ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೊಬೈಲ್‌ನಿಂದ ದೂರ ಸರಿಯುವುದು ಹೇಗೆ?’

Last Updated 26 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

1. ನಾನು ಕ್ಯಾಬ್ ಓಡಿಸುತ್ತೇನೆ. ನನಗೆ ಸಮಯ ಸಿಕ್ಕರೆ ಸಾಕು, ಮೊಬೈಲ್ ಹಿಡಿದು ಕೂರುತ್ತೇನೆ. ಒಮ್ಮೊಮ್ಮೆ ಗಾಡಿ ಓಡಿಸುವಾಗಲೂ ಮೊಬೈಲ್ ನೋಡಬೇಕು ಎನ್ನಿಸುತ್ತದೆ. ರಾತ್ರಿ ಮಲಗುವಾಗ, ಊಟ ಮಾಡುವಾಗ – ಹೀಗೆ ಎಲ್ಲ ಸಮಯದಲ್ಲೂ ಮೊಬೈಲ್‌ನಲ್ಲೇ ಮುಳುಗಿರುತ್ತೇನೆ. ಈ ಮೊಬೈಲ್ ಭೂತದಿಂದ ತಪ್ಪಿಸಿಕೊಳ್ಳಬೇಕು ಎಂದರೆ ಏನು ಮಾಡಬೇಕು?

ಹೆಸರು, ಊರು ಬೇಡ

ಈಗ ನಿಮಗೆ ನೀವು ಮೊಬೈಲ್‌ಗೆ ಎಷ್ಟು ಅಡಿಕ್ಟ್ ಆಗಿದ್ದೀರಿ ಎಂಬುದರ ಅರಿವಾಗಿದೆ. ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡುವುದು ನಿಜಕ್ಕೂ ಕೆಟ್ಟ ಅಭ್ಯಾಸ; ಅಲ್ಲದೇ ಅದು ಸುರಕ್ಷತೆಯೂ ಅಲ್ಲ. ಇದು ಸರಿಯಾದ ಸಮಯ. ಮೊಬೈಲ್‌ನಿಂದ ದೂರವಾಗಲು ನಿಮ್ಮ ಪ್ರಯತ್ನವೇ ಮುಖ್ಯ. ಮೊಬೈಲ್‌ಗೆ ಪದೇ ಪದೇ ಬರುವ ನೋಟಿಫಿಕೇಶನ್‌ಗಳು ಹಾಗೂ ಮೊಬೈಲ್ ಟೋನ್‌ಗಳನ್ನು ಬಂದ್ ಮಾಡಿಕೊಳ್ಳಿ. ಗಂಟೆಗೊಮ್ಮೆ ಮಾತ್ರ ಫೋನ್ ನೋಡುವಂತೆ ಸಮಯವನ್ನು ನಿಗದಿಪಡಿಸಿಕೊಳ್ಳಿ. ನೀವು ಕರೆಗಳಿಗೆ ಅಡಿಕ್ಟ್ ಆಗಿದ್ದರೆ ನಿಮ್ಮ ಸ್ನೇಹಿತರು ಹಾಗೂ ಮನೆಯವರ ಸಹಕಾರ ಪಡೆದುಕೊಳ್ಳಿ. ನಿಮಗೆ ಯಾರು ಪದೇ ಪದೇ ಕರೆ ಮಾಡುತ್ತಾರೋ ಅಥವಾ ನಿಮ್ಮ ಕರೆಗಾಗಿ ಕಾಯುತ್ತಾರೋ ಅವರಿಗೆ ನಾನು ನಿಮ್ಮ ಕರೆಗಳಿಗೆ ಸಂಜೆ ಉತ್ತರಿಸುತ್ತೇನೆ; ಆ ಕ್ಷಣದಲ್ಲೇ ನನಗೆ ಉತ್ತರಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿ. ಈ ಬದಲಾವಣೆಯನ್ನು ನಿಧಾನಕ್ಕೆ ಮಾಡಿಕೊಳ್ಳಿ. ಎಲ್ಲವನ್ನೂ ಒಮ್ಮೆಲೆ ನಿಲ್ಲಿಸಲು ಹೋಗಬೇಡಿ. ಅದರಿಂದ ನಿಮಗೆ ಸಹಾಯವಾಗುವುದಿಲ್ಲ. ಇದು ಹಂತ ಹಂತವಾಗಿಯೇ ಆಗಬೇಕು. ನೀವು ದಿನದ ಹೆಚ್ಚಿನ ಸಮಯವನ್ನು ವಾಹನ ಚಲಾಯಿಸುವುದರಲ್ಲೇ ಕಳೆದಿರುತ್ತೀರಿ. ಆ ಸಮಯದಲ್ಲಿ ಸಂಗೀತ ಕೇಳಬಹುದು ಅಥವಾ ಚಾಲನೆಯ ಖುಷಿಯನ್ನು ಅನುಭವಿಸಬಹುದು. ಗಾಡಿ ಓಡಿಸುವಾಗ ಮೊಬೈಲನ್ನು ತೆಗೆದುಕೊಳ್ಳಬೇಡಿ; ನಿಮ್ಮ ಕೈಗೆಟುಕದಂತೆ ಅದನ್ನು ದೂರ ಇರಿಸಿ. ಉಳಿದ ಸಮಯದಲ್ಲಿ ಅಂದರೆ ನೀವು ಖಾಲಿ ಇರುವ ವೇಳೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ದಿನಪತ್ರಿಕೆಯೂ ಆಗಬಹುದು ಅಥವಾ ಕಾದಂಬರಿಯೂ ಆಗಬಹುದು. ಆರಂಭದಲ್ಲಿ ನೀವು ಈ ಸಣ್ಣ ಪ್ರಯತ್ನವನ್ನು ಮಾಡಿದರೆ ನೀವು ಮೊಬೈಲ್ ಚಟದಿಂದ ದೂರ ಉಳಿಯಬಹುದು.

2. ನನಗೆ ಕಳೆದ ಕೆಲವು ವರ್ಷಗಳಿಂದ ಸಿಗರೇಟು ಸೇದುವ ಅಭ್ಯಾಸ ಇದೆ. ಇದು ಕೆಟ್ಟ ಅಭ್ಯಾಸ ಎಂದು ಅರಿತು ಅದರಿಂದ ದೂರ ಇರಲು ಪ್ರಯತ್ನಿಸುತ್ತಲೇ ಇದ್ದೇನೆ. ಆದರೆ ಇದರಿಂದ ದೂರವಿರಲು ಸಾಧ್ಯವಾಗುತ್ತಿಲ್ಲ. ಹೇಗಾದರೂ ಮಾಡಿ ಈ ಚಟದಿಂದ ದೂರವಿರಬೇಕು ಎಂಬುದು ಬಯಕೆ, ನನಗೆ ದಾರಿ ತೋರಿಸಿ.

ಮಹೇಶ ತಳವಾರ, ಊರು ಬೇಡ

ನಿಮಗೆ ನಿಮ್ಮ ಚಟದ ಬಗ್ಗೆ ಅರಿವಿದ್ದರೆ ಇದು ನೀವು ಚಟದಿಂದ ದೂರವುಳಿಯಲು ಇಡುವ ಮೊದಲ ಹಜ್ಜೆಯಲ್ಲಿ ಯಶಸ್ಸು ಕಂಡಂತೆ. ಯಾವುದೇ ಚಟವಿರಲಿ ಅದನ್ನು ಒಂದೇ ಕ್ಷಣಕ್ಕೆ ಬಿಟ್ಟು ಬಿಡಲು ಸಾಧ್ಯವಿಲ್ಲ. ಅದಕ್ಕೆ ತುಂಬಾ ಸಮಯ ಬೇಕು ಮತ್ತು ಅದು ಉದ್ದೇಶಪೂರ್ವಕವಾದ ಹಂತ. ಮೊದಲಿಗೆ ಚಿಕ್ಕ ಹೆಜ್ಜೆಯನ್ನು ಇಡಿ, ಒಂದು ದಿನಕ್ಕೆ ಎಷ್ಟು ಸಿಗರೇಟು ಸೇದುತ್ತೀರಿ ಎಂಬುದನ್ನು ಲೆಕ್ಕ ಇಡಿ. ನಂತರ ಎರಡು ದಿನದಲ್ಲಿ ಒಂದು ಸಿಗರೇಟು ಕಡಿಮೆ ಮಾಡಿ. ನಂತರದ ಒಂದು ವಾರದಲ್ಲಿ 2 ಸಿಗರೇಟ್‌ ಅನ್ನು ಕಡಿಮೆ ಮಾಡಿ. ಈ ಹಂತವೂ ಮುಂದುವರಿದಂತೆ ನಿಧಾನಕ್ಕೆ ಸಿಗರೇಟು ಸೇದುವ ಸಂಖ್ಯೆ ಕಡಿಮೆಯಾಗುತ್ತದೆ. ಅದನ್ನು ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಮಾಡಿ. ಅದರಂತೆ, ನಿಮಗೆ ಸಿಗರೇಟು ಸೇದಬೇಕು ಎಂದು ಅನ್ನಿಸಿದ ತಕ್ಷಣಕ್ಕೆ ನಿಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಪ್ರಯ್ನತಿಸಿ. ನೀವು ಸೀಗರೇಟು ಸೇದುವುದನ್ನು ವಿರೋಧಿಸುವ, ಸಿಗರೇಟು ಸೇದುವುದನ್ನು ಇಷ್ಟಪಡದೇ ಇರುವ ಜನರ ಜೊತೆ ಮಾತನಾಡಿ. ಇದು ನಿಮ್ಮ ‘ಸೀಗರೇಟಿನ ಸಮಯ’ವನ್ನು ಕಳೆದು ಹೋಗುವಂತೆ ಮಾಡುತ್ತದೆ. ಇದನ್ನು ನಿರಂತರವಾಗಿ ಪ್ರಯ್ನತಿಸಿ. ಆಗ ನಿಮ್ಮಿಂದ ಈ ಚಟದಿಂದ ಹೊರಬರಲು ಸಾಧ್ಯವಾಗುತ್ತದೆ. ಅದರೊಂದಿಗೆ ನೀವು ಆರೋಗ್ಯಕರ ಡಯೆಟ್ ಅನ್ನು ಪಾಲಿಸಬೇಕು. ದಿನನಿತ್ಯ ವ್ಯಾಯಾಮವನ್ನೂ ಮಾಡಬೇಕು.

3. ನನ್ನ ದೈಹಿಕ ಬೆಳವಣಿಗೆ ಸರಿಯಾಗಿಲ್ಲ. ಇದರಿಂದ ನನಗೆ ಸಮಾಜದಲ್ಲಿ ಎಲ್ಲರ ಜೊತೆ ಬೆರೆಯಲು ಆಗುತ್ತಿಲ್ಲ. ಯಾವಾಗಲೂ ಭಯ, ಗಾಬರಿಯಿಂದ ಇರುತ್ತೇನೆ. ಹೊರಗೆ ಹೋಗಲು ಆಗುತ್ತಿಲ್ಲ. ಎಲ್ಲರೂ ನನ್ನ ಬಗ್ಗೆ ಕಾಮೆಂಟ್ ಮಾಡುತ್ತಾರೆ ಅನ್ನಿಸುತ್ತಿದೆ. ಈ ಸಮಸ್ಯೆಯಿಂದ ನನಗೆ ಹೊರಗೆ ಬರಲು ಆಗುತ್ತಿಲ್ಲ. ಇದರಿಂದ ನಾನು ಖಿನ್ನತೆಗೆ ಒಳಗಾ‌ಗಿದ್ದೇನೆ.

ಹೆಸರು, ಊರು ಬೇಡ

ನಿಮ್ಮ ದೈಹಿಕ ಬೆಳವಣಿಗೆಯ ಮೇಲೆ ನೀವು ನಿಯಂತ್ರಣ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮೊದಲು ನೀವು ಅರ್ಥ ಮಾಡಿಕೊಳ್ಳಬೇಕು. ವ್ಯಾಯಾಮದಿಂದ ನಮ್ಮ ದೇಹಸ್ಥಿತಿಯಲ್ಲಿ ಸ್ವಲ್ಪಮಟ್ಟಿನ ಬದಲಾವಣೆ ಕಾಣಲು ಸಾಧ್ಯ. ಆದರೆ ಸಂಪೂರ್ಣವಾಗಿ ಬದಲಿಸಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ದೇಹಸ್ಥಿತಿಯನ್ನು ಇರುವಂತೆಯೇ ಒಪ್ಪಿಕೊಳ್ಳಿ. ಇದರಿಂದ ನೀವು ಎದುರಿಸುತ್ತಿರುವ ಕೀಳರಿಮೆಯಿಂದ ಹೊರ ಬರಲು ಸಾಧ್ಯ. ನಿಮ್ಮಿಂದ ಮಾತ್ರ ನಿಮ್ಮ ಮನಸ್ಸನ್ನು ಅಂದಗೊಳಿಸಿಕೊಳ್ಳಲು ಸಾಧ್ಯ. ನೀವು ಹೇಗಿದ್ದೀರಿ ಹಾಗೇ ನಿಮ್ಮನ್ನು ಒಪ್ಪಿಕೊಳ್ಳಿ. ಮತ್ತು ಯಾವಾಗ ನಿಮಗೆ ಇದರ ಬಗ್ಗೆ ಹೆಚ್ಚಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂಬುದರ ಅರಿವಾಗುತ್ತದೋ ಆಗ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಆತ್ಮವಿಶ್ವಾಸವೇ ನಿಮ್ಮ ಆತ್ಮಗೌರವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜಗತ್ತನ್ನು ಆತ್ಮವಿಶ್ವಾಸದಿಂದ ಎದುರಿಸಿ. ಒಂದು ವಿಷಯ ತಿಳಿದುಕೊಳ್ಳಿ, ಯಾರೂ ನೀವು ನೋಡಲು ಹೇಗಿದ್ದೀರಿ ಎಂಬುದರಿಂದ ನಿಮ್ಮನ್ನು ಗುರುತಿಸುವುದಿಲ್ಲ. ಒಬ್ಬ ಮನುಷ್ಯಳಾಗಿ ನೀವು ಹೇಗಿದ್ದೀರಿ ಎಂಬುದಷ್ಟೇ ಮುಖ್ಯವಾಗುತ್ತದೆ. ಹಾಗಾಗಿ ನಿಮ್ಮ ವ್ಯಕ್ತಿತ್ವ, ನಿಮ್ಮ ಕೆಲಸ/ಓದು – ಇವುಗಳತ್ತ ಗಮನ ಹರಿಸಿ. ನಿಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ. ಅದೇ ನಿಮಗೆ ಆತ್ಮವಿಶ್ವಾಸವನ್ನೂ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT