ಭಾರತಕ್ಕೆ ತೆರಳದಂತೆ 190 ಮಂದಿ ಹಿಂದೂಗಳಿಗೆ ತಡೆ ಹಾಕಿದ ಪಾಕಿಸ್ತಾನ

ಇಸ್ಲಾಮಾಬಾದ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ 190 ಮಂದಿ ಹಿಂದೂಗಳಿಗೆ ಭಾರತಕ್ಕೆ ತೆರಳದಂತೆ ಅಲ್ಲಿನ ಅಧಿಕಾರಿಗಳು ತಡೆ ಹಾಕಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸಿಂಧ್ ಪ್ರಾಂತ್ಯದ ಹಲವು ಹಿಂದೂ ಕುಟುಂಬಗಳು ಧಾರ್ಮಿಕ ವೀಸಾದಡಿ ಭಾರತಕ್ಕೆ ತೆರಳಲು ಮಂಗಳವಾರ ವಾಘಾ ಗಡಿ ತಲುಪಿದ್ದವು ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಅವರು ಭಾರತಕ್ಕೆ ತೆರಳುತ್ತಿರುವ ಕುರಿತಂತೆ ಸೂಕ್ತ ಕಾರಣ ನೀಡದ ಹಿನ್ನೆಲೆಯಲ್ಲಿ ಗಡಿಯಲ್ಲೇ ತಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ತಿಳಿಸಿದೆ.
ಧಾರ್ಮಿಕ ವೀಸಾದಡಿ ಭಾರತಕ್ಕೆ ತೆರಳುವ ಪಾಕಿಸ್ತಾನದ ಹಿಂದೂಗಳು ಬಹಳ ಸಮಯ ಅಲ್ಲಿಯೇ ಉಳಿದುಬಿಡುತ್ತಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ಸದ್ಯ, ಬಹಳ ಪ್ರಮಾಣದ ಪಾಕಿಸ್ತಾನದ ಹಿಂದೂಗಳು ದೆಹಲಿ ಮತ್ತು ರಾಜಸ್ತಾನದಲ್ಲಿ ಅಲೆಮಾರಿಗಳಾಗಿ ಜೀವಿಸುತ್ತಿದ್ದಾರೆ ಎಂದು ಅದು ಹೇಳಿದೆ.
ಪಾಕಿಸ್ತಾನದ ಒಟ್ಟು ಜನಸಂಖ್ಯೆ ಪೈಕಿ ಶೇಕಡ 1.18ರಷ್ಟು( 22,10,566) ಮಂದಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರಿದ್ದಾರೆ.
ಹಿಂದೂಗಳು ಸೇರಿ ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯಗಳ ಜನರು ಬಡವರಾಗಿದ್ದು, ದೇಶದ ಶಾಸಕಾಂಗ ವ್ಯವಸ್ಥೆಯಲ್ಲಿ ಅವರ ಪ್ರಾತಿನಿಧ್ಯ ತೀರಾ ಕಡಿಮೆ ಇದೆ.
ಪಾಕಿಸ್ತಾನದ ಹಿಂದೂಗಳ ಪೈಕಿ ಬಹುತೇಕ ಮಂದಿ ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದು, ಪ್ರತ್ಯೇಕತಾವಾದಿಗಳಿಂದ ಕಿರುಕುಳದ ಬಗ್ಗೆ ಆಗಾಗ್ಗೆ ದೂರು ಕೇಳಿಬರುತ್ತಿರುತ್ತವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.