ಆಗಬೇಕು ಎಂದು ನನಗೆ ಅನ್ನಿಸುತ್ತಿಲ್ಲ (ಆರೋಗ್ಯ ಸಮಸ್ಯೆಯ ಬಗ್ಗೆ ಕಾಳಜಿ ವಹಿಸಿ) ನಾನು ಹೇಗಿದ್ದೇನೊ ಹಾಗೆಯೇ ಖುಷಿಯಾಗಿದ್ದೇನೆ ಎನ್ನುವ ಆತ್ಮವಿಶ್ವಾಸವು ಬಹುಮುಖ್ಯವಾದ ಖುಷಿಯಾಗಿದೆ.

ನನಗಂತೂ ಹಾಡು ಕಲಿಯುವುದೆಂದರೆ, ಹಾಡುವುದು ಎಂದರೆ ಬಹಳ ಖುಷಿ ನೀಡುತ್ತದೆ. ನಿಮಗೆ ಯಾವುದು ಖುಷಿ ನೀಡುತ್ತದೆ... ಯೋಚಿಸಿ, ಖುಷಿಯಾಗಿರಿ... ಚಿಲ್‌ಔಟ್‌...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT