ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದರೂ ಶುಭ ಸಮಾಚಾರ ಇದೆಯಾ?

Last Updated 25 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸುಮಾರು ಐದು ದಶಕಗಳಿಗೂ ಹಿಂದಿನ ಮಾತು. ನನಗಾಗ ಏಳೆಂಟು ವರ್ಷ ವಯಸ್ಸಿದ್ದಿರಬಹುದು. ನಮ್ಮ ದೊಡ್ಡಮ್ಮ ಅವರ ಪರಿಚಿತರೊಬ್ಬರ ಮನೆಗೆ ಹೋದಾಗ ಜೊತೆಗೆ ನನ್ನನ್ನೂ ಕರೆದೊಯ್ದಿದ್ದರು. ಅವರ ಮನೆಗೆ ಬಂದಿದ್ದ ಒಬ್ಬ ಮಹಿಳೆ, ದೊಡ್ಡಮ್ಮನನ್ನು ಕುರಿತು, ‘ನಿಮಗೆಷ್ಟು ಮಕ್ಕಳು?’ ಎಂದು ಕೇಳಿದರು. ದೊಡ್ಡಮ್ಮ ಥಟ್ಟನೆ ‘ಎರಡು- ಒಂದು ಹೆಣ್ಣು, ಒಂದು ಗಂಡು’ ಎಂದರು. ನನಗೋ ಆಶ್ಚರ್ಯ! ದೊಡ್ಡಮ್ಮನಿಗೆ ಮಕ್ಕಳಿರಲಿಲ್ಲ. ಆದರೂ ಅವರು ಹೀಗೇಕೆ ಹೇಳಿದರೋ ಅರ್ಥವಾಗಲಿಲ್ಲ. ನಾನು ಇದರ ಬಗ್ಗೆ ಅವರನ್ನು ಅಲ್ಲೇ ಪ್ರಶ್ನಿಸದಿದ್ದುದು ಮತ್ತೊಂದು ಆಶ್ಚರ್ಯ. ಅಲ್ಲಿಂದ ಹೊರಟ ಮೇಲೆ ಸೂಕ್ಷ್ಮವನ್ನೂ ಅರಿಯದೆ ನಾನವರನ್ನು  ಕೇಳಿದೆ, ‘ದೊಡ್ಡಮ್ಮ ಅಲ್ಲಿ ಯಾಕೆ ಹಾಗೆ ಹೇಳಿದಿರಿ? ನಿಮಗೆ ಮಕ್ಕಳೇ ಇಲ್ಲವಲ್ಲ?’ ಎಂದು.

ಅವರು ಬೇಸರಿಸಿಕೊಳ್ಳದೆ ನಗುತ್ತಲೇ  ‘ಮಕ್ಕಳಿಲ್ಲ ಅಂತ ಹೇಳಿದರೆ ‘ಯಾಕಿಲ್ಲ? ಆಗಲೇ ಇಲ್ಲವೋ? ಆಗಿ ಸತ್ತವೋ?’ ಎಂದೆಲ್ಲ ಅಸಂಬದ್ಧ ಪ್ರಶ್ನೆ ಕೇಳುತ್ತಾರೆ. ನೋಡು ಹೀಗೆ ಹೇಳಿದರೆ ಮುಂದೇನೂ ಕೇಳುವುದಿಲ್ಲ’ ಎಂದರು. ಈಗ ಯೋಚಿಸಿದರೆ ಅರ್ಥವಾಗುತ್ತದೆ, ಅವರು  ಜನರ  ಪ್ರಶ್ನೆಗಳಿಂದ ಎಷ್ಟು ನೊಂದಿರಬಹುದು ಎಂದು.

ನಮ್ಮಲ್ಲಿ ಮತ್ತೊಬ್ಬರ ಖಾಸಗಿ ವಿಷಯವನ್ನು ಅರಿಯುವ ಕುತೂಹಲ ಬಹಳ ಜನರಿಗಿರುತ್ತದೆ.  ವಿವಾಹವಾಗಿ ಒಂದೆರಡು ತಿಂಗಳುಗಳಾದರಾಯಿತು,  ಸಿಕ್ಕಾಗಲೆಲ್ಲ ಅವಳನ್ನು ಕೂಲಂಕುಷವಾಗಿ ಗಮನಿಸುತ್ತಾರೆ.   ಮೈಕೈ ತುಂಬಿಕೊಂಡಿದ್ದರೆ, ಅಥವಾ ತೆಳ್ಳಗಾಗಿದ್ದರೆ, ಯಾವುದಾದರೂ ಆಹಾರದ ವಿಷಯದಲ್ಲಿ ಆಸಕ್ತಿ ಅಥವಾ ನಿರಾಸಕ್ತಿ ತೋರಿಸಿದರೆ, ಯಾವುದೇ ಕಾರಣಕ್ಕಾಗಿ ಆಕೆಯ ಹೊಟ್ಟೆ ಸ್ವಲ್ಪ ಮುಂದಿದ್ದರೆ- ಅವಳು ಗರ್ಭಿಣಿಯೆಂದು ತೀರ್ಮಾನಿಸಿ ನಿಸ್ಸಂಕೋಚವಾಗಿ, ‘ಏನು, ಏನಾದರೂ ಸುದ್ದಿನಾ?’ ಮುಂತಾಗಿ ನೇರವಾಗಿ ಪ್ರಶ್ನಿಸುವವರು ಕಡಿಮೆಯೇನಲ್ಲ. ಇದು ನಿಜಕ್ಕೂ ಮುಜುಗರ ತಂದಿಡುವ ಸಂಗತಿ.

ಕುಟುಂಬದ ಇತರ ಸದಸ್ಯರು ಅಥವಾ ಹಿರಿಯರು, ಇಲ್ಲವೇ ಪರಸ್ಪರ ಸುಖ ದುಃಖಗಳನ್ನು ಹಂಚಿಕೊಳ್ಳುವಂತಹ ಆತ್ಮೀಯ ಗೆಳತಿಯರು ಕಾಳಜಿಯಿಂದ ಕೇಳಿದರೆ, ಸಲಹೆ ನೀಡಿದರೆ ಅಡ್ದಿಯಿಲ್ಲ. ಆದರೆ ಕೇವಲ ಪರಿಚಿತರಾದವರು  ಕುತೂಹಲದಿಂದ ಅನಾವಶ್ಯಕ ಪ್ರಶ್ನೆ ಕೇಳುವುದು ಎಷ್ಟು ಸೂಕ್ತ?
ಟೊರೆಂಟೋದ  ‘ಬಂಜೆತನ ಸಲಹೆಗಾರ್ತಿ’ ಎರಿಕಾ ಬೆರ್ಮನ್ ಅವರು, ಈ ರೀತಿ ನೊಂದ ಮಹಿಳೆಯರ ಬಗ್ಗೆ ಒಂದು ಅಧ್ಯಯನವನ್ನೇ ಮಾಡಿದ್ದಾರೆ. ವಿವಾಹಿತೆಯರನ್ನು ಈ ರೀತಿಯ ಪ್ರಶ್ನೆಗಳನ್ನು ಏಕೆ ಕೇಳಬಾರದು, ಹಾಗೂ ಅವರಿಗೆ ಯಾವ ರೀತಿ ಸಲಹೆ/ಬುದ್ಧಿವಾದ ನೀಡಬಾರದು ಎಂಬ ಪಟ್ಟಿಯನ್ನೇ ಮಾಡಿದ್ದಾರೆ:

ಪ್ರಶ್ನೆಗಳನ್ನೇಕೆ ಕೇಳಬಾರದು:
*ಮಹಿಳೆಯೊಬ್ಬಳಲ್ಲಿ ದೈಹಿಕ ಬದಲಾವಣೆ ಕಂಡುಬಂದರೆ, ಆಕೆ ಮೈಕೈ ತುಂಬಿಕೊಂಡಂತಾಗಲೀ ತೆಳ್ಳಗಾಗಿರುವಂತಾಗಲೀ ಕಾಣಿಸಿದರೆ, ಅದಕ್ಕೆ ಕಾರಣ ಗರ್ಭಧರಿಸಿರುವುದೇ ಆಗಿರಲಾರದು. ಗರ್ಭಧರಿಸುವುದಕ್ಕಾಗಿಯೇ ಔಷಧಿಗಳನ್ನು ಸೇವಿಸಿದರೆ ದಪ್ಪಗಾಗುವ ಸಾಧ್ಯತೆ ಉಂಟು.  ಜೀವನದಲ್ಲಿ ಏನಾದರೂ ತೊಂದರೆ, ಸಮಸ್ಯೆ ಇದ್ದರೆ ಸಹ ಚಿಂತೆಯಿಂದ ತೆಳ್ಳಗಾಗಿರಬಹುದು. ಹೀಗಿರುವಾಗ  ನಿಮ್ಮ ಅನಿಸಿಕೆಯ ಆಧಾರದ ಮೇಲೆ ಒಬ್ಬ ಮಹಿಳೆಯನ್ನು ಆಕೆ ಗರ್ಭಿಣಿಯೇ ಎಂದು ಪ್ರಶ್ನಿಸಿದರೆ, ಆಕೆ ನಿಜಕ್ಕೂ ಗರ್ಭಿಣಿಯಾಗಿಲ್ಲದಿದ್ದರೆ ಆಕೆಗೆ  ಮುಜುಗರವಾಗಬಹುದು.

*ಒಂದು ವೇಳೆ ಆಕೆ ಗರ್ಭಿಣಿಯಾಗಿದ್ದರೂ, ತೀರ ಪ್ರಾರಂಭದಲ್ಲಿ ಅದನ್ನು ಬಹಿರಂಗ ಪಡಿಸಲು ಸಿದ್ಧಳಾಗಿರಲಿಕ್ಕಿಲ್ಲ.

*ತಾನು ಗರ್ಭಿಣಿಯಾಗಿರುವುದರ ಬಗ್ಗೆ ಆಕೆಗೇ ಇನ್ನೂ ಖಚಿತವಾಗಿರಲಾರದು.

*ಕೆಲವೊಮ್ಮೆ ಏನಾದರೂ ದೋಷಗಳಿದ್ದು ಗರ್ಭಪಾತದ ಸಾಧ್ಯತೆಯೂ ಇರುತ್ತದಷ್ಟೆ? ಇದು ಆಗುವುದು ಮೊದಲ ತ್ರೈಮಾಸಿಕದಲ್ಲೇ ಹೆಚ್ಚು. ಆದ್ದರಿಂದ ಬಹುತೇಕ ಮಹಿಳೆಯರು ಈ ಅವಧಿ ಕಳೆದು ಸುರಕ್ಷಿತ ಅವಧಿ ಪ್ರಾರಂಭವಾದ ನಂತರವೇ ಬಹಿರಂಗ ಪಡಿಸಲು ಬಯಸುವುದುಂಟು.

*ಒಂದು ವೇಳೆ ಆಕೆಗೆ ಹಿಂದೊಮ್ಮೆ ಗರ್ಭಪಾತವಾಗಿದ್ದು, ಆಕೆ ಆ ಆಘಾತದಿಂದ ಚೇತರಿಸಿಕೊಳ್ಳುತ್ತಿರಬಹುದು.

*ಗರ್ಭಧಾರಣೆಗಾಗಿ ಔಷಧಿಗಳನ್ನು  ಸೇವಿಸುತ್ತಿದ್ದು, ಫಲಿತಾಂಶವನ್ನು ಎದುರುನೋಡುತ್ತಿರಬಹುದು.

*ಪ್ರಯತ್ನಿಸಿ ಇನ್ನೂ ಯಶಸ್ವಿಯಾಗಿಲ್ಲದಿರಬಹುದು.

*ಅವರಿಗೆ ಮಕ್ಕಳಾಗಲು ಸಾಧ್ಯವಿಲ್ಲವೆಂದೇ ವೈದ್ಯರು ಹೇಳಿರಬಹುದು. ಬೇಕೆಂದೇ ಮುಂದೂಡಿರಬಹುದು.

*ಮತ್ತೆ ಕೆಲವರು ಯಾವುದೋ ಕಾರಣಕ್ಕಾಗಿ ಮಕ್ಕಳು ಬೇಡವೆಂದೇ ನಿರ್ಧರಿಸಿರಬಹುದು.

ಇಂತಹ ಸಂದರ್ಭಗಳಲ್ಲಿ ಚಿಂತೆ, ಆತಂಕ, ದುಃಖ ಅನುಭವಿಸುತ್ತಿರುವವರಿಗೆ ಈ ರೀತಿಯ ಪ್ರಶ್ನೆಗಳು ಹುಣ್ಣಿನ ಮೇಲೆ ಬರೆ ಹಾಕಿದಂತೆಯೇ ಆಗುವುದಲ್ಲವೇ?

ಏನು ಸಲಹೆ/ಬುದ್ಧಿವಾದಗಳನ್ನು ನೀಡಬಾರದು:
* ‘ಇನ್ನೂ ಮಕ್ಕಳಾಗಿಲ್ಲವೇ? ಯೋಚನೆ ಮಾಡಬೇಡಿ. ಆಗತ್ತೆ’ ಅಥವಾ ‘ಇನ್ನೆಷ್ಟು ದಿನ ಯೋಜನೆ? ಬೇಗ ಒಂದಾದರೂ ಮಾಡಿಕೊಂಡುಬಿಡಿ’ ಎಂಬ ಮಾತುಗಳು ಬೇಕಿಲ್ಲ.

*ಗರ್ಭಪಾತವಾಗಿದ್ದು ತಿಳಿದು ಬಂದಲ್ಲಿ, ‘ಅಯ್ಯೋ ಪಾಪ. ಹೀಗಾಯಿತೇ? ಆತಂಕ ಬೇಡ. ಮುಂದೆ ಸರಿ ಆಗತ್ತೆ!’  (ಅವರಿಗೇನು ತೊಂದರೆಯೋ ಯಾರಿಗೆ ಗೊತ್ತು. ಚಿಕಿತ್ಸೆ ನೀಡಲು, ಆಶ್ವಾಸನೆ ನೀಡಲು ವೈದ್ಯರುಗಳಿದ್ದಾರೆ ಅಲ್ಲವೇ?)

*ಗರ್ಭಪಾತ ಒಮ್ಮೆ ಆಗಿದ್ದು, ಮತ್ತೆ ಗರ್ಭಿಣಿಯಾಗಿರುವವರಿಗೆ- ಕಾಫಿ ಟೀ ಕುಡಿಯಬೇಡಿ, ಚಿಂತಿಸಬೇಡಿ, ವ್ಯಾಯಾಮ ಮಾಡಬೇಡಿ, ಚೆನ್ನಾಗಿ ತಿನ್ನಿ...  ಈ ಸಲಹೆಗಳು ಬೇಡ. ಇವಕ್ಕೂ ಗರ್ಭಪಾತಕ್ಕೂ ಏನು ಸಂಬಂಧವೂ ಇರಲಾರದು.

ಈ ಜವಾಬ್ದಾರಿಯನ್ನೂ ವೈದ್ಯರಿಗೇ ಬಿಡಿ.
*ಒಂದು ಮಗು ಇದ್ದವರಿಗೆ ಮತ್ತೊಂದು ಯಾವಾಗ ಎಂದಾಗಲೀ, ಇನ್ನೊಂದು ಮಾಡಿಕೊಂಡು ಬಿಡಿ ಎಂದು ಸಲಹೆ ನೀಡುವುದಾಗಲೀ ಬೇಕಿಲ್ಲ. ಎಷ್ಟೋ ಬಾರಿ ಬೇಕೆಂದರೂ ಎರಡನೆಯದು ಸಾಧ್ಯವಾಗದೇ ಹೋಗಬಹುದು.  ಒಂದು ವೇಳೆ ತೊಂದರೆ ಇಲ್ಲದಿದ್ದರೂ, ಅವರು ಚೆನ್ನಾಗಿ ಯೋಚಿಸಿಯೇ ಬೇಡವೆಂಬ ತೀರ್ಮಾನಕ್ಕೆ ಬಂದಿರಬಹುದು. ಹೀಗೆ ತೀರ್ಮಾನಿಸಲು ಒಂದು ಕಾರಣವೂ ಇದ್ದೇ ಇರುತ್ತದೆ ಎಂಬುದನ್ನು ಅರಿತರೆ ಒಳ್ಳೆಯದು.

ಏನೇ ಆಗಲೀ ಈ ವಿಷಯಗಳೆಲ್ಲ ಅತಿ ಖಾಸಗಿಯಾದಂತಹವು. ಆದ್ದರಿಂದ ಪ್ರಶ್ನೆಗಳನ್ನು ಕೇಳಿದರೆ ಅವರ ಖಾಸಗಿತನದ ಮೇಲೆ ಲಗ್ಗೆ ಇಟ್ಟಂತೆಯೇ ಸರಿ. ‘ಒಳ್ಳೆಯ ಸುದ್ದಿ’ ನಿಜಕ್ಕೂ ಇದ್ದರೆ, ಅದನ್ನು ಇತರರೊಡನೆ ಹಂಚಿಕೊಳ್ಳದೆ ಯಾರಾದರೂ ಮುಚ್ಚಿಟ್ಟುಕೊಳ್ಳುತ್ತಾರೆಯೇ? ಆದ್ದರಿಂದ ನೀವು ಕೇಳದೆಯೇ ಅವರಾಗಿ ಸಂತೋಷದ ಸುದ್ದಿಯನ್ನು ತಿಳಿಸಲು ಅವರಿಗೆ ಅವಕಾಶ ಕೊಡಿ.

ಸ್ವತಃ ಈ ಕಿರಿಕಿರಿ ಅನುಭವಿಸಿದ ಎರಿಕಾ ಬೆರ್ಮನ್ ಧೃಢವಾಗಿ ಹೇಳುವುದು, “ಎಲ್ಲಕ್ಕಿಂತ ಮುಖ್ಯವಾಗಿ ಇವೆಲ್ಲ ವೈಯಕ್ತಿಕ, ಖಾಸಗಿ ವಿಷಯಗಳು. ಯಾರ ವೈಯಕ್ತಿಕ ಜೀವನದಲ್ಲೂ ತಲೆ ಹಾಕಬೇಡಿ! ಅದಕ್ಕೂ ನಿಮಗೂ ಯಾವ ಸಂಬಂಧವೂ ಇಲ್ಲ!!” ಅವರು ಹೇಳುವುದು ಸರಿಯಲ್ಲವೇ    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT