ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪ್ಪನೆಂಬ ಕರದಂಟಿನ ಸರ’

Last Updated 17 ಜುಲೈ 2015, 19:30 IST
ಅಕ್ಷರ ಗಾತ್ರ

ನೇರ-ನಿಷ್ಠುರ, ನಿರ್ಭಿಡೆ ವ್ಯಕ್ತಿತ್ವದ ಅಪ್ಪನನ್ನು ಕಂಡರೆ, ಬಾಲ್ಯದಲ್ಲಿ ಭಯವಿತ್ತು. ಅಪ್ಪನ ಚಮ್ಮಾವುಗೆಗಳ ಸಪ್ಪಳ ಕೇಳಿ ಬೆಚ್ಚಿ ಬಿದ್ದಿರುತ್ತಿದ್ದೆ. ಅಪ್ಪನ ಅವ್ವ, ಅಂದರೆ ನನ್ನ ಆಯಿಯನ್ನು ಕಾಡಿದಾಗ, ‘ಬರ್ಲಿ  ನಿಮ್ಮಪ್ಪ ಅಂವಗ ಹೇಳಿ ನಿನ್ನ ಚರ್ಮಾ ಸುಲಿಸ್ತಿನಿ, ಇವತ್ತ ಅದ ನಿನಗ ಹಬ್ಬ’ ಅಂತ ಆಯಿ ಜೋರಾಗಿ ಚೀರುತ್ತಿದ್ದಳು. ನಂತರ ಅಪ್ಪನ ಚಪ್ಪಲಿ ಸಪ್ಪಳ ಕೇಳಿ ಓಡಿ ಹೋಗಿ ಅಡಗಿಕೂರುತ್ತಿದ್ದೆ.

ಆದರೆ ಅಪ್ಪ ಅದ್ಭುತ ನಟ ಆಗಿದ್ದರು. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ನನಗೆ ಗಣೇಶನ ಹಬ್ಬದಲ್ಲಿ ನಡೆಯುವ ನಾಟಕದಲ್ಲಿ ಪಾತ್ರ ಮಾಡಲು ನನಗೆ ಬಣ್ಣ ಹಚ್ಚಿದ್ದರು. ಆ ಬಣ್ಣ ನನಗೆ ಬದುಕು ವರ್ಣರಂಜಿತವಾಗುವಂತೆ ಮಾಡಿತು. ಅಪ್ಪನಿಗೆ ನಾವು ‘ಕಾಕಾ’ ಎಂದು ಕರೆಯುತ್ತಿದ್ದೇವು.

‘ಕಾಕಾವರೀ... ಕಾಕಾವರೀ....’ ಅಂತ ಅಪ್ಪನ ಧೋತರ ಚುಂಗು ಹಿಡಿದು ಲಲ್ಲೆಗರೆದದ್ದು ಇದೆ. ನಾನು ಏಳನೇ ಕ್ಲಾಸು ಓದುವಾಗಲೇ ಗೆಳೆಯರೊಡಗೂಡಿ ‘ಹೋಳಿ ಹುಣ್ಣಿಮೆ’ ಅಂತ ನಾಟಕ ಬರೆದು ಆಡಿಸಿದ್ದೆ. ಮುಂದೆ ನಾಟಕ, ಕಥೆ, ಕವನ, ವಿಮರ್ಶೆ ಬರೆಯಲು ಅಪ್ಪನ ಆ ಒಲುಮೆಯೇ ಸ್ಫೂರ್ತಿ, ಮುಂದೆ ಅನೇಕ ನಾಟಕಗಳಿಗಾಗಿ ಬಣ್ಣ ಹಚ್ಚಿ, ಉತ್ತಮ ನಟ ಪ್ರಶಸ್ತಿನೂ ಪಡೆದುಕೊಂಡೆ. ಸಣ್ಣವ ಇದ್ದಾಗ ಅಪ್ಪ ದೋಸೆ ತಿನ್ನುವ ಹೊಟೇಲ್‌ ಹುಡುಕಿಕೊಂಡು ಹೋಗುತ್ತಿದ್ದೆ. ಅಪ್ಪನ ಬೀಡಿ ಚಟ ನನಗೆ ಅದರ ರುಚಿ ನೋಡುವಂತೆ ಮಾಡಿತ್ತು. ಆದರೆ ಬೆಳೆದಂತೆಲ್ಲಾ ಅಪ್ಪನ ಶಿಸ್ತು, ಸಂಯಮ, ನಿಷ್ಠುರತೆ, ಪ್ರಾಮಾಣಿಕತೆ, ನಿರ್ಭಿಡೆ, ಅಂತಃಕರುಣ ಗುಣ... ಎಲ್ಲ ನನ್ನಲ್ಲೂ ಬಂದವು. ಅವೇ ನನಗೆ ದಾರಿದೀಪವಾದವು.

ನಮ್ಮ ಮುತ್ಯಾನ ಮನಿಗೆ ಹೋದಾಗ ಅಲ್ಲಿ ನನ್ನ ಹಾಗೂ ನನ್ನ ಅಣ್ಣನ ಜೊತೆಗೆ ಗಂಡಗಚ್ಚಿ ಹಾಕಿ ಕಬಡ್ಡಿ ಆಡಿದ್ದೂ ಇದೇ ಅಪ್ಪನೇ. ತನ್ನ ಬಾಲ್ಯದಲ್ಲಿ ವಿಪರೀತ ಬಡತನ ಅನುಭವಿಸಿ, ಹಸಿವೆಯ ಕೆಂಡದಂತಹ ಅನುಭವವಿದ್ದ ಅಪ್ಪ, ಒಂದಗುಳ ಅನ್ನ ಚೆಲ್ಲಿದರೂ ಬೈಯ್ಯುತ್ತಿದ್ದರು. ಅದೇ ನಿರ್ಗತಿಕರಿಗೆ ಹಾಕಿದರೇ ಖುಷಿಪಡುತ್ತಿದ್ದರು. ತುಂಬ ಧೈರ್ಯಸ್ಥ ತಂದೆ, ಕೆಲವೊಂದು ಪ್ರಸಂಗದಲ್ಲಿ ತುಂಬ ಕುಗ್ಗಿ ಹೋದದ್ದೂ ಇದೆ. ಅಂತಹ ಅಪರೂಪದ ಅಂತಃಕರುಣಿ ಅಪ್ಪನನ್ನು ಈಗ ನಾಲ್ಕು ವರ್ಷಗಳ ಹಿಂದೆ ಕಳೆದುಕೊಂಡು ಬಿಕ್ಕಿ ಬಿಕ್ಕಿ ಅತ್ತೆ, ಕುಗ್ಗಿ ಹೋದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT