ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಾಧಾ ಆಲಾಪನ...

Last Updated 1 ಮಾರ್ಚ್ 2013, 19:59 IST
ಅಕ್ಷರ ಗಾತ್ರ

`ಸುಗಮ ಸಂಗೀತ ಕ್ಷೇತ್ರದಲ್ಲಿ ನಾನು ಇಷ್ಟು ಮುಂದೆ ಬರಲು ನನ್ನ ತಾಯಿಯೇ ಕಾರಣ. ಹೆಜ್ಜೆಹೆಜ್ಜೆಗೂ ಅವರು ನೀಡಿದ ಪ್ರೋತ್ಸಾಹ, ನೆರವು ಇಲ್ಲದಿದ್ದರೆ ಅದು ಬಹುಶಃ ಸಾಧ್ಯವಾಗುತ್ತಿರಲಿಲ್ಲ ಎಂಬುದು ನನ್ನ ದೃಢ ನಂಬಿಕೆ'.- ಇದು ಅನುರಾಧಾ ಧಾರೇಶ್ವರ ಅವರ ಪ್ರಾಂಜಲ ಒಪ್ಪಿಗೆ.

1938ರ ನವೆಂಬರ್ 24ರಂದು ಉಮಾಬಾಯಿ ಗಂಗೊಳ್ಳಿ ಮತ್ತು ನಾಗೇಶರಾವ್ ಅವರ ಮಗಳಾಗಿ ಜನಿಸಿದ ಅನುರಾಧಾ ಚಿಕ್ಕಂದಿನಿಂದಲೇ ಸಂಗೀತದ ವಾತಾವರಣದಲ್ಲಿ ಬೆಳೆದವರು. ತಾಯಿ ಉಮಾಬಾಯಿ ಗುನುಗುನಿಸುತ್ತಿದ್ದ ಹಾಡುಗಳಿಂದ ಉತ್ತೇಜಿತರಾಗಿ ಸಂಗೀತ ಕ್ಷೇತ್ರಕ್ಕೆ ಒಲಿದವರು.

ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಲು ಕೋರಿದಾಗ ತಮಗಿಂತ ದೊಡ್ಡವರು ಈ ಕ್ಷೇತ್ರದಲ್ಲಿ ಇದ್ದಾರೆ, ತಾವು ಸಣ್ಣವರು ಎಂದು ವಿನಮ್ರವಾಗಿಯೇ ನಿರಾಕರಿಸಲು ಯತ್ನಿಸಿದ್ದ ಧಾರೇಶ್ವರ ಅವರನ್ನು ಸಂಘಟಕರು ಒತ್ತಾಯದಿಂದ ಅಧ್ಯಕ್ಷ ಸ್ಥಾನ ವಹಿಸಲು ಒಪ್ಪಿಸಿದರು.

ಅನುರಾಧಾ ಆಕಾಶವಾಣಿಯಲ್ಲಿ ನೂರಾರು ಹಾಡುಗಳನ್ನು ಹಾಡಿದ್ದಾರೆ. ಮಹಾತ್ಮಾ ಗಾಂಧೀಜಿಯವರ ಜೀವನ ಚರಿತ್ರೆ ಕುರಿತಂತೆ ಧಾರವಾಡ ಆಕಾಶವಾಣಿ ರೂಪಿಸಿದ, ಎನ್.ಕೆ.ಕುಲಕರ್ಣಿ ಅವರು (ಎನ್ಕೆ) ಬರೆದ `ಗಾಂಧೀ ಗೀತ' ಎಂಬ ಗೀತ ರೂಪಕದಲ್ಲಿ ಸುಶ್ರಾವ್ಯವಾಗಿ ಹಾಡುಗಳನ್ನು ಹಾಡಿ ಅದರ ಜನಪ್ರಿಯತೆಗೆ ಕಾರಣರಾದರು.

`ಕವಿ ಪ್ರದೀಪ್ ಅವರು ಬರೆದು ಲತಾ ಮಂಗೇಶ್‌ಕರ್ ಅವರು ಹಾಡಿದ `ಏ ಮೇರೆ ವತನ್ ಕೆ ಲೋಗೋಂ...' ಹಾಡನ್ನು ರಾಘವೇಂದ್ರ ಇಟಗಿ ಅವರು ಕನ್ನಡಕ್ಕೆ `ಓ ಎನ್ನ ದೇಶ ಬಾಂಧವರೇ' ಎಂದು ಅನುವಾದಿಸಿದಾಗ ಅದನ್ನು ಹಾಡುವ ಅದೃಷ್ಟ ನನಗೆ ಒದಗಿಬಂತು.

ಸುಮಾರು 15 ದಿನಗಳ ಕಾಲ ಅದರ ರಿಹರ್ಸಲ್ ನಡೆಯಿತು. ಮೊದಲ ಮೂರ‌್ನಾಲ್ಕು ದಿನ ಲತಾ ಅವರ ಹಾಡನ್ನು ಕೇಳುತ್ತಿದ್ದೆವು. ನಂತರದ ದಿನಗಳಲ್ಲಿ ಲತಾ ಅವರ `ಪಿಚ್'ನಲ್ಲೇ ಹಾಡಲು ಯತ್ನಿಸುತ್ತಿದ್ದೆ. ಸಹ ಕಲಾವಿದರು ಸಾಕಷ್ಟು ಪ್ರೋತ್ಸಾಹ ನೀಡಿದರು' ಎಂದು ಅವರು ಸ್ಮರಿಸುತ್ತಾರೆ.

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಇದ್ದ ಅವರು, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅಲ್ಲಿ ಅಷ್ಟೊಂದು ಪ್ರೋತ್ಸಾಹ ಸಿಕ್ಕಲಾರದು ಎಂಬ ಕಾರಣಕ್ಕೆ ಪ್ರೌಢಶಾಲೆ ಶಿಕ್ಷಣಕ್ಕಾಗಿ ಧಾರವಾಡಕ್ಕೆ ತಂದೆ- ತಾಯಿ ಜತೆ ಬಂದರು.

ಹುಬ್ಬಳ್ಳಿಯ ರಾಮಚಂದ್ರ ದೀಕ್ಷಿತ್ ಜಂತ್ಲಿ ಅವರ ಬಳಿ ಶಿಷ್ಯರಾಗಿ ಸಂಗೀತ ಕಲಿಯಲಾರಂಭಿಸಿದರು. ಧಾರವಾಡದಲ್ಲಿ ಕೂಡ ಒಳ್ಳೆಯ ಸಂಗೀತ ಕಲಿಸುವ ಶಿಕ್ಷಕರಿದ್ದರೂ ಅಷ್ಟೊಂದು ಶುಲ್ಕ ತೆರಲು ಆಗದ ಕಾರಣ ಹುಬ್ಬಳ್ಳಿಗೆ ಹೋಗಬೇಕಾಯಿತು ಎಂದು ಅವರು ತಿಳಿಸಿದರು.

1988-89ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, 1990- 91ರಲ್ಲಿ ಧಾರವಾಡದ ಗೌಡ ಸಾರಸ್ವತ ಸಮಾಜ, 1995ರಲ್ಲಿ ಮೈಸೂರು ಸುಗಮ ಸಂಗೀತ ಅಕಾಡೆಮಿ, ಬೆಂಗಳೂರಿನ ಸಾಧನಾ ಮ್ಯೂಸಿಕ್ ಅಕಾಡೆಮಿಗಳ ಪುರಸ್ಕಾರ, 1995ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1997ರಲ್ಲಿ ಕೊಂಕಣಿ ಸುಗಮ ಸಂಗೀತ ಪ್ರಶಸ್ತಿ, 1998ರಲ್ಲಿ ಸಂತ ಶಿಶುನಾಳ ಷರೀಫ ಪ್ರಶಸ್ತಿ ಮೊದಲಾದವು ಇವರನ್ನು ಹುಡುಕಿಕೊಂಡು ಬಂದಿವೆ.

ಅವರೊಂದಿಗೆ ನಡೆಸಿದ ಪ್ರಶ್ನೋತ್ತರದ ವಿವರ ಇಲ್ಲಿದೆ:

ನೀವು ಹಾಡಲು ಆರಂಭಿಸಿದಾಗ ಹೇಗಿತ್ತು?

ಆಗ ಸುಗಮ ಸಂಗೀತ ಅಷ್ಟಾಗಿ ಬೆಳೆದಿರಲಿಲ್ಲ. ಹಾಗೆ ನೋಡಿದರೆ ಸುಗಮ ಸಂಗೀತ ಬೆಳೆಯಲು ಆಕಾಶವಾಣಿಯ ಕೊಡುಗೆ ಅಪಾರ. ಧಾರವಾಡ ಆಕಾಶವಾಣಿಯಲ್ಲಿ ಬೆಳಗಿನ ವಂದನೆ ವೇಳೆಗೆ ಭಕ್ತಿಸಂಗೀತ, ದೇಶಭಕ್ತಿ ಗೀತೆ, ವಚನಗಳು, ಸುಪ್ರಭಾತ, ಸುಗಮ ಸಂಗೀತ- ಎಲ್ಲವೂ ಒಟ್ಟಿಗೇ ಇರುತ್ತಿತ್ತು.

ಹೀಗಾಗಿ ಸುಗಮ ಸಂಗೀತಕ್ಕೆ ಹೆಚ್ಚು ಪ್ರಾಧಾನ್ಯ ಇರಲಿಲ್ಲ. ಆದರೆ ಬೆಂಗಳೂರು, ಮೈಸೂರು ಆಕಾಶವಾಣಿಯಲ್ಲಿ ಬೆಳಗಿನ ಪ್ರಸಾರದಲ್ಲಿ ಕೇವಲ ಸುಗಮ ಸಂಗೀತ ಇರುತ್ತಿತ್ತು.

ನಿಮ್ಮ ಜತೆ ಹಾಡುತ್ತಿದ್ದವರು...
ನನ್ನ ಸಮಕಾಲೀನರು ಹಲವರು. ದೇವೇಂದ್ರ ಪತ್ತಾರ, ಈಶ್ವರಪ್ಪ ಮಿಣಚಿ, ಪದ್ಮಾಕ್ಷಿ ಪೂಜಾರ, ಕೃಷ್ಣಾ ಹಾನಗಲ್, ಹೇಮಾ ಪೋತದಾರ, ಉಷಾ ಖಾಡಿಲಕರ್, ಕೇಶವ ಗುರಂ, ಪಿ.ಆರ್. ಭಾಗವತ, ಮಾಲಾ ದೀಕ್ಷಿತ, ವಿಜಯಾ ಲಿಂಗಸಗೂರ, ಕುಸುಮಾ ಕುಲಕರ್ಣಿ, ಶಾಮಲಾ ಕುಬಸದ, ಶಾರದಾ ಹಾನಗಲ್, ನೀಲಮ್ಮ ಕೊಡ್ಲಿ, ಇಂದುಮತಿ ತಾಮ್ಹಣಕರ, ಸುನಂದಾ ತಗ್ಗರ್ಸೆ ಇತ್ಯಾದಿ.

ಆಗ ಸುಗಮ ಸಂಗೀತ ಕಲಿಸುವ ಗುರುಗಳು ಇದ್ದರೇ?

ನನ್ನ ಗುರುಗಳು ರಾಮಚಂದ್ರ ದೀಕ್ಷಿತ್ ಜಂತ್ಲಿ, ಆರ್.ಪಿ.ಹೂಗಾರ ಮತ್ತು ಇತರ ಕೆಲವರು ಮಾತ್ರ ಕಲಿಸುತ್ತಿದ್ದರು. ರಾಮಚಂದ್ರ ದೀಕ್ಷಿತರು ಕಲಿಸುವ ಜತೆಗೆ ಹಾಡುಗಳನ್ನು ಬರೆದು ಹಾಡುಗಳಿಗೆ ಸಂಗೀತ ರಚಿಸಿ ಕಲಿಸಿ ಕೊಡುತ್ತಿದ್ದರು. ಜಂತ್ಲಿ ಗುರುಗಳು ಹಾಡು ಹೇಳಿಕೊಟ್ಟ ಮೇಲೆ ಅವರೆದುರು ಹಾಡಿ ತೋರಿಸುತ್ತಿದ್ದೆ. ನನ್ನ ಮುಂದೆ ಹಾಡಿದರೆ ಸಾಲದು, ಮನೆಗೆ ಹೋಗಿ ಅಮ್ಮನ ಮುಂದೆ ಹಾಡು, ಅವರು ಒಪ್ಪಿದರೆ ನೀನು ಕಲಿತಂತೆ ಎನ್ನುತ್ತಿದ್ದರು.

ಸುಗಮ ಸಂಗೀತಕ್ಕೆ ರಾಗದ ಹಿನ್ನೆಲೆಯ ಅವಶ್ಯಕತೆ ಇದೆಯೇ?
ಹೌದು, ಸುಗಮ ಸಂಗೀತಗಾರರಿಗೆ ಸ್ವಲ್ಪ ಮಟ್ಟಿಗೆ ರಾಗ, ತಾಳದ ಬಗ್ಗೆಯೂ ಅನುಭವ ಇರಬೇಕು. ಶಾಸ್ತ್ರೀಯ ಸಂಗೀತ ಕಲಿತಿದ್ದರೆ ಹೆಚ್ಚು ಅನುಕೂಲ ಆಗುತ್ತದೆ. ಹಾಡುವಾಗ ರಾಗ, ತಾಳ, ಭಾವಗಳ ಜತೆ ಸ್ಪಷ್ಟ ಉಚ್ಚಾರ ಅಗತ್ಯ. ಇವೆಲ್ಲವೂ ಕೂಡಿದಾಗಲೇ ಸುಗಮ ಸಂಗೀತಕ್ಕೆ ಬೆಲೆ ಬರುವುದು.

ಸಿನಿಮಾ ರಂಗದಲ್ಲಿ ಹಾಡುವ ಅವಕಾಶ ದೊರೆಯಲಿಲ್ಲವೇ?

ಇಲ್ಲ. ಆದರೆ ಒಂದು ಬಾರಿ ಅವಕಾಶ ಬಂದಿತ್ತು. ಗಿರೀಶ ಕಾಸರವಳ್ಳಿ ಅವರು `ವಂಶವೃಕ್ಷ' ಚಿತ್ರೀಕರಿಸುತ್ತಿದ್ದಾಗ ನನಗೆ ಹಾಡಲು ಅವಕಾಶ ನೀಡಲು ಮುಂದಾಗಿದ್ದರು. ಆದರೆ ಆಕಾಶವಾಣಿಯಲ್ಲಿ ಇದ್ದವರು ಹೊರಗೆ ಹಾಡುವಂತಿರಲಿಲ್ಲವಾದ್ದರಿಂದ ಸಿಕ್ಕ ಒಂದು ಅವಕಾಶ ತಪ್ಪಿಹೋಯಿತು. ಆದರೆ ಅದರ ಬಗ್ಗೆ ನನಗೆ ಖೇದವೇನಿಲ್ಲ.

ಆಕಾಶವಾಣಿಯ ಅನುಭವದ ಬಗ್ಗೆ ಹೇಳಿ...
ಆಕಾಶವಾಣಿಗೆ ನಾನು ಉದ್ಘೋಷಕಿ ಎಂದು ಸೇರಿದಾಗ ನನಗದು ಹೊಸ ಅನುಭವ. ಸ್ಟುಡಿಯೊ ಒಳಕ್ಕೆ ಹೋಗುವ ಮುನ್ನ ರಿಹರ್ಸಲ್ ಮಾಡಿಕೊಂಡು ಹೋಗುತ್ತಿದ್ದೆ. ಧಾರವಾಡ ಆಕಾಶವಾಣಿಯಲ್ಲಿ ಎನ್ಕೆ ಕುಲಕರ್ಣಿ ಅವರಿಂದ ಸಾಕಷ್ಟು ಕಲಿತೆ.

ಮುಂಬೈ ಅನುಭವ ಹೇಗಿತ್ತು?

ನಾನು ಮದುವೆಯಾದ ಬಳಿಕ (ಅದುವರೆಗೆ ಶಾಂತಮತಿ ಎಂದಿದ್ದ ಅವರ ಹೆಸರು, ಮದುವೆಯಾದ ಬಳಿಕ ಅನುರಾಧಾ ಧಾರೇಶ್ವರ ಎಂದು  ಬದಲಾಯಿತು) ಒಂದೆರಡು ವರ್ಷ ಮುಂಬೈಗೆ ಹೋಗಿದ್ದೆ. ಅದಕ್ಕೂ ಮೊದಲು ನನ್ನ ಅಕ್ಕ ಸಹ ಮುಂಬೈನಲ್ಲಿದ್ದರು.

ಆಗ ಹೋಗಿದ್ದೆ. ಮುಂಬೈನಲ್ಲಿ ಯಶವಂತ ದೇವ್ ಎಂಬ ಸಂಗೀತಗಾರರ ಬಳಿ ಕಲಿಯುತ್ತಿದ್ದೆ. ನಾನಿದ್ದುದು ಗೋರೆಗಾಂವ್‌ನಲ್ಲಿ. ಅವರಿದ್ದುದು ದಾದರ್‌ನಲ್ಲಿ. ಪ್ರತಿದಿನ ಲೋಕಲ್ ಟ್ರೇನ್‌ನಲ್ಲಿ ಸುಮಾರು ಒಂದು ಗಂಟೆ ಪಯಣಿಸಿ ಸಂಗೀತ ಕಲಿಯಲು ಹೋಗುತ್ತಿದ್ದೆ. ಅದೇಕೋ ಮುಂಬೈ ಜೀವನ ನನಗೆ ಒಗ್ಗಲಿಲ್ಲ.

ಹೀಗಾಗಿ ಧಾರವಾಡಕ್ಕೆ ಮರಳಿದೆ. ಮುಂಬೈನಲ್ಲಿ ಇದ್ದಾಗ `ಓ ಎನ್ನ ದೇಶ ಬಾಂಧವರೇ...' ಗೀತೆಯನ್ನು ಎಚ್.ಎಂ.ವಿ ಸಂಗೀತ ಕಂಪೆನಿಯಲ್ಲಿ ರೆಕಾರ್ಡಿಂಗ್ ಮಾಡಬೇಕೆಂಬ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಮುಂಬೈನಲ್ಲಿ ಸುಧೀರ್ ಫಡಕೆ ಅವರು ನನ್ನ ಹಾಡು ಮೆಚ್ಚಿಕೊಂಡಿದ್ದರು.

ಟೀಚರ್ ಆದ ಅನುಭವ...
ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲ್‌ನಲ್ಲಿ ಏಳೆಂಟು ವರ್ಷ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ. ಅಂದಿನ ಪಗಾರ ಸಾಲುತ್ತಿರಲಿಲ್ಲ. ನಮ್ಮ ಗುರುಗಳೊಬ್ಬರ ಸಲಹೆಯಂತೆ ಬಿ. ಮ್ಯೂಸಿಕ್ ಪಾಸಾದೆ. ಅದೇ ವೇಳೆಗೆ ಆಕಾಶವಾಣಿ ಜತೆಗೂ ಒಡನಾಟ ಇತ್ತು. ಮುಂದೆ ಆಕಾಶವಾಣಿ ಸೇರಿದ ಬಳಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು.

ಸುಗಮ ಸಂಗೀತ ಕ್ಷೇತ್ರದ ಈಗಿನ ಸ್ಥಿತಿಗತಿಯ ಬಗ್ಗೆ ಹೇಳಿ...

ಸುಗಮ ಸಂಗೀತ ಕ್ಷೇತ್ರ ಈಗ ಮೊದಲಿಗಿಂತ ಉಚ್ಛ್ರಾಯ ಸ್ಥಿತಿಯಲ್ಲಿದೆ. ಸಿ.ಅಶ್ವಥ್, ಜಿ.ವಿ.ಅತ್ರಿ (ಇಬ್ಬರೂ ಈಗಿಲ್ಲ), ರತ್ನಮಾಲಾ ಪ್ರಕಾಶ್, ಬಿ.ಕೆ.ಸುಮಿತ್ರಾ, ಶಿವಮೊಗ್ಗ ಸುಬ್ಬಣ್ಣ, ವೈ.ಕೆ.ಮುದ್ದುಕೃಷ್ಣ, ಮಾಲತಿ ಶರ್ಮಾ ಮತ್ತಿತರರು ಸುಗಮ ಸಂಗೀತಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಿದ್ದಾರೆ.

ಟಿ.ವಿ.ಗಳಲ್ಲಿ ಸಹ ರಿಯಾಲಿಟಿ ಶೋಗಳು ಹೆಚ್ಚಾಗಿ ಜನರಲ್ಲಿ, ಅದರಲ್ಲೂ ಯುವ ಪೀಳಿಗೆಯಲ್ಲಿ ಹಾಡುಗಾರರಾಗಬೇಕೆಂಬ ತಹತಹ ಹೆಚ್ಚುತ್ತಿರುವುದು ಸಂತಸದ ಸಂಗತಿ. ಆದರೆ ಟಿ.ವಿ ಶೋಗಳಲ್ಲಿ ಮಿಂಚಬೇಕೆಂಬ ಆಸೆಯಿಂದಲೇ ಸಂಗೀತ ಕಲಿಯಲು ಬರುವ ಜನರ ಬಗ್ಗೆ ಕೊಂಚ ಬೇಸರ ಆಗುತ್ತದೆ.

ಹಾಡುಗಾರಿಕೆ ಎಂಬುದು ಅದು ಶಾಸ್ತ್ರೀಯವೇ ಆಗಿರಲಿ, ಸುಗಮ ಸಂಗೀತವೇ ಆಗಿರಲಿ ಸಾಧನೆಯಿಂದ ಬರಬೇಕಾದ್ದು. ಆಗಲೇ ಪರಿಪಕ್ವತೆ ಬರುತ್ತದೆ. ಕಾಟಾಚಾರಕ್ಕೆ ಅಥವಾ ಟಿ.ವಿ.ಯಲ್ಲಿ ಮಿಂಚಬೇಕೆಂಬ ಉದ್ದೇಶದಿಂದ ಬಂದರೆ ಅಷ್ಟೊಂದು ಒಳ್ಳೆಯದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT