ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀವಳಿಗೆಗೆ ಸಿಹಿಕುಂಬಳ ಸವಿ

ನಮ್ಮೂರ ಊಟ
Last Updated 17 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಖಾರದ ಇಡ್ಲಿ

ಸಾಮಗ್ರಿ: ಮುಕ್ಕಾಲು ಲೋಟ ಅಕ್ಕಿ ರವೆ, ಮೂರು ಲೋಟ ತುರಿದ ಸಿಹಿ ಕುಂಬಳ, ಹೆಚ್ಚಿದ ಎರಡು ಹಸಿ ಮೆಣಸು, ಹೆಚ್ಚಿದ ಎರಡು ದಳ ಕರಿಬೇವು, ಕಾಲು ಟೀ ಚಮಚ ಕಾಳು ಮೆಣಸಿನ ಪುಡಿ, ಅರ್ಧ ಟೀ ಚಮಚ ಜೀರಿಗೆ, ಒಂದು ಹಿಡಿ ಕಾಯಿ ತುರಿ, ಅರ್ಧ ಲೋಟ ಮೊಸರು, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಮೊದಲಿಗೆ ಅಕ್ಕಿ ರವೆಯನ್ನು ಹುರಿದುಕೊಳ್ಳಬೇಕು. ಇದರೊಂದಿಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಕಲಸಿದ ನಂತರ ಕಾಲು ಗಂಟೆಯ ಬಳಿಕ ಇನ್ನೊಮ್ಮೆ ಕಲಸಿ ಜಿಡ್ಡು ಸವರಿದ ಇಡ್ಲಿ ಪಾತ್ರೆಯಲ್ಲಿ ಗುಪ್ಪೆಯಾಗಿ ತುಂಬಿಸಿ ಹಬೆಯಲ್ಲಿ ಬೇಯಿಸಿರಿ. ಆರಿದ ಬಳಿಕ ತೆಂಗಿನ ಕಾಯಿ ಚಟ್ನಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ. ಇದು ಬೆಳಗಿನ ಉಪಹಾರಕ್ಕು ಸಹ ಚೆನ್ನಾಗಿರುತ್ತದೆ.
* * *

ಸಿಹಿ ಕಡಬು
ಸಾಮಗ್ರಿ: ಒಂದು ಲೋಟ ಅಕ್ಕಿ ರವೆ, ನಾಲ್ಕು ಲೋಟ ತುರಿದ ಸಿಹಿ ಕುಂಬಳ, ಮುಕ್ಕಾಲು ಲೋಟ ಬೆಲ್ಲ, ಸ್ವಲ್ಪ ತೆಂಗಿನ ತುರಿ, ರುಚಿಗೆ

ತಕ್ಕಷ್ಟು ಉಪ್ಪು. ಕಾಲು ಟೀ ಚಮಚ ಏಲಕ್ಕಿ ಪುಡಿ.

ವಿಧಾನ: ಮೊದಲಿಗೆ ಅಕ್ಕಿ ರವೆಯನ್ನು ಹುರಿದುಕೊಳ್ಳಬೇಕು. ಇದಕ್ಕೆ ತುರಿದ ಸಿಹಿ ಕುಂಬಳ, ಬೆಲ್ಲ, ತೆಂಗಿನ ತುರಿ, ಏಲಕ್ಕಿ ಪುಡಿ, ಉಪ್ಪು ಇವನ್ನೆಲ್ಲಾ ಸೇರಿಸಿ ಚೆನ್ನಾಗಿ ಕಲಸಿ ಅರ್ಧ ಗಂಟೆ ನಂತರ ಇನ್ನೊಮ್ಮೆ ಕಲಸಿ ಜಿಡ್ಡು ಸವರಿದ ಉದ್ದನೆಯ ಲೋಟದಲ್ಲಿ ತುಂಬಿಸಿ ಹಬೆಯಲ್ಲಿ ಬೆಯಿಸಿ. ಆರಿದ ಬಳಿಕ ಲೋಟದಿಂದ ತೆಗೆದು ಬೇಕಾದ ಆಕಾರದಲ್ಲಿ ಕತ್ತರಿಸಿ ತುಪ್ಪದೊಂದಿಗೆ ತಿನ್ನಲು ಬಲು ರುಚಿ.
* * *

ಬರ್ಫಿ

ಸಾಮಗ್ರಿ: ಒಂದು ಲೋಟ ತುರಿದ ಸಿಹಿ ಕುಂಬಳ, ಅರ್ಧ ಲೋಟ ಸಕ್ಕರೆ, ಅರ್ಧ ಲೋಟ ಹಾಲಿನ ಕೆನೆ, ಒಂದು ಟೀ ಚಮಚ ಹಸಿ ಶುಂಠಿ ತುರಿ, ಎರಡು ಟೀ ಚಮಚ ಗೋಡಂಬಿ ಪೀಸ್, ಎರಡು ಟೀ ಚಮಚ ತುಪ್ಪ.

ವಿಧಾನ: ತುರಿದ ಸಿಹಿಕುಂಬಳ, ಹಾಲಿನ ಕೆನೆ, ಶುಂಠಿ ಎಲ್ಲಾ ಸೇರಿಸಿ ಸ್ವಲ್ಪ ಮಿಕ್ಸಿ ಮಾಡಿ ಸಕ್ಕರೆ ಸೇರಿಸಿ ಬಾಣಲೆಗೆ ಹಾಕಿ ಚೆನ್ನಾಗಿ ಬೇಯಿಸಿ ನಂತರ ಸಣ್ಣ ಉರಿಯಲ್ಲಿ ಕೆದಕುತ್ತಿರಿ, ಚೆನ್ನಾಗಿ ಪಾಕ ಬಂದು ತಳ ಬಿಡಲು ಪ್ರಾರಂಭಿಸಿದಾಗ ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಸೇರಿಸಿ, ತುಪ್ಪ ಸವರಿದ ತಟ್ಟೆಗೆ ಹಾಕಿ ಚೆನ್ನಾಗಿ ಹರಡಿರಿ. ಆರಿದ ಬಳಿಕ ಬೇಕಾದ ಆಕಾರದಲ್ಲಿ ಕತ್ತರಿಸಿರಿ. ಆಕರ್ಷಕ ಬಣ್ಣದೊಂದಿಗೆ ರುಚಿಯಾದ ಬರ್ಫಿ ಹಬ್ಬಕ್ಕೆ ರೆಡಿ.
* * *

ಸಿಹಿ ಕುಂಬಳ ಹಲ್ವ
ಸಾಮಗ್ರಿ:
ಎರಡು ಬಟ್ಟಲು ತುರಿದ ಸಿಹಿ ಕುಂಬಳ, ಕಾಲು ಬಟ್ಟಲು ಸಕ್ಕರೆ, ಒಂದು ಲೋಟ ಹಾಲು, ಎರಡು ಚಮಚ ಗೋಡಂಬಿ ಮತ್ತು

ದ್ರಾಕ್ಷಿ, ನಾಲ್ಕು ಟೀ ಚಮಚ ತುಪ್ಪ, ಒಂದು ಟೀ ಚಮಚ ಲಿಂಬು ರಸ.

ವಿಧಾನ: ತುರಿದ ಸಿಹಿಕುಂಬಳವನ್ನು ಹಾಲಿನೊಂದಿಗೆ ಬೇಯಿಸಿ. ನಂತರ ಸಕ್ಕರೆ ಹಾಕಿ ಚೆನ್ನಾಗಿ ಕೆದಕುತ್ತಿರಿ. ರಸ ಇಂಗಿದಾಗ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಮತ್ತು ಲಿಂಬು ರಸ ಹಾಕಿ ಕಲಿಸಿ ಕೆಳಗಿಳಿಸಿರಿ. ಬಿಸಿ ಇರುವಾಗಲೂ ಅಥವಾ ಆರಿದ ಬಳಿಕವೂ ರುಚಿ ಕಡಿಮೆಯಾಗದು.
* * *

ಸಿಹಿ ಕುಂಬಳದ ಅತ್ರಸ

ಸಾಮಗ್ರಿ: ಎರಡು ಬಟ್ಟಲು ತುರಿದ ಸಿಹಿ ಕುಂಬಳ, ಕಾಲು ಬಟ್ಟಲು ಅಕ್ಕಿ ಹಿಟ್ಟು, ಕಾಲು ಬಟ್ಟಲು ಬೆಲ್ಲ, ಒಂದು ಟೀ ಚಮಚ ತುಪ್ಪ, ಚಿಟಿಕೆ ಉಪ್ಪು, ಕರಿಯಲು ಎಣ್ಣೆ.

ವಿಧಾನ: ತುರಿದ ಸಿಹಿಕುಂಬಳ ಹಾಗೂ ಬೆಲ್ಲ ಹಾಕಿ ಬಾಣಲೆಯಲ್ಲಿ ಬಿಸಿ ಮಾಡಲು ಇಡಿ. ಚೆನ್ನಾಗಿ ಬೆಂದು ಸ್ವಲ್ಪ ನೀರು ಆರಿದ ನಂತರ ಅದಕ್ಕೆ ಅಕ್ಕಿ ಹಿಟ್ಟು, ತುಪ್ಪ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಿಸಿ, ಕೆಳಗಿಳಿಸಿ ಆರಲು ಬಿಡಿ. ತಣ್ಣಗಾದ ಬಳಿಕ ಎಣ್ಣೆ ಸವರಿದ ಬಾಳೆ ಎಲೆಯಲ್ಲಿ ಅತ್ರಸದಂತೆ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಈಗ ರುಚಿಯಾದ ಸಿಹಿ ಕುಂಬಳದ ಅತ್ರಸ ರೆಡಿ.
* * *

ಪಾಯಸ
ಸಾಮಗ್ರಿ: ಒಂದು ಬಟ್ಟಲು ಸಣ್ಣಗೆ ಹೆಚ್ಚಿದ (ತುರಿದ) ಸಿಹಿ ಕುಂಬಳ, ಒಂದು ಲೋಟ ಕಾಯಿ ಹಾಲು, ಒಂದು ಲೋಟ ಹಾಲು, ಕಾಲು

ಬಟ್ಟಲು ಬೆಲ್ಲ, ಮೂರು ಟೀ ಚಮಚ ತುಪ್ಪ, ಎರಡು ಟೀ ಚಮಚ ಪೀಸ್ ಗೋಡಂಬಿ.

ವಿಧಾನ: ಬಾಣಲೆಗೆ ಎರಡು ಟೀ ಚಮಚ ತುಪ್ಪ ಹಾಕಿ, ಬಿಸಿಯಾದ ಬಳಿಕ ಹೆಚ್ಚಿದ ಸಿಹಿ ಕುಂಬಳದ ಪೀಸನ್ನು ಹಾಕಿ ಸ್ವಲ್ಪ ಹುರಿದು, ನಂತರ ಹಾಲಿನಲ್ಲಿ ಬೇಯಿಸಿ ಬೆಲ್ಲ ಹಾಕಿ ಕುದಿಸಬೇಕು. ಆಮೇಲೆ ಕಾಯಿ ಹಾಲನ್ನು ಹಾಕಿ ಬಿಸಿ ಮಾಡಿ ಕೆಳಗಿಳಿಸಿ
ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಸೇರಿಸಿದರೆ ಪಾಯಸ ರೆಡಿ. ಬಿಸಿಬಿಸಿಯಾಗಿರುವಾಗ ಒಂದು ರುಚಿಯಾದರೆ, ಫ್ರಿಜ್ ನಲ್ಲಿಟ್ಟು ಕುಡಿಯಲು ಸಹ ತುಂಬಾ ಚೆನ್ನಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT