ಭಾನುವಾರ, ನವೆಂಬರ್ 17, 2019
23 °C
ಸೌದಿಯಲ್ಲಿ ಹೌತಿ ಬಂಡುಕೋರರಿಂದ ಕೃತ್ಯ * ಮೇ 14ರಂದೂ ಇದೇ ಗುಂಪಿನಿಂದ ದಾಳಿ

ತೈಲ ಘಟಕಗಳ ಮೇಲೆ ಡ್ರೋನ್ ದಾಳಿ

Published:
Updated:
Prajavani

ರಿಯಾದ್: ವಿಶ್ವದ ಪ್ರಮುಖ ತೈಲ ರಫ್ತು ರಾಷ್ಟ್ರವಾಗಿರುವ ಸೌದಿ ಅರೇಬಿಯಾದಲ್ಲಿನ ಎರಡು ತೈಲ ಸಂಸ್ಕರಣಾ ಘಟಕಗಳ ಮೇಲೆ ಯೆಮನ್‌ನ ಹೌತಿ ಬಂಡುಕೋರರು ಶನಿವಾರ ಬೆಳಗಿನ ಜಾವ ಡ್ರೋನ್ ದಾಳಿ ನಡೆಸಿದ್ದಾರೆ.

‘ದಾಳಿಗೆ ತುತ್ತಾಗಿರುವ ಬುಖ್ಯಾಖ್ ಹಾಗೂ ಖುರಾಯಿಸ್‌ನಲ್ಲಿನ ತೈಲ ಸಂಸ್ಕರಣಾ ಘಟಕಗಳು ಸೌದಿ ಅರಾಮ್ಕೊ ತೈಲ ಕಂಪನಿಗೆ ಸೇರಿವೆ’ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯದ ರಕ್ಷಣಾ ವಕ್ತಾರ ತಿಳಿಸಿದ್ದಾಗಿ ವರದಿಯಾಗಿದೆ.

ಮೂಲಗಳ ಪ್ರಕಾರ ಬುಖ್ಯಾಖ್‌ನ ಘಟಕದಲ್ಲಿ ದಿನಕ್ಕೆ 70 ಲಕ್ಷ ಬ್ಯಾರೆಲ್‌ವರೆಗೆ ಹಾಗೂ ಖುರಾಯಿಸ್‌ನ ಘಟಕದಲ್ಲಿ ದಿನಕ್ಕೆ 10 ಲಕ್ಷ ಬ್ಯಾರೆಲ್‌ಗೂ ಹೆಚ್ಚು ಪ್ರಮಾಣದ ಕಚ್ಚಾತೈಲವನ್ನು ಸಂಸ್ಕರಿಸಲಾಗುತ್ತದೆ.

‘ದಾಳಿಯಿಂದಾಗಿ ಭಾರಿ ಪ್ರಮಾಣದಲ್ಲಿ ಬೆಂಕಿ ಹಬ್ಬಿಕೊಂಡಿತ್ತು. ಕೈಗಾರಿಕಾ ಭದ್ರತಾ ಪಡೆಗಳು ಬೆಳಗಿನ ಜಾವ 4 ಗಂಟೆಯಿಂದ ಕಾರ್ಯಾಚರಣೆ ನಡೆಸಿ, ಬೆಂಕಿಯನ್ನು ಹತೋಟಿಗೆ ತಂದಿವೆ’ ಎಂದು ಸಚಿವಾಲಯ ಹೇಳಿದೆ.

ಆದರೆ ತೈಲ ಉತ್ಪಾದನೆ ಅಥವಾ ರಫ್ತು ಮೇಲೆ ಪರಿಣಾಮವಾಗಿರುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ತೈಲ ರಫ್ತು ಮುಂದುವರಿದಿದೆ ಎಂದು ಸರ್ಕಾರಿ ಸುದ್ದಿಸಂಸ್ಥೆ ತಿಳಿಸಿದೆ.

ತೈಲ ಘಟಕಗಳ ಸುತ್ತ ಅಧಿಕಾರಿಗಳು ಭದ್ರತೆ ಬಿಗಿಗೊಳಿಸಿದ್ದಾರೆ. ಘಟನೆಯಲ್ಲಿ ಸಾವು ನೋವಿನ ಮಾಹಿತಿ ತಿಳಿದಿಲ್ಲ.

ಇರಾನ್ ಜತೆಗೆ ನಂಟು ಹೊಂದಿರುವ ಯೆಮನ್ ಬಂಡುಕೋರರ ಬಳಿ ಖಂಡಾಂತರ ಹಾಗೂ ಮಾನವರಹಿತ ಕ್ಷಿಪಣಿಗಳು ಸೇರಿದಂತೆ  ಸುಧಾರಿತ ಶಸ್ತ್ರಾಸ್ತ್ರಗಳ ಸಂಗ್ರಹ ಹೆಚ್ಚುತ್ತಿದೆ ಎನ್ನುವುದಕ್ಕೆ ಈ ದಾಳಿ ಮತ್ತೊಂದು ಸಾಕ್ಷಿಯಾಗಿದೆ.

ಕಳೆದ ತಿಂಗಳು ಅರಾಮ್ಕೊದ ಶೇಬಾ ನೈಸರ್ಗಿಕ ಅನಿಲ ಸಂಸ್ಕರಣಾ ಘಟಕದ ಮೇಲೆ ನಡೆದಿದ್ದ ದಾಳಿಯ ಹೊಣೆಯನ್ನೂ ಹೌತಿ ಬಂಡುಕೋರರು ಹೊತ್ತುಕೊಂಡಿದ್ದರು. ‌

ಮೇ 14ರಂದು ರಿಯಾದ್‌ನಲ್ಲಿ ಎರಡು ತೈಲ ಉತ್ಪಾದನಾ ಘಟಕಗಳ ಮೇಲೆ ಇದೇ ಗುಂಪು ಡ್ರೋನ್ ದಾಳಿ ನಡೆಸಿತ್ತು. ಪ್ರಮುಖ ತೈಲ ಪೈಪ್‌ಲೈನ್ ದಾಳಿಗೆ ಗುರಿಯಾಗಿದ್ದರಿಂದ ಹಲವು ದಿನಗಳ ಕಾಲ ಇದನ್ನು ಮುಚ್ಚಲಾಗಿತ್ತು.‌

ಪರಿಣಾಮ ಇಲ್ಲ: ವಾರಾಂತ್ಯವಾದ್ದರಿಂದ ಷೇರುಪೇಟೆ ರಜೆ ಇದ್ದು, ಡ್ರೋನ್‌ ದಾಳಿಯಿಂದ ಆಗಿರುವ ಪರಿಣಾಮದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಬಂಡುಕೋರರಿಂದ ಪ್ರತೀಕಾರ
ಈಚೆಗಿನ ಕೆಲವು ತಿಂಗಳಲ್ಲಿ ಸೌದಿಯ ವಾಯುನೆಲೆ ಹಾಗೂ ಇತರೆ ಪ್ರದೇಶಗಳ ಮೇಲೆ ಬಂಡುಕೋರರು, ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ್ದಾರೆ. 

ಯೆಮನ್‌ನಲ್ಲಿನ ಬಂಡುಕೋರರ ಪ್ರದೇಶಗಳ ಮೇಲೆ ಸೌದಿ ಅರೇಬಿಯಾ ನೇತೃತ್ವದಲ್ಲಿ ಹಲವು ದಿನಗಳಿಂದ ಬಾಂಬ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದಕ್ಕೆ ಪ್ರತೀಕಾರವಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಸ್ವತಃ ಬಂಡುಕೋರರು ಹೇಳಿಕೊಂಡಿದ್ದಾರೆ. ಸೌದಿಯ ಅಲ್ ಮಸಿರಾ ಟಿ.ವಿ ಈ ವಿಷಯ ವರದಿ ಮಾಡಿದೆ.

‘ಬಂಡುಕೋರರು ತೈಲ ಸಂಗ್ರಹ ಘಟಕಗಳನ್ನು ಗುರಿಯಾಗಿಸಿ 10 ಡ್ರೋನ್‌ಗಳನ್ನು ಬಳಸಿ ದಾಳಿ ಯೋಜನೆ ರೂಪಿಸಿದ್ದರು. ಮತ್ತಷ್ಟು ದಾಳಿ ನಡೆಸುವುದಾಗಿ ಗುಂಪು ಹೇಳಿಕೊಂಡಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹದಗೆಟ್ಟ ಸ್ಥಿತಿ
ಜೂನ್‌ನಲ್ಲಿ ಅಮೆರಿಕದ ಡ್ರೋನ್‌ ಅನ್ನು ಇರಾನ್ ಹೊಡೆದುರುಳಿಸಿತ್ತು. ಇದಾದ ಬಳಿಕ ಇರಾನ್ ಮೇಲೆ ನಡೆಸಬೇಕಿದ್ದ ವೈಮಾನಿಕ ದಾಳಿಯನ್ನು ಅಮೆರಿಕ ಕೊನೆ ಕ್ಷಣದಲ್ಲಿ ರದ್ದುಪಡಿಸಿತ್ತು. ಜತೆಗೆ ಇರಾನ್ ಮೇಲೆ ಆರ್ಥಿಕ ನಿರ್ಬಂಧ ಹೇರಿತು. ಇವೆಲ್ಲಾ ಕಾರಣಗಳಿಂದಾಗಿ ಸೌದಿ ಅರೇಬಿಯಾದಲ್ಲಿನ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿದೆ.

ಜೂನ್‌ನಲ್ಲಿ ಅಮೆರಿಕದ ಡ್ರೋನ್‌ ಅನ್ನು ಇರಾನ್ ಹೊಡೆದುರುಳಿಸಿತ್ತು. ಇದಾದ ಬಳಿಕ ಇರಾನ್ ಮೇಲೆ ನಡೆಸಬೇಕಿದ್ದ ವೈಮಾನಿಕ ದಾಳಿಯನ್ನು ಅಮೆರಿಕ ಕೊನೆ ಕ್ಷಣದಲ್ಲಿ ರದ್ದುಪಡಿಸಿತ್ತು. ಜತೆಗೆ ಇರಾನ್ ಮೇಲೆ ಆರ್ಥಿಕ ನಿರ್ಬಂಧ ಹೇರಿತು. ಇವೆಲ್ಲಾ ಕಾರಣಗಳಿಂದಾಗಿ ಸೌದಿ ಅರೇಬಿಯಾದಲ್ಲಿನ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿದೆ.

ಪ್ರತಿಕ್ರಿಯಿಸಿ (+)